
ಎಚ್.ಟಿ.ಮೋಹನ್ ಕುಮಾರ್
ಹಾಸನ(ಜ.23): ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ನಾಯಕರಿಂದ ಸೀಟು ಹಂಚಿಕೆಯ ಅಂತಿಮ ನಿರ್ಧಾರಹೊರಬೀಳುವಮೊದಲೇ ಹಾಸನದಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಘೋಷಿಸಿದ್ದು, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಮಾತ್ರ ಹೈಕಮಾಂಡ್‌ನತ್ತ ದೃಷ್ಟಿ ನೆಟ್ಟಿದ್ದಾರೆ. ಮೊಮ್ಮಗನಿಗಾಗಿ ಹಾಸನ ಕ್ಷೇತ್ರ ಬಿಟ್ಟು ಕೊಟ್ಟು ತುಮಕೂರಿಗೆ ಹೋಗಿ ಸೋಲುಂಡಿರುವ ಎಚ್.ಡಿ.ದೇವೇಗೌಡರೇ ಈ ಬಾರಿ ಹಾಸನ ದಿಂದ ಸ್ಪರ್ಧಿಸುತ್ತಾರೆ ಎನ್ನುವ ಭಾರೀ ನಿರೀಕ್ಷೆ ಸಾರ್ವಜನಿಕ ವಲಯ ಹಾಗೂ ಜೆಡಿಎಸ್ ಕಾರ್ಯಕರ್ತರಲ್ಲೂ ಇತ್ತು. ಆದರೆ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರೇ ಮುಂದಿನ ಲೋಕಸಭಾ ಚುನಾವಣೆ ಅಭ್ಯರ್ಥಿ ಎಂದು ಸ್ವತಃ ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡರೇ ಘೋಷಣೆ ಮಾಡಿಯಾಗಿದೆ. ಹಾಗಾಗಿ ಜೆಡಿಎಸ್‌ನೊಳಗೆ ಟಿಕೆಟ್ ಗಾಗಿ ಪೈಪೋಟಿಯ ಮಾತೇ ಉದ್ಭವಿಸುತ್ತಿಲ್ಲ.
ಆದರೆ, ಪ್ರಜ್ವಲ್ ಹೆಸರು ಘೋಷಣೆಯಾಗುತ್ತಿದ್ದಂತೆ ಜಿಲ್ಲಾ ರಾಜ್ಯಮಟ್ಟದ ಕೆಲ ಬಿಜೆಪಿ ನಾಯಕರು ಅದು ಅವರ ನಿರ್ಧಾರ. ಪ್ರಜ್ವಲ್ ಮೈತ್ರಿ ಒಕ್ಕೂಟದ ಒಮ್ಮತದ ಅಭ್ಯರ್ಥಿ ಅಲ್ಲ' ಎಂದು ಹೇಳಿರುವುದು ಕುತೂಹಲ ಮೂಡಿಸಿದೆ. ಹಾಗೆ ನೋಡಿದರೆ ಈ ಬಾರಿ ಜೆಡಿಎಸ್ ಜತೆಗಿನ ಮೈತ್ರಿಯಿಂದಾಗಿ ಜಿಲ್ಲಾ ದುಟ್ಟದ ಯಾವೊಬ್ಬ ಆಕಾಂಕ್ಷಿಯೂ ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಬಹಿರಂಗವಾಗಿ ಆಕಾಂಕ್ಷೆ ವ್ಯಕ್ತಪಡಿಸುತ್ತಿಲ್ಲ. ಆದರೆ ಉದ್ಯಮಿ ಕಿರಣ್ ಎಂಬುವವರು ಮಾತ್ರ ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರೆ.
ಚಾಮರಾಜನಗರ ಟಿಕೆಟ್‌ಗೆ ಬಿಜೆಪಿ, ಕಾಂಗ್ರೆಸ್‌ನಲ್ಲಿ ಪೈಪೋಟಿ: ಸಿದ್ದರಾಮಯ್ಯ ಪಾಲಿಗಿದು ಪ್ರತಿಷ್ಠೆಯ ಕ್ಷೇತ್ರ!
