India Gate: ರಾಜ್ಯ ಬಿಜೆಪಿಗರ ಹೊರಗಿಟ್ಟು ಶಾ ಸಭೆ ನಡೆಸಿದ್ದೇಕೆ? ಸುಮಲತಾಗೆ ನಡ್ಡಾ ಕೊಟ್ಟ ಭರವಸೆ ಏನು?

By Prashant Natu  |  First Published Mar 17, 2023, 11:36 AM IST

ವಿಧಾನಸಭಾ ಚುನಾವಣೆಗೆ ರಾಜ್ಯದಲ್ಲಿ ಎಲ್ಲಾ ಪಕ್ಷಗಳು ಟೊಂಕ ಕಟ್ಟಿ ನಿಂತಿವೆ. ಎಲ್ಲಾ ಪಕ್ಷಗಳಲ್ಲೂ ಟಿಕೆಟ್‌ಗಾಗಿ ಹಾಲಿ ಮಾಜಿ ಹಾಗೂ ಹೊಸಬ್ಬರು ಹೋರಾಟ ನಡೆಸುತ್ತಿದ್ದಾರೆ. ರಾಜ್ಯ ಬಿಜೆಪಿಯಲ್ಲೂ ಹಲವು ರಣತಂತ್ರಗಳು ಸಿದ್ಧಗೊಂಡಿವೆ. ಇತ್ತೀಚೆಗೆ ರಾಜ್ಯ ಬಿಜೆಪಿಗರ ಹೊರಗಿಟ್ಟು ಶಾ ಸಭೆ ನಡೆಸಿದ್ದಾರೆ.  ಸುಮಲತಾರಿಗೆ ನಡ್ಡಾರಿಂದ ಭರವಸೆ ಸಿಕ್ಕಿದೆ. ಅದೇನು ಎಂಬುದನ್ನು ವಿಶ್ಲೇಷಿಸಿದ್ದಾರೆ ರಾಜಕೀಯ ವಿಶ್ಲೇಷಕ ದೆಹಲಿಯಿಂದ ರಾಜ್ಯ ರಾಜಕಾರಣವನ್ನೂ ಚೆನ್ನಾಗಿ ಬಲ್ಲ ಪತ್ರಕರ್ತ ಪ್ರಶಾಂತ್ ನಾತು... 


ಸೋಮಣ್ಣ ಪುತ್ರಗೆ ಟಿಕೆಟ್‌ ಖಾತ್ರಿ ಆಯ್ತಾ?

