ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಮುನ್ನವೇ ಅಧಿಕೃತವಾಗಿ ಈ ರಾಜಕೀಯ ಪಕ್ಷ ಸೇರಿದ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ..! ಸಿಕ್ತು ಮಹತ್ವದ ಜವಾಬ್ದಾರಿ

Published : Nov 22, 2026, 01:59 PM IST
Yuzvendra Chahal

ಸಾರಾಂಶ

ಭಾರತದ ಖ್ಯಾತ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಲ್ ಬಿಜೆಪಿ ಸೇರಿದ್ದು, ರಾಷ್ಟ್ರೀಯ ಒಬಿಸಿ ಮೋರ್ಚಾದಲ್ಲಿ ಹೊಸ ಜವಾಬ್ದಾರಿ ಪಡೆದಿದ್ದಾರೆ. ದೆಹಲಿ ಘಟಕದ ವಿಶೇಷ ಆಹ್ವಾನಿತ ಸದಸ್ಯರಾಗಿ ನೇಮಕವಾಗಿರುವ ಅವರು, ಕ್ರಿಕೆಟ್ ವೃತ್ತಿಜೀವನವನ್ನು ಮುಂದುವರಿಸಿದ್ದಾರೆ.

ಬೆಂಗಳೂರು(ನ.22): ಭಾರತದ ಖ್ಯಾತ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಲ್ ಇದೀಗ ರಾಜಕೀಯ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಮುಂದುವರಿಸಿರುವ ನಡುವೆಯೇ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿರುವ ಚಹಲ್‌ಗೆ ಪಕ್ಷದ ರಾಷ್ಟ್ರೀಯ ಒಬಿಸಿ ಮೋರ್ಚಾದಲ್ಲಿ ಹೊಸ ಜವಾಬ್ದಾರಿ ನೀಡಲಾಗಿದೆ. ಬಿಜೆಪಿಯ ರಾಷ್ಟ್ರೀಯ ಒಬಿಸಿ ಮೋರ್ಚಾದ ನೂತನ ಕಾರ್ಯಕಾರಿ ಸಮಿತಿಗೆ ಅವರನ್ನು ವಿಶೇಷ ಆಹ್ವಾನಿತ ಸದಸ್ಯರಾಗಿ (Special Invitee) ನೇಮಕ ಮಾಡಲಾಗಿದೆ.

ಬಿಜೆಪಿಯ ರಾಷ್ಟ್ರೀಯ ಒಬಿಸಿ ಮೋರ್ಚಾ ಇತ್ತೀಚೆಗೆ ಹೊಸ ಕಾರ್ಯಕಾರಿ ಸಮಿತಿಯನ್ನು ಪ್ರಕಟಿಸಿದ್ದು, ವಿವಿಧ ರಾಜ್ಯಗಳ ಹಲವು ವ್ಯಕ್ತಿಗಳಿಗೆ ಜವಾಬ್ದಾರಿಗಳನ್ನು ಹಂಚಿಕೆ ಮಾಡಿದೆ. ಈ ಪಟ್ಟಿಯಲ್ಲಿ ಯುಜುವೇಂದ್ರ ಚಹಲ್ ಅವರ ಹೆಸರೂ ಕಾಣಿಸಿಕೊಂಡಿದೆ.

