ಚನ್ನಪಟ್ಟಣ ಉಪಚುನಾವಣೆ: ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಯಾರು?

By Kannadaprabha News  |  First Published Jun 9, 2024, 4:34 PM IST

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಎಚ್.ಡಿ. ಕುಮಾರಸ್ವಾಮಿ ಚನ್ನಪಟ್ಟಣದ ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅನಿವಾರ್ಯ. ಅವರ ರಾಜೀನಾಮೆಯಿಂದ ತೆರವಾಗುವ ಚನ್ನಪಟ್ಟಣ ವಿಧಾಸಸಭಾ ಕ್ಷೇತ್ರ ಎನ್‌ಡಿಎ ಮಿತ್ರ ಪಕ್ಷಗಳಾದ ಜೆಡಿಎಸ್ ಅಥವಾ ಬಿಜೆಪಿ ಯಾರ ಪಾಲಾಗಲಿದೆ. ಅಭ್ಯರ್ಥಿ ಯಾರಾಗಬಹುದು ಎಂಬ ಚರ್ಚೆಗಳು ವ್ಯಾಪಕವಾಗಿದೆ.


ವಿಜಯ್ ಕೇಸರಿ

ಚನ್ನಪಟ್ಟಣ(ಜೂ.09):  ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೆ ಬೊಂಬೆನಾಡಿನಲ್ಲಿ ಉಪಚುನಾವಣೆ ಕುರಿತ ಚರ್ಚೆಗಳು ಗರಿಗೆದರಿವೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಕ್ಷೇತ್ರದ ಶಾಸಕರೂ ಆದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತೆರವು ಮಾಡುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಪ್ರಶ್ನೆ ಕ್ಷೇತ್ರದ ಜನರಲ್ಲಿ ಕುತೂಹಲ ಮೂಡಿಸಿದೆ.

Tap to resize

Latest Videos

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಎಚ್.ಡಿ. ಕುಮಾರಸ್ವಾಮಿ ಚನ್ನಪಟ್ಟಣದ ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅನಿವಾರ್ಯ. ಅವರ ರಾಜೀನಾಮೆಯಿಂದ ತೆರವಾಗುವ ಚನ್ನಪಟ್ಟಣ ವಿಧಾಸಸಭಾ ಕ್ಷೇತ್ರ ಎನ್‌ಡಿಎ ಮಿತ್ರ ಪಕ್ಷಗಳಾದ ಜೆಡಿಎಸ್ ಅಥವಾ ಬಿಜೆಪಿ ಯಾರ ಪಾಲಾಗಲಿದೆ. ಅಭ್ಯರ್ಥಿ ಯಾರಾಗಬಹುದು ಎಂಬ ಚರ್ಚೆಗಳು ವ್ಯಾಪಕವಾಗಿದೆ.

ಬೆಂಗಳೂರು ಗ್ರಾಮಾಂತರದಲ್ಲಿ ಡಾ.ಮಂಜುನಾಥ್ ಗೆದ್ದಿದ್ದಕ್ಕೆ ಮಲೆ ಮಾದಪ್ಪನಿಗೆ ಹರಕೆ ತೀರಿಸಿದ ಮುಸ್ಲಿಂ ವ್ಯಕ್ತಿ!

ಮಂಡ್ಯ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವ ಕುಮಾರಸ್ವಾಮಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಚನ್ನಪಟ್ಟಣದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದೆ. ಆ ನಂತರ ಆರು ತಿಂಗಳ ಒಳಗೆ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರಕ್ಕೆ ಉಪಚುನಾವಣೆ ನಡೆಸಬೇಕಿದೆ. ಆದರೆ, ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೆ ರಾಜಕೀಯ ಬೆಳವಣಿಗೆಗಳು ಆರಂಭಗೊಂಡಿವೆ.

