
ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಅ.7): ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಕರಾವಳಿಯ ಯಾವುದಾದರೂಂದು ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಹಿಂದೂ ಸಂಘಟನೆಗಳು ಪಟ್ಟು ಹಿಡಿದಿವೆ. ಹಿಂದೂ ಕಾರ್ಯಕರ್ತರ ಭಾವನೆಗಳಿಗೆ ಗೌರವ ನೀಡುವುದು ಮತ್ತು ಯೋಗಿ ಆದಿತ್ಯನಾಥ್ ಮಾದರಿಯ ಆಡಳಿತ ನೀಡುವ ಸಲುವಾಗಿ ಪ್ರಮೋದ್ ಮುತಾಲಿಕ್ ಶಾಸಕರಾಗಿ ಆಯ್ಕೆ ಆಗಲೇಬೇಕು ಎಂದು ಹಿಂದೂ ಸಂಘಟನೆಗಳು ಒತ್ತಾಸೆ ಪ್ರಕಟಿಸಿವೆ. ನವರಾತ್ರಿಯ ಸಂದರ್ಭದಲ್ಲಿ ಪ್ರಮೋದ್ ಮುತಾಲಿಕ್ ಉಡುಪಿ ಜಿಲ್ಲೆಯಾದ್ಯಂತ ಎರಡು ದಿನಗಳ ಪ್ರವಾಸ ಕೈಗೊಂಡಿದ್ದರು. ವಿವಿಧ ಸಂಘಟನೆಗಳ ಒತ್ತಾಯದ ಮೇರೆಗೆ ಅವರ ಪ್ರವಾಸ ಐದು ದಿನಗಳ ಕಾಲ ವಿಸ್ತರಣೆಗೊಂಡಿತು. ಈ ವೇಳೆ ಜಿಲ್ಲೆಯ ವಿವಿಧ ಭಾಗಗಳಿಗೆ ಭೇಟಿ ನೀಡಿದಾಗ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮುತಾಲಿಕ್ ಸ್ಪರ್ಧಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಪ್ರವೀಣ್ ನೆಟ್ಟಾರು ಹತ್ಯೆ ನಡೆದಾಗ ಪ್ರಮೋದ್ ಮುತಾಲಿಕ್ ರನ್ನು ದ.ಕ ಜಿಲ್ಲೆಯಲ್ಲಿ ನಿರ್ಬಂಧಿಸಲಾಗಿತ್ತು. ಗಂಗೊಳ್ಳಿ ಸಮಾವೇಶದ ವೇಳೆ ಉಡುಪಿ ಜಿಲ್ಲೆಗೆ ಬಾರದಂತೆ ಪ್ರಮೋದ್ ಮುತಾಲಿಕರಿಗೆ ತಡೆಯೊಡ್ಡಲಾಗಿತ್ತು. ಈ ಎಲ್ಲಾ ಬೆಳವಣಿಗೆಗಳಿಂದ ನೊಂದಿರುವ ಹಿಂದು ಸಂಘಟನೆಗಳ ಕಾರ್ಯಕರ್ತರು, ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವಂತೆ ಮುತಾಲಿಕರಿಗೆ ಬೆಂಬಲ ನೀಡಿದ್ದಾರೆ. ಕರಾವಳಿ ಜಿಲ್ಲೆಯಿಂದಲೇ ಮುತಾಲಿಕ್ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು, ಅಥವಾ ಪಕ್ಷೇತರವಾಗಿ ನಿಂತು ಬಿಜೆಪಿಗೆ ಸಡ್ಡು ಹೊಡೆಯಬೇಕು ಎಂದು ಹೇಳುತ್ತಿದ್ದಾರೆ.
ಗುರುದಕ್ಷಿಣೆ ನೀಡಲು ಇದು ಸಕಾಲ: ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಲು ಪ್ರಮೋದ್ ಮುತಾಲಿಕ್ ಅವರ ಕೊಡುಗೆ ಅಪಾರವಿದೆ. ಬಜರಂಗದಳದ ದಕ್ಷಿಣ ಭಾರತ ಪ್ರಾಂತದ ಮುಖಂಡರಾಗಿದ್ದ ವೇಳೆ, ಮುತಾಲಿಕ್ ಈ ಭಾಗದಲ್ಲಿ ಹಿಂದೂಗಳನ್ನು ಸಂಘಟಿಸಿದ ಫಲವಾಗಿ ಇಂದು ಈ ಪ್ರದೇಶಗಳಲ್ಲಿ ಬಿಜೆಪಿ ನೆಲೆಯೂರಿದೆ ಎಂದು ಶ್ರೀರಾಮ ಸೇನೆಯ ಮುಖಂಡ ಮೋಹನ್ ಭಟ್ ಹೇಳಿದ್ದಾರೆ.
