ಲೋಕಸಭಾ ಚುನಾವಣೆ 2024: ಮೋದಿ ಹೆಸರಲ್ಲಿ ಮತ ಕೇಳಿದರೆ ತಪ್ಪೇನು?, ತೇಜಸ್ವಿ ಸೂರ್ಯ

By Kannadaprabha NewsFirst Published Apr 20, 2024, 9:44 AM IST
Highlights

ನಮ್ಮ ಕ್ಷೇತ್ರದ ಚುನಾವಣೆ ಮುಗಿದ ಮೇಲೆ ಎಲ್ಲ ಕಡೆ ಪ್ರಚಾರಕ್ಕೆ ಹೋಗುತ್ತೇನೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೂ ಹೋಗುತ್ತಿದ್ದೇನೆ. ಚೆನ್ನೈ ಸೇರಿದಂತೆ ಹಲವೆಡೆ ಹೋಗಿದ್ದೇನೆ. ಯುವ ಮೋರ್ಚಾ ಬಿಜೆಪಿಯ ಬೆನ್ನೆಲುಬಾಗಿದ್ದು, ಯುವಕರಲ್ಲಿ ಪಕ್ಷದ ಸಿದ್ಧಾಂತವನ್ನು ಪಸರಿಸುವಲ್ಲಿ ನಿರ್ಣಾಯಕವಾಗಿದೆ: ತೇಜಸ್ವಿ ಸೂರ್ಯ 

ಪ್ರಭುಸ್ವಾಮಿ ನಟೇಕರ್‌

ಬೆಂಗಳೂರು(ಏ.20):  ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ತೇಜಸ್ವಿ ಸೂರ್ಯ ಇದೀಗ ಎರಡನೇ ಬಾರಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಅಖಾಡಕ್ಕಿಳಿದಿದ್ದಾರೆ. ಬಿಜೆಪಿಯ ಭದ್ರಕೋಟೆಯಾಗಿರುವ ಈ ಕ್ಷೇತ್ರದಲ್ಲಿ ಬಾವುಟ ಹಾರಿಸಲು ಕಾಂಗ್ರೆಸ್‌ ದಶಕಗಳಿಂದ ಸತತ ಪ್ರಯತ್ನ ನಡೆಸುತ್ತಿದ್ದರೂ ಯಶಸ್ವಿಯಾಗಿಲ್ಲ. ಕಳೆದ ಬಾರಿ ದಿಢೀರನೆ ಚುನಾವಣಾ ರಾಜಕಾರಣಕ್ಕೆ ಪ್ರವೇಶಿಸಿ ಯಶಸ್ಸು ಗಳಿಸಿದ ತೇಜಸ್ವಿ ಸೂರ್ಯ ಈ ಐದು ವರ್ಷಗಳಲ್ಲಿ ಜನತೆಯ ನಾಡಿಮಿಡಿತ ಅರ್ಥಮಾಡಿಕೊಂಡು ರಾಜಕೀಯ ಮಾಡುವಲ್ಲಿ ನಿರತರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳೊಂದಿಗೆ ಕ್ಷೇತ್ರದಲ್ಲಿ ತಾವು ಮಾಡಿರುವ ಕೆಲಸಗಳನ್ನು ಮುಂದಿಟ್ಟು ಮತ ಯಾಚಿಸುತ್ತಿದ್ದಾರೆ. ‘ಕನ್ನಡಪ್ರಭ’ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

*ಎರಡನೇ ಬಾರಿಗೆ ಲೋಕಸಭಾ ಚುನಾವಣೆ ಎದುರಿಸುತ್ತಿದ್ದೀರಿ. ಕಳೆದ ಬಾರಿಗಿಂತ ಈ ಬಾರಿ ಭಿನ್ನತೆ ಏನಿದೆ?

