ತಮ್ಮ ಕೆಲಸ ಕಾರ್ಯಗಳಿಗಾಗಿ ಸರ್ಕಾರಿ ಕಚೇರಿಗೆ ಬರುವ ಸಾಮಾನ್ಯ ಜನರ ಕೆಲಸವನ್ನು ಮಾಡಿಕೊಡದೆ ವಿನಾಕಾರಣ ಅಲೆಸಿದರೆ ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದರು.
ಹಾಸನ (ನ.08): ತಮ್ಮ ಕೆಲಸ ಕಾರ್ಯಗಳಿಗಾಗಿ ಸರ್ಕಾರಿ ಕಚೇರಿಗೆ ಬರುವ ಸಾಮಾನ್ಯ ಜನರ ಕೆಲಸವನ್ನು ಮಾಡಿಕೊಡದೆ ವಿನಾಕಾರಣ ಅಲೆಸಿದರೆ ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದರು. ನಗರದ ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ನಾನು ಮೂರು ಕಾರ್ಯಕ್ರಮದ ಸಲುವಾಗಿ ಹಾಸನಕ್ಕೆ ಬಂದಿದ್ದೇನೆ. ಸಮಯ ಇದ್ದಿದ್ದರೆ ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಬೇಕಿತ್ತು.
ಆದರೆ ಸಮಯದ ಕೊರತೆ ಕಾರಣದಿಂದ ಬರಗಾಲದ ಬಗ್ಗೆ ಚರ್ಚೆ ಮಾಡೋಣ. ನಾನು ವಾಪಸ್ ಕಾರಿನಲ್ಲಿ ಹೋಗಬೇಕು. ಬುಧವಾರದಂದು ಡಿ.ಬಿ. ಚಂದ್ರೇಗೌಡರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಬೇಕು. ಹಾಸನಾಂಬೆ ಉತ್ಸವ ಆರಂಭವಾಗಿದೆ ನೀವು ಯಾವತ್ತಾದ್ರು ಬರಬೇಕು ಎಂದು ರಾಜಣ್ಣ ಹೇಳಿದ್ರು. ಜತೆಗೆ ಜಿಲ್ಲೆಯ ಪ್ರಗತಿ ಪರಿಶೀಲನೆ ನಡೆಸಲು ಆಗುತ್ತೆ ಎಂದು ಬಂದಿದ್ದೇನೆ’ ಎಂದು ಹೇಳಿದರು. ‘ರೇವಣ್ಣ ಕಂಡರೆ ಮೊದಲಿನಿಂದಲು ಪ್ರೀತಿ. ಅದು ಇವತ್ತಿಂದ ಅಲ್ಲ. ಅಷ್ಟೇ ಕೋಪವೂ ಇದೆ. ಅವರು ಮೊದಲಿನಿಂದಲೂ ನನಗೆ ಒಳ್ಳೆ ಸ್ನೇಹಿತ. ಸಭೆ ತಡವಾಗಿದ್ದಕ್ಕೆ ಸಭೆಯ ಕ್ಷಮೆ ಕೋರುತ್ತೇನೆ’ ಎಂದರು.
ಬಿಜೆಪಿ ಸರ್ಕಾರಗಳಿಂದ ರಾಜ್ಯ ಸಾಲದ ಸುಳಿಗೆ: ಸಚಿವ ರಾಮಲಿಂಗಾರೆಡ್ಡಿ
ಸಿಎಂ ಮಾತಿನ ನಡುವೆ ಪಕೋಡ ಹಿಡಿದು ಎದುರಿಗೆ ಬಂದ ಜಿಪಂ ಸಿಬ್ಬಂದಿ ಮೇಲೆ ಸಿಎಂ ರೇಗಿದ ಪ್ರಸಂಗ ನಡೆಯಿತು. ‘ಏಯ್ ಈಗ ಊಟ ಮಾಡಿ ಬಂದಿದ್ದೀನಿ, ಇದನ್ನು ನಿಂಗೆ ತರೋಕೆ ಹೇಳಿದ್ದು ಯಾರು? ಹೋಗು’ ಎಂದು ಗದರಿದರು. ‘ಸಿದ್ದರಾಮಯ್ಯ ಅವರನ್ನು ನಾಸ್ತಿಕರು ಅಂತಾರೆ. ರೇವಣ್ಣ ಅವರನ್ನು ದೊಡ್ಡ ಆಸ್ತಿಕರು ಅಂತಾರೆ. ಆದರೆ ಆಸ್ತಿಕರು ನಾಸ್ತಿಕರ ನಡುವೆ ಸಮನ್ಚಯ ಕಾಪಾಡುವಂತಹ ಬುದ್ದಿವಂತಿಕೆ ಇದೆ. ಹಾಸನಾಂಬೆ ದರ್ಶನಕ್ಕೆ ಬಂದ ಏಕೈಕ ಸಿಎಂ ಎಂಬ ಮಾತಿದೆ. ಹಾಸನಕ್ಕೆ ಸಿಎಂ ಆಗಿ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಬಂದಿದ್ದಾರೆ’ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಸಭೆಯಲ್ಲಿ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ ಹೊಗಳಿದರು.
