* ಮೇಕೆದಾಟು ನಡಿಗೆಗೆ ನಾಗರಿಕರ ಬೆಂಬಲ ನೀಡಿ ಬಿಜೆಪಿಗರಿಗೆ ಭಯ ಶುರುವಾಗಿದೆ
* ಲಾಕ್ಡೌನ್ ಹೇರುವ ತಂತ್ರ ಮಾಡುತ್ತಿದ್ದಾರೆ
* ಕಾಲ್ನಡಿಗೆಗೆ ಮರಳಿದ ವಿಪಕ್ಷ ನಾಯಕ
ಕನಕಪುರ(ಜ.12): ಕೇಸು ಹಾಕಿ ನಮ್ಮನ್ನು ಹೆದರಿಸುತ್ತೇವೆ ಎಂದುಕೊಂಡಿದ್ದರೆ ಅದು ಬಿಜೆಪಿಯವರ(BJP) ಮೂರ್ಖತನ. ಕಾನೂನು ಹೋರಾಟದ ಮೂಲಕವೇ ಇದಕ್ಕೆ ಉತ್ತರ ಕೊಡುತ್ತೇವೆ. ಮೇಕೆದಾಟು ಪಾದಯಾತ್ರೆ(Mekedatu Padayatra) ಕಾವು ಜೋರಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಆದಿಯಾಗಿ ಬಿಜೆಪಿಗರಿಗೆ ಭಯ ಶುರುವಾಗಿದೆ. ಹೀಗಾಗಿಯೇ ಬೆಂಗಳೂರು ಪ್ರವೇಶಿಸದಂತೆ ಲಾಕ್‌ಡೌನ್(Lockdown) ವಿಧಿಸುವ ತಂತ್ರ ಹೂಡುತ್ತಿದ್ದಾರೆ. ಏನೇ ಮಾಡಿದರೂ ಪಾದಯಾತ್ರೆ ನಿಲ್ಲಿಸುವುದಿಲ್ಲ. ಬೇಕಿದ್ದರೆ ಜೈಲಿಗೆ ಹಾಕಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಗುಡುಗಿದ್ದಾರೆ.
ಪಾದಯಾತ್ರೆ ಉದ್ಘಾಟನೆ ನಂತರ ಜ್ವರದಿಂದ ಬಳಲಿ ವಿಶ್ರಾಂತಿಗೆ ತೆರಳಿದ್ದ ಸಿದ್ದರಾಮಯ್ಯ ಮಂಗಳವಾರ ಯಾತ್ರೆಗೆ ಹಿಂತಿರುಗಿದರು. ಮೂರನೇ ದಿನದ ಯಾತ್ರೆ ಆರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ನಿಯಮ(Covid Rules) ಪಾಲಿಸಿಲ್ಲ ಎಂದು ನಾನು ಸೇರಿದಂತೆ ನಮ್ಮ ಪಕ್ಷದ 30 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಆದರೆ, ಸಾವಿರಾರು ಜನರ ಸೇರಿಸಿ ಪ್ರತಿಭಟನೆ, ವಿವಿಧ ಕಾರ್ಯಕ್ರಮಗಳನ್ನು ಮಾಡಿದ ಅವರದೇ ಪಕ್ಷದ ಸುಭಾಷ್ ಗುತ್ತೇದಾರ, ರೇಣುಕಾಚಾರ್ಯ, ಶೋಭಾ ಕರಂದ್ಲಾಜೆ, ಭಗವಂತ್ ಖೂಬಾ ಇವರೆಲ್ಲರ ಮೇಲೆ ಕೇಸು ಯಾಕೆ ದಾಖಲಿಸಿಲ್ಲ? ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕ್ಷೇತ್ರ ತೀರ್ಥಹಳ್ಳಿಯಲ್ಲೇ ದೊಡ್ಡ ಜಾತ್ರೆ ನಡೆಯಿತು. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಲ್ಕೈದು ಸಾವಿರ ಜನ ಸೇರಿಸಿ ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನ ಕಾರ್ಯಕ್ರಮ ನಡೆಸಿದರು. ಅಲ್ಲೆಲ್ಲೂ ಕೊರೋನಾ ಇರಲಿಲ್ಲ, ನಮ್ಮ ಪಾದಯಾತ್ರೆಯಿಂದ ಕೊರೋನಾ(Coronavirus) ಹರಡುತ್ತಾ ಎಂದು ತರಾಟೆಗೆ ತೆಗೆದುಕೊಂಡರು.
