
ವಿಜಯಪುರ (ಜ.18): ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರದಿದ್ದರೆ, 2028ರ ರಾಜ್ಯ ವಿಧಾನಸಭೆಯ ವೇಳೆ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ನಾನು ನಿನ್ನ ಮುಂದೆ ಬಂದು ಮತವನ್ನು ಕೇಳುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭಾವುಕರಾಗಿ ನುಡಿದಿದ್ದಾರೆ.
ವಿಜಯಪುರದಲ್ಲಿ ನಡೆಯುತ್ತಿರುವ ಜೆಡಿಎಸ್ ಪಂಚರತ್ನ ಯಾತ್ರೆಯ 2ನೇ ದಿನದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈ ಬಾರಿ ಅಧಿಕಾರಕ್ಕೆ ಬರದೆ ಹೋದರೆ 2028 ರಲ್ಲಿ ಜೆಡಿಎಸ್ ಪಕ್ಷ ವಿಸರ್ಜಿಸುತ್ತೇನೆ. ಮುಂದೆ ನಿಮ್ಮ ಬಳಿ ಮತ ಕೇಳಲು ಬರಲ್ಲ. ಸಿಂದಗಿಯಲ್ಲಿ ಜನರು ದೇವೆಗೌಡರು ನೀಡಿದ್ದ ನೀರಾವರಿ ಯೋಜನೆ ನೆನಪಿಟ್ಟುಕೊಂಡಿದ್ದಾರೆ. ನಮ್ಮ ತಪ್ಪಿನಿಂದ ಕಳೆದ ಚುನಾವಣೆಯಲ್ಲಿ ಸೋಲುಂಡಿದ್ದೇವೆ. ಅಂದು ದೇವೆಗೌಡರನ್ನ ಬಹಳ ಪ್ರೀತಿಯಿಂದ ಸ್ವಾಗತಿಸಿದ್ದೀರಿ. ದೇವೆಗೌಡರ ಮೇಲೆ ನೀವಿಟ್ಟ ಪ್ರೀತಿ ಮರೆತಿಲ್ಲ ಎಂದು ಹೇಳಿ ಭಾವುಕರಾದರು.
ಚುನಾವಣೆ ಹೊಸ್ತಿಲಲ್ಲಿ ಫ್ರೀ ಪಾಲಿಟಿಕ್ಸ್ ತಂತ್ರ: ಮೂರು ಪಕ್ಷಗಳ 'ಭರವಸೆ' ಅಷ್ಟು ಸುಲಭವೇ?
ಕಾಂಗ್ರೆಸ್, ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಲ್ಲ: ಪಂಚರತ್ನ ಯೋಜನೆಗಳ ಬಗ್ಗೆ ಮಾತನಾಡಲು ಮೂರ್ನಾಲ್ಕು ಗಂಟೆ ಬೇಕು. ಪಂಚರತ್ನ ಯೋಜನೆಗೆ ಜಾತಿ-ಧರ್ಮ ಇಲ್ಲ. 5 ಕಾರ್ಯಕ್ರಮಗಳ ಜಾರಿಯಾದ್ರೆ ರಾಜ್ಯ ರಾಮರಾಜ್ಯವಾಗುತ್ತದೆ. ಕಾಂಗ್ರೆಸ್, ಬಿಜೆಪಿ ಜೊತೆಗೆ ಸೇರಿ ಈ ಕಾರ್ಯಕ್ರಮಗಳ ಜಾರಿ ಮಾಡೋದು ಸಾಧ್ಯವಿಲ್ಲ. ಈ ಮೂಲಕ ಕಾಂಗ್ರೆಸ್-ಬಿಜೆಪಿ ಜೊತೆಗೆ ಸಾತ್ ಇಲ್ಲ. ಯತ್ನಾಳ್-ನಿರಾಣಿ ಕಿತ್ತಾಟ ಮಾಡುತ್ತಿದ್ದಾರೆ. ಒಂದೆ ಪಕ್ಷದಲ್ಲಿದ್ದು ಕೆಸರು ಎರಚುತ್ತಿದ್ದಾರೆ. ಅವರ ಬಳಕೆ ಮಾಡುವ ಭಾಷೆ ನೋಡಿದ್ದೀರಾ? ಬಿಜೆಪಿ ಜನರ ತೆರಿಗೆ ಹಣ ಲೂಟಿ ಮಾಡ್ತಿದ್ದಾರೆ. ಕಾಂಗ್ರೆಸ್-ಬಿಜೆಪಿ ರೈತರಿಗಾಗಿ ಕಾರ್ಯಕ್ರಮ ಕೊಡಲಿಲ್ಲ ಎಂದು ಆರೋಪ ಮಾಡಿದರು.
