ರಾಜ್ಯದ ಹಿರಿಯ ಅನುಭವಿ ಶಾಸಕ ಆರ್.ವಿ. ದೇಶಪಾಂಡೆ ಅವರ ಕ್ಷೇತ್ರದಲ್ಲಿ ಸಮೃದ್ಧಿಯಿದೆ, ಇಲ್ಲಿ ರಾಜ್ಯ ಸರ್ಕಾರದ ಜನಪರ ಯೋಜನೆಗಳು ಅಭಿವೃದ್ಧಿ ಕಾಮಗಾರಿಗಳು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮೆಚ್ಚುಗೆ ವ್ಯಕ್ತಪಡಿಸಿದರು.
ಹಳಿಯಾಳ (ಮಾ.02): ರಾಜ್ಯದ ಹಿರಿಯ ಅನುಭವಿ ಶಾಸಕ ಆರ್.ವಿ. ದೇಶಪಾಂಡೆ ಅವರ ಕ್ಷೇತ್ರದಲ್ಲಿ ಸಮೃದ್ಧಿಯಿದೆ, ಇಲ್ಲಿ ರಾಜ್ಯ ಸರ್ಕಾರದ ಜನಪರ ಯೋಜನೆಗಳು ಅಭಿವೃದ್ಧಿ ಕಾಮಗಾರಿಗಳು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಆನಂತರ ಹಳಿಯಾಳ ಕ್ಷೇತ್ರಕ್ಕೆ ಮೊದಲ ಬಾರಿಗೆ ಪದಾರ್ಪಣೆ ಮಾಡಿದ ಅವರು ಶುಕ್ರವಾರ ತಾಲೂಕು ಆಡಳಿತ ಸೌಧದ ಸಭಾಭವನದಲ್ಲಿ ಆಯೋಜಿಸಿದ ಹಳಿಯಾಳ ಮತ್ತು ದಾಂಡೇಲಿ ತಾಲೂಕು ಬರ ನಿರ್ವಹಣೆ ಮತ್ತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಚಿವರಾದ ಮೇಲೆ ಹಳಿಯಾಳ ಕ್ಷೇತ್ರಕ್ಕೆ ಆಗಮಿಸದೇ ಇರುವ ಬಗ್ಗೆ ತಮ್ಮ ವಿರುದ್ಧ ಕೇಳಿ ಬಂದ ಆರೋಪಗಳಿಗೆ ಸಭೆಯ ಆರಂಭದಲ್ಲಿ ಸ್ಪಷನೆ ನೀಡಿದ ಸಚಿವ ವೈದ್ಯರು ಹಳಿಯಾಳ ಕ್ಷೇತ್ರದಲ್ಲಿ ಸರ್ಕಾರಿ ಯೋಜನೆಗಳು ಪ್ರತಿಶತಃ ಜಾರಿಯಾಗುತ್ತವೆ ಹಾಗೂ ಎಲ್ಲಕ್ಕಿಂತ ಮೊದಲು ಕಾರ್ಯಗತಗೊಳ್ಳುತ್ತವೆ. ಹೀಗಿರುವಾಗ ಆಡಳಿತದ ಅಪಾರ ಅನುಭವ ಹೊಂದಿರುವ ಹಿರಿಯ ನಾಯಕ ದೇಶಪಾಂಡೆ ಅವರ ಹಳಿಯಾಳ ಕ್ಷೇತ್ರಕ್ಕೆ ಬಂದು ನಾನೇನು ಮಾಡಬೇಕು ಹೇಳಿ? ಇಲ್ಲಿ ಎಲ್ಲವೋ ಒಕೆ ಇರುವುದರಿಂದ ನಾನು ಹಳಿಯಾಳಕ್ಕೆ ಕೊನೆಗೆ ಬಂದಿದ್ದೇನೆ ಎಂದರು. ಸಭೆಯ ಕೊನೆಯಲ್ಲಿ ಪ್ರತಿಕ್ರಿಯಿಸಿದ ದೇಶಪಾಂಡೆ, ಜಿಲ್ಲಾ ಉಸ್ತುವಾರಿ ಸಚಿವರು ಗುರುವಾರ ಬೆಂಗಳೂರಿನಲ್ಲಿ ಸಚಿವ ಸಂಪುಟದ ಸಭೆಯಲ್ಲಿ ಭಾಗಿಯಾಗಿ, ಶುಕ್ರವಾರ ಹಳಿಯಾಳ ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆಯನ್ನು ಅತ್ಯುತ್ತಮವಾಗಿ ನಡೆಸಿದ್ದಾರೆ ಎಂದರು.
