
ಬೆಂಗಳೂರು : ಕರ್ನಾಟಕ, ಮಹಾರಾಷ್ಟ್ರ, ಗೋವಾ ಗಡಿ ಭಾಗವಾದ ಬೆಳಗಾವಿಯ ಚೋರ್ಲಾ ಘಾಟ್ ಬಳಿ ₹400 ಕೋಟಿ ತುಂಬಿದ್ದ ಲಾರಿಗಳ ಹೈಜಾಕ್ ಪ್ರಕರಣ ಇದೀಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಟಾಪಟಿಗೆ ಕಾರಣವಾಗಿದೆ. ನಾಪತ್ತೆಯಾಗಿದೆ ಎನ್ನಲಾದ ಹಣ ಪತ್ತೆಗೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುತ್ತಿರುವಾಗಲೇ ಇತ್ತ ಹಣ ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಪರಸ್ಪರ ದೂಷಾರೋಪಣೆ ಆರಂಭಿಸಿದ್ದಾರೆ.
ಹಣ ಕಾಂಗ್ರೆಸ್ ನಾಯರಿಗೆ ಸೇರಿದ್ದು ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಆರೋಪ ಮಾಡಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ, ರಾಜ್ಯದಲ್ಲೂ ಆಡಳಿತ ಮತ್ತು ವಿಪಕ್ಷಗಳ ನಾಯಕರು ಪರಸ್ಪರರ ಮೇಲೆ ಆರೋಪಗಳ ಸುರಿಮಳೆ ಗೈದಿದ್ದಾರೆ.
ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ‘ಪ್ರಧಾನಮಂತ್ರಿ ಅವರು ಮನ್ ಕಿ ಬಾತ್‌ನಲ್ಲಿ ಭಜನ್ ಕ್ಲಬ್‌ಗೆ ಒಲವು ಬಗ್ಗೆ ಮಾತನಾಡಿದ್ದಾರೆ. ಅದರ ಬಗ್ಗೆ ಮಾತನಾಡಲು ಅವರಿಗೆ ಪುರುಸೊತ್ತಿದೆ. ಅವರ ಸರ್ಕಾರ ಇರುವ ಕಡೆ ಟ್ರಕ್‌ಗಳಲ್ಲಿ ₹400 ಕೋಟಿ ತೆಗೆದುಕೊಂಡು ಹೋಗುತ್ತಿದ್ದಾರೆ. ಅದು ಗೊತ್ತಿಲ್ಲವಾ?. ಇದಕ್ಕೆ ಯಾರು ಉತ್ತರ ಕೊಡಬೇಕು? ಅಮಿತ್ ಶಾ ಅವರು ಎಲ್ಲಿದ್ದಾರೆ? ನಿದ್ದೆ ಮಾಡುತ್ತಿದ್ದಾರೆನ್ರಿ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಜೊತೆಗೆ, ವರದಿಗಳ ಪ್ರಕಾರ ಹಣ ಇರೋದು ಗುಜರಾತ್ ಮತ್ತು ಮಹಾರಾಷ್ಟ್ರ ಮೂಲದವರದ್ದು ಎಂದು ಗೊತ್ತಾಗಿದೆ. ಅವರು ಬಿಜೆಪಿನಾ? ಕಾಂಗ್ರೆಸ್ಸಾ? ನನಗೆ ಗೊತ್ತಿಲ್ಲ. ಆದರೆ ಅಲ್ಲಿ ಸರ್ಕಾರ ನಡೆಯುತ್ತಿರುವುದು ಯಾರದು? ಹಾಗಾದ್ರೆ ಸಾವಿರ ಕೋಟಿ ರೂಪಾಯಿ ನೋಟು ಯಾರು ಪ್ರಿಂಟ್ ಮಾಡುತ್ತಿದ್ದಾರೆ? ಎಲ್ಲಿ ಪ್ರಿಂಟ್ ಮಾಡುತ್ತಿದ್ದಾರೆ? ಸೆಮಿಕಂಡಕ್ಟರ್ ಮಾಡುತ್ತೇನೆ ಎಂದು ಹೇಳಿ ಗುಜರಾತ್‌ನಲ್ಲಿ ಇಂತಹ ಪ್ರಿಂಟಿಂಗ್ ಮಷೀನ್ ಇಟ್ಟಿದ್ದಾರಾ? ಎಂದು ವಾಗ್ದಾಳಿ ನಡೆಸಿದರು.