ಆತ್ಮೀಯರು ಮಾತನಾಡಿಸಿದರೆ ಸಾಕು ಒಮ್ಮೆ ಗುರ್‌ ಅನ್ನುತ್ತಿದ್ದ, ಕೆಲವೊಮ್ಮೆ ಗಳಗಳನೆ ಅಳುತ್ತಿದ್ದ ಸೋಮಣ್ಣ ಅವರು ದಿಲ್ಲಿಯಲ್ಲಿ ಅಮಿತ್‌ ಶಾ ಮತ್ತು ಧರ್ಮೇಂದ್ರ ಪ್ರಧಾನ್‌ ಜೊತೆ ಸುದೀರ್ಘ ಮಾತುಕತೆ ನಡೆಸಿದ ನಂತರ ಸ್ವಲ್ಪ ನಿರಾಳರಾಗಿದ್ದಾರೆ. ಹನೂರಿಗೆ ಟಿಕೆಟ್‌ ಕೊಡಿ ಎಂಬ ಸೋಮಣ್ಣ ಬೇಡಿಕೆಯನ್ನು ಅಮಿತ್‌ ಶಾ ಮತ್ತು ಧರ್ಮೇಂದ್ರ ಪ್ರಧಾನ್‌ ಕೇಳಿಸಿಕೊಂಡಿದ್ದು, ನೋಡೋಣ, ಪರಿಗಣಿಸುತ್ತೇವೆ. ಕೊಡಲು ಅಡ್ಡಿ ಏನೂ ಇಲ್ಲ ಎಂದು ಹೇಳಿ ಕಳುಹಿಸಿದ್ದಾರೆ. ಆದರೆ, ಈಗಿನ ಕ್ಷೇತ್ರ ಗೋವಿಂದರಾಜನಗರವನ್ನು ಮಗ ಡಾ.  ಅರುಣ ಸೋಮಣ್ಣಗೆ ಕೊಡುವ ಕುರಿತು ದಿಲ್ಲಿ ನಾಯಕರು ಯಾವುದೇ ಸ್ಪಷ್ಟಭರವಸೆ ನೀಡಿಲ್ಲ. ಬಿಜೆಪಿ ಜಿಲ್ಲಾ ಚುನಾವಣಾ ಉಸ್ತುವಾರಿಗಳನ್ನು ನೇಮಕ ಮಾಡುವಾಗ ಚಾಮರಾಜನಗರಕ್ಕೆ ನನಗೆ ಉಸ್ತುವಾರಿ ಕೊಡಲಿಲ್ಲ, ಮಲೆ ಮಹದೇಶ್ವರ ಬೆಟ್ಟದಿಂದ ಹೊರಡುವ ಯಾತ್ರೆಯಲ್ಲಿ ನನ್ನ ಹೆಸರು ಸೇರಿಸಲಿಲ್ಲ ಇತ್ಯಾದಿ ಇತ್ಯಾದಿ ದೂರು ದುಮ್ಮಾನಗಳನ್ನು ಕೂಡ ಸೋಮಣ್ಣ ದಿಲ್ಲಿಗೆ ತಲುಪಿಸಿ ಬಂದಿದ್ದಾರೆ.

