ಬಾದಾಮಿ: ಸಿದ್ದು ಸ್ವಕ್ಷೇತ್ರದ ನಾಡಿ ಮಿಡಿತ ಅರಿಯಲು ಬಾದಾಮಿಗೆ ಬಂದ್ರಾ ಜಮೀರ ಅಹ್ಮದ್​..?

By Girish Goudar  |  First Published Nov 20, 2022, 2:00 AM IST

ಬಾದಾಮಿ ಮತಕ್ಷೇತ್ರದ ಕುಳಗೇರಿ ಕ್ರಾಸ್​, ಕೆರೂರ ಸೇರಿದಂತೆ ವಿವಿಧಡೆ ಜಮೀರ್ ಭೇಟಿ, ಜಮೀರ್ ಮೂಲಕ ಸಿದ್ದರಾಮಯ್ಯನವರ ಮೇಲೆ ಒತ್ತಡ ಹೇರಲು ಮುಂದಾದ ಬಾದಾಮಿ ಮುಖಂಡರು & ಕೈ ಕಾರ್ಯಕರ್ತರು. 


ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣ ನ್ಯೂಸ್, ಬಾಗಲಕೋಟೆ

ಬಾಗಲಕೋಟೆ(ನ.20): ಮಾಜಿ ಸಿಎಂ ಸಿದ್ದರಾಮಯ್ಯನವರ ಸ್ವಕ್ಷೇತ್ರ ಬಾದಾಮಿಗೆ ಮೊನ್ನೆಯಷ್ಟೇ ಯಾರಿಗೂ ಮಾಹಿತಿ ನೀಡದೇ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವುಕುಮಾರ್​ ಬಂದು ಹೋಗಿರೋ ಬೆನ್ನಲ್ಲೆ ಇಂದು ಸಿದ್ದರಾಮಯ್ಯನವರ ಆಪ್ತರಲ್ಲೊಬ್ಬರಾಗಿರೋ ಮಾಜಿ ಸಚಿವ ಜಮೀರ್ ಅಹ್ಮದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿದರು. ಸಾಲದ್ದಕ್ಕೆ ಜಮೀರ್ ಹೋದ ಕಡೆಗೆಲ್ಲಾ ಸಿದ್ದರಾಮಯ್ಯನವರ ಸ್ಪರ್ಧೆಯದ್ದೇ ಮಾತಾಗಿತ್ತು, ಹೀಗಾಗಿ ಕೈ ಪಾಳೆಯದ ನಾಯಕರು, ಅಭಿಮಾನಿಗಳು ಹೇಗಾದರೂ ಸಿದ್ದರಾಮಯ್ಯನವರು ಮತ್ತೇ ಬಾದಾಮಿಯಿಂದಲೇ ಸ್ಪರ್ಧೆ ಮಾಡುವಂತೆ ಒತ್ತಾಯಿಸುವಂತೆ ಜಮೀರ್​ಗೆ ಮನವಿ ಮಾಡಿದರು. ಈ ಕುರಿತ ವರದಿ ಇಲ್ಲಿದೆ..