Congress Padayatre ಪಾದಯಾತ್ರೆ ವೇಳೆ ಶಾಲಾ ಮಕ್ಕಳ ಜತೆ ಬೆರೆತ ಡಿಕೆ ಶಿವಕುಮಾರ್ ವಿರುದ್ಧ ಕೇಸ್ ಬುಕ್
ನಮಗಿಂತ ಹೆಚ್ಚು ನಿಯಮ ಉಲ್ಲಂಘನೆ ಬಿಜೆಪಿಯವರಿಂದಲೇ ಆಗಿದೆ. ನಾವು ಪಾದಯಾತ್ರೆ ಮಾಡಬಾರದು, ಜನ ಮೇಕೆದಾಟು ಯೋಜನೆಯ ಅಗತ್ಯತೆಯ ಬಗ್ಗೆ ಜಾಗೃತರಾಗಬಾರದು ಎಂಬುದು ಸರ್ಕಾರದ ದುರುದ್ದೇಶ. ಸಿ.ಟಿ.ರವಿ, ಅಣ್ಣಾಮಲೈ ಸೇರಿದಂತೆ ಬಿಜೆಪಿಯವರು ತಮಿಳುನಾಡಿನಲ್ಲಿ(Tamil Nadu) ತಮ್ಮ ರಾಜಕೀಯ ಬಲವರ್ಧನೆಗಾಗಿ ಕರ್ನಾಟಕದ(Karnataka) ಜನರಿಗೆ ದ್ರೋಹ ಮಾಡುತ್ತಿದ್ದಾರೆ. ಇದಕ್ಕೆ ನಾವು ಬಿಡಲ್ಲ. ಈ ಪಾದಯತ್ರೆಯಲ್ಲಿ ರಾಜ್ಯದ ಹಿತಾಸಕ್ತಿ ಅಷ್ಟೇ ಇದೆ ಎಂದರು.
ಕಾವು ಜೋರಾಗ್ತಿದೆ:
ಈ ಹಿಂದೆ ಬಳ್ಳಾರಿಯಲ್ಲಿ ಪಾದಯಾತ್ರೆ ಮಾಡಿದಾಗ ಕಡೇ ದಿನ ಐದು ಲಕ್ಷ ಜನ ಸೇರಿದ್ದರು. ಈಗಲೂ ಜನ ನಮ್ಮ ಪಾದಯಾತ್ರೆಗೆ ಸ್ವಯಂಪ್ರೇರಿತರಾಗಿ ಬರಲು ಆರಂಭ ಮಾಡಿದ್ದಾರೆ. ಇದರಿಂದ ಬಿಜೆಪಿಯವರಿಗೆ ಭಯ ಶುರುವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾತ್ರಿ ನಿದ್ರೆ ಬರುತ್ತಿಲ್ಲ. ಕೇಸು ಹಾಕಿ ನಮ್ಮನ್ನು ಹೆದರಿಸಬಹುದು ಎಂದುಕೊಂಡಿದ್ದಾರೆ. ಏನೇ ಮಾಡಿದರೂ ಹನ್ನೊಂದು ದಿನಗಳ ಪಾದಯಾತ್ರೆ ನಿಲ್ಲುವುದಿಲ್ಲ ಎಂದರು.
ಮಂಗಳವಾರ ಮೈಸೂರು ಜಿಲ್ಲೆ ಹಾಗೂ ಇನ್ನಿತರ ಹನ್ನೊಂದು ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಪಾದಯಾತ್ರೆಗೆ ಆಗಮಿಸಿದ್ದಾರೆ. ಹೀಗೆ ಮುಂದೆ ಹಾಸನ, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು, ಕೋಲಾರ ಸುತ್ತಮುತ್ತಲಿನ ಜನ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಯ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜನ ಸ್ವಯಂ ಪ್ರೇರಿತರಾಗಿ ನಮ್ಮೊಂದಿಗೆ ಅತ್ಯಂತ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಇದು ಮೇಕೆದಾಟು ಯೋಜನೆಯ ಬಗ್ಗೆ ಜನರ ಆಸಕ್ತಿಯನ್ನು ತೋರಿಸುತ್ತದೆ ಎಂದರು.
ಬಿಜೆಪಿ ಕೊಡುಗೆ ಏನು ಮಿಸ್ಟರ್ ಕಾರಜೋಳ?