ನಿಖಿಲ್ ಹೆಸರು ಮುನ್ನೆಲೆಗೆ:

ಬಿಜೆಪಿ ವರಿಷ್ಠರ ಮನವಿಗೆ ಒಪ್ಪಿದ ಕುಮಾರಸ್ವಾಮಿ ಚನ್ನಪಟ್ಟಣ ಕಾರ್ಯಕರ್ತರ ಮನವೊಲಿಸಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದು ಜಯಗಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಉಪಚುನಾವಣೆಯಲ್ಲಿ ಜೆಡಿಎಸ್‌ನಿಂದ ಕಣಕ್ಕೆ ಇಳಿಸಬೇಕು ಎಂಬುದು ಜೆಡಿಎಸ್ ಕಾರ್ಯಕರ್ತರ ಆಸೆಯಾಗಿದೆ. ಕಳೆದ ಎರಡು ಬಾರಿಯೂ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸಿರುವುದರಿಂದ ಕ್ಷೇತ್ರವನ್ನು ಜೆಡಿಎಸ್ ತೆಕ್ಕೆಯಲ್ಲಿಯೇ ಉಳಿಸಿಕೊಳ್ಳಬೇಕು ಎಂಬುದು ಬಹುತೇಕ ಜೆಡಿಎಸ್ ಕಾರ್ಯಕರ್ತರ ಒತ್ತಾಸೆಯಾಗಿದೆ.

ಸಿಪಿವೈ ಹೆಸರು ಮುಂಚೂಣಿಯಲ್ಲಿ:

ಇನ್ನು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಿಂದ ಡಾ.ಮಂಜುನಾಥ್ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿಸುವಲ್ಲಿ ಮಹತ್ವದ ಪಾತ್ರವನ್ನು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ವಹಿಸಿದ್ದರು. ಅವರ ಈ ತಂತ್ರಗಾರಿಕೆ ಫಲಿಸಿದ್ದು, ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಡಾ. ಮಂಜುನಾಥ್ ಗೆಲುವು ಸಾಧಿಸಿದ್ದಾರೆ. ಇನ್ನು ವಿಧಾನಪರಿಷತ್ ಸದಸ್ಯರಾಗಿದ್ದರೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯೋಗೇಶ್ವರ್ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಇದೀಗ ಕುಮಾರಸ್ವಾಮಿ ರಾಜೀನಾಮೆಯಿಂದ ಎದುರಾಗುವ ಉಪಚುನಾವಣೆಯ ಟಿಕೆಟ್ ಯೋಗೇಶ್ವರ್‌ಗೆ ಲಭಿಸಲಿದೆ ಎಂಬುದು ಬಿಜೆಪಿ ಕಾರ್ಯಕರ್ತರ ಅಭಿಪ್ರಾಯವಾಗಿದೆ.

ಸುರೇಶ್‌ಗೆ ಸೆಡ್ಡು ಹೊಡೆಯಲು ಯೋಗಿಯೇ ಸೂಕ್ತ:

ಲೋಕಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಡಿ.ಕೆ.ಸುರೇಶ್ ಉಪಚುನಾಣೆಯಲ್ಲಿ ಚನ್ನಪಟ್ಟಣದಿಂದ ಕಣಕ್ಕಿಳಿಯುವ ಎಲ್ಲಾ ಸಾಧ್ಯತೆಗಳು ಇದೆ. ಈ ಹಿನ್ನೆಲೆಯಲ್ಲಿ ಅವರಿಗೆ ಸೆಡ್ಡು ಹೊಡೆಯಬೇಕು ಎಂದರೆ ಯೋಗೇಶ್ವರ್ ಅವರನ್ನೇ ಕಣಕ್ಕಿಳಿಸಬೇಕು ಎಂಬ ಚರ್ಚೆಗಳು ನಡೆಯುತ್ತಿವೆ.

ಕ್ಷೇತ್ರದ ಟಿಕೆಟ್‌ಗೆ ಸಂಬಂಧಿಸಿದಂತೆ ಇನ್ನು ಯಾವುದೇ ಅಧಿಕೃತ ಚರ್ಚೆ ಆರಂಭವಾಗಿಲ್ಲ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗಲಿ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಆಗಲಿ ಈ ಕುರಿತು ತಮ್ಮ ನಿಲುವನ್ನು ಇನ್ನು ಪ್ರಕಟಿಸಿಲ್ಲ. ಆದರೂ, ಕ್ಷೇತ್ರದ ಜನತೆ ಹಾಗೂ ರಾಜಕೀಯ ಪಕ್ಷಗಳ ಪಡಸಾಲೆಯಲ್ಲಿ ಉಪಚುನಾವಣೆ ಕುರಿತ ಚರ್ಚೆಗಳು ಬಹಳ ಬಿರುಸಾಗಿಯೇ ನಡೆಯುತ್ತಿವೆ.

ಜೆಡಿಎಸ್‌ನಿಂದ ಯೋಗೇಶ್ವರ್ ಕಣಕ್ಕೆ !?

