ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಯಾರೇ ಗೆದ್ದರೂ ಅದು ದಾಖಲೆಯೇ: ಹೊರಟ್ಟಿಯದ್ದೇ ಅಧಿಪತ್ಯ..!

By Kannadaprabha News  |  First Published Jun 4, 2022, 9:49 AM IST

*  64 ವರ್ಷದ ಕ್ಷೇತ್ರದಲ್ಲಿ 42 ವರ್ಷ ಹೊರಟ್ಟಿಯದ್ದೇ ಅಧಿಪತ್ಯ
*  ಪಶ್ಚಿಮ ಶಿಕ್ಷಕರ ಕ್ಷೇತ್ರದ ವೈಶಿಷ್ಟ್ಯವಿದು
*  ಈ ಕ್ಷೇತ್ರದಲ್ಲಿ ಬಿಜೆಪಿ ಗೆದ್ದೇ ಇಲ್ಲ 
 


ಶಿವಾನಂದ ಗೊಂಬಿ

ಹುಬ್ಬಳ್ಳಿ(ಜೂ.04): ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಇದೀಗ ನಡೆಯುತ್ತಿರುವ ಚುನಾವಣೆ ರಂಗೇರಿದೆ. ಈ ಕ್ಷೇತ್ರದಲ್ಲಿ ಏಳು ಬಾರಿ ಗೆಲ್ಲುವ ಮೂಲಕ ಬಸವರಾಜ ಹೊರಟ್ಟಿ ದಾಖಲೆ ಬರೆದಿದ್ದಾರೆ. ಈ ಚುನಾವಣೆಯಲ್ಲಿ ಯಾರೇ ಗೆದ್ದರೂ ಅದು ಮತ್ತೊಂದು ದಾಖಲೆಯೇ ಆಗುತ್ತದೆ.

Tap to resize

Latest Videos

64 ವರ್ಷದ (1958) ಇತಿಹಾಸ ಹೊಂದಿರುವ ಈ ಕ್ಷೇತ್ರ ಕಾಲಕಾಲಕ್ಕೆ ಅಲ್ಪಸ್ವಲ್ಪ ಬದಲಾವಣೆ ಕಂಡಿದೆ. ಈ ವರೆಗೆ 6 ಜನಪ್ರತಿನಿಧಿಗಳನ್ನು ಕಂಡಿದೆ. ಅದರಲ್ಲಿ 42 ವರ್ಷ ಅಧಿಪತ್ಯ ಸಾಧಿಸಿದ್ದು ಮಾತ್ರ ಬಸವರಾಜ ಹೊರಟ್ಟಿ. ಇದು ರಾಷ್ಟ್ರಮಟ್ಟದ ದಾಖಲೆಯಾಗಿದೆ.

Karnataka Politics: 'ಜೆಡಿಎಸ್‌ಗೆ ದ್ರೋಹ ಎಸಗಿದ ಹೊರಟ್ಟಿ'

ಕ್ಷೇತ್ರದ ವೈಶಿಷ್ಟ್ಯ:

1958ರಲ್ಲಿ ಈ ಕ್ಷೇತ್ರದ ಹೆಸರು ಮೈಸೂರು ಉತ್ತರ ಶಿಕ್ಷಕರ ಕ್ಷೇತ್ರವೆಂದಿತ್ತು. 1962ರಲ್ಲಿ ಮೈಸೂರು ಉತ್ತರ ಶಿಕ್ಷಕರ ಕ್ಷೇತ್ರದಿಂದ ಮೈಸೂರು ಪಶ್ಚಿಮ ಶಿಕ್ಷಕರ ಕ್ಷೇತ್ರ ಎಂದಾಯಿತು. ಬಳಿಕ 1980ರ ಚುನಾವಣೆ ವೇಳೆ ಕರ್ನಾಟಕ ಉತ್ತರ ಕೇಂದ್ರ ಶಿಕ್ಷಕರ ಕ್ಷೇತ್ರವೆಂದಾಯಿತು. ಆಗ ಅವಿಭಜಿತ ಧಾರವಾಡ, ರಾಯಚೂರು, ಶಿವಮೊಗ್ಗ, ಬಳ್ಳಾರಿ ಜಿಲ್ಲೆಗಳು ಇದೇ ಕ್ಷೇತ್ರದ ವ್ಯಾಪ್ತಿಗೆ ಬರುತ್ತಿದ್ದವು. ಬಳಿಕ ಇದನ್ನು ಧಾರವಾಡ, ಹಾವೇರಿ, ಉತ್ತರ ಕನ್ನಡ, ಗದಗ ಜಿಲ್ಲೆಗೆ ಸೀಮಿತಗೊಳಿಸಿ ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರವೆಂದು ಮಾಡಿರುವುದು ವಿಶೇಷ. 

ಹೊರಟ್ಟಿ ಎಂಟ್ರಿ:

1958ರಿಂದ 1980ರ ವರೆಗೆ ಆರು ಬಾರಿ ಈ ಕ್ಷೇತ್ರಕ್ಕೆ ಚುನಾವಣೆ ನಡೆದಿದೆ. ಮಮದಾಪುರ ಬಸವಂತಪ್ಪ ಬಾಳಪ್ಪ, ದೇಶಪಾಂಡೆ ಬಾಲಕೃಷ್ಣ ಗಂಗಾಧರ, ಕೇಶವರಾವ್‌ ತಾತ್ಯಾರಾವ್‌ ನಿಟ್ಟೂರಕರ್‌, ಜಿ.ಕೆ. ಕುಲಕರ್ಣಿ, ಎಸ್‌.ಐ. ಶೆಟ್ಟರ್‌ ಆಯ್ಕೆಯಾದ ಸದಸ್ಯರಿವರು.