ಮತ್ತೊಂದೆಡೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿ, ‘ಫಡ್ನವೀಸ್ ಅವರ ಆರೋಪ ನಿರಾಧಾರ. ಅಷ್ಟು ದೊಡ್ಡ ಮೊತ್ತದ ಹಣ ಯಾರು ಎಣಿಸಿದರು? ಹಣದ ಮೂಲವೇನು? ಈ ಘಟನೆ ನಿಖರವಾಗಿ ಎಲ್ಲಿ ನಡೆದಿದೆ, ಅಲ್ಲಿ ವಾಸ್ತವವಾಗಿ ಏನಾಗಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದೆ ಆರೋಪ ಮಾಡುವುದು ಸರಿಯಲ್ಲ ಎಂದಿದ್ದಾರೆ.
ಇನ್ನು ಸಚಿವ ಜಮೀರ್ ಅಹ್ಮದ್ ಖಾನ್ ಮಾತನಾಡಿ, ‘ದರೋಡೆಯಾದ ₹400 ಕೋಟಿ ಕಾಂಗ್ರೆಸ್ಸಿನವರ ದುಡ್ಡು ಎನ್ನುತ್ತಾರೆ. ಕಾಂಗ್ರೆಸ್ಸಿನವರು ಅದು ಬಿಜೆಪಿಯವರ ದುಡ್ಡು ಎನ್ನುತ್ತಾರೆ. ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಹಣ ಸಾಗಿಸುತ್ತಿದ್ದ ಆರೋಪವಿದೆ. ತನಿಖೆ ನಡೆಯಲಿ, ಹಣ, ಆರೋಪಿಗಳು ಪತ್ತೆಯಾಗಲಿ. ತನಿಖೆ ನಂತರ ಹಣ ಯಾರದ್ದು ಎಂಬುದೂ ಗೊತ್ತಾಗುತ್ತದೆ’ ಎಂದಿದ್ದಾರೆ.
ಈ ನಡುವೆ ‘ಎಲ್ಲ ಚುನಾವಣೆಗಳಿಗೂ ಕಾಂಗ್ರೆಸ್ ಕರ್ನಾಟಕದಿಂದಲೇ ಹಣ ಕಳುಹಿಸುತ್ತಿದೆ. ಹೀಗಾಗಿ 400 ಕೋಟಿ ದರೋಡೆ ಪ್ರಕರಣದಲ್ಲಿ ಕಾಂಗ್ರೆಸ್ ಕೈವಾಡದ ಶಂಕೆ ಇದೆ. ಕಾಂಗ್ರೆಸ್ ಪಕ್ಷಕ್ಕೆ ತೆಲಂಗಾಣ, ಹಿಮಾಚಲ ಪ್ರದೇಶದಲ್ಲಿ ಮೂರು ಕಾಸೂ ಇಲ್ಲ. ಕರ್ನಾಟಕದಲ್ಲಿ ಲೂಟಿ ಮಾಡಿ ಬೇರೆ ರಾಜ್ಯದ ಚುನಾವಣೆಗೆ ಹಣ ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ತನಿಖೆಗೊಳಪಡಿಸಿ ಸತ್ಯಾಂಶ ಬಯಲಾಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಆಧಾರ ಇಲ್ಲದೇ ಆರೋಪ ಬೇಡ: ಬಿಜೆಪಿಗರಿಗೆ ಸತೀಶ್, ಪ್ರಿಯಾಂಕ್ ತಿರುಗೇಟು
2025ರ ಅ.16ರಂದು 400 ಕೋಟಿ ರು. ನಗದಿದ್ದ ಎರಡು ಕಂಟೇನರ್ ದರೋಡೆ
ಮಹಾರಾಷ್ಟ್ರ, ಕರ್ನಾಟಕ, ಗೋವಾ ಸಮೀಪದ ಚೋರ್ಲಾ ಘಾಟ್ ಬಳಿ ಘಟನೆ
ಹಣ ಮಹಾರಾಷ್ಟ್ರ ಉದ್ಯಮಿ ಕಿಶೋರ್‌ಸೇಟ್ ಎಂಬುವವರಿಗೆ ಸೇರಿದ್ದೆಂಬ ಶಂಕೆ
ದರೋಡೆಯಲ್ಲಿ ಕೈವಾಡ ಶಂಕಿಸಿ ಸಂದೀಪ್ ಪಾಟೀಲ್ ಎಂಬಾತನ ಕಿಡ್ನಾಪ್
ಒಂದು ತಿಂಗಳ ಸೆರೆ ಬಳಿಕ ತಪ್ಪಿಸಿಕೊಂಡ ಸಂದೀಪ್‌ನಿಂದ ಕಿಡ್ನಾಪ್ ದೂರು
ಈ ವೇಳೆ ಹಣ ದರೋಡೆ ಪ್ರಕರಣ ಬೆಳಕಿಗೆ. ಬಳಿಕ ಮಹಾ ಪೊಲೀಸರಿಂದ ಕೇಸು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.