ಜಾತಿಗಣತಿ ವರದಿ ಅತ್ಯಂತ ಅವೈಜ್ಞಾನಿಕ: ಮಾಜಿ ಶಾಸಕ ಸೋಮಶೇಖರ ರೆಡ್ಡಿ
ಹಾಲಿ ಮತ್ತು ಮಾಜಿಗಳ ಜುಗಲ್ಬಂದಿ: ಹಿರಿಯ ಶಾಸಕ ದೇಶಪಾಂಡೆ ಉಪಸ್ಥಿತಿಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ಅತ್ಯಂತ ಶಾಂತಚಿತ್ತದಿಂದ ನಡೆಸಿದ ಸಚಿವ ವೈದ್ಯರು, ಮಧ್ಯೆ ಮಧ್ಯೆ ಶಾಸಕ ದೇಶಪಾಂಡೆ ಅವರು ನೀಡುತ್ತಿದ್ದ ಆಡಳಿತಾತ್ಮಕ ಸಲಹೆಗಳನ್ನು ಅಷ್ಟೇ ಏಕಾಗ್ರತೆಯಿಂದ ಆಲಿಸುತ್ತ ಅಧಿಕಾರಿಗಳಿಗೆ ಸೂಕ್ತ ಸಲಹೆಗಳನ್ನು ನೀಡಿದರು. ಹಿರಿಯ ಶಾಸಕ ದೇಶಪಾಂಡೆಯವರು ತಮ್ಮ ಎಂದಿನ ಗತ್ತಿನಲ್ಲಿಯೇ ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ಬೆವರಿಳಿಸುತ್ತಾ, ಅಧಿಕಾರಿಗಳು ತೋರುವ ಅಸಡ್ಡೆ ಧೋರಣೆಯನ್ನು ದಾಖಲೆ ಸಮೇತ ತೆರೆದಿಟ್ಟು ತಮ್ಮ ಆಡಳಿತ ಅನುಭವದ ಹಿರಿತನವನ್ನು ತೋರಿಸಿದರು.
ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವ ವೈದ್ಯ ಸಾರ್ವಜನಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾರ್ಗೋಪಾಯಗಳನ್ನು ಕಂಡು ಹಿಡಿಯಬೇಕು. ಲೋಕಸಭಾ ಚುನಾವಣೆ ಘೋಷಣೆಯಾಗುವುದರಿಂದ ಆದಷ್ಟು ಬೇಗ ಎಲ್ಲ ಅಭಿವೃದ್ಧಿ ಕಾಮಗಾರಿಗಳ ಯೋಜನೆಗಳ ಆಡಳಿತಾತ್ಮಕ ಕಾರ್ಯವನ್ನು ಮುಕ್ತಾಯಗೊಳಿಸಲು ಕರೆ ನೀಡಿದರು. ಪಂಚ ಗ್ಯಾರಂಟಿಗಳ ಪ್ರಗತಿ ವರದಿ ಕೇಳಿ ಹರ್ಷ ವ್ಯಕ್ತಪಡಿಸಿದ ಸಚಿವರು, ಈ ಗ್ಯಾರಂಟಿಗಳು ನಮ್ಮನ್ನು ಮುಂಬರುವ ಪರೀಕ್ಷೆಯಲ್ಲಿ ಪಾಸು ಮಾಡಬೇಕಲ್ಲವೇ ಎಂದು ದೇಶಪಾಂಡೆ ಅವರೊಂದಿಗೆ ಮುಗುಳ್ನಗುತ್ತಾ ಪ್ರಶ್ನಿಸಿದರು.
ಕೇಂದ್ರ ಸರ್ಕಾರದ ಯೋಜನೆ ಜನರಿಗೆ ತಿಳಿಸಿ: ಮಾಜಿ ಸಚಿವ ಬಿ.ಸಿ.ಪಾಟೀಲ್
ಅದಕ್ಕೆ ದೇಶಪಾಂಡೆ ಅವರು ನಾವು ಚುನಾವಣೆಯ ಸಮಯದಲ್ಲಿ ನೀಡಿದ ಆಶ್ವಾಸನೆಯಂತೆ ಎಲ್ಲ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ. ಈ ಗ್ಯಾರಂಟಿ ಯೋಜನೆಯ ಸದುಪಯೋಗವು ಆಗುತ್ತಿರುವುದು ಕಂಡು ಬರುತ್ತಿದೆ. ನಮ್ಮ ಸರ್ಕಾರವನ್ನು ಮುಂಬರುವ ಚುನಾವಣೆಯಲ್ಲಿ ಉತ್ತೀರ್ಣಗೊಳಿಸುವ ಜವಾಬ್ದಾರಿ ಜನರದ್ದು ಎಂದರು. ಜಿಪಂ ಸಿಇಒ ಈಶ್ವರಕುಮಾರ ಕಾಂದೂ, ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಹಳಿಯಾಳ ಡಿಸಿಎಫ್ ಪ್ರಶಾಂತ ಕೆ.ಸಿ., ಹಳಿಯಾಳ ಮತ್ತು ದಾಂಡೇಲಿ ತಹಸೀಲ್ದಾರರು, ತಾಪಂ ಇಒಗಳು ಇದ್ದರು.