ಗೋವಿಂದರಾಜನಗರ ಕದನ: ಪುತ್ರನಿಗಾಗಿ ಕ್ಷೇತ್ರ ತ್ಯಾಗ ಮಾಡ್ತಾರಾ ಸೋಮಣ್ಣ?

By Kannadaprabha NewsFirst Published Apr 9, 2023, 2:30 AM IST
Highlights

ಈ ಬಾರಿ ಸೋಮಣ್ಣ ಅವರು ಸಚಿವರಾಗಿ ಕ್ಷೇತ್ರದಲ್ಲಿ ಗಮನಾರ್ಹ ಎನ್ನುವಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ಆ ಮೂಲಕ ಎಲ್ಲ ವರ್ಗಗಳ ಒಲವು ಗಳಿಸುವ ಪ್ರಯತ್ನವನ್ನೂ ಮಾಡಿದ್ದಾರೆ. ಆದರೆ, ಮತದಾರರು ಕೇವಲ ಅಭಿವೃದ್ಧಿ ಕೆಲಸ ಮಾತ್ರ ನೋಡಿ ಮತ ನೀಡುತ್ತಾರೆಯೇ ಎಂಬುದನ್ನು ಸ್ಪಷ್ಟವಾಗಿ ಹೇಳುವಂತಿಲ್ಲ.

ಬೆಂಗಳೂರು(ಏ.09): ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅಭ್ಯರ್ಥಿಗಳು ಅಂತಿಮಗೊಂಡಿದ್ದರೂ ಆಡಳಿತಾರೂಢ ಬಿಜೆಪಿ ಅಭ್ಯರ್ಥಿ ಬಗ್ಗೆ ಇನ್ನೂ ಕುತೂಹಲ ಮುಂದುವರೆದಿದೆ. ಹಾಲಿ ಶಾಸಕ, ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಅವರು ಈ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಈ ಕ್ಷಣದವರೆಗೆ ಸ್ಪಷ್ಟತೆ ಹೊರಬೀಳದೇ ಇರುವುದರಿಂದ ಇಡೀ ಕ್ಷೇತ್ರದ ಚುನಾವಣಾ ಅಖಾಡ ಸಿದ್ಧಗೊಳ್ಳುತ್ತಿಲ್ಲ. ಕಾಂಗ್ರೆಸ್‌ನಿಂದ ಮಾಜಿ ಶಾಸಕ ಪ್ರಿಯಕೃಷ್ಣ ಅವರು ಕಣಕ್ಕಿಳಿಯಲಿದ್ದಾರೆ. ಈಗಾಗಲೇ ಟಿಕೆಟ್‌ ಘೋಷಣೆಯಾಗಿದೆ. ಅದೇ ರೀತಿ ಜೆಡಿಎಸ್‌ನಿಂದ ಮಹಾನಗರ ಘಟಕದ ಅಧ್ಯಕ್ಷ ಆರ್‌.ಪ್ರಕಾಶ್‌ ಇದೇ ಮೊದಲ ಬಾರಿಗೆ ಇಲ್ಲಿಂದ ಸ್ಪರ್ಧೆಗೆ ಇಳಿದಿದ್ದಾರೆ.

ಗೋವಿಂದರಾಜನಗರ ಕ್ಷೇತ್ರದಲ್ಲಿ ಸೋಮಣ್ಣ ಮತ್ತು ಪ್ರಿಯಕೃಷ್ಣ ಅವರ ಚುನಾವಣಾ ಸಮರ ಜೋರಾಗಿಯೇ ನಡೆಯುತ್ತದೆ. ಹಿಂದಿನ ಚುನಾವಣೆಗಳಲ್ಲಿ ಇವರಿಬ್ಬರ ಪೈಪೋಟಿ ಕೊನೆ ಹಂತದವರೆಗೂ ಯಾರು ಗೆಲ್ಲಬಲ್ಲರು ಎಂಬುದನ್ನು ಹೇಳದಿರುವಷ್ಟು ಕುತೂಹಲ ಮೂಡಿಸಿತ್ತು. ಜಾತಿ ಲೆಕ್ಕಾಚಾರದಲ್ಲಿ ನೋಡಿದರೆ ಸೋಮಣ್ಣ ಅವರ ಲಿಂಗಾಯತ ಸಮುದಾಯ ಇಲ್ಲಿ ನಿರ್ಣಾಯಕ ಅಲ್ಲವೇ ಅಲ್ಲ. ಆದರೆ, ಪ್ರಿಯಕೃಷ್ಣ ಅವರ ಒಕ್ಕಲಿಗ ಸಮುದಾಯ ಇಲ್ಲಿ ನಿರ್ಣಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ನಂತರದ ಸ್ಥಾನ ಕುರುಬ ಸಮುದಾಯದ್ದು. ಹೀಗಾಗಿ, ಸೋಮಣ್ಣ ಅವರಿಗೆ ಕಳೆದ ಚುನಾವಣೆಯೂ ಸುಲಭವಾಗಿರಲಿಲ್ಲ. ತಮ್ಮ ವರ್ಚಸ್ಸು ಮತ್ತು ಕೆಲಸದ ಮೂಲಕ ಎಲ್ಲ ಸಮುದಾಯಗಳ ಬೆಂಬಲ ಗಳಿಸಿ ಗೆಲುವು ಸಾಧಿಸಿದ್ದರು.

