ಆರ್‌ಜೆಡಿ ನಂ.2 ಹುದ್ದೆ ತೇಜಸ್ವಿ ಪಾಲು

Kannadaprabha News   | Kannada Prabha
Published : Jan 26, 2026, 04:56 AM IST
tejaswi yadav

ಸಾರಾಂಶ

ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಬಿಹಾರ ವಿಪಕ್ಷ ನಾಯಕ ತೇಜಸ್ವಿ ಯಾದವ್‌ ಅವರನ್ನು ನೇಮಿಸಲಾಗಿದೆ. ಇದು ಪಕ್ಷದ ನಂ.2 ಹುದ್ದೆ ಆಗಿದ್ದು, ತನ್ಮೂಲಕ ತೇಜಸ್ವಿ ಅವರು ತಮ್ಮ ಉತ್ತರಾಧಿಕಾರಿ ಎಂದು ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್‌ ಪರೋಕ್ಷವಾಗಿ ಸಾರಿದ್ದಾರೆ.

ಪಟನಾ: ಬಿಹಾರದ ಪ್ರಮುಖ ವಿಪಕ್ಷ ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಬಿಹಾರ ವಿಪಕ್ಷ ನಾಯಕ ತೇಜಸ್ವಿ ಯಾದವ್‌ ಅವರನ್ನು ನೇಮಿಸಲಾಗಿದೆ. ಇದು ಪಕ್ಷದ ನಂ.2 ಹುದ್ದೆ ಆಗಿದ್ದು, ತನ್ಮೂಲಕ ತೇಜಸ್ವಿ ಅವರು ತಮ್ಮ ಉತ್ತರಾಧಿಕಾರಿ ಎಂದು ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್‌ ಪರೋಕ್ಷವಾಗಿ ಸಾರಿದ್ದಾರೆ.

ಲಾಲು ಯಾದವ್‌ ಹಾಗೂ ತೇಜಸ್ವಿ ಯಾದವ್‌ ಸೇರಿದಂತೆ ರಾಷ್ಟ್ರೀಯ ನಾಯಕರನ್ನೊಳಗೊಂಡ ಕಾರ್ಯಕಾರಿ ಸಭೆಯು ತೇಜಸ್ವಿ ನೇಮಕ ಅನುಮೋದಿಸಿದೆ.

ಲಾಲು ಪುತ್ರಿ ಕಿಡಿ:

ಆದರೆ ತೇಜಸ್ವಿ ಜೊತೆ ವೈಮನಸ್ಯ ಹೊಂದಿರುವ ಸೋದರಿ ರೋಹಿಣಿ ಆಚಾರ್ಯ ಅವರು ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಲಾಲುವಾದವನ್ನು ನಾಶಮಾಡುವ ಒಳನುಸುಳುಕೋರರು ಮತ್ತು ಪಿತೂರಿಗಾರರ ಕೈಗೆ ಪಕ್ಷದ ಅಧಿಕಾರ ಮತ್ತು ನಿರ್ಧಾರ ತೆಗೆದುಕೊಲ್ಳುವ ಹಕ್ಕು ಜಾರಿದೆ’ ಎಂದು ಕಿಡಿಕಾರಿದ್ದಾರೆ. ಮತ್ತೊಂದೆಡೆ ಈ ಹುದ್ದೆ ಮೇಲೆ ಹಿರಿಯ ಸೋದರಿ ಮಿಸಾ ಭಾರತಿಗೂ ಆಸೆಯಿತ್ತು ಎಂದು ಹೇಳಲಾಗಿದೆ.