Tap to resize

Latest Videos

undefined

ಆಂತರಿಕ ಕಿತ್ತಾಟ ಶಾಗೂ ತಲೆನೋವು

ಮೋದಿ ಕಾರ್ಯಕ್ರಮಗಳಿಗೆ ಭರ್ಜರಿ ಪ್ರತಿಸ್ಪಂದನೆ ಸಿಗುತ್ತಿದೆ. ವಿಜಯ ಸಂಕಲ್ಪ ಯಾತ್ರೆಗೂ ಜನ ಬರುತ್ತಿದ್ದಾರೆ. ಎಲ್ಲವೂ ಸರಿ. ಆದರೆ ಮಾಧ್ಯಮಗಳ ಮುಂದೆ ಪ್ರಮುಖ ನಾಯಕರೇ ಇಷ್ಟುಬಡಿದಾಡಿಕೊಂಡರೆ ಬರೀ ರಿಪೇರಿ ಮಾಡುತ್ತಾ ಕುಳಿತುಕೊಳ್ಳುವುದಾ ಎಂದು ಸ್ವತಃ ಅಮಿತ್‌ ಶಾ ಕೂಡ ತಲೆಕೆಡಿಸಿಕೊಂಡಿದ್ದಾರೆ. ಅದಕ್ಕಾಗಿಯೇ ಕರ್ನಾಟಕದ ಪರಿಸ್ಥಿತಿ ಸುಧಾರಿಸಲು ಏನು ಮಾಡಬೇಕು ಎಂದು ಮೂರು ಗಂಟೆ ಚರ್ಚೆ ನಡೆಸಿದ್ದಾರೆ. ಮಂಗಳವಾರ ರಾತ್ರಿ ದಿಲ್ಲಿಯ ಕೃಷ್ಣ ಮೆನನ್‌ ಮಾರ್ಗದಲ್ಲಿರುವ ಅಮಿತ್‌ ಶಾ ನಿವಾಸದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಬಿ.ಎಲ್‌.ಸಂತೋಷ್‌, ಆರ್‌ಎಸ್‌ಎಸ್‌ ಸಹ ಸರಕಾರ್ಯವಾಹ ಮುಕುಂದ ಜೀ, ಬಿಜೆಪಿ ರಾಜ್ಯ ಪ್ರಭಾರಿಗಳಾದ ಧರ್ಮೇಂದ್ರ ಪ್ರಧಾನ್‌, ಮನಸುಖ್‌ ಮಾಂಡವೀಯ, ಅಣ್ಣಾಮಲೈ ಮತ್ತು ಸಂಘಟನಾ ಕಾರ್ಯದರ್ಶಿ ರಾಜೇಶ್‌ ಭಾಗವಹಿಸಿದ್ದರು. ಮೂರು ಸರ್ವೇಗಳಲ್ಲಿ ಬಂದಿರುವ ಮಾಹಿತಿಗಳು ಯಾವ ಭಾಗದಲ್ಲಿ ಏನು ಸಮಸ್ಯೆಯಿದೆ? ರಿಪೇರಿ ಮಾಡಬಹುದಾದ ಸ್ಥಳಗಳು ಯಾವುವು? ಮುಂದಿನ 2 ತಿಂಗಳು ಯಾವ ವಿಷಯ ಪ್ರಸ್ತಾಪಿಸಿದರೆ ಒಳ್ಳೆಯದು? ದಿನವೂ ನಡೆಯುತ್ತಿರುವ ಆರೋಪ-ಪ್ರತ್ಯಾರೋಪಗಳು, ಪಾರ್ಟಿಗೆ ಹೊಸದಾಗಿ ಬರುವವರು ಯಾರು ಯಾರು? ಕಾಂಗ್ರೆಸ್‌ ಯಾರನ್ನೆಲ್ಲ ಸಂಪರ್ಕಿಸುತ್ತಿದೆ? ಕೊನೆ ಗಳಿಗೆಯಲ್ಲಿ ಹೋಗುವವರನ್ನು ತಡೆಯುವುದು ಹೇಗೆ? ಆಡಳಿತ ವಿರೋಧಿ ಅಲೆ ಹೇಗೆ ಕಡಿಮೆ ಮಾಡುವುದು ಎಂಬುದು ಸೇರಿದಂತೆ ಟಿಕೆಟ್‌ ಹಂಚಿಕೆ ಮಾನದಂಡಗಳ ಕುರಿತು ಕೂಡ ಮುಕ್ತವಾಗಿ ಚರ್ಚೆ ನಡೆದಿದೆ. ಗಮನಿಸಬೇಕಾದ ಸಂಗತಿ, ಎಂದರೆ ಈ ಸಭೆಗೆ ಯಡಿಯೂರಪ್ಪನವರು, ಮುಖ್ಯಮಂತ್ರಿ ಬೊಮ್ಮಾಯಿ, ನಳಿನ್‌ ಕುಮಾರ್‌ ಕಟೀಲ್‌, ಪ್ರಹ್ಲಾದ ಜೋಶಿ ಸೇರಿದಂತೆ ರಾಜ್ಯದ ಯಾವುದೇ ಪ್ರಮುಖ ಬಿಜೆಪಿ ರಾಜಕಾರಣಿಗಳನ್ನು ಕರೆದಿರಲಿಲ್ಲ.

