ಸಿದ್ದು, ನಿಮ್ಮನ್ನು ಬೇಗ ಡೆಲ್ಲಿಗೆ ಕರೆಸಿ ಚರ್ಚಿಸ್ತೀವಿ : ವರಿಷ್ಠರಿಂದ ಮತ್ತೆ ಸಸ್ಪೆನ್ಸ್

Kannadaprabha News   | Kannada Prabha
Published : Feb 13, 2026, 06:24 AM IST
rahul priyanka dk shivkumar

ಸಾರಾಂಶ

ಹಲವು ಪ್ರಯತ್ನಗಳ ನಂತರ ಕಡೆಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ‘10 ಜನಪಥ್‌’ನಲ್ಲಿ ಕಾಂಗ್ರೆಸ್‌ ವರಿಷ್ಠರನ್ನು ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಿದ್ದಾರೆ. ಇದಕ್ಕೆ ಹೈಕಮಾಂಡ್‌ ಶೀಘ್ರವೇ ಉಭಯ ನಾಯಕರನ್ನು ಕರೆಸಿ ಮಾತನಾಡುವ ಭರವಸೆ ನೀಡಿದೆ.

ಬೆಂಗಳೂರು : ಹಲವು ಪ್ರಯತ್ನಗಳ ನಂತರ ಕಡೆಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ‘10 ಜನಪಥ್‌’ನಲ್ಲಿ ಕಾಂಗ್ರೆಸ್‌ ವರಿಷ್ಠರನ್ನು ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಿದ್ದಾರೆ. ಇದಕ್ಕೆ ಹೈಕಮಾಂಡ್‌ ಶೀಘ್ರವೇ ಉಭಯ ನಾಯಕರನ್ನು ಕರೆಸಿ ಮಾತನಾಡುವ ಭರವಸೆ ನೀಡಿದೆ.

ಆದರೆ, ಯಾವಾಗ ಉಭಯ ನಾಯಕರನ್ನು (ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್) ದೆಹಲಿಗೆ ಕರೆಸಲಾಗುವುದು ಎಂಬ ಸ್ಪಷ್ಟತೆ ದೊರಕಿಲ್ಲ. ಮೂಲಗಳ ಪ್ರಕಾರ, ಕಾಂಗ್ರೆಸ್‌ ಹೈಕಮಾಂಡ್‌ ಪ್ರಸ್ತುತ ಪಂಚ ರಾಜ್ಯ ಚುನಾವಣೆ ವಿಚಾರದಲ್ಲಿ ವ್ಯಸ್ತವಾಗಿದೆ. ಹೀಗಾಗಿ ಪಂಚರಾಜ್ಯ ಚುನಾವಣೆವರೆಗೂ ಯಾವುದೇ ಮಹತ್ವ ಬೆಳವಣಿಗೆ ನಡೆಯುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ರಡು ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟಿದ್ದ ಡಿ.ಕೆ. ಶಿವಕುಮಾರ್‌

ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟಿದ್ದ ಡಿ.ಕೆ. ಶಿವಕುಮಾರ್‌ ಅವರು ಗುರುವಾರ ‘10 ಜನಪಥ್‌’ನಲ್ಲಿ ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದ ಬೆಳವಣಿಗೆಗಳ ಬಗ್ಗೆ ಸಾದ್ಯಂತವಾಗಿ ವಿವರಿಸಿದ್ದಾರೆ ಎನ್ನಲಾಗಿದೆ. ಈ ಮಾತುಕತೆಯ ವೇಳೆ ಅಧಿಕಾರ ಹಸ್ತಾಂತರ, ನಾಯಕತ್ವ ಬದಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷ ಹುದ್ದೆ ಕುರಿತಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.

ಜತೆಗೆ, ಅಧಿಕಾರ ಹಸ್ತಾಂತರ ವಿಚಾರದಿಂದಾಗಿ ರಾಜ್ಯ ರಾಜಕಾರಣ ಗೊಂದಲದ ಗೂಡಾಗಿದ್ದು, ಈ ಬಗ್ಗೆ ಹೈಕಮಾಂಡ್‌ ಶೀಘ್ರ ನಿಲುವು ಪ್ರಕಟಿಸಬೇಕು ಎಂದು ಕೋರಿದರು ಎನ್ನಲಾಗುತ್ತಿದೆ.

‘10 ಜನಪಥ್‌’ನಲ್ಲಿ ಗುರುವಾರ ಅಸ್ಸಾಂ ಚುನಾವಣೆ ಬಗ್ಗೆ ಸಭೆ

ವಾಸ್ತವವಾಗಿ ‘10 ಜನಪಥ್‌’ನಲ್ಲಿ ಗುರುವಾರ ಅಸ್ಸಾಂ ಚುನಾವಣೆ ಬಗ್ಗೆ ಸಭೆ ನಡೆದಿದೆ. ಈ ಸಭೆಯಲ್ಲಿ ಶಿವಕುಮಾರ್‌ ಕೂಡ ಭಾಗಿಯಾಗಿದ್ದಾರೆ. ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆ ಸಂದರ್ಭದಲ್ಲೇ ಶಿವಕುಮಾರ್‌ ಅವರು ಪ್ರಿಯಾಂಕಾ ಹಾಗೂ ರಾಹುಲ್‌ ಅವರನ್ನು ಕೆಲ ಕಾಲ ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು ಎಂದು ಮೂಲಗಳು ಹೇಳಿವೆ.

ಈ ಚರ್ಚೆಯ ವೇಳೆ ರಾಹುಲ್‌ ಹಾಗೂ ಪ್ರಿಯಾಂಕಾ ಅವರು ಶಿವಕುಮಾರ್‌ ಅವರ ಅಹವಾಲಿಗೆ ಕಿವಿಯಾಗಿದ್ದಾರೆ. ಆದರೆ, ತಮ್ಮ ಸ್ಪಷ್ಟ ನಿಲುವನ್ನು ಪ್ರಕಟಿಸದೆ, ಶೀಘ್ರವೇ ಉಭಯ ನಾಯಕರನ್ನು ಕರೆಸಿ ಮಾತನಾಡುವ ಭರವಸೆಯನ್ನಷ್ಟೇ ನೀಡಿದರು ಎಂದು ತಿಳಿದುಬಂದಿದೆ.

ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಇರುವ ಡಿ.ಕೆ. ಶಿವಕುಮಾರ್‌ ಅವರು ತಮ್ಮ ಸಹೋದರ ಡಿ.ಕೆ. ಸುರೇಶ್‌ ಒಡಗೂಡಿ ಬುಧವಾರ ಸಂಜೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ್ದರು. ಈ ಭೇಟಿಯ ವೇಳೆ ತಮ್ಮ ಹಕ್ಕೊತ್ತಾಯ ಮಂಡಿಸಿದ್ದರು ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಾ.6ಕ್ಕೆ ಸಿದ್ದು ದಾಖಲೆ ಬಜೆಟ್‌ - ಮಾ.6ರಿಂದ 27ರವರೆಗೆ ಬಜೆಟ್‌ ಕಲಾಪ
''ನಂಗೆ ಯಶಸ್ಸು ಸಿಕ್ಕೇ ಸಿಗುತ್ತೆ, ಸ್ವಲ್ಪ ಶ್ರಮ ಪಡಬೇಕು - ಹೈಕಮಾಂಡ್‌ ಬಳಿ ‘ಎಲ್ಲವನ್ನೂ’ ಮಾತಾಡಿದ್ದೇನೆ''