ಹಿಂದುತ್ವ ಮತ್ತು ಹಿಂದೂ ಕಾರ್ಯಕರ್ತರಿಗೆ ಕರಾವಳಿ ಭಾಗದಲ್ಲಿ ತೊಂದರೆ ಆಗಿದೆ. ಕಾರ್ಯಕರ್ತರಿಗೆ ಬಿಜೆಪಿ ನಾಯಕರು ಮಹತ್ವ ನೀಡುತ್ತಿಲ್ಲ. ಚುನಾವಣೆಗೆ ಸ್ಪರ್ಧಿಸುವಂತೆ ಹಿಂದೂ ಕಾರ್ಯಕರ್ತರು ಹೇಳಿರುವುದರಿಂದ ಪ್ರಮೋದ್ ಮುತಾಲಿಕ್ ಕೂಡ ಭಾವುಕರಾಗಿದ್ದರು. ಚುನಾವಣೆಗೆ ಸ್ಪರ್ಧಿಸಲ್ಲ ಎಂದಿರುವ ಮುತಾಲಿಕ್ ಮನಪರಿವರ್ತನೆಯಾಗುವ ರೀತಿ ಕಂಡು ಬಂದಿದೆ.
ಪ್ರಮೋದ್ ಮುತಾಲಿಕ್ ಗೆ ಆದ ಅನ್ಯಾಯ, ದ್ರೋಹ ಕ್ಕೆ ಪರಿಹಾರ ಸಿಗಬೇಕು. 47 ವರ್ಷಗಳ ಕಾಲ ಮನೆ ಮಠ ಬಿಟ್ಟು ಹಿಂದೂ ಸಮಾಜಕ್ಕಾಗಿ ಕೆಲಸ ಮಾಡಿದ್ದಾರೆ. ಪ್ರಮೋದ್ ಮುತಾಲಿಕ್ ಅವರು ಯಾವುದೇ ಆಸ್ತಿಪಾಸ್ತಿ ಮಾಡಿಕೊಂಡಿಲ್ಲ. ಹಿಂದೂ ಸಮಾಜ ಕಟ್ಟುವಲ್ಲಿ ತನ್ನ ಇಡೀ ಜೀವನ ಸವೆಸಿದ್ದಾರೆ. ಅವರಿಂದ ಬೆಳೆದ ಎಲ್ಲಾ ವ್ಯಕ್ತಿಗಳು ದ್ರೋಹ ಮಾಡಿದ್ದಾರೆ. ಸರಕಾರದ ನೀಚ ಕೆಲಸಗಳಿಂದ ಕಾರ್ಯಕರ್ತರಿಗೆ ನೋವಾಗಿದೆ. ಬಿಜೆಪಿ ಹಿಂದೂ ಕಾರ್ಯಕರ್ತರು ಕಟ್ಟಿದ ಪಕ್ಷ.ಕಾರ್ಯಕರ್ತರಿಂದಲೇ ಆಗಿರುವ ಪಕ್ಷ ಬಿಜೆಪಿ. ಕರಾವಳಿಯಲ್ಲಿ ಬಿಜೆಪಿ ಶಾಸಕರು ಇದ್ದರೆ ಅದಕ್ಕೆ ಮುತಾಲಿಕರೇ ಕಾರಣ ಎಂದು ಮೋಹನ್ ಭಟ್ ಹೇಳಿದ್ದಾರೆ.
ಪ್ರಮೋದ್ ಮುತಾಲಿಕ್ ಉಡುಪಿ ಜಿಲ್ಲಾ ಪ್ರವಾಸದ ವೇಳೆ ಎಸ್ಕಾರ್ಟ್ ನೀಡಿಲ್ಲ. ಉಡುಪಿ ಜಿಲ್ಲೆಯಲ್ಲಿ ಮುತಾಲಿಕ್ ಅವರಿಗೆ ಬೆದರಿಕೆ ಇದ್ದರೂ ಎಸ್ಕಾರ್ಟ್ ನೀಡಿಲ್ಲ. ಮುತಾಲಿಕ್ ಅವರ ತಲೆ ಕಡಿದು ಕೊಟ್ಟವರಿಗೆ 10 ಲಕ್ಷ ಘೋಷಿಸಲಾಗಿತ್ತು. ಹೀಗಿದ್ದರೂ ಪ್ರವಾಸದ ವೇಳೆ ಎಸ್ಕಾರ್ಟ್ ನೀಡಿಲ್ಲ ಎಂದು ಕಿಡಿ ಕಾರಿದ್ದಾರೆ. ಜನರ ಬೇಡಿಕೆಯಿಂದ ಬಾವುಕನಾಗಿದ್ದೇನೆ ಸದ್ಯ ನಾನು ಗೊಂದಲದಲ್ಲಿ ಇದ್ದೇನೆ ಎಂದು ಮುತಾಲಿಕ್ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಮುತಾಲಿಕ್ ತಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಖಚಿತವಾಗಿ ಹೇಳಿದ್ದರು. ಆದರೆ ಉಡುಪಿ ಪ್ರವಾಸದ ಬಳಿಕ ಮಾತನಾಡಿರುವ ಅವರು, ತಾನು ಗೊಂದಲದಲ್ಲಿದ್ದೇನೆ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಪರೇಶ್ ಮೇಸ್ತಾ ಕೇಸ್: ಸಿಬಿಐ 'ಬಿ' ರಿಪೋರ್ಟ್ ಹಾಕಿರೋದು ತಪ್ಪು, ಮುತಾಲಿಕ್ ಆಕ್ರೋಶ
ಸಮಾಜದಲ್ಲಿ ಈಗ ಹಿಂದುತ್ವದ ಹಸಿವಿದೆ, ಆಕರ್ಷಣೆಯಿದೆ. ಹಿಂದೂತ್ವಕ್ಕೆ ಒಬ್ಬ ನಾಯಕ ಬೇಕಾಗಿದ್ದಾನೆ. ಪ್ರಖರ ಹಿಂದೂವಾದಿ ಎಂಬ ಕಾರಣಕ್ಕೆ ನಾನು ರಾಜಕೀಯ ಪ್ರವೇಶ ಮಾಡಬೇಕೆಂಬ ಒತ್ತಾಯವಿದೆ. ಕರ್ನಾಟಕದಲ್ಲಿ ಯೋಗಿ ಮಾದರಿಯ ಆಡಳಿತಕ್ಕಾಗಿ ನೀವು ಸ್ಪರ್ಧಿಸಿ ಎನ್ನುತ್ತಿದ್ದಾರೆ.ಜನರ ಈ ತುಡಿತಕ್ಕೆ ನಾವು ಬದ್ದರಾಗಿದ್ದೇವೆ. ಆದರೆ ರಾಜಕೀಯ ವ್ಯವಸ್ಥೆ ಅಷ್ಟೊಂದು ಸುಲಭವಾಗಿಲ್ಲ. ಇಲ್ಲಿಯವರೆಗೆ ಚುನಾವಣೆ ಬೇಡ ಬೇಡ ಎನ್ನುತ್ತಿದ್ದೆ. ಇನ್ನು ನಾನು ಯಾವುದೇ ನಿರ್ಧಾರ ಮಾಡಿಲ್ಲ ಎಂದಿದ್ದಾರೆ.
ಮುಸಲ್ಮಾನರಲ್ಲಿ ರಾಷ್ಟ್ರೀಯತೆ ಬೆಳೆಯುತ್ತೆ ಎಂಬ ನಂಬಿಕೆ ಶೇ.99ರಷ್ಟು ನನಗಿಲ್ಲ; ಮುತಾಲಿಕ್
ಜನಸಾಮಾನ್ಯರ ಇಚ್ಚೆ ಮುತಾಲಿಕ್ ಸ್ಪರ್ಧಿಸಲೇ ಬೇಕು ಎಂದಿದೆ. ಯು ಪಿ ಮಾದರಿ ಮುತಾಲಿಕ್ ರಿಂದ ಸಾಧ್ಯ ಎನ್ನುತ್ತಿದ್ದಾರೆ.ಜನರ ಇಚ್ಚೆಯಿಂದ ನನಗೆ ಆನಂದವಾಗಿದೆ.ರಾಜಕೀಯದ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ, ಗೊಂದಲದಲ್ಲಿದ್ದೇನೆ. ಹಿಂದುತ್ವದ ಆದರ್ಶ ನಿರ್ಮಾಣ ಆಗಿರುವುದೇ ಕರಾವಳಿಯಲ್ಲಿ. ಇಡೀ ರಾಜ್ಯಕ್ಕೆ ಮಾದರಿಯಾದ ಆರ್.ಎಸ್.ಎಸ್ ಕಾರ್ಯಕ್ರಮ ಜಾರಿಯಾಗಿದ್ದು ಕರಾವಳಿಯಲ್ಲಿ. ಕರಾವಳಿಯಲ್ಲಿ ನಡೆದ ಹಿಂದೂ ಸಮಾಜೋತ್ಸವಗಳು ದೇಶಕ್ಕೆ ಮಾದರಿ. ಕರಾವಳಿಯಲ್ಲಿ ಹಿಂದುತ್ವಕ್ಕೆ ಏಟಾಗಿದೆ. ಹಾಗಾಗಿ ಪ್ರಮೋದ್ ಮುತಾಲಿಕ್ ಕರಾವಳಿಗೆ ಬರಬೇಕು ಎಂಬ ಒತ್ತಾಯವಿದೆ ಏನಾಗುತ್ತೋ ನೋಡೋಣ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.