ಸಿ.ಟಿ.ರವಿ ಕೋ ಚುಪ್‌ ರೆಹನೇ ಬೋಲೋ

ಅಮಿತ್‌ ಶಾ ನಿವಾಸದಲ್ಲಿ ನಡೆದ ಸಭೆಗೂ ಮುಂಚೆಯೇ ಸ್ವತಃ ಯಡಿಯೂರಪ್ಪ ಅವರು ಸಿ.ಟಿ.ರವಿ ಆಡಿದ ಕಿಚನ್‌ ಮಾತಿನ ಕ್ಲಿಪ್ಪಿಂಗ್‌ ಅನ್ನು ಅಮಿತ್‌ ಶಾ ಮತ್ತು ಧರ್ಮೇಂದ್ರ ಪ್ರಧಾನ್‌ ಇಬ್ಬರಿಗೂ ಕಳುಹಿಸಿದ್ದರಂತೆ. ಹೀಗಾಗಿ ಸಭೆಯಲ್ಲಿ ಸಿ.ಟಿ.ರವಿ ಬಗ್ಗೆ ತೀವ್ರ ಆಕ್ರೋಶಗೊಂಡಿದ್ದ ಅಮಿತ್‌ ಶಾ ಅವರು ಧರ್ಮೇಂದ್ರ ಪ್ರಧಾನ್‌ರತ್ತ ತಿರುಗಿ, ಯಾಕೆ ಸಿ.ಟಿ.ರವಿ ಇಷ್ಟುಜಾಸ್ತಿ ಮಾತನಾಡುತ್ತಾರೆ? ಚುನಾವಣೆ ಹೊತ್ತಿನಲ್ಲಿ ಇದೆಲ್ಲ ಬೇಕಾ? ಪ್ರಧಾನಮಂತ್ರಿ ಸ್ವತಃ ಶಿವಮೊಗ್ಗಕ್ಕೆ ಹೋಗಿ ಯಡಿಯೂರಪ್ಪ ಅವರಿಗೆ ಗೌರವ ಕೊಟ್ಟು ವಾತಾವರಣ ನಿರ್ಮಿಸುತ್ತಾರೆ. ಅದಾದ ಬಳಿಕ ಕಿಚನ್‌ ಎಂದೆಲ್ಲ ಮಾತಾಡಿದರೆ ಏನು ಉಪಯೋಗ? ರವಿಗೆ ಇಂಥ ಹೇಳಿಕೆ ನೀಡಬೇಡಿ ಎಂದು ಸ್ಪಷ್ಟವಾಗಿ ತಿಳಿಸಿ ಎಂದು ಹೇಳಿದ್ದಾರೆ. ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ ಮರುದಿನ ಸಿ.ಟಿ.ರವಿ ಗೋವಾಕ್ಕೆ ಹೋಗಿ ನೀಡಿದ ಹೇಳಿಕೆ ಬಿಜೆಪಿ ಒಳಗಡೆ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. 2004ರಿಂದಲೂ ಸಿ.ಟಿ.ರವಿ ಮೊದಲು ಅನಂತ ಕುಮಾರ ಬಣದಲ್ಲಿದ್ದು, ನಂತರ ಬಿ.ಎಲ್‌.ಸಂತೋಷ್‌ ಬಣದಲ್ಲಿ ಗುರುತಿಸಿಕೊಂಡು ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆದವರು. ರವಿ ಅವರಿಗೂ ಯಡಿಯೂರಪ್ಪ ಅವರಿಗೂ ಮೊದಲಿನಿಂದಲೂ ಅಷ್ಟಕ್ಕಷ್ಟೇ.

ಗುಜರಾತ್‌ ಸೂತ್ರ ಬೇಕಾ? ಬೇಡವಾ?