-ಮೊದಲ ಬಾರಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧಿಸಿದಾಗ ಪ್ರಚಾರಕ್ಕೆ ಕಡಿಮೆ ಸಮಯ ಸಿಕ್ಕಿತ್ತು. ಅಭ್ಯರ್ಥಿಯಾಗಿ ಪ್ರಚಾರ ಕಾರ್ಯದಲ್ಲಿ ಯಾವ ರೀತಿ ತೊಡಗಿಸಿಕೊಳ್ಳಬೇಕು ಎಂಬ ಅನುಭವ ಇರಲಿಲ್ಲ. ಆದರೆ, ಈಗ ಅನುಭವ ಇದೆ. ಕ್ಷೇತ್ರದಲ್ಲಿ ಓಡಾಡಿರುವ ಕಾರಣ ಜನಸಂಪರ್ಕ ಹೆಚ್ಚಾಗಿದೆ. ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳಿವೆ. ಇದೆಲ್ಲದರ ಜತೆಗೆ ಕಳೆದ ಐದು ವರ್ಷಗಳಲ್ಲಿ ಮಾಡಿರುವ ಕೆಲಸ ಕಣ್ಣ ಮುಂದಿದೆ. ಕೈಗೊಂಡಿರುವ ಕೆಲಸಗಳು ಹೇಳಿಕೊಳ್ಳುವಂತಿವೆ. ಕಳೆದ ಬಾರಿ ಕೆಲಸ ಮಾಡಲು ಅವಕಾಶ ಕೊಡಿ ಎಂದು ಕೇಳಿದ್ದೆ. ಈ ಬಾರಿ ಅವಕಾಶ ಕೊಟ್ಟಿದ್ದೀರಿ, ಇದನ್ನು ಮಾಡಿದ್ದೇವೆ. ಇನ್ನು ಐದು ವರ್ಷ ಕೊಡಿ, ಇನ್ನಷ್ಟು ಮಾಡುತ್ತೇವೆ ಎಂದು ಕೇಳುತ್ತಿದ್ದೇನೆ.

ತೇಜಸ್ವಿ ಸೂರ್ಯ ವಿರುದ್ಧ ‘ಸೂರ್ಯ ಬಂಡಲ್‌ ಬ್ಯಾಂಕ್‌’ ಕಾಂಗ್ರೆಸ್‌ ಅಭಿಯಾನ

*ನೀವು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರೂ ಹೌದು. ಆದರೆ ಕ್ಷೇತ್ರ ಬಿಟ್ಟು ಬೇರೆ ಎಲ್ಲಿಯೂ ಪ್ರಚಾರಕ್ಕೆ ಹೋಗುತ್ತಿಲ್ಲವಲ್ಲ?

-ನಮ್ಮ ಕ್ಷೇತ್ರದ ಚುನಾವಣೆ ಮುಗಿದ ಮೇಲೆ ಎಲ್ಲ ಕಡೆ ಪ್ರಚಾರಕ್ಕೆ ಹೋಗುತ್ತೇನೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೂ ಹೋಗುತ್ತಿದ್ದೇನೆ. ಚೆನ್ನೈ ಸೇರಿದಂತೆ ಹಲವೆಡೆ ಹೋಗಿದ್ದೇನೆ. ಯುವ ಮೋರ್ಚಾ ಬಿಜೆಪಿಯ ಬೆನ್ನೆಲುಬಾಗಿದ್ದು, ಯುವಕರಲ್ಲಿ ಪಕ್ಷದ ಸಿದ್ಧಾಂತವನ್ನು ಪಸರಿಸುವಲ್ಲಿ ನಿರ್ಣಾಯಕವಾಗಿದೆ.

*ಈ ಬಾರಿಯ ಚುನಾವಣೆಯ ಪ್ರಚಾರದಲ್ಲಿ ರಾಜ್ಯದ ಮಟ್ಟಿಗೆ ಹೇಳುವುದಾದರೆ ಹಿಂದುತ್ವ ಅಬ್ಬರ ಕಾಣುತ್ತಿಲ್ಲವಲ್ಲ?

