ಆರ್‌ಎಸ್‌ಎಸ್‌ಗೆ ದಲಿತರನ್ನೇಕೆ ಮುಖ್ಯಸ್ಥರನ್ನಾಗಿ ಮಾಡಿಲ್ಲ: ಸಿದ್ದರಾಮಯ್ಯ

By Kannadaprabha NewsFirst Published Jun 9, 2022, 12:04 PM IST
Highlights

*  ಬಿಎಸ್‌ವೈಯಿಂದ ಸರ್ಟಿಫಿಕೇಟ್‌ ಬೇಕಿಲ್ಲ
*  ಎಚ್‌ಡಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ
*  ಒಂದು ತಿಂಗಳು ಬಿಟ್ಟು ಜೆಡಿಎಸ್‌ ಅಭ್ಯರ್ಥಿ ನಿಲ್ಲಿಸಿದ್ದೇಕೆ?

ಹುಬ್ಬಳ್ಳಿ(ಜೂ.09):  ಆರ್‌ಎಸ್‌ಎಸ್‌ ಜನ್ಮ ತಾಳಿ 97 ವರ್ಷ ಆಯಿತು. ಈ ವರೆಗೂ ದಲಿತರು, ಹಿಂದುಳಿದವರನ್ನು ಅದರ ಮುಖ್ಯಸ್ಥ(ಸರಸಂಘಚಾಲಕ) ಮಾಡಿಲ್ಲ. ಈ ಪ್ರಶ್ನೆಯನ್ನೇ ನಾನು ಚಲುವಾದಿ ನಾರಾಯಣ ಸ್ವಾಮಿ ಅವರನ್ನು ಕೇಳಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಈ ಮೂಲಕ ನಾರಾಯಣಸ್ವಾಮಿ ಟ್ವೀಟ್‌ಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಈಗ ಸಾಂಸ್ಕೃತಿಕ ಭಯೋತ್ಪಾದನೆ ಮಾಡುತ್ತಿದೆ. ಪಠ್ಯ ಪುಸ್ತಕ ವಿಚಾರದಲ್ಲಿ ಈ ರೀತಿ ಮಾಡುತ್ತಿದ್ದಾರೆ. ಬೆಂಕಿ ಹಚ್ಚುವುದೇ ಬಿಜೆಪಿ ಕೆಲಸ ಎಂದು ಕಿಡಿಕಾರಿದರು.
ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಈ ಸಲ ಕಾಂಗ್ರೆಸ್‌ ಗೆಲುವು ಸಾಧಿಸುತ್ತದೆ. ನಮ್ಮ ಅಭ್ಯರ್ಥಿ ಬಸವರಾಜ ಗುರಿಕಾರ ಪರವಾಗಿ ಧಾರವಾಡ, ಹಾವೇರಿಯಲ್ಲಿ ಪ್ರಚಾರ ನಡೆಸುತ್ತಿದ್ದೇನೆ ಎಂದರು.

ಸಿದ್ದರಾಮಯ್ಯಗೆ ಆರ್‌ಎಸ್‌ಎಸ್‌ ಪುಸ್ತಕ ಕಳುಹಿಸುವೆ: ಸಿ.ಟಿ.ರವಿ

Latest Videos

ಪಿಎಸ್‌ಐ ಅಭ್ಯರ್ಥಿಗಳ ಮನವಿ:

ಇದೇ ವೇಳೆ ಪಿಎಸ್‌ಐ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳು ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ಯಾವುದೇ ಕಾರಣಕ್ಕೂ ಮರುಪರೀಕ್ಷೆಗೆ ಅವಕಾಶ ಮಾಡಿಕೊಡಬೇಡಿ. ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಿ ಎಂದು ಒತ್ತಾಯಿಸಿದರು.

ಪ್ರತಿಭಾವಂತ ವಿದ್ಯಾರ್ಥಿಗಳ ಜತೆಗೆ ಸರ್ಕಾರ ಚೆಲ್ಲಾಟ ಆಡುತ್ತಿದೆ. ಪಿಎಸ್‌ಐ ಹಗರಣದ ಬಗ್ಗೆ ಒಂದು ಕಡೆ ತನಿಖೆ ನಡೆಯುತ್ತಿದೆ. ಹೀಗಿರುವಾಗ ಮರು ಪರೀಕ್ಷೆಗೆ ಆದೇಶ ಮಾಡಿದ್ದು ಏಕೆ? ಸಿಐಡಿ ಈಗಾಗಲೇ ನಮ್ಮನ್ನು ವಿಚಾರಣೆ ಮಾಡಿದೆ. ಇನ್ನೂ ಹತ್ತು ತನಿಖಾ ಸಂಸ್ಥೆಗಳು ನಮ್ಮನ್ನು ವಿಚಾರಣೆ ಮಾಡಲಿ. ತಪ್ಪಿತಸ್ಥರಿಗೆ ಶಿಕ್ಷಯಾಗಲಿ, ಉಳಿದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪ್ರತಿ ನೀಡಲಿ. ನಾವು ಕಾನೂನು ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಸಿದ್ದರಾಮಯ್ಯ, ಸರ್ಕಾರದೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು.