ಗುಜರಾತ್‌ನಲ್ಲಿ ಮಾಡಿದಂತೆ ಸಾರಾಸಗಟಾಗಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಮತ್ತು ವಯಸ್ಸಾಗಿರುವ ಶಾಸಕರನ್ನು ಬದಲಿಸಿ ಹೊಸ ಯುವ ಮುಖಗಳಿಗೆ ಅವಕಾಶ ಕೊಟ್ಟರೆ ಮಾತ್ರ ಪರಿಸ್ಥಿತಿ ಇನ್ನಷ್ಟುಸುಧಾರಿಸುತ್ತದೆ ಎಂದು ಅಮಿತ್‌ ಶಾ ದಿಲ್ಲಿಯಲ್ಲಿ ನಡೆದ ರಣತಂತ್ರದ ಸಭೆಯಲ್ಲಿ ಖಡಾಖಂಡಿತವಾಗಿ ಹೇಳಿದ್ದಾರೆ. ಆದರೆ ಹಾಗೆ ಮಾಡಿದರೆ ಪರಿಣಾಮ ಏನಾಗುತ್ತದೆ ಅನ್ನುವುದನ್ನು ನೋಡಿ ಹೆಜ್ಜೆ ಇಡಬೇಕು, ಕ್ಷೇತ್ರದಿಂದ ಕ್ಷೇತ್ರದ ವಾತಾವರಣ ಪರಿಗಣಿಸಿ ನಿರ್ಣಯ ತೆಗೆದುಕೊಳ್ಳೋಣ, ಈಗಲೇ ಗಡಿಬಿಡಿ ಮಾಡಿದರೆ ಬಂಡಾಯ ಭುಗಿಲೇಳುತ್ತದೆ ಎಂದು ಧರ್ಮೇಂದ್ರ ಪ್ರಧಾನ್‌ ವಿವರಿಸಿದ್ದಾರೆ. ಅದಾದ ನಂತರ, ನೋಡೋಣ ಈಗಲೇ ಯಾವುದನ್ನೂ ನಿರ್ಣಯ ಮಾಡೋದು ಬೇಡ. ತೆಗೆದರೆ ಎಷ್ಟುತೆಗೆಯಬೇಕು? ಅದರ ಪರಿಣಾಮ ಏನಾಗಬಹುದು ಎಂದು ನೋಡಿಕೊಂಡು ಹೆಜ್ಜೆ ಇಡೋಣ ಎಂಬ ತೀರ್ಮಾನಕ್ಕೆ ಸಭೆ ಬಂದಿದೆ ಎಂದು ತಿಳಿದು ಬಂದಿದೆ. ಮಂಗಳವಾರದ ಸಭೆಯಲ್ಲಿ ಟಿಕೆಟ್‌ ಹಂಚಿಕೆ ಮಾನದಂಡಗಳ ಕುರಿತು ಚರ್ಚೆ ನಡೆದಿದೆ. ಆದರೂ ನಿರ್ದಿಷ್ಟ ವ್ಯಕ್ತಿ, ನಿರ್ದಿಷ್ಟಕ್ಷೇತ್ರದ ಬಗ್ಗೆ ಮಂಗಳವಾರದ ಸಭೆಯಲ್ಲಿ ಚರ್ಚೆ ನಡೆದಿಲ್ಲ ಎಂದು ದಿಲ್ಲಿ ಬಿಜೆಪಿ ಮೂಲಗಳು ತಿಳಿಸಿವೆ. ಬಹುತೇಕ ಚುನಾವಣೆ ಘೋಷಣೆಯಾದ ಮೇಲೆ ಸೇರುವ ಪಾರ್ಲಿಮೆಂಟರಿ ಬೋರ್ಡ್‌ನ ಮೊದಲ ಸಭೆಯಲ್ಲೇ ಬಹುತೇಕ ಹಿರಿಯರನ್ನು ತೆಗೆಯಬೇಕೋ? ಇಟ್ಟು ಕೊಳ್ಳಬೇಕೋ ಎಂಬ ಬಗ್ಗೆ ನಿರ್ಧರಿಸುವ ಸಾಧ್ಯತೆಗಳಿವೆ. ಆದರೆ ಟಿಕೆಟ್‌ ಬದಲಾವಣೆ ಮಾಡಿದರೆ ಮಾತ್ರ ರಾಜ್ಯದಲ್ಲಿ ಒಂದಿಷ್ಟುಪರಿವರ್ತನೆ ಸಾಧ್ಯವಿದೆ ಎಂದು ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಇಬ್ಬರಿಗೂ ಗಟ್ಟಿಯಾಗಿ ಅನ್ನಿಸಿದೆ. ಸಾಧ್ಯ ಆಗುತ್ತದಾ ಇಲ್ಲವಾ ಎನ್ನುವುದು ಮುಂದಿನ ಪ್ರಶ್ನೆ.

