ಯುವನಿಧಿಗೆ ಜ.12ಕ್ಕೆ ಶಿವಮೊಗ್ಗದಲ್ಲಿ ಚಾಲನೆ: ಸಚಿವ ಪ್ರಿಯಾಂಕ್‌ ಖರ್ಗೆ

Published : Jan 07, 2024, 03:46 PM IST
ಯುವನಿಧಿಗೆ ಜ.12ಕ್ಕೆ ಶಿವಮೊಗ್ಗದಲ್ಲಿ ಚಾಲನೆ: ಸಚಿವ ಪ್ರಿಯಾಂಕ್‌ ಖರ್ಗೆ

ಸಾರಾಂಶ

ರಾಜ್ಯ ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಮಹತ್ವಾಕಾಂಕ್ಷಿ ಯುವನಿಧಿ ಯೋಜನೆಗೆ ಜ.12ರಂದು ಸ್ವಾಮಿ ವಿವೇಕಾನಂದ ಜನ್ಮದಿನದಂದು ಶಿವಮೊಗ್ಗ ನಗರದಲ್ಲಿ ಚಾಲನೆ ನೀಡಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಐಟಿಬಿಟಿ ಖಾತೆ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಕಲಬುರಗಿ (ಜ.07): ರಾಜ್ಯ ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಮಹತ್ವಾಕಾಂಕ್ಷಿ ಯುವನಿಧಿ ಯೋಜನೆಗೆ ಜ.12ರಂದು ಸ್ವಾಮಿ ವಿವೇಕಾನಂದ ಜನ್ಮದಿನದಂದು ಶಿವಮೊಗ್ಗ ನಗರದಲ್ಲಿ ಚಾಲನೆ ನೀಡಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಐಟಿಬಿಟಿ ಖಾತೆ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ಕಲಬುರಗಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ನಿರುದ್ಯೋಗಿ ಪದವಿ ಹಾಗೂ ಡಿಪ್ಲೊಮಾ ಪೂರ್ಣಗೊಳಿಸಿದ ರಾಜ್ಯದ 5 ಲಕ್ಷ ಅಭ್ಯರ್ಥಿಗಳು ಈ ಯೋಜನೆಯ ಲಾಭ ಪಡೆದುಕೊಳ್ಳಲಿದ್ದಾರೆ. ಈ ಯೋಜನೆಗೆ ಪ್ರಸಕ್ತ ವರ್ಷ ₹250 ಕೋಟಿ ಖರ್ಚಾಗಲಿದೆ ಎಂದರು.

