
ಬೆಂಗಳೂರು (ನ.13): ‘ಇಸ್ಲಾಂ ಧರ್ಮದಲ್ಲಿ ಭಯೋತ್ಪಾದನೆಗೆ ಅವಕಾಶ ಇಲ್ಲ. ಹಾಗಾಗಿ ಭಯೋತ್ಪಾದಕರು ಮುಸ್ಲಿಮರಾಗಲು ಸಾಧ್ಯವಿಲ್ಲ. ಈಗ ಎದ್ದಿರುವ ಪ್ರಶ್ನೆ ಬಿಹಾರ ಚುನಾವಣೆಗೆ ಒಂದು ದಿನದ ಹಿಂದೆ ಕೃತ್ಯ ನಡೆದಿದ್ದು ಯಾಕೆ?’ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಪ್ರಶ್ನೆ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ ದೆಹಲಿ ಕಾರ್ ಸ್ಫೋಟ ಪ್ರಕರಣ ಹಾಗೂ ಶಂಕಿತ ಉಗ್ರರ ಕುರಿತ ಪ್ರಶ್ನೆಗೆ ಉತ್ತರಿಸಿದರು.
ಸ್ಫೋಟದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಭಯೋತ್ಪಾದಕರಿಗೆ ರಾಜಕೀಯ ಸಂಪರ್ಕ ಇತ್ತು ಎಂದು ಅಲ್ಲಿ ಇಲ್ಲಿ ಮಾತುಗಳು ಹರಿದಾಡುತ್ತಿವೆ. ಬಿಹಾರ ಚುನಾವಣೆ ಒಂದು ದಿನದ ಹಿಂದೆ ಬಾಂಬ್ ಸ್ಫೋಟ ಹೇಗಾಯಿತು? ಹಾಗೇನಾದರೂ ಚುನಾವಣೆ ಕಾರಣಗಳಿಗಾಗಿ ಆಗಿದ್ದರೆ ಒಳ್ಳೆಯದಾಗಲ್ಲ. ಪ್ರಧಾನಮಂತ್ರಿಯೇ ಆಗಲಿ ಮುಖ್ಯಮಂತ್ರಿಯೇ ಆಗಲಿ ಯಾರೂ ಇಲ್ಲಿಯೇ ಗೂಟ ಹೊಡೆದುಕೊಂಡು ಇರುವುದಿಲ್ಲ ಎಂದು ಹೇಳಿದರು. ಸ್ಫೋಟದ ಬಗ್ಗೆ ಅನುಮಾನ ಇದೆಯೇ ಎಂಬ ಪ್ರಶ್ನೆಗೆ, ‘ಬ್ಲಾಸ್ಟ್ ಕುರಿತಾಗಿ ನನಗೆ ಅನುಮಾನ ಇಲ್ಲ.
ಆದರೆ ಭಯೋತ್ಪಾದನೆಗೆ ಮುಸ್ಲಿಮರನ್ನು ದೂರುವುದು ಸರಿಯಲ್ಲ. ಭಯೋತ್ಪಾದಕರಿಗೆ ಜಾತಿಯೇ ಇಲ್ಲ. ಇಸ್ಲಾಂ ಧರ್ಮದಲ್ಲಿ ಭಯೋತ್ಪಾದನೆಗೆ ಯಾರೂ ಅವಕಾಶವೇ ನೀಡಿಲ್ಲ. ಭಯೋತ್ಪಾದಕರು ಮುಸ್ಲಿಮರೇ ಅಲ್ಲ ಎಂದು ಹೇಳಿದರು. ಹಾಗೇನಾದರೂ ಇಂತಹ ಕೃತ್ಯ ಎಸಗಿದರೆ ಹುಳ ಬಿದ್ದು ಸಾಯ್ತಾರೆ. ಆದರೆ ಕಾರ್ ಸ್ಫೋಟ ಪ್ರಕರಣದ ಬಗ್ಗೆ ಒಂದಿಷ್ಟು ಪ್ರಶ್ನೆಗಳು ಇವೆ. ನವೆಂಬರ್ 11 ಕ್ಕೆ ಬಿಹಾರ ಚುನಾವಣೆ ನಡೆಯಿತು. ಒಂದು ದಿನದ ಮೊದಲು ಬ್ಲಾಸ್ಟ್ ಆಗಿದೆ. ಅದು ಹೇಗೆ? ಎಂದು ಸುದ್ದಿಗಾರರಿಗೆ ಪ್ರಶ್ನಿಸಿದರು.
2028ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. 2028ರಲ್ಲಿ 150 ಸೀಟ್ ಬರುವುದು ಗ್ಯಾರಂಟಿ ಎಂದು ವಸತಿ ಹಾಗೂ ವಿಜಯನಗರ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು. ವಿಜಯನಗರ ಜಿಲ್ಲೆ ಕೂಡ್ಲಿಗಿಯಲ್ಲಿ ₹870 ಕೋಟಿ ಮೊತ್ತದ 74 ಕೆರೆ ತುಂಬಿಸುವ ಯೋಜನೆ ಲೋಕಾರ್ಪಣೆ, ವಿವಿಧ ಕಾಮಗಾರಿಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಅವರು, ಬಿಜೆಪಿಯವರು ಸರ್ಕಾರ ದಿವಾಳಿ ಆಗಿದೆ ಎಂದು ಹೇಳ್ತಾರೆ. ಆದರೆ ನಾವು 11 ಜಿಲ್ಲೆಗಳಲ್ಲಿ ಸಾವಿರಾರು ಕೋಟಿ ರು. ಯೋಜನೆಗಳಿಗೆ ಅನುದಾನ ತಂದಿದ್ದೇವೆ. ನಾವು ಏನೇನು ಅನುದಾನ ನೀಡಿದ್ದೇವೆ ಎಂಬುದರ ಬಗ್ಗೆ ಪಟ್ಟಿ ಕೊಡಲು ಸಿದ್ಧ ಎಂದರು.
ನಾವು ಪಂಚ ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಈಗ ಆರನೇ ಗ್ಯಾರಂಟಿಯಾಗಿ ವಸತಿ ಗ್ಯಾರಂಟಿಗಳನ್ನು ನೀಡುತ್ತಿದ್ದೇವೆ. ಹುಬ್ಬಳ್ಳಿಯಲ್ಲಿ 42,345 ಮನೆಗಳನ್ನು ಬಡವರಿಗೆ ಹಂಚಿಕೆ ಮಾಡಲು ನ. 29ರಂದು ಅದ್ಧೂರಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಸೇರಿದಂತೆ ಸಚಿವ ಸಂಪುಟದ ಸಹೋದ್ಯೋಗಿಗಳು ಆಗಮಿಸಲಿದ್ದಾರೆ. ನಮಗೆ ಬಡವರ ಬಗ್ಗೆ ಕಾಳಜಿ ಇದೆ. ಈ ಕಾಳಜಿ ಬಿಜೆಪಿಯವರಿಗೆ ಏಕಿಲ್ಲ ಎಂದು ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.