ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಸಲ್ಲಿಕೆಯಾಗಿರುವ ಪ್ರಕರಣವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ವಾಪಸ್ ಪಡೆಯಲು ನಿರ್ಧರಿಸಿರುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಹುಬ್ಬಳ್ಳಿ (ನ.25): ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಸಲ್ಲಿಕೆಯಾಗಿರುವ ಪ್ರಕರಣವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ವಾಪಸ್ ಪಡೆಯಲು ನಿರ್ಧರಿಸಿರುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ ವಿರುದ್ಧ 2019ರಲ್ಲಿ ಅಂದಿನ ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ನೀಡಿದ್ದ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಪ್ರಕರಣವನ್ನು ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ವಾಪಸ್ ಪಡೆಯಲು ನಿರ್ಧರಿಸಿರುವುದು ನೈತಿಕವಾಗಿ ಹಾಗೂ ಕಾನೂನಾತ್ಮಕವಾಗಿ ಸರಿಯಲ್ಲ.
ದೇಶದಲ್ಲಿ ನಾಯಾಂಗ ವ್ಯವಸ್ಥೆಯಿದೆ. ಸರ್ಕಾರದ ನಿರ್ಣಯಗಳ ವಿರುದ್ಧವಾಗಿಯೂ ನ್ಯಾಯಾಲಯಗಳು ತೀರ್ಪು ನೀಡಿವೆ. ನ್ಯಾಯಾಂಗ ವ್ಯವಸ್ಥೆ ಸಂಪೂರ್ಣವಾಗಿ ಸ್ವತಂತ್ರವಾಗಿದ್ದು, ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುತ್ತಿವೆ. ದೋಷಾರೋಪ ಪಟ್ಟಿ ಸಲ್ಲಿಸುವ ಹಂತದಲ್ಲಿ ಈ ರೀತಿ ವಾಪಸ್ ಪಡೆದಿರುವುದು ಸರಿಯಲ್ಲ. ಸಂಬಂಧಿಸಿದ ಏಜೆನ್ಸಿಗಳು ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಸಚಿವ ಸಂಪುಟದ ಈ ನಿರ್ಧಾರವನ್ನು ನ್ಯಾಯಾಲಯ ತಿರಸ್ಕರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡಿಕೆಶಿ ಕೇಸ್: ಸಚಿವ ಸಂಪುಟದ ತೀರ್ಮಾನ ಕಾನೂನಾತ್ಮಕವಾಗಿದೆ: ಸಚಿವ ಮಹದೇವಪ್ಪ
ಡಿ.ಕೆ.ಶಿವಕುಮಾರ ವಿರುದ್ಧ ಸೂಕ್ತ ರೀತಿಯಲ್ಲಿ ತನಿಖೆ ನಡೆಯುತ್ತದೆ. ಈಗಾಗಲೇ ರಾಜ್ಯ ಸರ್ಕಾರ ಅನುಮತಿ ಕೊಟ್ಟಿದೆ. ನ್ಯಾಯಾಲಯಕ್ಕೆ ಹೋಗಲಿ, ದೋಷಾರೋಪ ಪಟ್ಟಿ ಸಲ್ಲಿಕೆಯ ಹಂತದಲ್ಲಿರುವುದರಿಂದ ಪ್ರಕರಣ ಹಿಂಪಡೆಯುವುದಿಲ್ಲ ಎನ್ನುವ ನಂಬಿಕೆಯಿದೆ. ಒಂದು ವೇಳೆ ಪ್ರಕರಣ ಕುರಿತು ತಪ್ಪಾಗಿದ್ದರೆ ನ್ಯಾಯಾಲಯಕ್ಕೆ ಹೋಗಲಿ. ಆದರೆ, ರಾಜಕೀಯ ಅಧಿಕಾರ ನಡೆಸುವುದು ಸರಿಯಲ್ಲ. ಯಾವ ಸಂಪುಟದಲ್ಲಿ ಡಿ.ಕೆ.ಶಿವಕುಮಾರ ಉಪಮುಖ್ಯಮಂತ್ರಿ ಇದ್ದಾರೆ. ಆ ಸಂಪುಟದಿಂದ ಅವರನ್ನು ನಾಮಕೇವಾಸ್ತೆ ಒಂದು ದಿನ ಹೊರಗಿಟ್ಟು ಶಿಫಾರಸ್ಸು ವಾಪಸ್ ಪಡೆಯುವುದರ ಅರ್ಥವೇನು? ಇದರ ಮೇಲೆಯೇ ಕಾಂಗ್ರೆಸ್ ಸರ್ಕಾರಕ್ಕೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ ಎಂದರು.