ಕಳೆದೊಂದು ದಶಕದಿಂದ ದೇಶದಲ್ಲಿ ನಿರುದ್ಯೋಗ ಹೆಚ್ಚಿದೆ. ಇದಕ್ಕೆ ಕೇಂದ್ರದ ತಪ್ಪು ನೀತಿಗಳೇ ಕಾರಣ. ಯುವಕರಲ್ಲಿ ಉದ್ಯಮಶೀಲತೆ ಬೆಳೆಸುವ, ಸೂಕ್ತ ಕೌಶಲ್ಯ ತರಬೇತಿ ನೀಡುವುದಕ್ಕೆ ರಾಜ್ಯ ಸರ್ಕಾರ ಆದ್ಯತೆ ನೀಡುತ್ತಿದೆ. ಯುವನಿಧಿ ರಾಜ್ಯದ ಯುವಕರನ್ನು ಕೌಶಲ್ಯಪೂರ್ಣರಾಗಿಸುವ ದಿಶೆಯಲ್ಲಿ ಪೂರಕವಾಗಲಿದೆ ಎಂದರು. ಯುಜನರ ಉಜ್ವಲ ಭವಿಷ್ಯಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಯುವನಿಧಿ ಕೇವಲ ನಿರುದ್ಯೋಗಿಗಳಿಗೆ ಹಣ ನೀಡುವುದಷ್ಟೆ ಅಲ್ಲ, ಬದಲಾಗಿ ಅವರಿಗೆ ಉದ್ಯಮಶೀಲತೆ ಕಲ್ಪಿಸಿ ಉದ್ಯೋಗ ನೀಡುವುದು ನಮ್ಮ ಆದ್ಯತೆಯಾಗಿದೆ ಎಂದರು. ಕಳೆದ ಡಿ.26ಕ್ಕೆ ಈ ಯೋಜನೆಯಡಿ ನೋಂದಣಿಗೆ ಚಾಲನೆ ನೀಡಿದ್ದು, 2022-23ನೇ ಶೈಕ್ಷಣಿಕ ಸಾಲಿನಲ್ಲಿ ಪದವಿ, ಡಿಪ್ಲೋಮಾ ಉತ್ತೀರ್ಣರಾಗಿ 6 ತಿಂಗಳ ವರೆಗೆ ಯಾವುದೇ ಉದ್ಯೋಗ ಪಡೆಯದ, ಸ್ವಯಂ ಉದ್ಯೋಗಿಯಾಗಿರದ, ವ್ಯಾಸಂಗ ಮುಂದುವರಿಸದವರಿಗೆ ಹಾಗೂ ಕನಿಷ್ಠ 6 ವರ್ಷ ಕರ್ನಾಟಕದಲ್ಲಿ ವ್ಯಾಸಂಗ ಮಾಡಿದವರಿಗೆ ಕ್ರಮವಾಗಿ 3,000 ರು. ಮತ್ತು 1,500 ರು. ನಿರುದ್ಯೋಗ ಭತ್ಯೆ ನೀಡಲಾಗುತ್ತದೆ ಎಂದರು.

ಹಿಂದೂಗಳನ್ನು ಹತ್ತಿಕ್ಕುವ ಮೂಲಕ ಕಾಂಗ್ರೆಸ್‌ನಿಂದ ರಾಜಕೀಯ: ಪ್ರಲ್ಹಾದ್‌ ಜೋಶಿ

ರಾಜ್ಯದಲ್ಲಿ 5 ಲಕ್ಷ ಫಲಾನುಭವಿಗಳು ಅರ್ಹರಿದ್ದು, ಕಲಬುರಗಿ ಜಿಲ್ಲೆಯಲ್ಲಿ 9 ಸಾವಿರ ಜನ ಇದ್ದಾರೆ. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ 250 ಕೋಟಿ ರು. ಖರ್ಚು ಆಗಲಿದೆ. ಮುಂದಿನ ವರ್ಷ ಆರ್ಥಿಕ ಹೊರೆ ದುಪ್ಪಟಾಗುವ ಸಾಧ್ಯತೆ ಇದೆ. ಯೋಜನೆಯ ಲಾಭ ಪಡೆಯಲು ಫಲಾನುಭವಿಗಳು https://sevasindhugs.karnataka.gov.in ಲಾಗಿನ್ ಆಗಿ ಅಥವಾ ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅರ್ಜಿ ಪ್ರಕ್ರಿಯೆ ಕುರಿತು ವಿವರಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಯೋಜನೆಯಡಿ ನೋಂದಣಿ ನಂತರ ಉದ್ಯೋಗ ದೊರಕಿಸುವಂತಹ ಸಂವಹನ ಕೌಶಲ್ಯ, ಸಂಬಂಧಿತ ಕೋರ್ಸ್ ಬೋಧನೆ ಹೀಗೆ ಒಟ್ಟಾರೆ ಉದ್ಯಮಶೀಲತೆ ತರಬೇತಿ ಸಹ ನೀಡಲಾಗುತ್ತದೆ ಎಂದರು.