ಯಾವುದೇ ಪಕ್ಷದ ಜೊತೆ ಮೈತ್ರಿ ಇಲ್ಲ: ವಿಜಯ್‌

ಚೆನ್ನೈ: ‘ನಾವು ಜನರನ್ನು ರಕ್ಷಿಸಲು ಇದ್ದೇವೆ. ನಾವು ಯಾರಿಗೂ ಅಥವಾ ಯಾವುದಕ್ಕೂ ನಮ್ಮ ರಾಜಕೀಯವನ್ನು ರಾಜಿ ಮಾಡಿಕೊಳ್ಳುವುದಿಲ್ಲ. ಅದು ದುಷ್ಟ ಶಕ್ತಿಯಾಗಿರಲಿ ಅಥವಾ ಭ್ರಷ್ಟ ಶಕ್ತಿಯಾಗಿರಲಿ, ಎರಡೂ ತಮಿಳುನಾಡನ್ನು ಆಳಬಾರದು’ ಎಂದು ನಟ, ಟಿವಿಕೆ ಮುಖ್ಯಸ್ಥ ವಿಜಯ್‌ ಭಾನುವಾರ ಹೇಳಿದ್ದಾರೆ. ಈ ಮೂಲಕ ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಿದ್ದಾರೆ.

ಟಿವಿಕೆ ಪಕ್ಷವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಗುಸುಗುಸು ಎದ್ದಿತ್ತು. ಇದರ ನಡುವೆ ಮಾಮಲ್ಲಪುರಂನಲ್ಲಿ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ‘ಎಐಎಡಿಎಂಕೆ ನೇರವಾಗಿ ಬಿಜೆಪಿಗೆ ಶರಣಾಗಿದೆ. ಡಿಎಂಕೆ ಪರೋಕ್ಷವಾಗಿ ಶರಣಾಗಿದೆ. ನಾವು ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ. ಬಲಪ್ರಯೋಗದಿಂದ ನಿಯಂತ್ರಿಸಬಹುದಾದ ವ್ಯಕ್ತಿ ನಾನಲ್ಲ. ದುಷ್ಟ ಶಕ್ತಿಯಾಗಿರಲಿ ಅಥವಾ ಭ್ರಷ್ಟ ಶಕ್ತಿಯಾಗಿರಲಿ, ಎರಡೂ ತಮಿಳುನಾಡನ್ನು ಆಳಬಾರದು’ ಎಂದರು. ಈ ಮೂಲಕ ಡಿಎಂಕೆ ಹಾಗೂ ಬಿಜೆಪಿ ಎರಡೂ ಪಕ್ಷಗಳಿಗೆ ಚಾಟಿ ಬೀಸಿದರು.ತಮ್ಮ ಕೊನೆಯ ಚಿತ್ರ ‘ಜನನಾಯಗನ್‌’ಗೆ ಸೆನ್ಸಾರ್‌ ಪ್ರಮಾಣಪತ್ರ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರದ ಜೊತೆ ಜಟಾಪಟಿ ನಡೆದ ಬೆನ್ನಲ್ಲೇ ಈ ಮಹತ್ವದ ಘೋಷಣೆ ಮಾಡಿದ್ದಾರೆ.

ಗಣರಾಜ್ಯ ದಿನಕ್ಕೂ ಮುನ್ನ ಜಮ್ಮು ಗಡಿಯಲ್ಲಿ ಡ್ರೋನ್‌ ಪತ್ತೆ, ಶೋಧ

ಕಠುವಾ: ಜಮ್ಮು ಕಾಶ್ಮೀರದ ಕಠುವಾ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಡ್ರೋನ್‌ಗಳ ಹಾರಾಟ ಪತ್ತೆಯಾಗಿದೆ. ಸುಮಾರು 5 ನಿಮಿಷಗಳ ಕಾಲ ಡ್ರೋನ್‌ಗಳು ಹಾರಾಟ ನಡೆಸಿದ ಬೆನ್ನಲ್ಲೇ ಭದ್ರತಾ ಪಡೆಗಳು ಅವುಗಳು ಎಲ್ಲಿಂದ ಬಂದವು ಮತ್ತು ಎತ್ತ ಹೋದವು ಎಂಬುದನ್ನು ತಿಳಿಯಲು ಶೋಧ ಆರಭಿಸಿವೆ.