Tap to resize

Latest Videos

undefined

ಡಿಕೆಶಿ ಬೆನ್ನಲ್ಲೇ ಸಿದ್ದು ಸ್ವಕ್ಷೇತ್ರಕ್ಕೆ ಬಂದ ಸಿದ್ದು ಆಪ್ತ ಜಮೀರ್​ ಅಹ್ಮದ 

ಹೌದು. ರಾಜ್ಯ ರಾಜಕಾರಣದಲ್ಲಿ ಕ್ಷಣ ಕ್ಷಣ ಆಟ ಮೇಲಾಟಗಳು ನಡೆಯುತ್ತಿರುವುದರ ಮಧ್ಯೆ ಯಾರಿಗೂ ಮಾಹಿತಿ ನೀಡದೇ ಕಳೆದ ವಾರವಷ್ಟೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವುಕುಮಾರ್​ ಸಿದ್ದರಾಮಯ್ಯನವರ ಸ್ವಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಕೆರೂರ ಪಟ್ಟಣದಲ್ಲಿ ನಿಂತು ಹಣ್ಣು ಖರೀದಿಸಿದ್ದ ಡಿಕೆಶಿ ಪೋಟೋವೊಂದು ವೈರಲ್ ಆಗಿ ಹಲವು ರಾಜಕೀಯ ಚರ್ಚೆಗೆ ಕಾರಣವಾಗಿತ್ತು. ಆದರೆ ಇದರ ಬೆನ್ನಲ್ಲೆ ಇಂದು ಸಿದ್ದರಾಮಯ್ಯನವರ ಆಪ್ತರಲ್ಲೊಬ್ಬರಾದ ಮಾಜಿ ಸಚಿವ ಜಮೀರ್ ಅಹ್ಮದ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಬಾದಾಮಿ ಮತಕ್ಷೇತ್ರದ ಕುಳಗೇರಿ ಕ್ರಾಸ್​ಗೆ ಭೇಟಿ ನೀಡಿದರು.  ಕುಳಗೇರಿ ಕ್ರಾಸ್​ಗೆ ಆಗಮಿಸಿದ ಜಮೀರ್​ಗೆ ಕೈ ಕಾರ್ಯಕರ್ತರು ಸ್ವಾಗತ ಕೋರಿದ್ರು, ಅಲ್ಲದೆ ಕೆಲಕಾಲ ಸ್ಥಳೀಯ ಕಾಂಗ್ರೆಸ್​ ಮುಖಂಡರೊಂದಿಗೆ ಚರ್ಚೆ ಸಹ ನಡೆಸಿದ್ರು. ಈ ವೇಳೆ ಕಾಂಗ್ರೆಸ್​ ಪಕ್ಷದ ಮುಖಂಡರು, ಕಾರ್ಯಕರ್ತರು ಜಮೀರ್ ಅವರಿಗೆ ಮತ್ತೇ ಸಿದ್ದರಾಮಯ್ಯನವರು ಬಾದಾಮಿಯಿಂದಲೇ ಸ್ಪರ್ಧೆ ಮಾಡುವಂತೆ ಒತ್ತಾಯಿಸುವಂತೆ ಮನವಿ ಮಾಡಿದರು. ಇತ್ತ ಡಿಕೆಶಿ ಬಂದು ಹೋದ ಬೆನ್ನಲ್ಲೆ ಸಿದ್ದು ಆಪ್ತ ಬಾದಾಮಿ ಮತಕ್ಷೇತ್ರಕ್ಕೆ ಬಂದಿದ್ದು ಮಾತ್ರ ರಾಜಕೀಯ ವಲಯದ ಹಲವು ಚರ್ಚೆಗೆ ದಾರಿ ಮಾಡಿಕೊಟ್ಟಿತು. 

ಬಿಜೆಪಿ ಶಾಸಕ ಯತ್ನಾಳ ನಕಲಿ ಹಿಂದುತ್ವವಾದಿ: ತೆಗ್ಗಿ

ಕೆರೂರ ಪಟ್ಟಣದಲ್ಲಿ ಮುಸ್ಲಿಂ ಮುಖಂಡರು & ಕೈ ಕಾರ್ಯಕರ್ತರ ಭೇಟಿ ಮಾಡಿದ ಜಮೀರ್​ 

ಇನ್ನು ಬಳಿಕ ಬಾದಾಮಿ ಮತಕ್ಷೇತ್ರದ ಕೆರೂರ ಪಟ್ಟಣಕ್ಕೆ ಜಮೀರ ಅಹ್ಮದ ಭೇಟಿ ನೀಡಿದ್ರು. ಈ ಸಂದರ್ಭದಲ್ಲಿ ಕಾಂಗ್ರೆಸ್​ ಮುಖಂಡರು, ಮುಸ್ಲಿಂ ಸಮುದಾಯದ ಮುಖಂಡರು ಜಮೀರ್ ಬರಮಾಡಿಕೊಂಡ್ರು, ಅಲ್ಲದೆ ಎಲ್ಲ ಕೈ ಮುಖಂಡರು, ಕಾರ್ಯಕರ್ತರು ಜಮೀರ್ ಅವರ ಮುಂದೆ ಮತ್ತೊಮ್ಮೆ ಸಿದ್ದರಾಮಯ್ಯನವರಿಗೆ ಬಾದಾಮಿಯಿಂದಲೇ ಸ್ಪರ್ಧೆ ಮಾಡುವಂತೆ ಒತ್ತಾಯಿಸಲು ಹೇಳಿದ್ರು. ಹೀಗೆ ಸಿದ್ದರಾಮಯ್ಯನವರ ಸ್ವಕ್ಷೇತ್ರದಲ್ಲಿ ಹೋದಲ್ಲೆಲ್ಲಾ ಜನ ಜಮೀರ್ ಅವರಿಗೆ ದುಂಬಾಲು ಬಿದ್ದು, ಮತ್ತೇ ಸಿದ್ದರಾಮಯ್ಯನವರು ಬಾದಾಮಿಯಿಂದಲೇ ಸ್ಪರ್ಧೆ ಮಾಡುವಂತೆ ಒತ್ತಾಯ ಹಾಕುವಂತೆ ಹೇಳಿದ್ರು. ಯಾಕಂದ್ರೆ 2018ರ ಸಿದ್ದರಾಮಯ್ಯನವರ ಚುನಾವಣೆಯಲ್ಲಿ ಬಾದಾಮಿಯಲ್ಲಿ ಜಮೀರ್ ಮುಂಚೂಣಿಯಲ್ಲಿದ್ದರು. ಹೀಗಾಗಿ ಜಮೀರ್ ಅವರಿಗೆ ಒತ್ತಾಯ ಮಾಡಿದ್ರು. ಇನ್ನು ಡಿಕೆಶಿ ಗೌಪ್ಯವಾಗಿ ಸಿದ್ದು ಸ್ವಕ್ಷೇತ್ರಕ್ಕೆ ಬಂದು ಹೋದ ಬೆನ್ನಲ್ಲೆ ಇತ್ತ ಸಿದ್ದು ಆಪ್ತ ಜಮೀರ್ ಬಂದಿದ್ದು, ಕ್ಷೇತ್ರದ ಜನ್ರ ಆಭಿಮತ ಸಂಗ್ರಹಕ್ಕಾಗಿಯೇ ಎಂಬ ಪ್ರಶ್ನೆ ತೀವ್ರ ಚರ್ಚೆಗೆ ಗ್ರಾಸವಾಯಿತು.