-ಹಿಂದುತ್ವ ನಮಗೆ ಚುನಾವಣೆ ಗಿಮಿಕ್‌ ಅಲ್ಲ. ಅದು ನಮ್ಮ ಬದ್ಧತೆ. ಅದು ಎಂದೆಂದಿಗೂ ಬಿಜೆಪಿಯ ಮೂಲ ಸಿದ್ಧಾಂತ. ಕೇವಲ ಚುನಾವಣೆಗಾಗಿ ಹಿಂದುತ್ವದ ಮಂತ್ರ ಪಠಿಸುವುದಿಲ್ಲ. ಅದು ನಮ್ಮ ಕಣ ಕಣದಲ್ಲೂ ಇದೆ.

*ಪಕ್ಷದ ‘ಫೈರ್‌ ಬ್ರ್ಯಾಂಡ್‌’ ಎಂದು ಕರೆಸಿಕೊಂಡವರೆಲ್ಲ ಈ ಚುನಾವಣೆಯಲ್ಲಿ ಸೈಲೆಂಟ್‌ ಆಗಿದ್ದಾರಲ್ಲ?

-ಪಕ್ಷದಲ್ಲಿ ಯಾವ ಫೈರ್‌ ಬ್ರ್ಯಾಂಡೂ ಇಲ್ಲ, ಸೈಕಲ್‌ ಬ್ರ್ಯಾಂಡೂ ಇಲ್ಲ. ಇದೆಲ್ಲ ಮಾಧ್ಯಮಗಳ ಸೃಷ್ಟಿ. ಬಿಜೆಪಿಯಲ್ಲಿ ಎಲ್ಲರೂ ಕಾರ್ಯಕರ್ತರು. ಅವರು ಪಕ್ಷಕ್ಕಾಗಿ ಕೆಲಸ ಮಾಡುತ್ತಾರೆ.

*ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳು ನಿಮ್ಮ ಪಕ್ಷಕ್ಕೆ ಮುಳುವಾಗಬಹುದು ಎಂಬ ಆತಂಕವಿಲ್ಲವೇ?

-ಜನ ಬಹಳ ಬುದ್ಧಿವಂತರಿದ್ದಾರೆ. ಇದು ಯಾವ ಚುನಾವಣೆ ಎಂಬುದು ಅವರಿಗೂ ಅರಿವಿದೆ. ಇದು ದೇಶದ ಚುನಾವಣೆ. ನಾಯಕರು ಯಾರು ಎಂಬುದೂ ಅವರಿಗೆ ಗೊತ್ತಿದೆ. ಅದನ್ನು ಗಮನದಲ್ಲಿಟ್ಟುಕೊಂಡೇ ಬಿಜೆಪಿ ಬೆಂಬಲಿಸಲಿದ್ದಾರೆ. ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ನಾಯಕರಾಗಿಬೇಕು. ಆ ನಿಟ್ಟಿನಲ್ಲಿ ಆಯ್ಕೆ ಮಾಡುತ್ತಾರೆ. ಜನತೆಗೆ ದೇಶ ಸುರಕ್ಷಿತವಾಗಿರಬೇಕು ಮತ್ತು ಸಂಸ್ಕೃತಿ ಉಳಿಯಬೇಕು ಎಂದರೆ ಮೋದಿ ಬೇಕು ಎಂಬುದು ಜನರಿಗೆ ಗೊತ್ತಿದೆ. ಹೀಗಾಗಿ ಒಂದೇ ಗ್ಯಾರಂಟಿ, ಅದು ಮೋದಿ ಗ್ಯಾರಂಟಿ. ಮೋದಿ ಗ್ಯಾರಂಟಿ ಮುಂದೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಪರಿಣಾಮ ಬೀರುವುದಿಲ್ಲ.