ವಿಧಾನಸಭೆ ಉಪಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್ ಜೆಡಿಎಸ್ ಚಿಹ್ನೆಯಡಿ ಕಣಕ್ಕಿಳಿಯಲಿದ್ದಾರೆ ಎಂಬುದೊಂದು ಚರ್ಚೆ ಕಳೆದ ಎರಡು ದಿನಗಳಿಂದ ಚನ್ನಪಟ್ಟಣದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರದಲ್ಲಿ ಅಹಿಂದ ಮತಗಳು ಗಣನೀಯ ಪ್ರಮಾಣದಲ್ಲಿದ್ದು, ನಿರ್ಣಾಯಕವೆನಿಸಿದೆ. ಯೋಗೇಶ್ವರ್ ಬಿಜೆಪಿಯಿಂದ ಸ್ಪರ್ಧಿಸಿದರೆ, ಅಹಿಂದ ಮತಗಳ ಕ್ರೋಢೀಕರಣ ಕಷ್ಟವಾಗಲಿದ್ದು, ಜೆಡಿಎಸ್ ಚಿಹ್ನೆಯಡಿ ಸ್ಪರ್ಧಿದರೆ ಅಹಿಂದ ಮತಗಳನ್ನು ಸೆಳೆಯುವುದು ಸಾಧ್ಯ ಎಂಬ ಮಾತುಗಳು ಕೇಳಿಬರುತ್ತಿವೆ.

ಇದಲ್ಲದೇ ಜೆಡಿಎಸ್ ಭದ್ರಕೋಟೆಯಾಗಿದ್ದ ರಾಮನಗರ ಜಿಲ್ಲೆಯಲ್ಲಿ ಈ ಬಾರಿ ಜೆಡಿಎಸ್ ಗೆಲುವು ಸಾಧಿಸಿರುವುದು ಚನ್ನಪಟ್ಟಣದಲ್ಲಿ ಮಾತ್ರ. ಕುಮಾರಸ್ವಾಮಿ ರಾಜೀನಾಮೆಯಿಂದ ಈ ಕ್ಷೇತ್ರವೂ ಜೆಡಿಎಸ್ ಕೈ ತಪ್ಪಿದರೆ, ಜಿಲ್ಲೆಯಲ್ಲಿ ಜೆಡಿಎಸ್ ಅಸ್ತಿತ್ವ ಕಳೆದುಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಯೋಗೇಶ್ವರ್ ಜೆಡಿಎಸ್ ಚಿಹ್ನೆಯಡಿ ಸ್ಪರ್ಧಿಸಿದರೆ ಅಹಿಂದ ಮತಗಳ ಕ್ರೋಢೀಕರಣದ ಜತೆಗೆ ಕ್ಷೇತ್ರ ಸಹ ಜೆಡಿಎಸ್ ತೆಕ್ಕೆಯಲ್ಲಿಯೇ ಉಳಿದುಕೊಳ್ಳಲಿದೆ ಎಂಬ ಸಲಹೆ ಜೆಡಿಎಸ್ ವರಿಷ್ಠರ ಮನದಲ್ಲಿದೆ ಎಂಬ ಮಾತುಗಳು ಹರಿದಾಡುತ್ತಿವೆ.

ಯೋಗೇಶ್ವರ್ ಒಪ್ಪುವ ಸಾಧ್ಯತೆ ಕಡಿಮೆ:

ಈಗಾಗಲೇ ಯೋಗೇಶ್ವರ್ ಬಿಜೆಪಿಯಲ್ಲಿ ಪ್ರಭಾವಿ ಮುಖಂಡರಾಗಿ ಗುರುತಿಸಿಕೊಂಡಿದ್ದಾರೆ. ಕುಮಾರಸ್ವಾಮಿ ಸರ್ಕಾರ ಕೆಡವಿ ಯಡಿಯೂರಪ್ಪ ಸರ್ಕಾರ ತರುವಲ್ಲಿ ಹಾಗೂ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಬಿಜೆಪಿಯಲ್ಲಿ ಸಾಕಷ್ಟು ವರ್ಚಸ್ವಿ ನಾಯಕ ಎನ್ನಿಸಿಕೊಂಡಿದ್ದಾರೆ. ಜೆಡಿಎಸ್ ಚಿಹ್ನೆಯಿಂದ ಸ್ಪರ್ಧಿಸಿದಲ್ಲಿ ಅದು ಅವರ ರಾಜಕೀಯ ಜೀವನಕ್ಕೆ ಹಿನ್ನಡೆಯಾಗಲಿದ್ದು, ಅವರು ಇದಕ್ಕೆ ಒಪ್ಪುವ ಸಾಧ್ಯತೆ ಕಡಿಮೆ ಎನ್ನುವ ವಾದ ಬಿಜೆಪಿ ಅಂಗಳದಿಂದ ಕೇಳಿಬರುತ್ತಿದೆ.

