
ಬೆಂಗಳೂರು(ಮೇ.08): ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಚುನಾವಣೆ ಪ್ರಚಾರ ಸಂದರ್ಭದಲ್ಲಿ ದೇಶ-ವಿದೇಶಗಳ ವಿಚಾರ, ಭಾವನಾತ್ಮಕ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆಯೇ ವಿನಃ ಇಲ್ಲಿನ ಶೇ.40 ಕಮೀಷನ್ ಪಡೆಯುವ ಭ್ರಷ್ಟಾಚಾರದ ಸರ್ಕಾರದ ಬಗ್ಗೆ ಉತ್ತರ ನೀಡಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು.
ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಚುನಾವಣೆ ಸಂದರ್ಭದಲ್ಲಿ ನಿರುದ್ಯೋಗ, ಕೃಷಿಕರ ಸಮಸ್ಯೆ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಜನರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಮೋದಿ ಅವರು ಪ್ರಸ್ತಾಪಿಸದೇ ಭಾವನಾತ್ಮಕ ವಿಷಯಗಳನ್ನು ಪ್ರಸ್ತಾಪ ಮಾಡುತ್ತಿದ್ದಾರೆ. ಇಲ್ಲಿನ ಶೇ.40 ಕಮೀಷನ್ ಸರ್ಕಾರದ ಬಗ್ಗೆ ಯಾವುದೇ ಉತ್ತರ ನೀಡಿಲ್ಲ’ ಎಂದು ಟೀಕಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಪರ ಗಾಳಿ: ಡಿ.ಕೆ.ಶಿವಕುಮಾರ್
‘ಮತದಾರರು ಸತ್ಯವನ್ನು ಅನ್ವೇಷಣೆ ಮಾಡಬೇಕು. ಬಿಜೆಪಿ ಕಳೆದ ಮೂರು ವರ್ಷದಲ್ಲಿ ಏನು ಮಾಡಿದೆ ಎಂದು ತಿಳಿದುಕೊಳ್ಳಿ. ಅಗತ್ಯ ವಸ್ತುಗಳ ಬೆಲೆ ಏರಿಕೆ ದೊಡ್ಡ ವಿಷಯವಲ್ಲವೇ, ನಿರುದ್ಯೋಗ ದೊಡ್ಡದಲ್ಲವೇ. ಸತ್ಯ ನಿಮ್ಮ ಕಣ್ಣ ಮುಂದಿದೆ. ಮೋದಿ ಅವರಿಗೆ ಚುನಾವಣಾ ವಿಷಯದ ಬಗ್ಗೆ ಮಾತನಾಡಿ ಎಂದು ಕೇಳಿಕೊಂಡರೂ ಜನರ ಬದುಕಿನ ವಿಚಾರ ಬಿಟ್ಟು ಬೇರೆ ವಿಷಯಗಳನ್ನು ಮಾತನಾಡಿದ್ದಾರೆ. ದೇಶ-ವಿದೇಶಗಳ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ’ ಎಂದು ತರಾಟೆ ತೆಗೆದುಕೊಂಡರು.
ಕಂಪನಿಗಳ ವಲಸೆ:
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಶೇ.40 ಕಮಿಷನ್‌ನಿಂದಲೇ ಗುರುತಿಸಿಕೊಂಡಿದೆ. ಜನಸಾಮಾನ್ಯರ 1.50 ಲಕ್ಷ ಕೋಟಿ ರು. ಲೂಟಿ ಮಾಡಿದ್ದಾರೆ. ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನ ವಲಯದಲ್ಲಿ 2500 ಕೋಟಿ ರು. ನಷ್ಟಉಂಟಾಗುವ ಸ್ಥಿತಿ ಉಂಟಾಗಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ನಗರದ ಮೂಲಭೂತ ಸೌಕರ್ಯಕ್ಕೆ 10 ಸಾವಿರ ಕೋಟಿ ರು. ವೆಚ್ಚ ಮಾಡಲಾಗಿತ್ತು. ಆದರೆ ಬಿಜೆಪಿಯವರು ನಗರದ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು ಐಟಿ ಕಂಪನಿಗಳು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿವೆ ಎಂದು ಟೀಕಿಸಿದರು.
ಕರ್ನಾಟಕದಲ್ಲಿ ಬಿಜೆಪಿ ಪರವಾದ ಅಲೆ, ಮತ್ತೆ ಅಧಿಕಾರಕ್ಕೆ ಬರ್ತೇವೆ: ಅರುಣ್ ಸಿಂಗ್
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ, ಮಾಜಿ ಸ್ಪೀಕರ್ ಬಿ.ಎಲ್.ಶಂಕರ್, ಅಭ್ಯರ್ಥಿಗಳಾದ ಆರ್.ಕೆ.ರಮೇಶ್, ಉಮಾಪತಿ ಶ್ರೀನಿವಾಸ ಗೌಡ ಮತ್ತಿತರರು ಹಾಜರಿದ್ದರು.
ಕಾಂಗ್ರೆಸ್‌ಗೆ 141 ಸ್ಥಾನ ಪಕ್ಕಾ: ಡಿಕೆಶಿ
ಬೆಂಗಳೂರು: ಕುಟುಂಬದ ಮಹಿಳೆಗೆ ಮಾಸಿಕ 2 ಸಾವಿರ ರು. ನೀಡಬೇಕು ಎಂದು ಸಲಹೆ ನೀಡಿದ್ದೇ ಪ್ರಿಯಾಂಕಾ ಗಾಂಧಿಯವರು. ಆದ್ದರಿಮದ ಅದನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ಕಾಂಗ್ರೆಸ್ ದೇಶದ ಶಕ್ತಿಯಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದವರೂ ಅಧಿಕಾರಕ್ಕೆ ಬಂದಂತೆ. ಚುನಾವಣೆಯಲ್ಲಿ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು ನಾವು 141 ಸ್ಥಾನಗಳಲ್ಲಿ ಜಯಗಳಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.