*ಬೆಂಗಳೂರು ದಕ್ಷಿಣ ಕ್ಷೇತ್ರದ ಮತದಾರರು ತೇಜಸ್ವಿ ಸೂರ್ಯ ಅವರಿಗೇ ಯಾಕೆ ಮತ ಹಾಕಬೇಕು?

-ಒಬ್ಬ ಜನಪ್ರತಿನಿಧಿಯ ಕಾರ್ಯ ಜನತೆಗೆ ಸಂಕಷ್ಟ ಬಂದಾಗ ಅವರ ಜತೆ ನಿಲ್ಲುವುದು. ತನ್ನನ್ನು ಆಯ್ಕೆ ಮಾಡಿರುವವರ ಸಮಸ್ಯೆಗಳಿಗೆ ಸ್ಪಂದಿಸುವುದು ಜನಪ್ರತಿನಿಧಿಯ ಪ್ರಮುಖ ಕೆಲಸವಾಗಿರುತ್ತದೆ. ನಾನು ಸಹ ಕ್ಷೇತ್ರದ ಜನತೆಯ ಸಂಕಷ್ಟದಲ್ಲಿ ಜತೆ ನಿಂತಿದ್ದೇನೆ. ನನ್ನನ್ನು ಯಾಕೆ ಆಯ್ಕೆ ಮಾಡಬೇಕು ಎಂದರೆ ತೇಜಸ್ವಿ ಹತ್ತಿರ ಹೋದರೆ ಕಷ್ಟ ಬಂದಾಗ ನಮ್ಮ ಜತೆ ನಿಂತುಕೊಳ್ಳುತ್ತಾನೆ ಎಂಬುದು ಜನತೆಗೆ ಗೊತ್ತಿದೆ.

*ಕಳೆದ ಮೂರು ದಶಕಗಳಿಂದ ಕ್ಷೇತ್ರ ಬಿಜೆಪಿಯ ಹಿಡಿತದಲ್ಲಿಯೇ ಇದೆ. ಈ ಬಾರಿ ಪ್ರಭಾವಿ ಸಚಿವರ ಪುತ್ರಿ ಹಾಗೂ ಮಾಜಿ ಶಾಸಕಿ ಕಣದಲ್ಲಿದ್ದಾರೆ. ಚುನಾವಣಾ ಹೋರಾಟ ಕಠಿಣವಾಗಿದೆಯೇ?

-ಈ ಚುನಾವಣೆಯ ಉದ್ದೇಶ ದೇಶದ ಪ್ರಧಾನಿಯನ್ನು ಆಯ್ಕೆ ಮಾಡುವಂಥದ್ದು. ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ. 10 ವರ್ಷಗಳ ಕಾಲ ಅವರ ಕಾರ್ಯವೈಖರಿಯನ್ನು ಜನತೆ ಗಮನಿಸಿದ್ದಾರೆ. ಕಾಂಗ್ರೆಸ್‌ನ ಪ್ರಧಾನಿ ಅಭ್ಯರ್ಥಿ ಯಾರು? ಇಲ್ಲಿ ಹಾಕುವ ಮತ ದೇಶದ ನಾಯಕನ ಆಯ್ಕೆ ಮಾಡುತ್ತದೆ ಎಂಬುದು ಜನತೆಗೂ ಗೊತ್ತಿದೆ. ಎದುರಿಗಿರುವ ಅಭ್ಯರ್ಥಿ ನಗಣ್ಯ. ಕಾಂಗ್ರೆಸ್‌ ವರಿಷ್ಠರ ಮಕ್ಕಳನ್ನು ಉಳಿಸಲು ಚುನಾವಣೆ ನಡೆಸುತ್ತಿದ್ದು, ನಾವು ದೇಶ ಉಳಿಸಲು ಅಭಿವೃದ್ಧಿಗಾಗಿ ಚುನಾವಣೆ ನಡೆಸುತ್ತಿದ್ದೇವೆ.