ಸಾಲ ಮನ್ನಾ ಮಾಡಿದ್ದಕ್ಕಾಗಿ ಮತ ಹಾಕಿ: ದೇಶದಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಇದೆ ಎಂದು ಹೇಳುತ್ತಾರೆ. ಆದರೆ, ಅವರು ಎಲ್ಲ ಕಾಮಗಾರಿಗಳಲ್ಲಿ, ಸರ್ಕಾರದ ಯೋಜನೆಗಳಲ್ಲಿ ಶೇ. 40 ರಿಂದ ಶೇ. 50 ಕಮೀಷನ್ ತಿಂದಿರೋದನ್ನ ಪ್ರಸ್ತಾಪಿಸಲ್ಲ. ತಿಂದದ್ದು ತಿಂದು ಆಗಿ ಹೋಯ್ತು. ಆದರೆ, ಈಗಲಾದರೂ ಜೆಡಿಎಸ್‌ಗೆ ಸಂಪೂರ್ಣ ಬೆಂಬಲವನ್ನು ನೀಡಿ ಒಟ್ಟು 5 ವರ್ಷದ ಆಡಳಿತ ಕೊಡಿ. ನಮ್ಮ ಪಕ್ಷವನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಿ. ಈ ಹಿಂದೆ ಅಧಿಕಾರದಲ್ಲಿ ಇದ್ದಾಗ ಸಾಲಮನ್ನಾ ಮಾಡಿದ್ದೇನೆ. ಸಿಂದಗಿಯಲ್ಲೆ ನೂರು ಕೋಟಿ ಸಾಲ ಮನ್ನಾ ಮಾಡಿದ್ದೇನೆ. ಸಾಲ ಮನ್ನಾ ಯೋಜನೆಯ ಫಲಾನುಭವಿ ರೈತರು ಪಕ್ಷದ ಕೈಹಿಡಿಯಿರಿ ಎಂದು ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದರು.
ಮಂಡ್ಯದಲ್ಲಿ ಜೆಡಿಎಸ್‌ಗೆ ಬಂಡಾಯದ ಬಿಸಿ: ವಲಸಿಗರಿಗೆ ಟಿಕೆಟ್ ಕೊಟ್ಟಿದ್ದಕ್ಕೆ ಭಿನ್ನಮತ
ಪಂಚಾಯಿತಿ ಮಟ್ಟದಲ್ಲಿ ಸುಸಜ್ಜಿತ ಶಾಲೆ, ಆಸ್ಪತ್ರೆಗಳ ನಿರ್ಮಾಣ: ರಾಜ್ಯದಲ್ಲಿ ರೈತರು ಸೇರಿ ಎಲ್ಲ ವರ್ಗದ ಜನರೂ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿ ಇಂಗ್ಲೀಷ್ ಸೇರಿ ಗುಣಮಟ್ಟದ ಶಿಕ್ಷಣ ಕೊಡಿಸಲು ಮುಂದಾಗುತ್ತಿದ್ದಾರೆ. ಆದರೆ, ಇದಕ್ಕಾಗಿ ಗ್ರಾಮೀಣ ಭಾಗದಲ್ಲಿ ಜನರು ಸಾಲ ಮಾಡುತ್ತಿದ್ದಾರೆ. ಮುಂದಿನ ಬಾರಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಸಜ್ಜಿತ ಶಾಲೆ ನಿರ್ಮಾಣ ಮಾಡಲಾಗುತ್ತದೆ. ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೂ ಹಣ ಕೂಡಲಾಗುತ್ತಿಲ್ಲ. ಹೀಗಾಗಿ, ಪ್ರತಿ ಗ್ರಾಮ ಪಂಚಾಯಿತಿಗೆ 36 ಹಾಸಿಗೆ ಸಾಮರ್ಥ್ಯದ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತದೆ. ತಜ್ಞ ವೈದ್ಯರನ್ನು ಈ ಆಸ್ಪತ್ರೆಗಳಿಗೆ ನೇಮಕ ಮಾಡಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.