ನೆರೆಯ ಪಾಕಿಸ್ತಾನದ ಕಡೆಯಿಂದ ಡ್ರೋನ್‌ಗಳಲ್ಲಿ ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳು ಅಕ್ರಮವಾಗಿ ಗಡಿಯೊಳಗೆ ಬರುತ್ತಿರುವುದು ಹೆಚ್ಚುತ್ತಿರುವ ಹೊತ್ತಿನಲ್ಲಿ ಈ ಬೆಳವಣಿಗೆಯಾಗಿದೆ. 2 ವಾರಗಳ ಹಿಂದೆಯೂ ಎಲ್‌ಒಸಿ ಬಳಿಕ ಹಲವು ಬಾರಿ ಶಂಕಿತ ಡ್ರೋನ್‌ಗಳ ಹಾರಾಟ ಪತ್ತೆಯಾಗಿತ್ತು.

ಕಾಂಗ್ರೆಸಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ: ಅಹ್ಮದ್‌ ಕಿಡಿರಾಹುಲ್‌ ಹೇಳೋದೇ ಅಂತಿಮ: ಮಾಜಿ ಕಾಂಗ್ರೆಸ್ಸಿಗನ ಟೀಕೆ

ನವದೆಹಲಿ: ಕಾಂಗ್ರೆಸ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಎಂಬುದು ಇಲ್ಲವೇ ಇಲ್ಲ. ರಾಹುಲ್‌ ಗಾಂಧಿ ಏನು ಹೇಳುತ್ತಾರೋ ಅಂತಿಮ. ರಾಹುಲ್‌ ಗಾಂಧಿ ಅವರಿಗೆ ತಾವು ನೆಹರೂ-ಗಾಂಧಿ ಕುಟುಂಬಕ್ಕೆ ಸೇರಿದವರು ಎನ್ನುವ ಮೇಲರಿಮೆ ಇದೆ ಎಂದು ಹೀಗಂತ ಕಾಂಗ್ರೆಸ್‌ನ ಮಾಜಿ ನಾಯಕ ಶಕೀಲ್‌ ಅಹಮದ್‌ ಆರೋಪಿಸಿದ್ದಾರೆ.ಸತತ ಚುನಾವಣಾ ಸೋಲಿನ ವಿಚಾರವಾಗಿ ರಾಹುಲ್‌ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಅವರು, ಈ ವಿಚಾರವಾಗಿ ಚರ್ಚಿಸಲು ಪಕ್ಷದಲ್ಲಿ ಯಾರೂ ಸಿದ್ಧರಿಲ್ಲ. ಪಕ್ಷದ ಮೇಲಸ್ತರದಲ್ಲಿ ಸಾಮರ್ಥ್ಯದ ಕೊರತೆ ಎಂದೂ ಆರೋಪಿಸಿದ್ದಾರೆ.

ರಾಹುಲ್‌ ಗಾಂಧಿ ಅವರು ಬಯಸಿದರೂ ಕಾಂಗ್ರೆಸ್‌ ಅನ್ನು ದೇಶದಲ್ಲಿ 2ನೇ ಸ್ಥಾನಕ್ಕಿಂತ ಕೆಳಗೆ ತಳ್ಳಲು ಸಾಧ್ಯವಿಲ್ಲ. ಯಾಕೆಂದರೆ ಎಲ್ಲಾ ಪಕ್ಷಗಳು ತಮ್ಮ ರಾಜ್ಯಕ್ಕೆ ಸೀಮಿತವಾಗಿವೆ ಎಂದು ಇದೇ ವೇಳೆ ಶಕೀಲ್‌ ಅಹಮದ್‌ ವ್ಯಂಗ್ಯವಾಡಿದ್ದಾರೆ.ರಾಹುಲ್‌ ಗಾಂಧಿಗಿಂತ ಮೊದಲು ರಾಜಕಾರಣಕ್ಕೆ ಬಂದ ಹಲವು ನಾಯಕರು ಕಾಂಗ್ರೆಸ್‌ನಲ್ಲಿದ್ದಾರೆ. ರಾಹುಲ್‌ ಗಾಂಧಿ ಮೊದಲ ಚುನಾವಣೆ ಗೆಲ್ಲುವ ಹೊತ್ತಿಗೆ ನಾನು 5 ಚುನಾವಣೆ ಗೆದ್ದಿದ್ದೆ. ಪಕ್ಷದ ಜನಪ್ರಿಯ ಮತ್ತು ಹಿರಿಯ ನಾಯಕರ ಜತೆಗೆ ಬೆರೆಯಲು ರಾಹುಲ್‌ ಗಾಂಧಿ ಅವರಿಗೆ ಕಿರಿಕಿರಿ ಅನಿಸುತ್ತದೆ.