*ಮೋದಿ ಹೆಸರಲ್ಲಿ ಬಿಜೆಪಿ ಮತ ಕೇಳುತ್ತಿದೆಯೇ ಹೊರತು ಅಭಿವೃದ್ಧಿ ಹೆಸರಲ್ಲಿ ಕೇಳುವುದು ಅಷ್ಟಾಗಿ ಕಾಣುತ್ತಿಲ್ಲ?

-ಮೋದಿ ಎಂದರೇ ಅಭಿವೃದ್ಧಿ. ಹೀಗಾಗಿ, ಅವರ ಹೆಸರಲ್ಲಿ ಮತ ಕೇಳಿದರೆ ತಪ್ಪೇನು?

*ನೀವು ಸಂಸದರಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮಾಡಿದ ಮಹತ್ವದ ಅಭಿವೃದ್ಧಿ ಕಾರ್ಯಗಳೇನು?

-ಕೋವಿಡ್‌ ಬಂದ ವೇಳೆ ಜನತೆಗೆ ಮೂಲಸೌಕರ್ಯ ಕಲ್ಪಿಸುವುದು ಸೇರಿದಂತೆ ಅವರ ಚಿಕಿತ್ಸೆ, ಆಸ್ಪತ್ರೆಯಲ್ಲಿ ಆಮ್ಲಜನಕ ಒದಗಿಸುವ ಕಾರ್ಯ ಮಾಡಲಾಗಿದೆ. ನಮ್ಮ ಕ್ಷೇತ್ರದ ನಾಲ್ಕು ಲಕ್ಷ ಜನರ ಮನೆಗೆ ರೇಷನ್‌, ಅಗತ್ಯ ಇರುವವರಿಗೆ ಔಷಧಿಗಳನ್ನು ತಲುಪಿಸುವ ಕೆಲಸ ಮಾಡಲಾಗಿದೆ. 650ಕ್ಕೂ ಹೆಚ್ಚು ಆಮ್ಲಜನಕ ಹಾಸಿಗೆಗಳನ್ನು ತರಲಾಯಿತು. ಅಲ್ಲದೇ, ಆಸ್ಪತ್ರೆಗಳಲ್ಲಿ ಆಮ್ಲಜನಕ ಹಾಸಿಗೆಗಳ ವ್ಯವಸ್ಥೆಗಳನ್ನು ಮಾಡಲಾಯಿತು. ಬಿಬಿಎಂಪಿಯಲ್ಲಿ ಹಾಸಿಗೆ ಅವ್ಯವಹಾರ ನಡೆದಿದ್ದನ್ನು ಬಯಲು ಮಾಡಿದ್ದೇವೆ. ಅದನ್ನು ಸರಿಪಡಿಸಿ ಜನತೆಗೆ ಹಾಸಿಗೆ ಲಭ್ಯವಾಗುವಂತೆ ಮಾಡಿದ್ದೇವೆ. ಗುರುರಾಘವೇಂದ್ರ ಸಹಕಾರಿ ಬ್ಯಾಂಕ್‌ ಮುಚ್ಚಿ ಹೋದಾಗ ಸುಮಾರು ಶೇ.80ರಷ್ಟು ಮಂದಿಗೆ ಅವರ ಠೇವಣಿ ಪೂರ್ಣ ಹಣ ವಾಪಸ್‌ ಬರುವಂತೆ ಮಾಡಲಾಯಿತು. ಕೇಂದ್ರದಿಂದ 1500 ಕೋಟಿ ರು. ಅನುದಾನ ತಂದು ಮನೆಗಳನ್ನು ಕಟ್ಟಿಸಿ ಮಧ್ಯಮ ವರ್ಗದ ಜನ ತಲೆಮೇಲೆ ಸೂರು ಕಂಡುಕೊಳ್ಳುವಂತಹ ಕಾರ್ಯ ಮಾಡಲಾಗಿದೆ.

