ಪಕ್ಷ ಯಾವುದೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ನಾನು ಬದ್ಧವಾಗಿರುತ್ತೇನೆ ಎಂದು ಚನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.
ಚನ್ನಗಿರಿ (ಮಾ.08): ಪಕ್ಷ ಯಾವುದೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ನಾನು ಬದ್ಧವಾಗಿರುತ್ತೇನೆ ಎಂದು ಚನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು. ಇವರಿಗೆ ಮಂಗಳವಾರ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದ್ದು, ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ಬಂದಿರುವ ಆರೋಪದಿಂದ ಬಿಜೆಪಿ ಪಕ್ಷ ನನ್ನ ಮೇಲೆ ಶಿಸ್ತುಕ್ರಮ ಜರುಗಿಸಲಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದೆ. ಪಕ್ಷದ ಹೈಕಮಾಂಡ್ ಯಾವುದೇ ಶಿಸ್ತುಕ್ರಮ ಜರುಗಿಸಿದರೂ ಅದನ್ನು ಸ್ವೀಕರಿಸಿ ಆರೋಪ ಮುಕ್ತನಾಗಿ ಬಂದು ಮತ್ತೆ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಹೇಳಿದರು.
ಬಿಜೆಪಿ ಪಕ್ಷ ನನಗೆ ಎರಡು ಬಾರಿ ಟಿಕೇಟ್ ನೀಡಿ ನನ್ನನ್ನು ಶಾಸಕನನ್ನಾಗಿ ಮಾಡಿದ್ದು, ಮತ್ತೊಮ್ಮೆ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬೇಕು ಎನ್ನುವುದು ನನ್ನ ಉದ್ದೇಶವಾಗಿದೆ. ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಬಂದ ತಕ್ಷಣ ಪಕ್ಷಕ್ಕೆ ಮುಜುಗರ ಆಗಬಾರದು ಎಂಬ ಉದ್ದೇಶದಿಂದ ತಕ್ಷಣವೇ ಕೆಎಸ್‌ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದು ಪಕ್ಷದ ವರಿಷ್ಠರು ಯಾವುದೇ ತೀರ್ಮಾನವನ್ನು ಕೈಗೊಂಡರು ನಾನು ಸ್ವಾಗತಿಸುತ್ತೇನೆ ಎಂದು ತಿಳಿಸಿದರು.
ಮನೆಯಲ್ಲಿ ಸಿಕ್ಕಿದ್ದು ನಮ್ಮದೇ ಹಣ, ದಾಖಲೆ ಇದೆ: ಮಾಡಾಳು ವಿರೂಪಾಕ್ಷಪ್ಪ
ಬೆಂಗಳೂರಿನ ನನ್ನ ಕಚೇರಿಯಲ್ಲಿ ನನ್ನ ಮಗ ಪ್ರಶಾಂತ್ ಇದ್ದ ಸಂದರ್ಭದಲ್ಲಿ ಯಾರೋ ಅಪರಿಚಿತ ವ್ಯಕ್ತಿ ಬಂದು ಹಣವನ್ನು ಟೇಬಲ್ ಮೇಲೆ ಇಟ್ಟು ಪರಾರಿಯಾಗಿದ್ದು, ಅ ಸಮಯದಲ್ಲಿ ಬಂದ ಲೋಕಾಯುಕ್ತ ಅಧಿಕಾರಿಗಳು ನನ್ನ ಮಗನ ಕೈಯನ್ನು ಹಣದ ಮೇಲೆ ಇರಿಸಿ, ಮಗ ಪ್ರಶಾಂತ್‌ನನ್ನು ಬಂಧಿಸಿರುವುದನ್ನು ನಾನು ಮಾಧ್ಯಮಗಳ ಮೂಲಕ ನೋಡಿದ್ದೇನೆ. ಇದು ವ್ಯವಸ್ಥಿತವಾದ ಸಂಚಾಗಿದೆ ಎಂದು ಹೇಳಿದರು. ದಾವಣಗೆರೆಯ ಸಂಸದರು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉಪ್ಪು ತಿಂದವನು ನೀರು ಕುಡಿಯಬೇಕು ಎಂದು ಹೇಳಿದ್ದು, ನನ್ನ ರಾಜಕೀಯ ಜೀವನದಲ್ಲಿ ಇದುವರೆಗೂ ಒಂದು ರುಪಾಯಿ ಭ್ರಷ್ಟಾಚಾರ ಮಾಡಿರುವವನು ನಾನಲ್ಲ ಸಂಸದರು ಎಷ್ಟುಬಾರಿ ಉಪ್ಪು ತಿಂದು ನೀರು ಕುಡಿದಿದ್ದಾರೆ ಎಂಬುದು ಜನತೆಗೆ ಗೊತ್ತಿದೆ ಎಂದು ತಿರುಗೇಟು ನೀಡಿದರು.