ಕಾಂಗ್ರೆಸ್ಸಿನಲ್ಲೇ ವಿರೋಧ: ಜಾತಿ ಜನಗಣತಿ ವರದಿ ಗೊಂದಲ ವಿಚಾರಕ್ಕೆ ಉತ್ತರಿಸಿದ ಜೋಶಿ, ಈ ಕುರಿತು ಕಾಂಗ್ರೆಸ್ಸಿನಲ್ಲೇ ಗೊಂದಲವಿದೆ. ಇದು ಆಡಳಿತ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಜಾತಿ ಜನಗಣತಿ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವೇ ಇಲ್ಲ. ಇದನ್ನು ಕೇಂದ್ರ ಸರ್ಕಾರ ಮಾಡುತ್ತದೆ. ಆದರೆ, ಈ ಕೆಲಸವನ್ನು ನಾವೇ ಮಾಡುತ್ತೇವೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಇನ್ನೊಂದೆಡೆ ಜಾತಿ ಜನಗಣತಿ ವರದಿಯ ಮೂಲ ಪ್ರತಿ ಮಾಯವಾಗಿದೆ ಎಂದು ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರೆ ಹೇಳುತ್ತಿದ್ದಾರೆ. ಈ ವಿಚಾರದ ಬಗ್ಗೆ ಸರ್ಕಾರದಲ್ಲೇ ಸಹಮತವಿಲ್ಲ. ಡಿ.ಕೆ.ಶಿವಕುಮಾರ, ಶಾಮನೂರು ಶಿವಶಂಕರಪ್ಪ ಮೊದಲಾದವರಿಂದ ವಿರೋಧವಿದೆ. ಸರ್ಕಾರದಲ್ಲಿ ಗೊಂದಲ, ಭಿನ್ನಾಭಿಪ್ರಾಯ ಇರುವಾಗ ವರದಿ ಹೇಗೆ ಸಲ್ಲಿಸುತ್ತಾರೆ ಎಂದರು.
ಆಡಳಿತ ಯಂತ್ರ ಕುಸಿತ: ಕೆಲ ಶಾಸಕರನ್ನು ಎತ್ತಿಕಟ್ಟಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪಾರುಪತ್ಯ ಮೆರೆಯುತ್ತಿದ್ದಾರೆ. ಜನರ ಹಿತದೃಷ್ಟಿಯಿಂದ ಸರ್ಕಾರ ಸರಿಯಾಗಿ ನಡೆಸಬೇಕು. ಆದರೆ, ಸಿದ್ಧರಾಮಯ್ಯ 20 ಶಾಸಕರನ್ನು ಮೈಸೂರಿಗೆ ಕಳಿಸುವ ಪ್ರಯತ್ನ ಮಾಡಿದರು, ಸದ್ಯ ಹಲವು ಶಾಸಕರು ವಿದೇಶ ಪ್ರವಾಸದಲ್ಲಿದ್ದಾರೆ. ಜನ ಐದು ವರ್ಷ ಅಧಿಕಾರ ನೀಡಿದ್ದು ಗೊಂದಲಗಳಿಲ್ಲದೇ ಕೆಲಸ ಮಾಡಲು. ಜನತಾ ದರ್ಶನ, ಜನಸಂಪರ್ಕ ಕಾರ್ಯಕ್ರಮಗಳು ನಿಂತು ಹೋಗಿವೆ. ಬಹಳಷ್ಟು ಭಾಗದಲ್ಲಿ ಸಚಿವರು ತಮ್ಮ ಕ್ಷೇತ್ರಗಳಿಗೆ ಸೀಮಿತವಾಗಿದ್ದಾರೆ. ರಾಜ್ಯದಲ್ಲಿ ಸರ್ಕಾರದ ಆಡಳಿತ ಯಂತ್ರ ಸಂಪೂರ್ಣ ಕುಸಿತ ಕಂಡಿದೆ ಎಂದರು.
ರೈತರು ಕಾವೇರಿ ಹೋರಾಟ ಕೈಬಿಡಿ: ಸಚಿವ ಚಲುವರಾಯಸ್ವಾಮಿ
ರಾಹುಲ್ ಗಾಂಧಿ ಅಪ್ರಬುದ್ಧ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪಶಕುನ ಎಂಬ ರಾಹುಲ್ ಟೀಕೆಗೆ ತಿರುಗೇಟು ನೀಡಿದ ಜೋಶಿ, ರಾಹುಲ್ ಗಾಂಧಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡದಿರುವುದೇ ಉತ್ತಮ. ಅವರೊಬ್ಬ ಅಪ್ರಬುದ್ಧ. ಯಾವ ಕೀಳುಮಟ್ಟಕ್ಕೆ ಇಳಿಯುತ್ತಾರೆ ಎನ್ನುವುದಕ್ಕೆ ಈ ಹೇಳಿಕೆಯೇ ಸಾಕ್ಷಿ. ರಾಹುಲ್ ಗಾಂಧಿಗೆ ಹೊಸ ವಿಷಯ ಬರೆದುಕೊಡುವ ವರೆಗೂ ಅವರು ಏನೇನೋ ಮಾತನಾಡುತ್ತಾರೆ. ದೇಶದಲ್ಲಷ್ಟೇ ಅಲ್ಲದೇ ಇಡೀ ವಿಶ್ವದಲ್ಲಿ ಮೋದಿ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಮೋದಿ ವಿರುದ್ಧ ಹೇಳಿಕೆ ನೀಡಿದಷ್ಟು, ಅವರ ಮೇಲೆ ಜನಾಶೀರ್ವಾದ ಹೆಚ್ಚಾಗುತ್ತದೆ ಎಂದರು.