ದೆಹಲಿ ಘಟಕವನ್ನು ಪ್ರತಿನಿಧಿಸಲಿರುವ ಚಹಲ್

ಬಿಜೆಪಿಯ ರಾಷ್ಟ್ರೀಯ ಒಬಿಸಿ ಮೋರ್ಚಾದ ಕಾರ್ಯಕಾರಿ ಸಮಿತಿಯಲ್ಲಿ ಯುಜುವೇಂದ್ರ ಚಹಲ್ ಅವರನ್ನು ದೆಹಲಿ ಘಟಕದ ಪ್ರತಿನಿಧಿಯಾಗಿ ವಿಶೇಷ ಆಹ್ವಾನಿತ ಸದಸ್ಯರನ್ನಾಗಿ ನೇಮಿಸಲಾಗಿದೆ. ಆದರೆ, ಈ ಹುದ್ದೆಯಲ್ಲಿ ಅವರ ಅಧಿಕಾರಾವಧಿ ಎಷ್ಟು ಕಾಲ ಇರಲಿದೆ ಮತ್ತು ಅವರಿಗೆ ನಿರ್ದಿಷ್ಟವಾಗಿ ಯಾವ ಜವಾಬ್ದಾರಿಗಳನ್ನು ವಹಿಸಲಾಗುತ್ತದೆ ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ಪಕ್ಷದ ಕಾರ್ಯಕಾರಿ ಸಮಿತಿಯಲ್ಲಿ ಸಾಮಾನ್ಯ ಸದಸ್ಯರಂತೆ ನಿಯಮಿತ ಹುದ್ದೆ ಹೊಂದಿರದಿದ್ದರೂ, ವಿಶೇಷ ಆಹ್ವಾನಿತ ಸದಸ್ಯರಿಗೆ ಸಮಿತಿಯ ಸಭೆಗಳಲ್ಲಿ ಭಾಗವಹಿಸಲು ಮತ್ತು ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಲಾಗುತ್ತದೆ. ಯುಜುವೇಂದ್ರ ಚಹಲ್ ಅವರಿಗೂ ಇದೇ ಸ್ಥಾನಮಾನ ನೀಡಲಾಗಿದ್ದು, ಅವರ ನಿಖರವಾದ ಪಾತ್ರ ಮತ್ತು ಜವಾಬ್ದಾರಿಗಳ ಕುರಿತು ಪಕ್ಷ ಇನ್ನೂ ಸಾರ್ವಜನಿಕವಾಗಿ ಮಾಹಿತಿ ಪ್ರಕಟಿಸಿಲ್ಲ. ಬಿಜೆಪಿಯ ಒಬಿಸಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಚಹಲ್ ಅವರ ನೇಮಕಾತಿಯನ್ನು ಪ್ರಕಟಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ; ಏಕದಿನ, ಟಿ20ಗೆ ಲಭ್ಯ

ಇನ್ನೊಂದೆಡೆ, ಯುಜುವೇಂದ್ರ ಚಹಲ್ ಸಂಪೂರ್ಣ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿಲ್ಲ. ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವ ಅವರು, ಭಾರತದ ಏಕದಿನ ಮತ್ತು ಟಿ20 ತಂಡಗಳಲ್ಲಿ ಸ್ಥಾನ ಪಡೆಯಲು ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. ಯುಜುವೇಂದ್ರ ಚಹಲ್ ಈವರೆಗೆ ಭಾರತ ತಂಡದ ಪರ 152 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಒಟ್ಟು 217 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ 188 ಪಂದ್ಯಗಳನ್ನಾಡಿರುವ ಅವರು, 233 ವಿಕೆಟ್‌ಗಳನ್ನು ಪಡೆದಿದ್ದಾರೆ.

ಗಮನಾರ್ಹ ಸಂಗತಿಯೆಂದರೆ, ಚಹಲ್ 2023ರ ಆಗಸ್ಟ್‌ನಿಂದ ಭಾರತ ತಂಡದ ಪರ ಯಾವುದೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿಲ್ಲ. ರಾಷ್ಟ್ರೀಯ ತಂಡಕ್ಕೆ ಮರಳಲು ಲಭ್ಯವಿದ್ದರೂ, ಈವರೆಗೆ ಅವರಿಗೆ ಮತ್ತೆ ತಂಡದಲ್ಲಿ ಅವಕಾಶ ಸಿಕ್ಕಿಲ್ಲ. ಕ್ರಿಕೆಟ್ ವೃತ್ತಿಜೀವನ ಮುಂದುವರಿಸುವುದರ ಜೊತೆಗೆ ಇದೀಗ ರಾಜಕೀಯದಲ್ಲೂ ಹೊಸ ಜವಾಬ್ದಾರಿ ಪಡೆದಿರುವ ಯುಜುವೇಂದ್ರ ಚಹಲ್ ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕ್ರಿಕೆಟಿಗ ಯುಜುವೇಂದ್ರ ಚಾಹಲ್ ಬಿಜೆಪಿಗೆ ಸೇರ್ಪಡೆ! ಒಬಿಸಿ ಮೋರ್ಚಾ ಸಮಿತಿಯಲ್ಲಿ ಅವರ ಸ್ಥಾನ ಏನು?
ಮಾರುತಿ ಕಂಪನಿಗೆ ಸೋನಿಯಾ ಗಾಂಧಿ ಮಾಲೀಕರಾಗಿದ್ರಾ? ಬಿಜೆಪಿ ಹಾಕಿದ ಬಾಂಬ್‌ಗೆ ಕೋಲಾಹಲ