ಕೋಮವಾದಿ ಸೋಲಿಸಲು ಕಾಂಗ್ರೆಸ್‌ಗೆ ಜೆಡಿಎಸ್‌ಗೆ ಬೆಂಬಲ ನೀಡಲಿ

ಧಾರವಾಡ: ರಾಜ್ಯಸಭಾ ಚುನಾವಣೆಯಲ್ಲಿ ಕೋಮುವಾದಿಗಳನ್ನು ಸೋಲಿಸಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಒಂದಾಗಬೇಕು ಎಂದಾಗಿದ್ದರೆ ಜೆಡಿಎಸ್‌ ತಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬಾರದಿತ್ತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Haveri: ಸಬ್ ಕಾ ಸಾತ್ ಸಬ್ ಕಾ ನಾಶ್ ಮಾಡಿದ್ದಾರೆ ನರೇಂದ್ರ ಮೋದಿ: ಸಿದ್ದರಾಮಯ್ಯ

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ಗಿಂತ ಮೊದಲೇ ನಾವು ತೀರ್ಮಾನ ಮಾಡಿ ಎರಡನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದೇವೆ. ಒಂದು ತಿಂಗಳು ಬಿಟ್ಟು ಜೆಡಿಎಸ್‌ ತನ್ನ ಅಭ್ಯರ್ಥಿ ಹಾಕಿದ್ದಾರೆ. ಕೋಮುವಾದಿ ಬಿಜೆಪಿ ಸೋಲಿಸುವ ಉದ್ದೇಶವಿದ್ದರೆ ಜೆಡಿಎಸ್‌ ಏತಕ್ಕಾಗಿ ಅಭ್ಯರ್ಥಿ ಹಾಕಬೇಕಿತ್ತು ಎಂದು ಕುಮಾರಸ್ವಾಮಿಗೆ ಸಿದ್ದರಾಮಯ್ಯ ಟಾಂಗ್‌ ನೀಡಿದರು.

ಕಾಂಗ್ರೆಸ್‌ ಅಲ್ಪಸಂಖ್ಯಾತ ಅಭ್ಯರ್ಥಿಯಾಗಿರುವ ಮನ್ಸೂರ್‌ ಅಲಿಖಾನ್‌ ಅವರನ್ನು ಕಣಕ್ಕೆ ಇಳಿಸಿದ್ದೇವೆ. ಅವರನ್ನು ಗೆಲ್ಲಿಸಬೇಕು ಎಂದಾದರೂ ನಮಗೆ ಜೆಡಿಎಸ್‌ ಸದಸ್ಯರು ಮತ ಹಾಕಲಿ ಎಂದ ಅವರು, ದೇವೇಗೌಡರು ರಾಜ್ಯಸಭೆಗೆ ನಿಂತಾಗ ನಾವು ಅಭ್ಯರ್ಥಿ ಹಾಕಿದ್ದೇವಾ? ಎಂದು ಪ್ರಶ್ನಿಸಿದರು. ನಾವು ಆಗ ಅಭ್ಯರ್ಥಿ ಹಾಕಿರಲಿಲ್ಲ. ಕುಮಾರಸ್ವಾಮಿ ಬಳಿ 37 ಜನ ಇದ್ದರೂ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂದು ಅವರನ್ನೇ ಮುಖ್ಯಮಂತ್ರಿ ಮಾಡಿದೆವು. ದೇವೇಗೌಡರು ಪ್ರಧಾನಮಂತ್ರಿ ಆಗಲು ಸಹ ನಾವು ಬೆಂಬಲ ನೀಡಿದ್ದೇವೆ. ನಮಗೆ ಈಗ ಅವರು ಬೆಂಬಲ ಕೊಡಲಿ. ಕೋಮುವಾದಿ ಸೋಲಿಸಲು ಕಾಂಗ್ರೆಸ್‌ಗೆ ಬೆಂಬಲ ಕೊಡಲಿ. ನಾವು ಅನೇಕ ಬಾರಿ ಅವರಿಗೆ ಸಹಾಯ ಮಾಡಿದ್ದೇವೆ ಎಂದು ಎಚ್‌ಡಿಕೆಗೆ ತಿರುಗೇಟು ನೀಡಿದರು. ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ನಮ್ಮದು ಹಲೋ ಹಲೋ ಅಷ್ಟೇ... ಭೇಟಿಯಲ್ಲಿ ಯಾವುದೇ ರಾಜಕೀಯ ಇಲ್ಲ ಎಂದರು.

 

click me!