ಬಿಜೆಪಿ ಒಳಗೆ ಏನು ನಡೆಯುತ್ತಿದೆ?

ಯಡಿಯೂರಪ್ಪ ಅವರನ್ನು ಶತಾಯ ಗತಾಯ ವಿರೋಧಿಸುತ್ತಿದ್ದ ಬಸನಗೌಡ ಪಾಟೀಲ್‌ ಯತ್ನಾಳ ವಿರುದ್ಧ ಅಪ್ಪು ಪಟ್ಟಣಶೆಟ್ಟಿದಿನವೂ ಹೇಳಿಕೆ ನೀಡುತ್ತಿದ್ದಾರೆ. ಯತ್ನಾಳರನ್ನು ಸೋಲಿಸಲು ಅಪ್ಪು ಅವರು ಪಾರ್ಟಿ ಬಿಟ್ಟು ಹೋಗಲು ಕೂಡ ತಯಾರಿದ್ದಾರೆ. ಯಡಿಯೂರಪ್ಪ ಅವರ ಇನ್ನೊಬ್ಬ ವೈರಿ ಅರವಿಂದ ಬೆಲ್ಲದ ವಿರುದ್ಧ ಸ್ಪರ್ಧಿಸಲು ಯಡಿಯೂರಪ್ಪ ಪರಮಾಪ್ತ ಮೋಹನ ಲಿಂಬಿಕಾಯಿ ಕಾಂಗ್ರೆಸ್‌ಗೆ ವಲಸೆ ಹೋಗುತ್ತಿದ್ದಾರೆ. ಬಿಎಸ್‌ವೈರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ದಿಲ್ಲಿ ತುಂಬೆಲ್ಲ ಓಡಾಡಿದ ಸಿ.ಪಿ.ಯೋಗೇಶ್ವರ್‌ಗೆ ಯಾವುದೇ ಜವಾಬ್ದಾರಿ ನೀಡಲು ಬಿಎಸ್‌ವೈ ವಿರೋಧದ ಕಾರಣದಿಂದ ಬಿಜೆಪಿ ಹಿಂದೇಟು ಹಾಕುತ್ತಿದೆ. ಇನ್ನು ಮೊದಲಿನಿಂದಲೂ ಯಡಿಯೂರಪ್ಪ ವಿರೋಧಿ ಗುಂಪಿನಲ್ಲಿರುವ ಸಿ.ಟಿ.ರವಿ ವಿರುದ್ಧ ಸ್ಪರ್ಧಿಸಲು ಬಿಎಸ್‌ವೈ ಶಿಷ್ಯ ಎಚ್‌.ಡಿ.ತಮ್ಮಯ್ಯ ಕಾಂಗ್ರೆಸ್‌ಗೆ ಹೋಗಿದ್ದಾರೆ. ಯಡಿಯೂರಪ್ಪ ಜೊತೆ ಗುರುತಿಸಿಕೊಳ್ಳದ ಸುನೀಲ್‌ ಕುಮಾರ್‌ ವಿರುದ್ಧ ಕಾರ್ಕಳಕ್ಕೆ ಹೋಗಿ ಪ್ರಮೋದ ಮುತಾಲಿಕ್‌ ಸ್ಪರ್ಧಿಸುತ್ತಿದ್ದಾರೆ. ಇನ್ನು ಪ್ರಹ್ಲಾದ ಜೋಶಿಗೆ ತುಂಬಾ ಬೇಕಾದ ಎಂ.ಆರ್‌.ಪಾಟೀಲ್‌ಗೆ ಕುಂದಗೋಳ ಬಿಜೆಪಿ ಟಿಕೆಟ್‌ ಕೊಟ್ಟರೆ, ಕಾಂಗ್ರೆಸ್‌ಗೆ ಹೋಗಿ ಸ್ಪರ್ಧಿಸಲು ಯಡಿಯೂರಪ್ಪ ಸಂಬಂಧಿಕ ಎಸ್‌.ಐ.ಚಿಕ್ಕನಗೌಡರ ತಯಾರಿದ್ದಾರೆ. ಇವೆಲ್ಲ ಬೆಳವಣಿಗೆಗಳನ್ನು ಅವಲೋಕನ ಮಾಡಿದರೆ ಬಿಜೆಪಿ ಒಳಗೆ ಏನೆಲ್ಲ ನಡೆಯುತ್ತಿದೆ ಎಂದು ಅರ್ಥ ಆಗುತ್ತದೆ. ಪೊಲಿಟಿಕ್ಸ್‌ನಲ್ಲಿ ಯಾವುದು ಕೂಡ ಕಾಕತಾಳೀಯ ಇರೋಲ್ಲ.