‘ಅಧಿಕಾರಿಗಳು ನಮ್ಮ ಸರ್ಕಾರದ ಉದ್ದೇಶ ಅರಿತು ಕೆಲಸ ಮಾಡಬೇಕು. ನಾವು ಬಡವರ ಪರವಾಗಿ ಸ್ಪಂದನೆಯಿಂದ ಕೆಲಸ ಮಾಡಬೇಕು. ಜನರು ಸಮಸ್ಯೆ ತಂದಾಗ ನಿರ್ಲಕ್ಷ್ಯ ಮಾಡಬಾರದು. ಸಭೆಯ ಆರಂಭದಲ್ಲಿ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು. ಜನರು ಬಂದಾಗ ಸಮಸ್ಯೆ ಆಲಿಸಿ ಬಗೆಹರಿಸಿ. ಆಗದಿದ್ದರೆ ಯಾಕಾಗಿ ಆಗಲ್ಲ ಎಂದು ತಿಳಿ ಹೇಳಿ. ಅವರು ಅರ್ಜಿಕೊಟ್ಟರೆ ಸ್ವೀಕೃತಿ ಕೊಡಬೇಕು. ನಾನು ಬೆಂಗಳೂರಿನಲ್ಲಿ ಇದ್ದಾಗ ಜನಸಂಪರ್ಕ ಸಭೆ ಮಾಡ್ತೇನೆ. ಸಣ್ಣ ಪುಟ್ಟ ಸಮಸ್ಯೆ ಇಟ್ಟುಕೊಂಡು ಜನರು ನನ್ನ ಬಳಿ ಬರ್ತಾರೆ. ಹಾಗಾಗಿ ನಮ್ಮ ಉಸ್ತುವಾರಿ ಸಚಿವರು, ಅದಿಕಾರಿಗಳು ಕೂಡ ಜನ ಸಂಪರ್ಕ ಸಭೆ ಮಾಡಿ ಜನರ ಸಮಸ್ಯೆ ಬಗೆಹರಿಸಿ ಎಂದು ಹೇಳಿದ್ದೇನೆ. ಅನಗತ್ಯವಾಗಿ ಜನರನ್ನ ಅಲೆಯಿಸುವುದು ಗೊತ್ತಾದರೆ ಕಠಿಣ ಕ್ರಮ ಗ್ಯಾರಂಟಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಎಚ್ಚರಿಸಿದರು.
ರಾಜಣ್ಣ ಟಫ್ ಜಿಲ್ಲಾ ಮಂತ್ರಿಯಾಗಿದ್ದು, ಅಧಿಕಾರಿಗಳಿಂದ ಹೇಗೆ ಕೆಲಸ ಮಾಡಿಸಬೇಕು ಎಂದು ಅವರಿಗೆ ಗೊತ್ತಿದೆ. ಪ್ರಜಾಪ್ರಭುತ್ವ ಯಶಸ್ವಿ ಆಗಬೇಕಾದರೆ ಜನರ ಸಹಭಾಗಿತ್ವ ಇರಬೇಕು. ಜನರ ಕೆಲಸ ಮಾಡದೆ ಅಲೆಸೋದು ಕೂಡ ಭ್ರಷ್ಟಾಚಾರಕ್ಕೆ ಸಮ. ಭ್ರಷ್ಟಾಚಾರದ ಮೂಲವೇ ಅದು ಎಂದ ಸಿಎಂ. ಜನರ ಕೆಲಸ ಮಾಡೋದು ನಿಮ್ಮ ಕರ್ತವ್ಯ ಹಾಗಾಗಿ ಜನರ ಕೆಲಸ ಮಾಡಿ ಎಂದರು. ಜಿಲ್ಲೆಯಲ್ಲಿ ಗೃಹಲಕ್ಷ್ಮಿಯೋಜನೆ ಬಗ್ಗೆ ಮಾಹಿತಿ ಕೇಳಿದ ಸಿದ್ದರಾಮಯ್ಯ, ಏಕೆ ಎಲ್ಲಾ ಫಲಾನುಭವಿಗಳಿಗೆ ಹಣ ತಲುಪಿಲ್ಲ. ಏಕೆ ಜಿಲ್ಲೆಯ ಮೂರು ತಾಲ್ಲೂಕಿನಲ್ಲಿ ಶೇಕಡ ೯೦ ಕ್ಕಿಂತ ಕಡಿಮೆ ಆಗಿದೆ.
ವರ್ಷಕ್ಕೊಮ್ಮೆ ತೆರೆವ ಹಾಸನಾಂಬೆ ದೇಗುಲದಲ್ಲಿ ನ.14 ವರೆಗೆ ದರ್ಶನ
ಡಿಸಿ ಸಿಇಒ ಜತೆ ಕೂತು ಮಾತಾಡಿ ಎಲ್ಲರ ಖಾತೆಗೆ ಹಣ ಹೋಗುವಂತೆ ಮಾಡಿ ಎಂದು ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ, ಸಂಸದ ಪ್ರಜ್ಚಲ್ ರೇವಣ್ಣ, ಶಾಸಕರಾದ ಎಚ್.ಡಿ. ರೇವಣ್ಣ, ಎಚ್.ಪಿ. ಸ್ವರೂಪ್, ಕೆ.ಎಂ. ಶಿವಲಿಂಗೇಗೌಡ, ಎ ಮಂಜು, ಸಿ.ಎನ್. ಬಾಲಕೃಷ್ಣ, ಎಚ್.ಕೆ. ಸುರೇಶ್, ಸಿಮೆಂಟ್ ಮಂಜು ಹಾಗೂ ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಎಸ್ಪಿ ಮಹಮ್ಮದ್ ಸುಜೀತಾ, ಜಿಪಂ ಸಿಇಓ ಪೂರ್ಣಿಮ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಬಾಗಿಯಾಗಿದ್ದರು.