ಮೇಕೆದಾಟು ಯೋಜನೆ ಕುರಿತು ಕಾರಜೋಳ(Govind Karjol) ನಿತ್ಯ ಒಂದೊಂದು ಸುಳ್ಳು ಹೇಳುತ್ತಿದ್ದಾರೆ. ವಾಸ್ತವವಾಗಿ ಬಸವರಾಜ ಬೊಮ್ಮಾಯಿ ಅವರು ಹಿಂದೆ ನಿಂತು ಕಾರಜೋಳ ಮೂಲಕ ನಿತ್ಯ ಒಂದೊಂದು ಸುಳ್ಳು ಹೇಳಿಕೆ, ಜಾಹೀರಾತು ಕೊಡಿಸುತ್ತಿದ್ದಾರೆ. ತಮ್ಮ ಸರ್ಕಾರದ ತಪ್ಪನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
2008ರಿಂದ 2013ರವರೆಗೆ ಬಿಜೆಪಿ ಅಧಿಕಾರದಲ್ಲಿ ಇದ್ದರೂ ಮೇಕೆದಾಟು ಯೋಜನೆ ಬಗ್ಗೆ ಯಾವುದೇ ಆಸಕ್ತಿ ತೋರಿರಲಿಲ್ಲ. ನಾವು ಮೇ 2013ರಲ್ಲಿ ಅಧಿಕಾರಕ್ಕೆ ಬಂದೆವು, ಸೆಪ್ಟೆಂಬರ್ ತಿಂಗಳಲ್ಲೇ ಮೇಕೆದಾಟು ಜಾರಿ ಆಗಬೇಕು ಎಂದು ಡಿಪಿಆರ್ ಸಿದ್ಧಪಡಿಸಿ ಕಾವೇರಿ ಜಲ ಮಂಡಳಿ ಎದುರು ಮಂಡಿಸಿದ್ದೆವು. ನಮ್ಮ ಡಿಪಿಆರ್ 6,912 ಕೋಟಿ ರು. ಇತ್ತು. ಸ್ವಾಧೀನ ಪಡಿಸಿಕೊಳ್ಳಬೇಕಾದ ಭೂಮಿಯ ಮೌಲ್ಯ 2019ರಲ್ಲಿ ನಾಲ್ಕು ಪಟ್ಟು ಹೆಚ್ಚಾದ ಕಾರಣ ಮತ್ತೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಅವರು 9,500 ಕೋಟಿ ರು. ಪರಿಷ್ಕೃತ ಡಿ.ಪಿ.ಆರ್ ತಯಾರು ಮಾಡಿ ಸಿಡಬ್ಲ್ಯೂಸಿಗೆ ಕಳುಹಿಸಿದ್ದರು. ಇಷ್ಟೆಲ್ಲಾ ಮಾಡಿದ ಹೊರತಾಗಿಯೂ ಕಾಂಗ್ರೆಸ್ ಪಕ್ಷ ವಿಳಂಬ ಮಾಡಿತು ಎಂದು ಸುಳ್ಳು ಆರೋಪ ಮಾಡುವ ಮಿಸ್ಟರ್ ಗೋವಿಂದ ಕಾರಜೋಳ ಅವರೇ ಕಳೆದ ಎರಡೂವರೆ ವರ್ಷಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ, ಕೇಂದ್ರದಲ್ಲಿ ತಮ್ಮದೇ ಸರ್ಕಾರ ಇದ್ದಾಗಿಯೂ ಏನೂ ಮಾಡದೆ ನಿರ್ಲಕ್ಷಿಸಿರುವುದೇಕೆ ಹೇಳಿ ಎಂದು ಪ್ರಶ್ನಿಸಿದರು.