ನಾನು ಕೆಎಸ್‌ಡಿಎಲ್ ನ ಅಧ್ಯಕ್ಷನಾಗುವ ಮೊದಲು ಸಂಸ್ಥೆಯು ವಾರ್ಷಿಕ 750 ಕೋಟಿ ವ್ಯವಹಾರ ನಡೆಸಿ 40 ಕೋಟಿ ಲಾಭಾಂಶವನ್ನು ಹೊಂದಿತ್ತು. ನಾನು ಈ ಸಂಸ್ಥೆಯ ಅಧ್ಯಕ್ಷ ನಾದಮೇಲೆ 1350 ಕೋಟಿ ವ್ಯವಹಾರ ನಡೆಸಿ 240 ಕೋಟಿ ಲಾಭಾಂಶವನ್ನು ಮಾಡಿದ್ದು, ಇದರಿಂದ ಪಾರದರ್ಶಕವಾದ ಆಡಳಿತ ನಡೆಸುತ್ತಿರುವುದು ತೋರುತ್ತಿದೆ ಎಂದರು. ಕೆಎಸ್‌ಡಿಎಲ್ ನಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಅಧಿಕಾರಿಗಳು ದಕ್ಷ ಅಧಿಕಾರಿಗಳಾಗಿದ್ದು, ಕಾರ್ಖಾನೆಗೆ ಬರುವ ಕಚ್ಚಾ ವಸ್ತುಗಳು ಕಳಪೆಯಾಗಿದ್ದರೆ ಕೆಎಸ್‌ಡಿಎಲ್ ನ ಉತ್ಪನ್ನಗಳು ಕಳಪೆಯಾಗಿ ಇಷ್ಟೊಂದು ಲಾಭಾಂಶ ಬರಲು ಸಾಧ್ಯವಾಗುತ್ತಿರಲಿಲ್ಲ.
ಶಾಸಕ ಮಾಡಾಳು ವಿರೂಪಾಕ್ಷಪ್ಪಗೆ ಜಾಮೀನು: ವಿವಾದದ ವಿಜಯೋತ್ಸವ!
ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟಾಚಾರ ನಡೆದಿರುವ ಬಗ್ಗೆ ಯಾವ ಸಮಯದಲ್ಲಾದರೂ ತನಿಖೆಗೆ ಕರೆದರೆ ನಾನು ಮತ್ತು ಕೆಎಸ್‌ಡಿಎಲ್ ನ ಅಧಿಕಾರಿಗಳು ಸಂಪೂರ್ಣವಾಗಿ ಸಹಕಾರ ನೀಡುತ್ತೇವೆ ಎಂದರು. ಮಾಡಾಳು ವಿರೂಪಾಕ್ಷಪ್ಪಗೆ ಮಂಗಳವಾರ ಹೈಕೋರ್ಟ್ ಮಧ್ಯಂತರ ಜಾಮೀನು ನೀಡುತ್ತಿದ್ದತೆಯೇ ಶಾಸಕರ ಅಭಿಮಾನಿಗಳು ತಾಲೂಕಿನ ಚನ್ನೇಶಪುರ ಗ್ರಾಮದಲ್ಲಿರುವ ಶಾಸಕ ಮಾಡಾಳು ವಿರೂಪಾಕ್ಷಪ್ಪ ನವರ ನಿವಾಸದ ಮುಂದೆ ಜಮಾವಣೆಗೊಂಡು ಶಾಸಕ ವಿರೂಪಾಕ್ಷಪ್ಪ ನವರ ಪರ ಜಯ ಘೋಷಗಳನ್ನು ಕೂಗುತ್ತಾ ಸಂಭ್ರಮಿಸಿದರು.