ತಮ್ಮನ್ನು ಬಾಸ್‌ ಎಂದು ಪರಿಗಣಿಸದ ವ್ಯಕ್ತಿಗಳ ಜತೆಗೆ ಕೂರಲು ರಾಹುಲ್‌ ಗಾಂಧಿ ಅವರಿಗೆ ಇಷ್ಟವಾಗುವುದಿಲ್ಲ. ನಾನು ಅವರಿಗೆ ಇದು ಸರಿ, ಇದು ತಪ್ಪು ಎಂದು ಹೇಳುತ್ತಿದೆ. ಅದು ಅವರಿಗೆ ಕಿರಿಕಿರಿಯಾಗುತ್ತಿತ್ತು. ತಾನು ನೆಹರೂ-ಗಾಂಧಿ ಕುಟುಂಬಕ್ಕೆ ಸೇರಿದವನು, ನನ್ನ ಕುಟುಂಬ ಪಕ್ಷಕ್ಕೆ ಎಲ್ಲವನ್ನೂ ಕೊಟ್ಟಿದೆ ಎಂಬ ಭಾವನೆ ಅವರಲ್ಲಿದೆ ಎಂದು ಆರೋಪಿಸಿದ್ದಾರೆ.

ಪಕ್ಷದಲ್ಲಿ ಅನೇಕ ನಾಯಕರು ಬೇಸರಗೊಂಡಿದ್ದರೂ ಅವರು ಅದನ್ನು ಬಹಿರಂಗಪಡಿಸುವುದಿಲ್ಲ. ಯಾಕೆಂದರೆ ಅವರ ಮಕ್ಕಳು, ಮೊಮ್ಮಕ್ಕಳಿಗೆ ಪಕ್ಷದಲ್ಲಿ ಭವಿಷ್ಯ ರೂಪಿಸುವ ಅನಿವಾರ್ಯತೆ ಇದೆ. ಹೀಗಾಗಿ ಅಪಮಾನ ಅನುಭವಿಸಿದರೂ ಅವರು ಪಕ್ಷದಲ್ಲೇ ಉಳಿದುಕೊಂಡಿದ್ದಾರೆ ಎಂದು ಶಕೀಲ್‌ ಅಭಿಪ್ರಾಯಪಟ್ಟಿದ್ದಾರೆ.ನಾನು ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಶಶಿ ತರೂರ್‌ ಅವರಿಗೆ ಮತ ಹಾಕಬೇಕೆಂದು ಬಯಸಿದ್ದೆ. ಆದರೆ, ರಾಹುಲ್‌ ಮತ್ತು ಸೋನಿಯಾ ಅವರ ನಿಷ್ಠರು ಮಲ್ಲಿಕಾರ್ಜುನ ಖರ್ಗೆ ಅವರ ಪರ ನಿಂತಿದ್ದರು. ಹೀಗಾಗಿ ನಾನೂ ಖರ್ಗೆ ಪರ ಮತಚಲಾಯಿಸಿದೆ. ಯಾಕೆಂದರೆ ನನ್ನ ಮತ ವ್ಯರ್ಥವಾಗುವುದು ನನಗೆ ಇಷ್ಟ ಇಲ್ಲ ಎಂದಿದ್ದಾರೆ ಶಕೀಲ್.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

2018ರಲ್ಲಿ ಸಿದ್ದು ಹೇಳಿದ್ದ ಭವಿಷ್ಯ ಏನಾಯ್ತು : ಹೊಸ ಭವಿಷ್ಯದ ನುಡಿದ ಎಚ್‌ಡಿಕೆ
2028ಕ್ಕೂ ಬಿಜೆಪಿ, ದಳ ಅಧಿಕಾರಕ್ಕೇರಲ್ಲ : ಸಿದ್ದರಾಮಯ್ಯ