ಮುಸ್ಲಿಂರ 2ಬಿ ಮೀಸಲು ಹಿಂಪಡೆಯಲು ಯತ್ನಾಳ್, ಬೆಲ್ಲದ್ ಆಗ್ರಹ

By Kannadaprabha NewsFirst Published Oct 11, 2022, 11:19 AM IST
Highlights
  • ಮುಸ್ಲಿಮರಿಗೆ ಎರಡು ಕಡೆ ಮೀಸಲು ಬೇಡ: ಬೆಲ್ಲದ್‌, ಯತ್ನಾಳ್‌
  •  ಮುಸ್ಲಿಮರಿಗೆ 2ಬಿ ಮೀಸಲಾತಿ ಹಿಂಪಡೆಯಲು ಒತ್ತಾಯ
  • ಆ ಮೀಸಲಾತಿ ಹಿಂದುಳಿದ ವರ್ಗದವರಿಗೆ ಹಂಚಿ: ಯತ್ನಾಳ

ವಿಜಯಪುರ/ ಬೆಂಗಳೂರು (ಅ.11) : ಮುಸ್ಲಿಮರಿಗೆ ಸಿಗುತ್ತಿರುವ ಎರಡೆರಡು ಮೀಸಲಾತಿ ವಿರುದ್ಧ ಇದೀಗ ಬಿಜೆಪಿ ಶಾಸಕರಾದ ಅರವಿಂದ ಬೆಲ್ಲದ ಹಾಗೂ ಬಸನಗೌಡ ಪಾಟೀಲ ಯತ್ನಾಳ ಅಪಸ್ವರ ಎತ್ತಿದ್ದಾರೆ. ಮುಸ್ಲಿಮರಿಗೆ 2ಬಿ ಕೆಟಗರಿ ಅಡಿ ನೀಡಲಾಗುತ್ತಿರುವ ಮೀಸಲಾತಿ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ವಾಲ್ಮೀಕಿ ಮೀಸಲಾತಿ ಆಯ್ತು, ಈಗ ಕುರುಬ, ಬ್ರಾಹ್ಮಣ ಮಿಸಲಾತಿ ಕೂಗೆಬ್ಬಿಸಿದ ಯತ್ನಾಳ್

ಮುಸ್ಲಿಮರು ಎರಡೆರಡು ಕೆಟಗರಿಯಲ್ಲಿ ಮೀಸಲಾತಿ ಲಾಭ ಪಡೆಯುತ್ತಿದ್ದಾರೆ. ಈ ಸಂಬಂಧ ಮುಸ್ಲಿಮರಿಗೆ ನೀಡುತ್ತಿರುವ ಮೀಸಲಾತಿ ಪರಿಷ್ಕರಿಸುವ ಕುರಿತು ಅರವಿಂದ ಬೆಲ್ಲದ ಪ್ರಸ್ತಾಪಿಸಿದ್ದರು. ಈ ವಿಚಾರದಲ್ಲಿ ಬೆಲ್ಲದ ಅವರ ಅಭಿಪ್ರಾಯವನ್ನು ಬೆಂಬಲಿಸಿದ ಶಾಸಕ ಯತ್ನಾಳ, ಮುಸ್ಲಿಮರು ಅಲ್ಪಸಂಖ್ಯಾತ ಹಾಗೂ 2ಬಿ ಹೀಗೆ ಎರಡೆರಡು ಕೆಟಗರಿ ಅಡಿ ಮೀಸಲಾತಿ ಲಾಭ ಪಡೆಯುತ್ತಿದ್ದಾರೆ. ಅವರನ್ನು 2ಬಿ ಮೀಸಲಾತಿಯಿಂದ ಹೊರಗಿಡಲು ಸರ್ಕಾರದ ಮಟ್ಟದಲ್ಲಿ ತಯಾರಿ ನಡೆದಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ನಾವು ಕೂಡ ಈ ಕುರಿತು ಪುನರ್‌ ಪರಿಶೀಲನೆಗೆ ಮುಖ್ಯಮಂತ್ರಿ ಅವರಿಗೆ ಹೇಳಿದ್ದೇವೆ. ಬೆಲ್ಲದ ಮಾತಿನಲ್ಲಿ ಸತ್ಯಾಂಶವಿದೆ. ಅವರಿಗೆ ಸಿಗುತ್ತಿರುವ 2ಬಿ ಮೀಸಲಾತಿಯನ್ನು ಹಿಂಪಡೆದು ಉಳಿದ ಹಿಂದುಳಿದವರಿಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಈ ವಿಚಾರವಾಗಿ ಮುಖ್ಯಮಂತ್ರಿ ಜೊತೆಗೆ ಚರ್ಚೆಯಾಗಿದೆ ಎಂದ ಅವರು, ಸಂಘ ಪರಿವಾರದಿಂದಲೂ ಚರ್ಚೆ ಆಗಿದೆ. ಒಂದು ಸಮುದಾಯ ಎರಡು ಕಡೆ ಮೀಸಲಾತಿ ಲಾಭ ಪಡೆಯುವುದನ್ನು ತಡೆಯಬೇಕು ಎಂದು ಆಗ್ರಹಿಸಿದರು.