*ನಿಮ್ಮ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿ ಕೂಡ ಬಿರುಸಿನ ಪ್ರಚಾರ ನಡೆಸಿದ್ದಾರೆ?

-ಅವರ ಬಗ್ಗೆ ಏನು ಹೇಳಲಿ. ನಮ್ಮ ಕೆಲಸದ ಮೇಲೆ ಚುನಾವಣೆ ಪ್ರಚಾರ ಮಾಡುತ್ತಿದ್ದೇವೆ. ಸಕಾರಾತ್ಮಕ ಕೆಲಸಗಳನ್ನು ಮಾಡಿಕೊಂಡು ಹೋಗುತ್ತಿದ್ದೇನೆ. ನಾನು ಮಾಡಿರುವ ಕೆಲಸ, ಮೋದಿ ಕೊಡುಗೆಯ ಗುರಿಯನ್ನಿಟ್ಟುಕೊಂಡು ಹೋಗುತ್ತಿದ್ದೇವೆ. ಎದುರುಗಡೆಯವರ ಬಗ್ಗೆ ನಾವು ತಲೆಕೆಡಿಸಿಕೊಳ್ಳಲ್ಲ.

*ಬಿಜೆಪಿ ಮುಖಂಡರಾದ ತೇಜಸ್ವಿನಿ ಅನಂತಕುಮಾರ್‌ ಪ್ರಚಾರದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲವಲ್ಲ?

-ನನ್ನ ಮೇಲೆ ತೇಜಸ್ವಿನಿ ಅನಂತಕುಮಾರ್‌ ಅವರ ಸಂಪೂರ್ಣ ಆಶೀರ್ವಾದ ಇದೆ. ಅವರು ಪಕ್ಷದ ಕೆಲಸದಲ್ಲಿದ್ದಾರೆ.

*ಪಕ್ಷೇತರ ಅಭ್ಯರ್ಥಿಯಾಗಿ ನಿಮ್ಮದೇ ಪಕ್ಷದ ಮಾಜಿ ಶಾಸಕ ಹೇಮಚಂದ್ರ ಸಾಗರ್‌ ಪುತ್ರಿ ತಿಂತಿಶಾ ಕಣಕ್ಕಿಳಿದಿದ್ದಾರೆ?

-ಪ್ರಜಾಪ್ರಭುತ್ವದಲ್ಲಿ 25 ವರ್ಷ ವಯಸ್ಸು ಆದ ಎಲ್ಲರೂ ಚುನಾವಣೆಗೆ ಸ್ಪರ್ಧಿಸಲು ಹಕ್ಕಿದೆ. ಹಾಗೆಯೇ ಅವರೂ ಸ್ಪರ್ಧಿಸಿದ್ದಾರೆ. ಅವರು ಕಣದಲ್ಲಿರುವುದರಿಂದ ನಮ್ಮ ಮತಗಳು ವಿಭಜನೆಯಾಗುವುದಿಲ್ಲ. ಜನರು ಮೋದಿ ಅವರನ್ನು ಆಯ್ಕೆ ಮಾಡಬೇಕು ಎಂದು ನಿಶ್ಚಯಿಸಿದ್ದಾರೆ.

ಕಾಂಗ್ರೆಸ್‌ನಿಂದ ಹಿಂದುಳಿದ ವರ್ಗಕ್ಕೆ ನಿರಂತರ ಅನ್ಯಾಯ: ತೇಜಸ್ವಿ ಸೂರ್ಯ

*ಇತ್ತೀಚೆಗೆ ನಡೆದ ಗುರುರಾಘವೇಂದ್ರ ಸ್ವಾಮಿ ಸಹಕಾರ ಬ್ಯಾಂಕ್‌ನ ಸಭೆಯಲ್ಲಿ ಗದ್ದಲಕ್ಕೆ ನೀವೇ ಕಾರಣ ಎಂಬ ಆರೋಪ ಕಾಂಗ್ರೆಸ್ ಮುಖಂಡರಿಂದ ಕೇಳಿಬಂದಿದೆ?

