
ಬೆಂಗಳೂರು (ಜು.27): ಮೈಸೂರು ಮಹಾರಾಜರ ಕುಟುಂಬಕ್ಕೆ ಅಪಮಾನ ಮಾಡಿರುವ ಶಾಸಕ ಯತೀಂದ್ರ ಸಿದ್ಧರಾಮಯ್ಯ ಅವರು ಕೂಡಲೇ ಮಹಾರಾಜರ ಕುಟುಂಬದ ಕ್ಷಮೆ ಕೇಳಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ. ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಚಿನ್ನಾಭರಣ ಅಡವಿಟ್ಟು ಜಲಾಶಯ ನಿರ್ಮಿಸಿದವರಿಗೂ, ಮುಡಾದಲ್ಲಿ 14 ಸೈಟು ಕೊಳ್ಳೆ ಹೊಡೆದವರಿಗೂ ಹೋಲಿಕೆ ಮಾಡಬಾರದು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಳೇ ಮೈಸೂರು ಭಾಗಕ್ಕೆ ನೀಡಿದ ಕೊಡುಗೆ ನಾವು ಸ್ಮರಿಸಬೇಕು ಎಂದರು.
ಕೆಆರ್‌ಎಸ್ ಜಲಾಶಯದಿಂದಾಗಿ ಜನರಿಗೆ ಜೀವಜಲ ದೊರೆತಿದೆ. ಅವರ ಸಾಧನೆಗಳಿಂದಾಗಿ ಜನ ಅನ್ನ ತಿನ್ನುತ್ತಿದ್ದಾರೆ. ಸೋಪ್ ಫ್ಯಾಕ್ಟರಿ, ವಿಶ್ವವಿದ್ಯಾಲಯಗಳ ನಿರ್ಮಾಣ, ಸಾಮಾಜಿಕ ನ್ಯಾಯವನ್ನು ನಾಲ್ವಡಿ ಕೃಷ್ಣರಾಜ್ ಒಡೆಯರ್ ಎತ್ತಿ ಹಿಡಿದಿದ್ದಾರೆ. ಹೀಗಿರುವಾಗ ಯತೀಂದ್ರ ಸಿದ್ಧರಾಮಯ್ಯ ಅವರು ಮಹಾರಾಜರ ಕುಟುಂಬಕ್ಕೆ ಅಪಮಾನ ಮಾಡಿದ್ದಾರೆ. ಕೂಡಲೇ ಅವರು ಕ್ಷಮೆ ಕೇಳಬೇಕು ಎಂದು ಆರ್.ಅಶೋಕ್ ಆಗ್ರಹಿಸಿದರು.
ಸರ್ಕಾರ ಗಾಢ ನಿದ್ರೆಯಲ್ಲಿದೆ: ಅತಿವೃಷ್ಟಿಯಿಂದ ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದರೆ ಸರ್ಕಾರ ಮಾತ್ರ ಗಾಢ ನಿದ್ರೆಯಲ್ಲಿದೆ ಎಂದು ಆರ್. ಅಶೋಕ್ ಹೇಳಿದರು. ಅತಿವೃಷ್ಟಿಯಿಂದ ಹಾನಿಗೀಡಾಗಿರುವ ಕಾಫಿತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮಲೆನಾಡ ಭಾಗದಲ್ಲಿ ಮೇ ತಿಂಗಳಿನಿಂದ ನಿರಂತರ ಮಳೆಯಿಂದಾಗಿ ವಾಣಿಜ್ಯ ಬೆಳೆಗಳಾದ ಕಾಫಿ, ಮೆಣಸು, ಅಡಿಕೆ ಬೆಳೆ ನಾಶವಾಗುತ್ತಿದ್ದು, ಬೆಳೆಗಾರರು ಆತಂಕದಲ್ಲಿದ್ದಾರೆ. ಆದರೆ, ಇದುವರೆಗೆ ಅಧಿಕಾರಿಗಳು ತೋಟಗಳಿಗೆ ಭೇಟಿ ನೀಡುವ ಕೆಲಸವನ್ನೇ ಮಾಡಿಲ್ಲ.
ಇನ್ನೂ ರಾಜ್ಯ ಸರ್ಕಾರ ಗಾಢನಿದ್ರೆಯಲ್ಲಿದ್ದು, ಎಚ್ಚರಿಸುವ ಕೆಲಸ ಮಾಡುವ ಉದ್ದೇಶದಿಂದ ತಾಲೂಕಿಗೆ ಭೇಟಿ ನೀಡಿದ್ದೇನೆ. ಕಾಫಿ ಬೆಳೆ ಶೇ. 35 ರಷ್ಟು ಉದುರಿದೆ. ಅಡಿಕೆ ಶೇ. 50 ರಷ್ಟು ನಾಶವಾಗಿದೆ. ಮೆಣಸು ಬೆಳೆ ಸಹ ಶೇ ೨೦ ರಷ್ಟು ನೆಲ ಸೇರಿದ್ದು, ಅಂದಾಜು ಆರನೂರರಿಂದ ಏಳುನೂರು ಕೋಟಿಯಷ್ಟು ನಷ್ಟ ಸಂಭವಿಸಿದೆ. ಈ ಬಗ್ಗೆ ರಾಜ್ಯ ಸರ್ಕಾರದ ಮಂತ್ರಿಗಳು ಹಾನಿಗೀಡಾಗಿರುವ ತೋಟಗಳಿಗೆ ಭೇಟಿ ನೀಡಿ ಹಾನಿಗೀಡಾಗಿರುವ ಬೆಳೆಯ ನಿಖರ ಅಂಕಿ ಅಂಶಗಳನ್ನು ಸಂಗ್ರಹಿಸಿ, ಪರಿಹಾರ ಹಾಗೂ ಪರ್ಯಾಯ ಮಾರ್ಗಗಳನ್ನು ಬೆಳೆಗಾರರಿಗೆ ಸೂಚಿಸ ಬೇಕಿದೆ ಎಂದು ಆಗ್ರಹಿಸಿದರು.
ಮಾವು ಬೆಲೆ ನೆಲಕಚ್ಚಿದ ವೇಳೆಯೂ ಸರ್ಕಾರ ಗಾಢ ನಿದ್ರೆಯಲ್ಲಿತ್ತು, ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಿಸಿದ ನಂತರ ರಾಜ್ಯ ಸರ್ಕಾರ ನಿದ್ರೆಯಿಂದ ಎಚ್ಚೆತ್ತು ಬೆಂಬಲ ಬೆಲೆ ಘೋಷಿಸಿದೆ. ಕಾಫಿ ಬೆಳೆಗಾರರ ನೆರವಿಗೆ ಕೇಂದ್ರ ಸರ್ಕಾರ ಆಗಮಿಸಬೇಕು ಎಂದಾದರೆ ಹಾನಿಪ್ರಮಾಣದ ಅಂಕಿ ಅಂಶಗಳನ್ನು ರಾಜ್ಯ ಸರ್ಕಾರ ನೀಡಬೇಕು, ಆನಂತರ ಕೇಂದ್ರದಿಂದ ಪರಿಹಾರ ಬಿಡುಗಡೆ ಮಾಡಿಸುವ ಬಗ್ಗೆ ಮಾತನಾಡಬಹುದು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.