ಕುತೂಹಲ ಕೆರಳಿಸಿದ ನಿಖಿಲ್ ಸಿನಿಮಾ ಕ್ಷೇತ್ರದ ವಿದಾಯ!

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಿನಿಮಾ ಕ್ಷೇತ್ರಕ್ಕೆ ವಿದಾಯ ಹೇಳಿ ಪೂರ್ಣ ಪ್ರಮಾಣದಲ್ಲಿ ರಾಜಕೀಯದಲ್ಲಿ ತೊಡಗಿಸಿಕೊಳ್ಳುವ ಕುರಿತು ನೀಡಿರುವ ಹೇಳಿಕೆ ಸಾಕಷ್ಟು ಕುತೂಹಲ ಕೆರಳಿಸಿದೆ.
ಇನ್ನು ಮುಂದೆ ನಾನು ಯಾವುದೇ ಸಿನಿಮಾ ಒಪ್ಪಿಕೊಳ್ಳುವುದಿಲ್ಲ, ರಾಜ್ಯದಲ್ಲಿ ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ ಎಂದು ನಿಖಿಲ್ ಹೇಳಿಕೆ ನೀಡಿದ್ದು, ನಿಖಿಲ್ ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ಪರ್ಧಿಸುವ ಕುರಿತ ಚರ್ಚೆಗೆ ಗ್ರಾಸ ಒದಗಿಸಿದೆ. ಕುಮಾರಸ್ವಾಮಿ ರಾಷ್ಟ್ರ ರಾಜಕಾರಣದತ್ತ ತೆರಳಿದ್ದು, ರಾಜ್ಯದಲ್ಲಿ ಪಕ್ಷ ಸಂಘಟನೆಯ ನಿಟ್ಟಿನಲ್ಲಿ ನಿಖಿಲ್ ಸಿನಿಮಾ ಕ್ಷೇತ್ರಕ್ಕೆ ವಿದಾಯ ಹೇಳಿ, ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂಬ ವ್ಯಾಖ್ಯಾನಗಳು ಕೇಳಿಬರುತ್ತಿದೆ. ಒಟ್ಟಾರೆ ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬೆನ್ನೆಲ್ಲೆ ಬೊಂಬೆನಾಡಿನಲ್ಲಿ ಉಪಚುನಾವಣೆ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಕುತೂಹಲ ಮೂಡಿಸಿದೆ.

ಡಾ. ಮಂಜುನಾಥ್ ಒಳ್ಳೆಯ ವ್ಯಕ್ತಿ ಅಂತ ಜನ ಗೆಲ್ಲಿಸಿದ್ದಾರೆ, ಬಿಜೆಪಿಗೆ ಓಟ್ ಹಾಕಿಲ್ಲ: ಡಿ.ಕೆ.ಶಿವಕುಮಾರ್

ಚನ್ನಪಟ್ಟಣ ವಿಧಾನಸಭೆ ಚುನಾವಣೆಗೆ ಇನ್ನು ಆರು ತಿಂಗಳ ಸಮಯವಿದೆ. ಈಗಲೇ ಆ ವಿಚಾರ ಮಾತನಾಡುವುದು ಸೂಕ್ತವಲ್ಲ. ನಾನು ಹಾಗೂ ಯೋಗೇಶ್ವರ್ ಕುಳಿತು ಚರ್ಚಿಸಿ ಆ ಕುರಿತು ತೀರ್ಮಾನ ಕೈಗೊಳ್ಳುತ್ತೇವೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. 

ಚನ್ನಪಟ್ಟಣ ಕ್ಷೇತ್ರದಲ್ಲಿ ಅಭ್ಯರ್ಥಿ ಯಾರಾಗಬೇಕು ಎಂಬುದಕ್ಕಿಂತ ಕ್ಷೇತ್ರದಲ್ಲಿ ಮೈತ್ರಿ ಪಕ್ಷ ಗೆಲ್ಲುವುದು ಮುಖ್ಯ. ನಾನು ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ಪಕ್ಷ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.  

click me!