-ನಮ್ಮ ಸಭೆಯಲ್ಲಿ ನಾವೇ ಯಾಕೆ ಗದ್ದಲ ಮಾಡಿಕೊಳ್ಳುತ್ತೇವೆ. ನಾವೇ ಸಭೆ ಕರೆದಿದ್ದೆವು. ಕಾಂಗ್ರೆಸ್‌ನವರು ಬಂದು ಗದ್ದಲ ಮಾಡಿದರು. ಗದ್ದಲ ಮಾಡಿದವರು ಯಾರು ಎಂಬ ಫೋಟೋ, ವಿಡಿಯೋ ಇದೆ. ನಾಲ್ಕು ಜನ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ನಾಲ್ಕು ಜನ ಕಾಂಗ್ರೆಸ್‌ ಪೋಷಿತ ಪೋಷಕರು ಪೂರ್ವಯೋಜಿತವಾಗಿ ಅಲ್ಲಿನ ಠೇವಣಿದಾರರಿಗೆ ತೊಂದರೆಯನ್ನುಂಟು ಮಾಡಿದರು. ನನ್ನ ಪ್ರಶ್ನೆ ಇಷ್ಟೇ. ಸ್ವಾತಂತ್ರ್ಯ ಬಂದಾಗಿನಿಂದ ಕಾಂಗ್ರೆಸ್‌ 60 ವರ್ಷ ಆಡಳಿತ ನಡೆಸಿದೆ. ಈ ಅವಧಿಯಲ್ಲಿ ಸಹಕಾರ ಬ್ಯಾಂಕ್‌ಗಳನ್ನು ಆರ್‌ಬಿಐ ಸುಪರ್ದಿಗೆ ಯಾಕೆ ತಂದಿರಲಿಲ್ಲ. ಅದನ್ನು ತಂದಿದ್ದು ಮೋದಿ ನೇತೃತ್ವದ ಸರ್ಕಾರದಲ್ಲಿ. ಇಲ್ಲಿ ನಾನು ಸಹ ಶ್ರಮವಹಿಸಿ ಕೆಲಸ ಮಾಡಿದ್ದೇನೆ.

*ಬ್ಯಾಂಕಿನ ಠೇವಣಿದಾರರ ಸಮಸ್ಯೆ ಬಗೆಹರಿಸಲಾಗಿದೆಯೇ?

-ಶೇ.80ರಷ್ಟು ಠೇವಣಿದಾರರಿಗೆ ಹಣ ವಾಪಸ್‌ ನೀಡಲಾಗಿದೆ. ಹಿಂದೆ ರಾಜ್ಯದಲ್ಲಿ ಕೆಲವು ಸಹಕಾರಿ ಬ್ಯಾಂಕ್‌ಗಳು ದಿವಾಳಿಯಾದವು. ಠೇವಣಿದಾರರಿಗೆ ಹಣ ವಾಪಸ್‌ ಹೋಗಿರುವ ಒಂದೇ ಒಂದು ಉದಾಹರಣೆ ಕೊಡಿ. ಯಾವುದಾದರೂ ಒಂದು ಸಹಕಾರಿ ಬ್ಯಾಂಕ್‌ ದಿವಾಳಿಯಾದಾಗ ಆ ವ್ಯಾಪ್ತಿಯ ಶಾಸಕನೋ, ಸಂಸದನೋ ಬ್ಯಾಂಕ್‌ನ ಠೇವಣಿದಾರರು ಸಂಕಷ್ಟದಲ್ಲಿದ್ದಾರೆ. ನಾನು ಸಹಾಯ ಮಾಡಬೇಕು ಅಂತ ಹೆಗಲ ಮೇಲೆ ತೆಗೆದುಕೊಂಡು ಸಹಾಯ ಮಾಡಿರುವ ಉದಾಹರಣೆ ಕೊಡಿ.

click me!