ಲೋಕಸಭೆ ಚುನಾವಣೆ 2024: ಜಾರ್ಖಂಡ್‌ನಲ್ಲಿ ಸೊರೇನ್‌ ಬಂಧನಕ್ಕೆ ಮತದಾರನ ತೀರ್ಪು ಏನು?

By Kannadaprabha NewsFirst Published Apr 16, 2024, 7:30 AM IST
Highlights

ಈ ಬಾರಿ ಹಾಲಿ ಜನಪ್ರಿಯ ಮುಖ್ಯಮಂತ್ರಿಯಾಗಿದ್ದ ಹೇಮಂತ್‌ ಸೋರೆನ್‌ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿರುವ ಹಿನ್ನೆಲೆಯಲ್ಲಿ ರಾಜ್ಯವು ಅವರ ಬಂಧನವನ್ನೇ ಪ್ರಮುಖ ಚುನಾವಣಾ ವಸ್ತುವಾಗಿಟ್ಟುಕೊಂಡು ಮತ ಹಾಕುವ ಸಾಧ್ಯತೆ ಹೆಚ್ಚಿದೆ.

ಜಾರ್ಖಂಡ್‌(ಏ.16):  ಗಿರಿಜನರೇ ಹೆಚ್ಚಾಗಿರುವ ಜಾರ್ಖಂಡ್‌ ರಾಜ್ಯದಲ್ಲಿ ಚುನಾವಣಾ ಕಣ ರಂಗೇರಿದ್ದು, ಹಲವು ಪ್ರಾದೇಶಿಕ ಪಕ್ಷಗಳು ರಾಜ್ಯದಲ್ಲಿದ್ದರೂ ಎಲ್ಲವೂ ಎನ್‌ಡಿಎ ಇಲ್ಲವೇ ಇಂಡಿಯಾ ಮೈತ್ರಿಕೂಟದ ಭಾಗವಾಗಿ ಇರುವುದರಿಂದ ನೇರ ಹಣಾಹಣಿ ಏರ್ಪಡಲಿದೆ. ಅಲ್ಲದೆ ಈ ಬಾರಿ ಹಾಲಿ ಜನಪ್ರಿಯ ಮುಖ್ಯಮಂತ್ರಿಯಾಗಿದ್ದ ಹೇಮಂತ್‌ ಸೋರೆನ್‌ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿರುವ ಹಿನ್ನೆಲೆಯಲ್ಲಿ ರಾಜ್ಯವು ಅವರ ಬಂಧನವನ್ನೇ ಪ್ರಮುಖ ಚುನಾವಣಾ ವಸ್ತುವಾಗಿಟ್ಟುಕೊಂಡು ಮತ ಹಾಕುವ ಸಾಧ್ಯತೆ ಹೆಚ್ಚಿದೆ.

ಹೇಗಿದೆ ಬಿಜೆಪಿ ತಯಾರಿ?