ಸಿದ್ದರಾಮಯ್ಯನವರು ಬಾದಾಮಿಯಿಂದಲೇ ಗೆಲ್ಲಲಿ, ಬೇಕಿದ್ದರೆ ನಾವೇ ಹೆಲಿಕಾಪ್ಟರ್​ ಕೊಡಿಸಿಕೊಡುತ್ತೇವೆ 

ಇತ್ತ ಸಿದ್ದರಾಮಯ್ಯನವರು ಬೆಂಗಳೂರಿನಿಂದ ಬಾದಾಮಿ ದೂರವಾಗುತ್ತೇ ಜನರಿಗೆ ಸ್ಪಂದಿಸಲು ಆಗುತ್ತಿಲ್ಲ ಎಂಬ ಉತ್ತರ ನೀಡಿ ಬಾದಾಮಿಯಿಂದ ಈ ಬಾರಿ ಸ್ಪರ್ಧೆ ಮಾಡದಿರಲು ನಿರ್ಧರಿಸಿದ್ದು, ಆದ್ರೆ ಈ ವಿಷಯ ತಿಳಿದ ಬಾದಾಮಿ ಮತಕ್ಷೇತ್ರದ ಕೈ ಕಾರ್ಯಕರ್ತರು, ಸಿದ್ದರಾಮಯ್ಯನವರು ಈ ಬಾರಿಯೂ ಬಾದಾಮಿಯಿಂದಲೇ ಗೆಲ್ಲುವಂತಾಗಲಿ, ಅವರು ನಿರಂತರವಾಗಿ ಹೆಲಿಕಾಪ್ಟರ್ ಮೂಲಕ ಬಾದಾಮಿಗೆ ಬರಲಿ, ಬೇಕಿದ್ದರೆ ನಾವೇ ಎಲ್ಲರೂ ಹಣ ಕೂಡಿಸಿ ಸಿದ್ದರಾಮಯ್ಯನವರಿಗೆ ಒಂದು ಹೆಲಿಕಾಪ್ಟರ್​ ಕೊಡಿಸುತ್ತೇವೆ ಎಂದು ಹೇಳುತ್ತಿದ್ದಾರೆ, ಇದನ್ನ ನೋಡಿದರೆ ಸಿದ್ದರಾಮಯ್ಯನವರಿಗೆ ಎಷ್ಟೊಂದು ಬೇಡಿಕೆ ಬಾದಾಮಿಯಲ್ಲಿ ಇದೆ ಅನ್ನೋದು ಗೊತ್ತಾಗುತ್ತೇ ಎಂದು ಜಮೀರ್​ ಹೇಳಿದರು. 
ಬಾದಾಮಿಯಿಂದ ಸ್ಪರ್ಧಿಸುವಂತೆ ಒತ್ತಾಯಿಸುತ್ತಿರೋ ಚಿಮ್ಮನಕಟ್ಟಿ ಕುಟುಂಬಸ್ಥರು.

ಸಿದ್ದರಾಮಯ್ಯ ಬಾದಾಮಿ ‘ಕೈ’ ಬಿಟ್ರಾ?