ಬೆಂಗಳೂರಿಗೆ ಬಿಡಲ್ಲ ಅಂದರೆ ಬಂಧಿಸಲಿ
ಬೆಂಗಳೂರಿಗೆ ನಮ್ಮ ಪಾದಯಾತ್ರೆ ಪ್ರವೇಶಿಸಲು ಬಿಡಲ್ಲ ಅಂದರೆ ನಮ್ಮನ್ನು ಬಂಧಿಸಲಿ. ಎಷ್ಟು ಜನರ ಮೇಲಾದರೂ ದೂರು ದಾಖಲಿಸಲಿ. ನಾವು ಎಲ್ಲವನ್ನೂ ಎದುರಿಸಲು ಸಿದ್ಧರಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು. ಸರ್ಕಾರ ನಮ್ಮ ಮೇಲೆ ಕಾನೂನು ಮಾರ್ಗ ಬಳಸಿದರೆ ನಾವೂ ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತೇವೆ. ಮೇಕೆದಾಟು ಯೋಜನೆಗಾಗಿ ಸರ್ವಪಕ್ಷಗಳ ನಾಯಕರ ಸಭೆ ಕರೆದು ಚರ್ಚೆ ಮಾಡಬೇಕಿತ್ತು. ಪ್ರಧಾನಿ ಮೋದಿ ಅವರಿಗೆ ಹೆದರಿ ರಾಜ್ಯ ಬಿಜೆಪಿ ನಾಯಕರು ಸರ್ವಪಕ್ಷ ಸಭೆ ಮಾಡಿಲ್ಲ. ಇದು ಹೇಡಿ ಸರ್ಕಾರ. ಈಗ ಸರ್ವಪಕ್ಷ ಸಭೆ ಕರೆಯೋದಾದರೆ ನಮ್ಮ ಪಾದಯಾತ್ರೆ ಮುಗಿದ ಮೇಲೆ ಕರೆಯಲಿ. ನಾವು ಭಾಗವಹಿಸ್ತೇವೆ ಎಂದರು.
ಪಾದಯಾತ್ರೆಯಿಂದ ಕೋವಿಡ್ ಹರಡ್ತಿದೆ ಅನ್ನೋದು ಸರಿಯಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೋವಿಡ್ ಸೋಂಕು ತಗುಲಿದೆ, ಸಚಿವ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೂ ಸೋಂಕು ತಗುಲಿದೆ. ಅವರು ಎಷ್ಟೆಲ್ಲಾ ಮುಂಜಾಗ್ರತೆ ವಹಿಸಿದ್ದರೂ ಕೋವಿಡ್ ಬಂದಿದೆ. ಇದಕ್ಕೆ ನಾವು ಕಾರಣನಾ ಎಂದು ಪ್ರಶ್ನಿಸಿದರು.
ಡಿಕೆಶಿ ಕ್ಷಮೆ ಕೇಳದಿದ್ದರೆ ಕ್ರಮ: ಡಾ ಸುಧಾಕರ್
ಬೆಂಗಳೂರು: ಕೊರೋನಾ ಪರೀಕ್ಷೆ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ತಮ್ಮ ಹೇಳಿಕೆ ಬಗ್ಗೆ ಅವರು ಪುರಾವೆ ಒದಗಿಸಬೇಕು. ಇಲ್ಲವಾದಲ್ಲಿ ಬಹಿರಂಗ ಕ್ಷಮೆ ಯಾಚಿಸಬೇಕು. ತಪ್ಪಿದ ಪಕ್ಷದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್(Dr K Sudhakar) ಎಚ್ಚರಿಕೆ ನೀಡಿದ್ದಾರೆ.
Makedatu Padayatre ಮೇಕೆದಾಟು ಪಾದಯಾತ್ರೆಗೆ ಶಿವಣ್ಣ ಗೈರಾಗಿದ್ದೇಕೆ? ಕಾರಣ ಬಿಚ್ಚಿಟ್ಟ ಮಧು ಬಂಗಾರಪ್ಪ
ಡಿಕೆಶಿ, ಸಿದ್ದು ಸುಸ್ತೋಸುಸ್ತು
ಬೆಂಗಳೂರು: ಪಾದಯಾತ್ರೆಯ 3ನೇ ದಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನಂತರ ಬಳಲಿ ಬೆಂಡಾದರು. ಆಯಾಸ ತಡೆಯಲಾರದೆ ಸಿದ್ದರಾಮಯ್ಯ ಸ್ಥಳೀಯ ನಾಯಕರೊಬ್ಬರ ಮನೆಯಲ್ಲಿ, ಡಿಕೆಶಿ ಅವರು ಮಸೀದಿಯೊಂದರಲ್ಲಿ ವಿಶ್ರಾಂತಿ ಪಡೆದರು.
ಪಾದಯಾತ್ರೆ ವಿರುದ್ಧ ಪಿಐಎಲ್
ಬೆಂಗಳೂರು: ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ನಿರ್ಬಂಧಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಲು ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿದೆ. ಬೆಂಗಳೂರು ನಿವಾಸಿ ನಾಗೇಂದ್ರ ಪ್ರಸಾದ್ ಎಂಬುವರು ಸಲ್ಲಿಸಿದ್ದಾರೆ.