ಕಲಬುರಗಿಯಲ್ಲಿ 5 ವಿವಿ, 6 ಇಂಜಿನಿಯರಿಂಗ್ ಕಾಲೇಜು, 12 ಪಾಲಿಕೆಟ್ನಿಕ್ ಕಾಲೇಜು ಹಾಗೂ 80ಕ್ಕೂ ಅಧಿಕ ಪದವಿ ಕಾಲೇಜುಗಳಿವೆ. 2022-23ನೇ ಸಾಲಿನಲ್ಲಿ‌ 9000ಕ್ಕೂ ಅಧಿಕ ಪದವಿ ಹಾಗೂ ಡಿಪ್ಲೊಮಾ ಪಾಸಾದ ಅಭ್ಯರ್ಥಿಗಳಿದ್ದು, ಅವರಲ್ಲಿ ಇದುವರೆಗೆ 1575 ಅಭ್ಯರ್ಥಿಗಳು ತಮ್ಮ ಹೆಸರು ನೋಂದಾಯಿಸಿದ್ದಾರೆ. ಪದವಿ ಹಾಗೂ ಡಿಪ್ಲೊಮಾ ಮುಗಿದು ಕನಿಷ್ಠ 6 ತಿಂಗಳ ಅವಧಿಯವರೆಗೆ ಸರ್ಕಾರಿ ಹಾಗೂ ಖಾಸಗಿ ಉದ್ಯೋಗ ಹೊಂದಿಲ್ಲದವರು, ಸ್ವಯಂ ಉದ್ಯೋಗವಿಲ್ಲದವರು, ಉನ್ನತ ವಿದ್ಯಾಭ್ಯಾಸ ಮುಂದುವರೆಸದವರು ಈ ಯೋಜನೆಗೆ ಅರ್ಹರಿದ್ದು ನೋಂದಣಿಗೆ ಯಾವುದೇ ಕಾಲಮಿತಿಯಿಲ್ಲ. ಹಾಗಾಗಿ ಇನ್ನುಳಿದ ಅಭ್ಯರ್ಥಿಗಳು ತಮ್ಮ ಹೆಸರು ನೋಂದಾಯಿಸುವ ಮೂಲಕ ಈ ಯೋಜನೆ ಲಾಭ ಪಡೆದುಕೊಳ್ಳಬೇಕು ಎಂದು ಸಚಿವರು ಕರೆ ನೀಡಿದರು.

ಉದ್ಯೋಗ ಮೇಳ: ನಮ್ಮ ಸರ್ಕಾರ ಯುವಕರಿಗೆ ಉದ್ಯೋಗ ನೀಡುವತ್ತ ಹೆಚ್ಚಿನ ಗಮನ ಹರಿಸಿದೆ. ಜನವರಿ ಅಂತ್ಯಕ್ಕೆ ಅಥವಾ ಫೆಬ್ರವರಿ ಮೊದಲನೇ ವಾರದಲ್ಲಿ ರಾಜಧಾನಿಯಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ. ತದನಂತರ ವಿಭಾಗ, ಜಿಲ್ಲಾ ಮಟ್ಟದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗುವುದು. ಹಿಂದಿಗಿಂತ ವಿಭಿನ್ನ ಉದ್ಯೋಗ ಮೇಳ ಇದಾಗಿರಲಿದೆ ಎಂದರು. ರಾಜ್ಯದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ-ಖಾಸಗಿ ಸಂಸ್ಥೆ, ಕೈಗಾರಿಕೆಯಲ್ಲಿ ಉದ್ಯೋಗ ಪಡೆಯುವ ನಿಟ್ಟಿನಲ್ಲಿ ತಮ್ಮ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ಜಂಟಿ ನೇತೃತ್ವದಲ್ಲಿ ಸ್ಕಿಲ್ ಅಡ್ವಾನ್ಸಡ್ ಕಮಿಟಿ ರಚಿಸಿದ್ದು, ಫೆಬ್ರವರಿ ಮೊದಲನೇ ವಾರದಲ್ಲಿ ಸಮಿತಿ ನೀಲಿ ನಕ್ಷೆ ಸಿದ್ಧಪಡಿಸಲಿದೆ. ತದನಂತರ ನೀಲನಕ್ಷೆ ಆಧಾರದ ಮೇಲೆ ಇಡೀ ವಿಶ್ವಕ್ಕೆ ಮಾದರಿಯಾಗುವಂತಹ ಮನವ ಸಂಪನ್ಮೂಲ ಪೂರೈಕೆಗೆ ಯೋಜನೆ ರೂಪಿಸಲಾಗುವುದು ಎಂದರು.