Latest Videos

ಬಿಜೆಪಿ ಸೇರಲು ಮುಂದಾಗಿದ್ದ ಹೆಚ್ ಎಂ ರೇವಣ್ಣ- ಡಿಕೆಶಿ ಭೇಟಿ, ಕಾಂಗ್ರೆಸ್ ಟಿಕೆಟ್ ನೀಡುವ ಭರವಸೆ

ಈ ಬಾರಿ ಸಚಿವರಾಗಿ ಕ್ಷೇತ್ರದಲ್ಲಿ ಗಮನಾರ್ಹ ಎನ್ನುವಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ಆ ಮೂಲಕ ಎಲ್ಲ ವರ್ಗಗಳ ಒಲವು ಗಳಿಸುವ ಪ್ರಯತ್ನವನ್ನೂ ಮಾಡಿದ್ದಾರೆ. ಆದರೆ, ಮತದಾರರು ಕೇವಲ ಅಭಿವೃದ್ಧಿ ಕೆಲಸ ಮಾತ್ರ ನೋಡಿ ಮತ ನೀಡುತ್ತಾರೆಯೇ ಎಂಬುದನ್ನು ಸ್ಪಷ್ಟವಾಗಿ ಹೇಳುವಂತಿಲ್ಲ.

ಇದೇ ವೇಳೆ ಸೋಮಣ್ಣ ಅವರು ಈ ಬಾರಿ ಕ್ಷೇತ್ರವನ್ನು ಪುತ್ರ ಡಾ.ಅರುಣ್‌ ಸೋಮಣ್ಣ ಅವರಿಗೆ ಟಿಕೆಟ್‌ ಕೊಡಿಸಲು ತೆರೆಮೆರೆಯಲ್ಲಿ ತೀವ್ರ ಪ್ರಯತ್ನ ನಡೆಸಿದ್ದಾರೆ. ಅದಕ್ಕಾಗಿ ಕಳೆದ ಹಲವು ದಿನಗಳ ಹಿಂದೆ ಬಹಿರಂಗವಾಗಿ ಅಸಮಾಧಾನವನ್ನೂ ಹೊರಹಾಕಿದ್ದರು. ಈ ಹಿನ್ನೆಲೆಯಲ್ಲಿ ಸೋಮಣ್ಣ ಅವರು ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿ ಪಕ್ಷದ ನಾಯಕರ ಬಳಿ ಮನವಿಯನ್ನೂ ಇಟ್ಟಿದ್ದಾರೆ. ಆದರೆ, ಪಕ್ಷದ ಹೈಕಮಾಂಡ್‌ ಇದಕ್ಕೆ ಒಪ್ಪುತ್ತದೆಯೇ ಎಂಬುದು ಕುತೂಹಲವಾಗಿದೆ.

ಸೋಮಣ್ಣ ಅವರು ಈ ಕ್ಷೇತ್ರದಿಂದ ಕಣಕ್ಕಿಳಿದಲ್ಲಿ ಮಾತ್ರ ಕಣ ರಂಗೇರುವುದಂತೂ ನಿಶ್ಚಿತ. ಆದರೆ, ಸೋಮಣ್ಣ ಅವರ ಪುತ್ರ ಅರುಣ್‌ ಅಥವಾ ಬೇರೊಬ್ಬರು ಅಭ್ಯರ್ಥಿಯಾದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಕೃಷ್ಣ ಅವರಿಗೆ ಹಾದಿ ಸುಗಮವಾಗಬಹುದು ಎನ್ನಲಾಗುತ್ತಿದೆ.

