
ಬೆಂಗಳೂರು (ಜು.06): ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡದೇ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.
ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಮಹಮದ್ ಹ್ಯಾರಿಸ್ ನಲಪಾಡ್ ನೇತೃತ್ವದಲ್ಲಿ ಮಲ್ಲೇಶ್ವರದ ಗೋಕಾಕ್ ಉದ್ಯಾನವನದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು, ವರನಟ ಡಾ.ರಾಜ್‌ಕುಮಾರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಮೆರವಣಿಗೆ ಮೂಲಕ ಆಗಮಿಸಿ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಮುತ್ತಿಗೆ ಹಾಕಲು ಮುಂದಾದಾಗ ಕಚೇರಿಯಿಂದ ಸ್ವಲ್ಪ ದೂರದಲ್ಲೇ ಬ್ಯಾರಿಕೇಡ್ ಹಾಕಿ ತಡೆದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.
ರಸ್ತೆ ಸುರಕ್ಷತೆ ಕಾಯ್ದೆ ವ್ಯಾಪ್ತಿಗೆ ಬಿಬಿಎಂಪಿ: ಮಸೂದೆ ಮಂಡಿಸಿದ ಸಚಿವ ಪ್ರಿಯಾಂಕ್ ಖರ್ಗೆ
ಈ ಸಂದರ್ಭದಲ್ಲಿ ಮಾತನಾಡಿದ ಮಹಮದ್ ಹ್ಯಾರಿಸ್ ನಲಪಾಡ್, ಬಿಜೆಪಿಯ 25 ಸಂಸದರಿದ್ದರೂ ಕರ್ನಾಟಕದ ಬಿಪಿಎಲ್ ಕಾರ್ಡ್‌ದಾರರಿಗೆ ಕೇಂದ್ರ ಸರ್ಕಾರದಿಂದ 5 ಕೆಜಿ ಅಕ್ಕಿ ಕೊಡಿಸಲು ಸಾಧ್ಯವಾಗುತ್ತಿಲ್ಲ. ಬಿಜೆಪಿ ಸಂಸದರು ಜನಪರವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅಕ್ಕಿ ನೀಡದೇ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಬಿಜೆಪಿ ಸಂಸದರ ಮುಖವಾಡ ಹಾಕಿಕೊಂಡು ಅಕ್ಕಿ ಚೀಲಗಳನ್ನು ಹೊತ್ತುಕೊಂಡು ಬಿಜೆಪಿ ಕಚೇರಿಗೆ ನುಗ್ಗಲು ಮುಂದಾದರು.
ಬಡವರಿಗೆ ಅಕ್ಕಿ ಕೊಡಿಸದ ಬಿಜೆಪಿಯ 25 ಸಂಸದರ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ದೇಶದ ಎಲ್ಲ ಜನರನ್ನೂ ಒಂದೇ ರೀತಿ ಕೇಂದ್ರ ಸರ್ಕಾರ ನೋಡಬೇಕು. ಆದರೆ ಬಿಜೆಪಿಗೆ ಮತ ನೀಡಲಿಲ್ಲ ಎಂದರೆ ಕೇಂದ್ರದ ಯೋಜನೆಗಳು ಸಿಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿಕೆ ನೀಡಿದ್ದರು. ಆದರೆ ಬಿಜೆಪಿಗೆ ಮತ ಹಾಕಿದವರಿಗೂ ನಮ್ಮ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ನೀಡುತ್ತಿದ್ದು ತಾರತಮ್ಯ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯುವ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ಬರುತ್ತಿದ್ದಾರೆ ಎಂದು ತಿಳಿದು ಬಿಜೆಪಿ ಕಚೇರಿ ಬಳಿ ಬಿಗಿ ಪೊಲೀಸ್ ಬಂದೋಬಸ್‌್ತ ಮಾಡಲಾಗಿತ್ತು. ಕಾರ್ಯಕರ್ತರು ಇತ್ತ ಆಗಮಿಸುತ್ತಿದ್ದಂತೆ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ವಾಗ್ದಾದ ನಡೆಯಿತು. ಬ್ಯಾರಿಕೇಡ್ ಹತ್ತಲು ಮುಂದಾದ ನಲಪಾಡ್ ಮತ್ತಿತರರನ್ನು ವಶಕ್ಕೆ ಪಡೆದ ಪೊಲೀಸರು ಬಳಿಕ ಬಿಡುಗಡೆಗೊಳಿಸಿದರು.
ನನ್ನ ಆಸ್ತಿ ತನಿಖೆ ಮಾಡಲಿ: ಕಾಂಗ್ರೆಸ್‌ಗೆ ಎಚ್.ಡಿ.ಕುಮಾರಸ್ವಾಮಿ ಸವಾಲು
ಸಂಸದರ ಕಚೇರಿ ಮುಂದೆ ಧರಣಿ: ಬಿಜೆಪಿಯ 25 ಸಂಸದರು ರಾಜ್ಯದ ಪರವಾಗಿ ಕೆಲಸ ಮಾಡುತ್ತಿಲ್ಲ. ಅನ್ನಭಾಗ್ಯ ಯೋಜನೆಗೆ ಕೇಂದ್ರದಿಂದ ಅಕ್ಕಿ ಕೊಡಿಸದೇ ರಾಜಕೀಯ ಮಾಡುತ್ತಿದ್ದಾರೆ. ಇದನ್ನು ವಿರೋಧಿಸಿ ಎಲ್ಲ ಜಿಲ್ಲೆಗಳಲ್ಲಿ ಸಂಸದರ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತೇವೆ. ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಮಹಮದ್ ಹ್ಯಾರಿಸ್ ನಲಪಾಡ್ ಎಚ್ಚರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.