
ಮೈಸೂರು (ಜು.26): ಮೈಸೂರಿನ ಅಭಿವೃದ್ಧಿಗೆ ನಾಲ್ವಡಿ ಮಹಾರಾಜರಿಗಿಂತ ಹೆಚ್ಚು ಅಥವಾ ಮಹಾರಾಜರಷ್ಟೇ ಅನುದಾನ ಕೊಟ್ಟು ಅಭಿವೃದ್ಧಿ ಮಾಡಿದ್ದು ಸಿದ್ದರಾಮಯ್ಯ ಮಾತ್ರ. ಸಾಕಷ್ಟು ಅಭಿವೃದ್ಧಿಯನ್ನು ಸಿದ್ದರಾಮಯ್ಯ ಅವರು ಮಾಡಿದ್ದಾರೆ. ಅಭಿವೃದ್ಧಿ ಮಾಡಿರುವುದಕ್ಕಾಗಿಯೇ ಸಾಧನಾ ಸಮಾವೇಶ ಮಾಡಿದ್ದು. ಸುಮ್ಮನೇ ವಿಪಕ್ಷಗಳು ಟೀಕೆ ಮಾಡುತ್ತಿವೆ ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಹೇಳಿದ್ದು ಐದು ವರ್ಷ ಸಿದ್ದರಾಮಯ್ಯ ಸಿಎಂ ಅಲ್ಲ ಅಂತ. ಬೇಸಿಕಲಿ, 5 ವರ್ಷ ಸಿದ್ದರಾಮಯ್ಯ ಸಿಎಂ ಹೌದೋ, ಅಲ್ಲವೋ ಎಂಬ ಚರ್ಚೆಯೇ ಸರಿ ಇಲ್ಲ.
ಸಿದ್ದರಾಮಯ್ಯ ಎರಡೂವರೆ ವರ್ಷ ಮಾತ್ರ ಸಿಎಂ ಅಂತ ನಮ್ಮ ಪಕ್ಷದವರು ಯಾರಾದ್ರು ಹೇಳಿದ್ದಾರಾ?. ಇದು ವಿಪಕ್ಷಗಳು ಸೃಷ್ಟಿ ಮಾಡಿದ ಚರ್ಚೆ ಎಂದರು. ಸೆಪ್ಟೆಂಬರ್‌ನಲ್ಲಿ ರಾಜಕೀಯ ಕ್ರಾಂತಿ ಆಗುತ್ತೆ ಅಂಥ ರಾಜಣ್ಣ ಹೇಳಿದ್ದಾರೆ. ಕ್ರಾಂತಿ ಅಂದ್ರೆ ಅದು ಸಿಎಂ ಬದಲಾವಣೆ ಅಂತ ಅರ್ಥನಾ?. ಯಾಕೆ ಕ್ರಾಂತಿಯನ್ನು ಸಿಎಂ ಬದಲಾವಣೆಗೆ ತಂದು ನಿಲ್ಲಿಸುತ್ತೀರಾ?. ಬೇರೆ ವಿಚಾರಕ್ಕೆ ಕ್ರಾಂತಿಯಾಗಬಹುದು. ಅದು ಏನು ಕ್ರಾಂತಿ ಅಂಥ ರಾಜಣ್ಣ ಅವರನ್ನೇ ಕೇಳಿ. ಕ್ರಾಂತಿ ಅಂದರೆ ಸಿಎಂ ಬದಲಾವಣೆ ಎನ್ನುವ ಅರ್ಥವನ್ನು ಮೊದಲು ಬಿಡಿ. ಹೈಕಮಾಂಡ್, ಕಾಂಗ್ರೆಸ್ ಶಾಸಕರು ಎಲ್ಲರೂ ಸಿದ್ದು ಪರವಾಗಿದ್ದಾರೆ. ಅಂದ ಮೇಲೆ ಅವರೇಕೆ ಬದಲಾಗುತ್ತಾರೆ ಎಂದರು.
ಮುಡಾ ವಿಚಾರವಾಗಿ ಮಾತನಾಡಿ, ಮುಡಾ ಕೇಸ್ ಸಂಬಂಧ ಸುಪ್ರೀಂಕೋರ್ಟ್ ನೀಡಿದ ತೀರ್ಪಿನಿಂದಾಗಿ ಸಿದ್ದುಗೆ ರಾಜಕೀಯವಾಗಿ ಮತ್ತಷ್ಟು ಶಕ್ತಿ ಹೆಚ್ಚಾಗಿರುವುದು ನಿಜ. ಅವರನ್ನು ನೈತಿಕವಾಗಿ ಕುಗ್ಗಿಸುವ ಪ್ರಯತ್ನ ನಡೆದಿತ್ತು. ಈಗ ಅದು ನಿವಾರಣೆಯಾಗಿದೆ. ಸಹಜವಾಗಿ ರಾಜಕೀಯವಾಗಿ ಅವರ ಶಕ್ತಿ ಮತ್ತಷ್ಟು ಹೆಚ್ಚಾಗಿದೆ. ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿ ಮಾಸ್ ಲೀಡರ್. ಹೀಗಾಗಿ, ಸಿದ್ದರಾಮಯ್ಯ ಅವರನ್ನು ನೈತಿಕವಾಗಿ ಕುಗ್ಗಿಸಿದರೆ ಪಕ್ಷಕ್ಕೆ ಹಿನ್ನಡೆಯಾಗುತ್ತೆ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಟಾರ್ಗೆಟ್ ಆಗಿದ್ದಾರೆ. ಆದರೆ, ಎಲ್ಲವನೂ ಮೀರಿ ಈಗ ನಿಲ್ಲುತ್ತಿದ್ದೇವೆ ಎಂದು ಹೇಳಿದರು.
ಮುಡಾ ವಿಚಾರದಲ್ಲಿ ವಿನಾಕಾರಣ ನಮ್ಮ ತಾಯಿಯ ವಿಚಾರವನ್ನು ರಾಜಕೀಯವಾಗಿ ಎಳೆದು ತರಲಾಯಿತು. ಕೊನೆಗೂ ನಮಗೆ ಕಾನೂನು ಹೋರಾಟದಲ್ಲಿ ಜಯ ಸಿಕ್ಕಿದೆ. ಈ ತೀರ್ಪಿನಿಂದ ನಮ್ಮ ತಾಯಿಗೆ ಸಮಾಧಾನ ಸಿಕ್ಕಿದೆ. ಸದ್ಯಕ್ಕೆ ನಾವು 14 ಸೈಟ್ ಗಳನ್ನು ವಾಪಸ್ ಕೇಳುವುದಿಲ್ಲ. ಈ ವಿಚಾರದ ಬಗ್ಗೆ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ವಿಚಾರಣೆ ಮುಗಿಯಲಿ, ಆ ತೀರ್ಪು ಹೊರಬರಲಿ. ನಂತರ ಇದರ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ. ಆ ಸೈಟ್ ಗಳಿಂದಲೇ ತಂದೆಯ ರಾಜಕೀಯಕ್ಕೆ ಕಪ್ಪು ಚುಕ್ಕೆ ಬಂತು ಎಂಬ ನೋವು ನಮ್ಮ ತಾಯಿಗೆ ಇದೆ. ಹೀಗಾಗಿ, ಅದನ್ನು ವಾಪಸ್ ಕೊಟ್ಟರು ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.