ಬಿಜೆಪಿಯು ಜಾರ್ಖಂಡ್‌ನಿಂದಲೇ ಈ ಬಾರಿ 400ಕ್ಕೂ ಹೆಚ್ಚು ಬಾರಿ ಗೆಲ್ಲುವ ಗುರಿಯನ್ನು ಮೊದಲ ಬಾರಿಗೆ ಪ್ರಕಟಿಸಿತ್ತು. ಆ ನಿಟ್ಟಿನಲ್ಲಿ ರಾಜ್ಯದಲ್ಲಿ ಬಿಜೆಪಿ ಕ್ಲೀನ್‌ಸ್ವೀಪ್‌ ಮಾಡಲು ಸಕಲ ಯೋಜನೆ ಹಾಕಿಕೊಂಡಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ, ರಾಜನಾಥ್‌ ಸಿಂಗ್‌ ಮುಂತಾದ ಮಹಾಮಹಿಮರು ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದು, ಹೇಮಂತ್‌ ಸೋರೆನ್‌ ಬಂಧನದ ಪ್ರಸ್ತಾಪವನ್ನು ಎಲ್ಲ ಚುನಾವಣಾ ಪ್ರಚಾರ ಸಭೆಗಳಲ್ಲಿ ಮುನ್ನೆಲೆಗೆ ತರುತ್ತಿದ್ದಾರೆ. ಇಷ್ಟು ಸಾಲದು ಎಂಬಂತೆ ಕಳೆದ ಬಾರಿ ರಾಜ್ಯದಿಂದ ಗೆದ್ದಿದ್ದ ಕಾಂಗ್ರೆಸ್‌ನ ಏಕೈಕ ಸಂಸದರಾಗಿದ್ದ ಗೀತಾ ಕೋಡಾ ಅವರನ್ನೂ ಸಹ ತನ್ನ ಪಕ್ಷಕ್ಕೆ ಕಡೇ ಕ್ಷಣದಲ್ಲಿ ಸೆಳೆದುಕೊಂಡು ಅವರದೇ ಸಿಂಗ್‌ಭೂಂ ಕ್ಷೇತ್ರದಿಂದ ಟಿಕೆಟ್‌ ನೀಡಿದೆ. ಇದರೊಂದಿಗೆ ಬಿಜೆಪಿ ರಾಜ್ಯದ 14 ಕ್ಷೇತ್ರಗಳ ಪೈಕಿ 13ರಲ್ಲಿ ಸ್ಪರ್ಧಿಸುತ್ತಿದ್ದು, 1 ಕ್ಷೇತ್ರವನ್ನು ಅಖಿಲ ಜಾರ್ಖಂಡ್‌ ವಿದ್ಯಾರ್ಥಿ ಯೂನಿಯನ್‌ಗೆ ಬಿಟ್ಟುಕೊಟ್ಟಿದೆ. ರಾಜ್ಯದ ಚುನಾವಣಾ ಸಾರಥ್ಯವನ್ನು ದಲಿತ ನಾಯಕ ಹಾಗೂ ಕೇಂದ್ರ ಸಚಿವರಾಗಿರುವ ಅರ್ಜುನ್‌ ಮುಂಡಾ ವಹಿಸಿಕೊಂಡಿದ್ದು, ರಾಜ್ಯದ 6 ಮೀಸಲು ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ. ಇದರ ಜೊತೆಗೆ ಇತರ ಕ್ಷೇತ್ರಳಲ್ಲೂ ಗೆಲ್ಲುವ ವಿಶ್ವಾಸವನ್ನು ಬಿಜೆಪಿ ಹೊಂದಿದೆ. ಆದರೆ ಗೀತಾ ಕೋಡಾ ಅವರಿಗೆ ಸ್ವಪಕ್ಷೀಯರ ವಿರೋಧದ ನಡುವೆಯೂ ಟಿಕೆಟ್‌ ನೀಡಲಾಗಿದ್ದು, ಅಲ್ಲಿ ಒಳೇಟು ಹೊಡೆಯುವ ಸಾಧ್ಯತೆಯಿದೆ. ಜೊತೆಗೆ ಉದ್ದೇಶಪೂರ್ವಕವಾಗಿ ನಿಷ್ಕಳಂಕ ಮುಖ್ಯಮಂತ್ರಿಯನ್ನು ಜಾರಿ ನಿರ್ದೇಶನಾಲಯದ ಮೂಲಕ ಬಂಧಿಸಿರುವುದು ಜನಾಕ್ರೋಶವಾಗಿ ಪರಿವರ್ತನೆಯಾದರೆ ಬಿಜೆಪಿಗೆ ಮುಳ್ಳಾಗಿ ಪರಿಣಮಿಸುವ ಸಾಧ್ಯತೆಯಿದೆ. ಇದರ ಜೊತೆಗೆ ಡುಮ್ಕಾ ಕ್ಷೇತ್ರದಲ್ಲಿ ಸೋರೆನ್‌ ಸಂಬಂಧಿ ನಳಿನಿ ಪಕ್ಷ ಸೇರ್ಪಡೆಯಾಗಿರುವುದೂ ಸಹ ಬಿಜೆಪಿಗೆ ಭೀಮಬಲ ಬಂದಂತಾಗಿದೆ.