ಸುಮಲತಾಗೆ ಡಿಕೆಶಿ ಅಡ್ಡಿ

2019ರಲ್ಲಿ ಗೆದ್ದಾಗಿನಿಂದಲೂ ಸುಮಲತಾ ಅಂಬರೀಷ್‌ರನ್ನು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ತೆಗೆದುಕೊಳ್ಳಬಾರದು ಎಂದು ಡಿ.ಕೆ.ಶಿವಕುಮಾರ್‌ ಅಡ್ಡಗಾಲು ಹಾಕುತ್ತಿದ್ದರಂತೆ. ಬಹುಮತ ಇರುವ ಬಿಜೆಪಿ ಕಡೆಯಿಂದ ಬಿಲ್‌ ಪಾಸ್‌ ಮಾಡಲು ಬೆಂಬಲ ಕೊಡಿ ಎಂದು ಪ್ರಹ್ಲಾದ ಜೋಶಿ ಪದೇ ಪದೇ ವಿನಂತಿ ಮಾಡಿದರೆ, ಕಾಂಗ್ರೆಸ್‌ನವರು ಒಮ್ಮೆಯೂ ಬಂದು ನಮ್ಮ ಜೊತೆ ನಿಲ್ಲಿ ಅನ್ನಲಿಲ್ಲ ಅಂತೆ. ಸುಮಲತಾ ಆಪ್ತರು ಹೇಳುವ ಪ್ರಕಾರ ಅಂಬರೀಷ್‌ ಜೀವಂತ ಇದ್ದಾಗಲೂ ಡಿ.ಕೆ.ಶಿವಕುಮಾರ್‌ ಅಷ್ಟಕಷ್ಟೇ ಇದ್ದರಂತೆ. 2019ರಲ್ಲಿ ನಿಖಿಲ್‌ ಕುಮಾರಸ್ವಾಮಿ ಸೋಲಿಸಲು ಒಳಗೊಳಗೇ ಕೈ ಜೋಡಿಸಿದ್ದ ಚೆಲುವರಾಯಸ್ವಾಮಿ ಕೂಡ ಯಾವುದೇ ಕಾರಣಕ್ಕೂ ಸುಮಲತಾರನ್ನು ಕಾಂಗ್ರೆಸ್‌ ಒಳಕ್ಕೆ ಬಿಟ್ಟುಕೊಳ್ಳಬಾರದು ಎಂದು ಪಟ್ಟು ಹಾಕುತ್ತಿದ್ದರಂತೆ. ಹೀಗಾಗಿ ಕೊನೆಯ ವಿಕಲ್ಪವಾಗಿ ಸುಮಲತಾ ಅವರು ಬಿಜೆಪಿ ಜತೆಗೂಡಿದ್ದಾರೆ. ಸುಮಲತಾ ಆಪ್ತರ ಪ್ರಕಾರ, ಭವಿಷ್ಯದಲ್ಲಿ ಬಿಜೆಪಿ-ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಳ್ಳೋಲ್ಲ ಎಂದು ಜೆ.ಪಿ.ನಡ್ಡಾ ಭರವಸೆ ನೀಡಿದ್ದಾರಂತೆ. ಆದರೆ ರಾಜಕಾರಣದಲ್ಲಿ ಎಲ್ಲವೂ ವರ್ತಮಾನದ ಪರಿಸ್ಥಿತಿ ಅವಲಂಬಿತ. ಭವಿಷ್ಯದಲ್ಲಿ ಏನು ಬೇಕಾದರೂ ಆಗಬಹುದು.