ಕ್ಷೇತ್ರದ ಇತಿಹಾಸ

ರಾಜ್ಯದ ದೊಡ್ಡ ವಿಧಾನಸಭಾ ಕ್ಷೇತ್ರಗಳ ಪೈಕಿ ಬಿನ್ನಿಪೇಟೆ ವಿಧಾನಸಭಾ ಕ್ಷೇತ್ರವು ಒಂದಾಗಿತ್ತು. 2008ರಲ್ಲಿ ಕ್ಷೇತ್ರಪುನರ್‌ ವಿಂಗಡಣೆಯಾದ ಬಳಿಕ ಗೋವಿಂದರಾಜ ವಿಧಾನಸಭಾ ಕ್ಷೇತ್ರ ರಚನೆಯಾಗಿದೆ. ಕ್ಷೇತ್ರವು ಈ ಬಾರಿ ನಾಲ್ಕನೇ ಚುನಾವಣೆಯನ್ನು ಎದುರಿಸುತ್ತಿದೆ. ಜನತಾಪರಿವಾರ ಮತ್ತು ಕಾಂಗ್ರೆಸ್‌ನಿಂದ ಬಿನ್ನಿಪೇಟೆ ಕ್ಷೇತ್ರದಿಂದ ಸೋಮಣ್ಣ ಸ್ಪರ್ಧಿಸಿ ಗೆಲುವು-ಸೋಲು ಕಂಡಿದ್ದಾರೆ.

ಹುನಗುಂದ ಹೋರಾಟ: ಬಿಜೆಪಿ-ಕಾಂಗ್ರೆಸ್‌ ನೇರ ಹಣಾಹಣಿಗೆ ಪಕ್ಷೇತರರ ಅಡ್ಡಿ

2008ರಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದ ಸೋಮಣ್ಣ ನಂತರ ಪಕ್ಷ ಬದಲಾವಣೆ ಮಾಡಿ 2009ರಲ್ಲಿ ಉಪಚುನಾವಣೆ ಎದುರಿಸಿದರು. ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಕೃಷ್ಣ ವಿರುದ್ಧ ಸೋಲು ಕಂಡರು. 2013ರ ಚುನಾವಣೆಯಲ್ಲಿ ಪ್ರಿಯಕೃಷ್ಣ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್‌ನ ಹಿಡಿತದಲ್ಲಿಯೇ ಇಟ್ಟುಕೊಂಡರು. ಆದರೆ, 2018ರಲ್ಲಿ ಸೋಮಣ್ಣ ಗೆಲುವು ಸಾಧಿಸುವ ಮೂಲಕ ಬಿಜೆಪಿ ಜಯಗಳಿಸಿತು.

ಜಾತಿ ಲೆಕ್ಕಾಚಾರ

ಗೋವಿಂದರಾಜನಗರ ಕ್ಷೇತ್ರದಲ್ಲಿ ಒಟ್ಟು 2.80 ಲಕ್ಷಕ್ಕಿಂತ ಹೆಚ್ಚು ಮತದಾರರಿದ್ದಾರೆ. ಈ ಪೈಕಿ 1.45 ಲಕ್ಷಕ್ಕಿಂತ ಹೆಚ್ಚು ಪುರುಷರು, 1.35 ಲಕ್ಷಕ್ಕಿಂತ ಹೆಚ್ಚು ಮಹಿಳಾ ಮತದಾರರಿದ್ದಾರೆ. ಒಕ್ಕಲಿಗ, ಕುರುಬ ಮತದಾರರು ನಿರ್ಣಾಯಕ. ಇನ್ನುಳಿದಂತೆ ಒಬಿಸಿ, ಎಸ್‌ಸಿ/ಎಸ್‌ಟಿ, ಮುಸ್ಲಿಂ ವರ್ಗದವರು ಸಹ ಪ್ರಮುಖ ಪಾತ್ರವಹಿಸಲಿದ್ದಾರೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!