ಅಗ್ನಿಪರೀಕ್ಷೆ ಗೆದ್ದ ಜಾರ್ಖಂಡ್‌ ಸರ್ಕಾರ: ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ: ಹೇಮಂತ್ ಸೊರೇನ್

ಇಂಡಿಯಾ ಕೂಟಕ್ಕೆ ಸಮನ್ವಯತೆಯೇ ಸವಾಲು:

ಆಡಳಿತಾರೂಢ ಜೆಎಂಎಂ ಪಕ್ಷವು ಕಾಂಗ್ರೆಸ್‌ ಹಾಗೂ ಇತರ ಸಣ್ಣ ಪುಟ್ಟ ಪಕ್ಷಗಳೊಂದಿಗೆ ಸೇರಿಕೊಂಡು ಚುನಾವಣೆ ಎದುರಿಸುತ್ತಿದೆ. ಆದರೆ ಅದರ ಮಿತ್ರಪಕ್ಷಗಳ ಕಾರ್ಯಕರ್ತರ ನಡುವೆ ತಳಮಟ್ಟದಲ್ಲಿ ಸಮನ್ವಯತೆಯ ಕೊರತೆಯಿದ್ದು, ಅದನ್ನು ಮೆಟ್ಟಿ ನಿಂತಲ್ಲಿ ಅದಕ್ಕೆ ಯಶಸ್ಸು ಕಟ್ಟಿಟ್ಟ ಬುತ್ತಿ. ಕಾಂಗ್ರೆಸ್‌ ಈ ಬಾರಿ ಕಳೆದ ಬಾರಿಗಿಂತ ಒಂದು ಕ್ಷೇತ್ರದಲ್ಲಿ ಹೆಚ್ಚಾಗಿ ಸ್ಪರ್ಧಿಸುತ್ತಿದ್ದರೆ ಜೆಎಂಎಂ ಕಳೆದ ಬಾರಿಯಂತೆ ಐದು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಈ ಬಾರಿ ಹೇಮಂತ್‌ ಸೋರೆನ್‌ ಅವರನ್ನು ಬಂಧಿಸಿರುವುದು ಜೆಎಂಎಂಗೆ ವರವಾಗಿ ಪರಿಣಮಿಸುವ ಸಾಧ್ಯತೆಯಿದ್ದು, ಅವರು ಜಾರಿಮಾಡಿದ್ದ ಹಲವು ಜನಪರ ಯೋಜನೆಗಳು ಚುನಾವಣೆಯಲ್ಲಿ ಮತವಾಗಿ ಪರಿವರ್ತನೆಯಾಗುವ ಸಾಧ್ಯತೆಗಳು ಹೆಚ್ಚಿವೆ. ಆದರೆ ಬಿಜೆಪಿಯು ಜೆಎಂಎಂ ನಾಯಕರ ಮೇಲೆ ಇಡಿ ಆರೋಪಿಸಿರುವಂತೆ ಭ್ರಷ್ಟಾಚಾರ ಮಾಡಿರುವ ಕುರಿತು ಸಾರಿ ಸಾರಿ ಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ತಕ್ಕ ತಿರುಗೇಟು ಕೊಟ್ಟು ಜನತೆಯಲ್ಲಿ ಅವರೆಲ್ಲ ಮಾಡುತ್ತಿರುವುದು ಸುಳ್ಳು ಆರೋಪಗಳು ಎಂಬುದಾಗಿ ಸಾಬೀತು ಮಾಡುವಲ್ಲಿ ಯಶಸ್ವಿಯಾಗಿದ್ದೇ ಆದಲ್ಲಿ ಇಂಡಿಯಾ ಕೂಟಕ್ಕೆ ಈ ಬಾರಿ ಜಾರ್ಖಂಡ್‌ ತುಸು ಹೆಚ್ಚಿನ ಸ್ಥಾನಗಳನ್ನು ಗಳಿಸಿಕೊಡಬಲ್ಲದು.

ಸ್ಪರ್ಧೆ ಹೇಗೆ?