ಕೆರೂರ ಪಟ್ಟಣದಲ್ಲಿ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಮೀರ್ ಅಹ್ಮದ, ಬಾದಾಮಿಯಲ್ಲಿ ಚಿಮ್ಮನಕಟ್ಟಿ ಅವರ ಕುಟುಂಬ ಸೇರಿದಂತೆ ಕ್ಷೇತ್ರದ ಜನ್ರು ಪಕ್ಷಾತೀತವಾಗಿ ಸಿದ್ದರಾಮಯ್ಯನವರಿಗೆ ಮತ್ತೇ ಬಾದಾಮಿಯಿಂದಲೇ ಸ್ಪರ್ಧೆಮಾಡುವಂತೆ ಒತ್ತಾಯಿಸುತ್ತಿದ್ದಾರೆ, ಚಿಮ್ಮನಕಟ್ಟಿ ಅವರ ಪುತ್ರ ಭೀಮಸೇನ ಸಹ ಇದಕ್ಕೆ ಒಕ್ಕೊರಲಿನಿಂದ ಬೇಡಿಕೆ ಇಟ್ಟಿದ್ದು, ಈ ಹಿಂದೆ ಕಾಂಗ್ರೆಸ್​ ಸರ್ಕಾರ ಇರದೇ ಇರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಅವರಿಗೆ ಸ್ಥಾನ ಕಲ್ಪಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಈಗ ಎಲ್ಲರೂ ಒಪ್ಪಿಕೊಂಡು ಸಿದ್ದರಾಮಯ್ಯನವರನ್ನ ಮತ್ತೇ ಬಾದಾಮಿಯಿಂದಲೇ ಸ್ಪರ್ಧೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಇದನ್ನ ಅವರಿಗೆ ಮನವರಿಕೆ ಮಾಡುತ್ತೇನೆ ಎಂದು ಹೇಳಿದರು. 

ಸ್ವಕ್ಷೇತ್ರಕ್ಕೆ ಆಹ್ವಾನಿಸುತ್ತಿದ್ದ ಜಮೀರ್​ ರಿಂದ ಸಿದ್ದು ಬಾದಾಮಿಗೆ ಕರೆತರೋ ಪ್ರಯತ್ನ 

ಇನ್ನು ಸಿದ್ದರಾಮಯ್ಯನವರ ಸ್ವಕ್ಷೇತ್ರದಲ್ಲಿ ಜಮೀರ್ ಹೋದಕಡೆಗೆಲ್ಲಾ ಸಿದ್ದರಾಮಯ್ಯ ಬಾದಾಮಿಯಿಂದಲೇ ಸ್ಪರ್ಧಿಸಲಿ ಅಂತ ಕೂಗು ಕೇಳಿ ಬಂದ ಬೆನ್ನಲ್ಲೆ ತಮ್ಮ ಕ್ಷೇತ್ರಕ್ಕೆ ಆಹ್ವಾನಿಸುತ್ತಿದ್ದ ಜಮೀರ್ ಅವರು ಬಾದಾಮಿಗೆ ಸಿದ್ದರಾಮಯ್ಯನವರ ಕರೆತರಲು ನಾನು ಹೇಳುತ್ತೇನೆ ಎನ್ನುವ ಮೂಲಕ ಈ ಹಿಂದೆ ತಮ್ಮ ಕ್ಷೇತ್ರಕ್ಕೆ ಸಿದ್ದರಾಮಯ್ಯನವರನ್ನ ಕರೆದಿದ್ದ ಮಾಜಿ ಸಚಿವ ಜಮೀರ್ ಉಲ್ಟಾ ಹೊಡೆದರೆ ಎಂಬ ಇತ್ಯಾದಿ ಚರ್ಚೆಗಳು ಜಿಲ್ಲೆಯಾದ್ಯಂತ ಕೇಳಿ ಬಂದವು. 

ಒಟ್ಟಿನಲ್ಲಿ ಅದೇನೆ ಇರಲಿ ಕಳೆದ ವಾರ ಡಿಕೆಶಿವುಕುಮಾರ ಸಿದ್ದರಾಮಯ್ಯನವರ ಕ್ಷೇತ್ರಕ್ಕೆ ಬಂದು ಹೋದ ಬೆನ್ನಲ್ಲೆ ಈಗ ಸಿದ್ದರಾಮಯ್ಯನವರ ಆಪ್ತ ಜಮೀರ್ ಸ್ವಕ್ಷೇತ್ರ ಬಾದಾಮಿಗೆ ಬಂದಿದ್ದು ಅಚ್ಚರಿ ತಂದಿದ್ದು, ಹಲವು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದ್ದಂತು ಸುಳ್ಳಲ್ಲ. 
 

click me!