ಕಳೆದ ವಿಧಾನಸಭಾ ಚುನಾವಣೆ ವೇಳೆಯೇ ಲೋಕಸಭೆಗೆ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಹೆಸರು ಪ್ರಸ್ತಾಪವಾಗಿತ್ತು. ಅವರ ಹೆಸರೇ ಬಹುತೇಕ ಅಂತಿಮ ಎನ್ನುವ ಹಂತ ಎಂದು ಹೇಳಲಾಗಿತ್ತು. ಜೆಡಿಎಸ್ ಬಿಟ್ಟು ಬಿಜೆಪಿಗೆ ಬಂದ ನಂತರವೂ ಅವರಿಗೆ ವಿಧಾನಸಭೆಗೆ ಸ್ಪರ್ಧಿಸಲು ಟಿಕೆಟ್ ಸಿಗಲಿಲ್ಲ, ಆಗಲೂ ಎ.ಟಿ.ರಾಮಸ್ವಾಮಿ ಅವರು ಲೋಕಸಭಾ ಚುನಾವಣೆ ಟಿಕೆಟ್ ಪಡೆಯುವ ಒಪ್ಪಂದದ ಮೇಲೆಯೇ ಬಿಜೆಪಿಗೆ ಬಂದಿದ್ದಾರೆನ್ನುವ ಚರ್ಚೆಗಳು ನಡೆದಿದ್ದವು. ಆದರೆ, ಮೈತ್ರಿ ಕಾರಣಕ್ಕಾಗಿ ರಾಮಸ್ವಾಮಿ ಅವರೂ ಈವರೆಗೆ ತಾನು ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಎಲ್ಲೂ ಹೇಳಿಕೊಂಡಿಲ್ಲ.
'ಕೈ' ಟಿಕೆಟ್ ಕುತೂಹಲ:
ಹಾಸನದಲ್ಲಿ ಕಾಂಗ್ರೆಸ್ ಟಿಕೆಟ್ ಯಾರಿಗೆನ್ನುವುದು ತೀವ್ರ ಕುತೂಹಲ ಮೂಡಿಸಿದೆ. ಈ ಹಿಂದೆ ಹೊಳೆನರಸೀಪುರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆ ಎದುರಿಸಿದ ಬಾಗೂರು ಮಂಜೇಗೌಡ ಅವರು ಟಿಕೆಟ್‌ಗಾಗಿ ಬೇಡಿಕೆ ಮುಂದಿಟ್ಟಿದ್ದಾರೆ. ಇನ್ನು ರಾಜ್ಯ ಒಕ್ಕಲಿಗರ ಸಂಘದ ಮುಖಂಡ ಜತ್ತೇನಹಳ್ಳಿ ರಾಮಚಂದ್ರ ತಾನೂ ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಂಡು ಮಾಜಿ ಸಚಿವ ಬಿ.ಶಿವರಾಂ ಮುಂದಾಳತ್ವದಲ್ಲಿ ಈಗಾಗಲೇ ತಾಲೂಕುವಾರು ಕಾಂಗ್ರೆಸ್ ಕಾರ್ಯಕರ್ತರ ಸಭೆಗಳನ್ನು ಮಾಡಿದ್ದಾರೆ.
ಇವರಿಬ್ಬರ ಹೆಸರು ಕೇಳಿಬರುವುದಕ್ಕೂ ಮುನ್ನ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಿಂದ ಸ್ಪರ್ಧಿಸಿರೇವಣ್ಣ ಅವರ ಮುಂದೆ ಸಮೀಪದ ಅಂತರದಲ್ಲಿ ಸೋತಿದ್ದಮಾಜಿ ಸಂಸದ ಜಿ.ಪುಟ್ಟಸ್ವಾಮಿಗೌಡರ ಮೊಮ್ಮಗೆ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಹೆಸರೂ ಗಟ್ಟಿದನಿಯಲ್ಲಿ ಪ್ರಸ್ತಾಪ ವಾಗಿತ್ತು. ಹಾಗೆಯೇ ಅರಸೀಕೆರೆ ಶಾಸಕ ಕೆ. ಎಂ.ಶಿವಲಿಂಗೇಗೌಡರು ಕೂಡ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನುವ ಚರ್ಚೆಗಳು ನಡೆದಿದ್ದವು. ಆದರೆ, ಸ್ವತಃ ಶಿವಲಿಂಗೇಗೌಡರೇ ಇಂಥ ಚರ್ಚೆಗಳು ನಿರಾಧಾರ. ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಟಿಕೆಟ್ ಯಾರಿಗೆನ್ನುವ ಕುತೂಹಲ ಗರಿಗೆದರಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.