ಬೆಲ್ಲದ್‌ ಅಪ್ಪ ಇದ್ದಾಗ ಮುಸ್ಲಿಮರಿಗೆ ಮೀಸಲು ಸಿಕ್ಕಿದೆ: ಇಬ್ರಾಹಿಂ

ಮುಸ್ಲಿಮರಿಗೆ 2ಬಿ ಮೀಸಲಾತಿ ನೀಡಿರುವುದು ಶಾಸನಬದ್ಧವಾಗಿದ್ದು, ಶಾಸಕ ಅರವಿಂದ ಬೆಲ್ಲದ್‌ ಅವರ ಅಪ್ಪ ಇದ್ದಾಗ ಮಾಡಲಾಗಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ತಿರುಗೇಟು ನೀಡಿದ್ದಾರೆ. ಸೋಮವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಸ್ಲಿಮರ 2ಬಿ ಮೀಸಲಾತಿ ಪರಿಷ್ಕರಣೆ ಮಾಡಬೇಕು ಎಂಬ ಹೇಳಿಕೆಗೆ ಕಿಡಿಕಾರಿದರು. ಮುಸ್ಲಿಮರಿಗೆ 2ಬಿ ಮೀಸಲಾತಿ ಶಾಸನಬದ್ಧವಾಗಿದೆ. ಶಾಸಕ ಅರವಿಂದ ಬೆಲ್ಲದ್‌ ಅವರಪ್ಪ ಇದ್ದಾಗ ನೀಡಲಾಗಿದೆ. ಈಗ ಇದಕ್ಕೆಲ್ಲ ಕೈಹಾಕಲು ಹೋಗಬೇಡಿ. ಹಿಂದೆ ಮಾಜಿ ಪ್ರಧಾನಿ ಎ.ಬಿ.ವಾಜಪೇಯಿ ಇದ್ದಾಗಲೂ ನಡೆದುಕೊಂಡು ಬಂದಿದೆ. ಶೇ.4ರಷ್ಟುಮೀಸಲಾತಿ ನಮಗೆ ಖುಷಿ ಇದೆ ಎಂದು ಕಿಡಿಕಾರಿದರು.

ಮುಸ್ಲಿಂರ 2ಬಿ ಮೀಸಲಾತಿ ತೆಗೆದುಹಾಕಬೇಕು: ಸಂಚಲನ ಸೃಷ್ಟಿಸಿದ ಯತ್ನಾಳ್ ಹೇಳಿಕೆ

ಅಲ್ಪಸಂಖ್ಯಾತರ ಮೀಸಲು ಕಡಿತ ಇಲ್ಲ; ರವಿಕುಮಾರ್

ಅಲ್ಪಸಂಖ್ಯಾತರಿಗೆ ನೀಡುವ ಮೀಸಲಾತಿ ಕಡಿತಗೊಳಿಸಬೇಕು ಎಂಬ ವಿಚಾರವು ಸರ್ಕಾರದ ಮುಂದಾಗಲಿ, ಪಕ್ಷದ ಮುಂದಾಗಲಿ ಇಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಹೇಳಿದ್ದಾರೆ. ಸೋಮವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಜತೆ ಶಾಸಕ ಅರವಿಂದ್‌ ಬೆಲ್ಲದ್‌ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅಲ್ಪಸಂಖ್ಯಾತರಿಗೆ ನೀಡುವ ಮೀಸಲಾತಿ ಕಡಿತಗೊಳಿಸುವಂತಹ ವಿಚಾರವು ಸರ್ಕಾರದ ಮುಂದಿಲ್ಲ. ಅಂತೆಯೇ ಪಕ್ಷದ ಮುಂದೆಯೂ ಇಲ್ಲ. ಬೆಲ್ಲದ್‌ ಅವರು ಆ ವಿಚಾರ ಪ್ರಸ್ತಾಪಿಸಿರುವುದು ಗೊತ್ತಿಲ್ಲ. ಆದರೆ, ಅಂತಹ ಪ್ರಸ್ತಾಪ ಮಾತ್ರ ಸರ್ಕಾರ ಮತ್ತು ಪಕ್ಷದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು.

click me!