ಕೇವಲ 14 ಕ್ಷೇತ್ರಗಲಿರುವ ಪುಟ್ಟ ರಾಜ್ಯ ಜಾರ್ಖಂಡ್‌ನಲ್ಲಿ ಈ ಬಾರಿ ನಾಲ್ಕು ಹಂತದಲ್ಲಿ ಚುನಾವಣೆಯನ್ನು ನಡೆಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹೆಚ್ಚು ಹೆಚ್ಚು ಪ್ರಚಾರ ಮಾಡುವ ಮೂಲಕ ಲಾಭ ಮಾಡಿಕೊಳ್ಳಲು ಯತ್ನಿಸಬಹುದು. ಮತ್ತೊಂದೆಡೆ ಸೋರೆನ್‌ ಬಂಧನದಿಂದ ನಾವಿಕನಿಲ್ಲದ ಹಡಗಿನಂತಾಗಿರುವ ಆಡಳಿತಾರೂಢ ಜೆಎಂಎಂಗೆ ತಾನು ಜಾರಿ ಮಾಡಿರುವ ಜನಸ್ನೇಹಿ ಕಾರ್ಯಕ್ರಮಗಳೇ ಆಧಾರಸ್ತಂಭವಾಗಿವೆ. ಒಟ್ಟಿನಲ್ಲಿ ರಾಜ್ಯದಲ್ಲಿ ಇರುವ ಆರು ಮೀಸಲು ಕ್ಷೇತ್ರಗಳೇ ಉಭಯ ಮೈತ್ರಿಕೂಟಗಳಿಗೆ ನಿರ್ಣಾಯಕವಾಗಿದೆ. ಅಂತಿಮವಾಗಿ ಚುನಾವಣೆಯಲ್ಲಿ ಜನಪರ ಮುಖ್ಯಮಂತ್ರಿಯಾಗಿದ್ದ ಹೇಮಂತ್‌ ಸೋರೆನ್‌ ಬಂಧನ ವಿಷಯವೇ ಪ್ರಮುಖ ವಸ್ತುವಾಗಿ ಪರಿಗಣಿತವಾಗುವ ಸಾಧ್ಯತೆಯಿದೆ.

ಹೇಮಂತ್‌ ಸೊರೆನ್‌ ಬಂಧನದ ಬಳಿಕ ಚಂಪೈ ಸೊರೆನ್‌ ಜಾರ್ಖಂಡ್‌ ಮುಖ್ಯಮಂತ್ರಿಯಾಗಿ ಪದಗ್ರಹಣ

ರಾಜ್ಯ: ಜಾರ್ಖಂಡ್‌
ಒಟ್ಟು ಕ್ಷೇತ್ರಗಳು: 14
ಒಟ್ಟು ಹಂತಗಳು: 4

ಪ್ರಮುಖ ಕ್ಷೇತ್ರಗಳು: 

ಸಿಂಗ್‌ಭಮ್‌, ಡುಮ್ಕಾ, ಗೊಡ್ಡಾ, ಹಜಾರಿಭಾಗ್‌, ರಾಂಚಿ, ಜಮ್ಶೆಡ್‌ಪುರ, ಧನ್‌ಬಾದ್‌, ಗಿರಿಧ್‌, ರಾಜಮಹಲ್ ಇತ್ಯಾದಿ

ಪ್ರಮುಖ ಹುರಿಯಾಳುಗಳು: 

ಗೀತಾ ಕೋಡಾ (ಬಿಜೆಪಿ), ಅರ್ಜುನ್‌ ಮುಂಡಾ (ಬಿಜೆಪಿ), ನಿಶಿಕಾಂತ್‌ ದುಬೆ (ಬಿಜೆಪಿ), ಕಾಳಿಚರಣ್‌ ಮುಂಡಾ (ಕಾಂಗ್ರೆಸ್‌), ನಳಿನ್‌ ಸೋರೆನ್‌ (ಜೆಎಂಎಂ), ಜೊಭಾ ಮಾಂಝಿ (ಜೆಎಂಎಂ)

2019ರ ಚುನಾವಣೆ ಫಲಿತಾಂಶ: ಪಕ್ಷ ಕ್ಷೇತ್ರ ಶೇಕಡಾ

ಬಿಜೆಪಿ 11 ಶೇ52.68
ಎಜೆಎಸ್‌ಯು 1 ಶೇ.4.78
ಕಾಂಗ್ರೆಸ್‌ 1 ಶೇ.16.83
ಜೆಎಂಎಂ 1 ಶೇ.18.72

click me!