ಬಳಿಕ 1980ರಲ್ಲಿ ಬಸವರಾಜ ಹೊರಟ್ಟಿ ಪ್ರಥಮ ಬಾರಿಗೆ ಪಕ್ಷೇತರರಾಗಿ ಕಣಕ್ಕಿಳಿದಿದ್ದರು. ಆಗ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಎಸ್‌.ಐ. ಶೆಟ್ಟರ್‌, ಕೆ. ಮಲ್ಲಪ್ಪ, ಕೋಣಂದೂರು ಲಿಂಗಪ್ಪ, ಆರ್‌.ಟಿ. ಮಜ್ಜಗಿ, ಕೋ. ಚೆನ್ನಬಸಪ್ಪ ಅವರಂಥ ಘಟಾನುಘಟಿಗಳು ಚುನಾವಣೆಗೆ ಸ್ಪರ್ಧಿಸಿದ್ದರು. ಇವರೆಲ್ಲರ ಎದುರಿಗೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ಹೊರಟ್ಟಿಅತ್ಯಂತ ಕಿರಿಯ ವಯಸ್ಸಿನವರಾಗಿದ್ದರು. ಆದರೆ ಅಚ್ಚರಿಯೆಂಬಂತೆ ಗೆದ್ದು ಮೊದಲ ಪ್ರಯತ್ನದಲ್ಲೇ ಪರಿಷತ್‌ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದರು.

ಪಠ್ಯ ಪುಸ್ತಕಗಳ ವಿಚಾರದಲ್ಲಿ ಯಾವುದೇ ರಾಜಕೀಯ ಹಸ್ತ ಕ್ಷೇಪ ಇರಬಾರದು: ಬಸವರಾಜ ಹೊರಟ್ಟಿ

ಆಗ ಗೆದ್ದ ಹೊರಟ್ಟಿ 1986, 1992, 1998, 2004, 2010, 2016ರಲ್ಲಿ ನಡೆದ ಚುನಾವಣೆಗಳಲ್ಲಿ ಗೆಲುವು ಸಾಧಿಸಿ ರಾಷ್ಟ್ರದಾಖಲೆ ನಿರ್ಮಿಸಿದವರು. ಹೀಗೆ 64 ವರ್ಷದ ಇತಿಹಾಸ ಹೊಂದಿರುವ ಕ್ಷೇತ್ರದಲ್ಲಿ ಬರೋಬ್ಬರಿ 42 ವರ್ಷಗಳ ಗೆದ್ದು ಬೀಗಿದವರು ಹೊರಟ್ಟಿ. ಮೊದಲ ಬಾರಿಗೆ ಮಾತ್ರ ಪಕ್ಷೇತರರಾಗಿ ಸ್ಪರ್ಧಿಸಿದ್ದ ಹೊರಟ್ಟಿಆನಂತರ ಜನತಾಪರಿವಾರದಿಂದಲೇ ಸ್ಪರ್ಧಿಸಿದವರು. ಇದೇ ಮೊದಲ ಬಾರಿಗೆ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ.

ಬಿಜೆಪಿ ಗೆದ್ದೇ ಇಲ್ಲ:

ಈ ವರೆಗೂ ಬಿಜೆಪಿ ಈ ಕ್ಷೇತ್ರದಲ್ಲಿ ಒಂದೇ ಒಂದು ಬಾರಿಯೂ ಗೆದ್ದ ಉದಾಹರಣೆ ಇಲ್ಲ. ಪ್ರತಿ ಚುನಾವಣೆಯಲ್ಲೂ ಹೊರಟ್ಟಿ ಅವರಿಗೆ ತೀವ್ರ ಪೈಪೋಟಿ ನೀಡಿದೆ. ಆದರೆ ಗೆಲುವು ಮಾತ್ರ ಕಂಡಿಲ್ಲ. ಹೀಗಾಗಿ ಈ ಸಲ ಹೊರಟ್ಟಿಅವರೇ ಗೆದ್ದರೂ ಅದು ಅವರಿಗೆ 8ನೆಯ ಬಾರಿಗೆ ಗೆದ್ದು ತಮ್ಮ ದಾಖಲೆ ಮುರಿದಂತಾಗುತ್ತದೆ. ಜತೆಗೆ ಬಿಜೆಪಿ ಮೊದಲ ಬಾರಿಗೆ ಗೆಲ್ಲುವ ಮೂಲಕ ಬಿಜೆಪಿಯದ್ದು ದಾಖಲೆಯಾಗುತ್ತದೆ. ಒಂದು ವೇಳೆ ಹೊರಟ್ಟಿ ಸೋತು ಬೇರೆ ಯಾರೇ ಗೆದ್ದರೂ ರಾಷ್ಟ್ರ ದಾಖಲೆ ಮಾಡಿದವರನ್ನು ಸೋಲಿಸಿದ ದಾಖಲೆ ಅವರದ್ದಾಗುತ್ತದೆ. ಹೀಗಾಗಿ ಕ್ಷೇತ್ರದಲ್ಲಿ ಯಾರೇ ಗೆದ್ದರೂ ಅದು ದಾಖಲೆಯೇ ಸರಿ!
 

click me!