ಸವದಿ ವರ್ಸಸ್‌ ಕುಮಟಳ್ಳಿ

2018ರಲ್ಲಿ ರಮೇಶ್‌ ಜಾರಕಿಹೊಳಿ, ಉಮೇಶ್‌ ಕತ್ತಿ, ಎಂ.ಬಿ.ಪಾಟೀಲ್‌ ಮತ್ತು ಮುರುಗೇಶ ನಿರಾಣಿ ಒಳಗಿಂದ ಒಳಗೆ ಕೈ ಜೋಡಿಸಿದ್ದರಿಂದ ಲಕ್ಷ್ಮಣ ಸವದಿ ಅಥಣಿಯಲ್ಲಿ ಸೋತರು. ನಂತರ ಸವದಿ ಅವರನ್ನು ಬಿ.ಎಲ್‌.ಸಂತೋಷ್‌ ಉಪಮುಖ್ಯಮಂತ್ರಿ ಮಾಡಿಸಿದರು. ಅದೆಲ್ಲ ಇತಿಹಾಸ. ಈಗ 2023ರಲ್ಲಿ ಅಥಣಿ ಬಿಜೆಪಿ ಟಿಕೆಟ್‌ ಯಾರಿಗೆ ಎಂಬುದು ಕಗ್ಗಂಟಾಗಿದೆ. ಉಮೇಶ್‌ ಕತ್ತಿ ಮಗನಿಗೆ ಟಿಕೆಟ್‌ ಸಿಗುತ್ತಿದೆ. ಹೆಬ್ಬಾಳ್ಕರ್‌ ಸಹೋದರ ಶಾಸಕ. ಜಾರಕಿಹೊಳಿ ಕುಟುಂಬದ 4 ಅಣ್ಣ-ತಮ್ಮಂದಿರು ಶಾಸಕರು. ಪ್ರಕಾಶ್‌ ಹುಕ್ಕೇರಿ ಮಗ ಶಾಸಕ. ನನ್ನ ಮಗ ಚಿದಾನಂದ್‌ಗೆ ಟಿಕೆಟ್‌ ಕೊಡಿ. ಹೇಗೂ ಕುಮಟಳ್ಳಿ ನಿಂತರೆ ಗೆಲ್ಲೋಲ್ಲ ಎಂದು ಸರ್ವೇ ರಿಪೋರ್ಚ್‌ ಇದೆ. ಮಹೇಶ್‌ ಕುಮಟಳ್ಳಿಗೆ ಪಕ್ಕದ ಕಾಗವಾಡಕ್ಕೆ ಟಿಕೆಟ್‌ ಕೊಡಿ ಎಂದು ದಿಲ್ಲಿ ನಾಯಕರಿಗೆ ಸವದಿ ಬೆನ್ನು ಹತ್ತಿದ್ದಾರೆ. ಆದರೆ ಇದಕ್ಕೆ ರಮೇಶ ಜಾರಕಿಹೊಳಿ ತಯಾರಿಲ್ಲ. ಅಥಣಿ ಗುದ್ದಾಟ ಇಷ್ಟುಬೇಗ ನಿರ್ಣಯ ಆಗುವ ಲಕ್ಷಣ ಇಲ್ಲ ಬಿಡಿ.

click me!