ಕಲ್ಯಾಣ ಕರ್ನಾಟಕ ಭಾಗದ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಅನುಕೂಲವಾಗುವಂತೆ ಸ್ಪರ್ಧಾತ್ಮಕ ಪರೀಕ್ಷೆ ಪೂರ್ವ ತರಬೇತಿ ನೀಡಲೆಂದೆ ಕಲಬುರಗಿ ನಗರದ ವಾಜಪೇಯಿ ಬಡಾವಣೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಪರೀಕ್ಷಾ ಪೂರ್ವ ತರಬೇತಿ ಕೇಂದ್ರ ನೈಸ್ ಅಕಾಡೆಮಿ ಸ್ಥಾಪಿಸಿದ್ದು, ಶೀಘ್ರವೆ ತರಬೇತಿ ಕೇಂದ್ರ ಆರಂಭವಾಗಲಿದೆ. ಇದಕ್ಕೆ 10 ಕೋಟಿ ರು. ಅನುದಾನ ನೀಡಲಾಗುತ್ತದೆ ಎಂದರು. ರಾಜ್ಯದಲ್ಲಿ ಪ್ರಸ್ತುತ 2.40 ಲಕ್ಷ ಹುದ್ದೆ ಖಾಲಿ ಇದ್ದು, ಇದನ್ನು ಹಂತ ಹಂತವಾಗಿ ಭರ್ತಿ ಮಾಡಲು ಸರ್ಕಾರ ದೃಢ ಹೆಜ್ಜೆ ಇಟ್ಟಿದೆ. ಕೆಪಿಎಸ್‌ಸಿ, ಕೆಇಎ ಮೂಲಕ ಭರ್ತಿ ಮಾಡಲಾಗುವುದು. 

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಯಾವ ಹಿಂದೂವಿಗೆ ಲಾಭವಾಗಿದೆ?: ಸಚಿವ ಸಂತೋಷ್‌ ಲಾಡ್

ಇತ್ತೀಚೆಗೆ 371ಜೆ ಅನ್ವಯ ಪ್ರಾದೇಶಿಕ ವೃಂದ ಮತ್ತು ರಾಜ್ಯ ಮಟ್ಟದ ವೃಂದದಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇಮಕಾತಿ ಮತ್ತು ಮುಂಬಡ್ತಿ ಮೂಲಕ ಭರ್ತಿ ಮಾಡಲು ಎಲ್ಲಾ ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು 371ಜೆ ಅನುಷ್ಠಾನ ಸಮಿತಿ ಅಧ್ಯಕ್ಷರು ಆಗಿರುವ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.  ರಾಜ್ಯದಲ್ಲಿರುವ ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ ₹9000 ಕೋಟಿ‌ ಅನುದಾನ ತೆಗೆದಿರಿಸುವ‌ ನಿರ್ಣಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದ್ದು, ಲೋಕೋಪಯೋಗಿ ಇಲಾಖೆ ಸಚಿವರು ಈ ಕುರಿತು ಕ್ರಮವಹಿಸಲಿದ್ದಾರೆ ಎಂದು ಹೇಳಿದ ಖರ್ಗೆ, ಜಿಲ್ಲೆಯಲ್ಲಿನ ಹಾಳಾದ ರಸ್ತೆಗಳ ಅಭಿವೃದ್ಧಿಗೆ ಇದು ಸಹಕಾರಿಯಾಗಲಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಖಾಲಿ ಇರುವ ವೈದ್ಯ, ಸಿಬ್ಬಂದಿ ಹುದ್ದೆ ತಿಂಗಳಲ್ಲಿ ಭರ್ತಿ: ಸಚಿವ ದಿನೇಶ್ ಗುಂಡೂರಾವ್ ಘೋಷಣೆ
3,600 ಪೊಲೀಸ್‌ ಕಾನ್‌ಸ್ಟೇಬಲ್‌ ನೇಮಕಾತಿಗೆ ಶೀಘ್ರ ಕ್ರಮ: ಗೃಹ ಸಚಿವ ಪರಮೇಶ್ವರ್‌