ಪದೇ-ಪದೇ ನಾಯಕತ್ದ ಬದಲಾವಣೆ ಕುರಿತಂತೆ ಬಹಿರಂಗವಾಗಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಕಿಡಿಕಾರುತ್ತಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಸಂಕಷ್ಟ ಶುರುವಾಗಿದೆ.
ಬೆಂಗಳೂರು, (ಜ.04): ಸದ್ಯ ರಾಜ್ಯ ಬಿಜೆಪಿಯಲ್ಲಿ ವಿಜಯಪುರದ ಸ್ವಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರದ್ದೇ ಮಾತು. ಯಾಕಂದ್ರೆ, ಪದೇ-ಪದೇ ನಾಯಕತ್ವದ ಬದಲಾವಣೆ ಸೇರಿದಂತೆ ಸ್ವಪಕ್ಷದ ಇತರೆ ನಾಯಕರುಗಳ ವಿರುದ್ಧ ಬಹಿರಂಗವಾಗಿಯೇ ಮಾತನಾಡತ್ತಾರೆ.
ಇದು ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದು, ಅವರ ವಿರುದ್ಧ ಕೇಂದ್ರ ಬಿಜೆಪಿ ಶಿಸ್ತು ಸಮಿತಿಗೆ ದೂರು ನೀಡಲಾಗಿದೆ. ಈ ಬಗ್ಗೆ ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾಹಿತಿ ನೀಡಿದ್ದಾರೆ.
'ಹೂ ಈಸ್ ಯತ್ನಾಳ್' ಎಂದು ಕೇಳಿದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್..!
ಇಂದು (ಸೋಮವಾರ) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ ಫಾರ್ಮ್ ಪಡೆದು ಗೆದ್ದವರು ಕೇಂದ್ರ ಶಿಸ್ತು ಸಮಿತಿ ಕೆಳಗೆ ಬರುತ್ತಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಚಾರದಲ್ಲಿ ಕೇಂದ್ರದ ಶಿಸ್ತು ಸಮಿತಿಗೆ ಎಲ್ಲಾ ಮಾಹಿತಿ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಶಾಸಕ ಯತ್ನಾಳ್ ಶಾಸಕಾಂಗ ಪಕ್ಷ ಸಭೆ ಕರೆಯಲು ಹೇಳಿರುವುದಲ್ಲಿ ತಪ್ಪಿಲ್ಲ. ಸಚೇತಕ ಸುನೀಲ್ ಕುಮಾರ್ ಬರೆದಿದ್ದ ಪತ್ರ ಕೂಡಾ ಸರಿಯಾಗಿದೆ. ಆ ಹಿನ್ನಲೆಯಲ್ಲಿ ಇಂದು ವಿಭಾಗವಾರು ಸಭೆ ಮಾಡಿದ್ದೇವೆ ಎಂದು ಅವರು ಹೇಳಿದರು.
ಬಿಜೆಪಿ ಶಾಸಕರ ವಿಭಾಗವಾರು ಸಭೆಯಲ್ಲಿ ಸಿಎಂ ಯಡಿಯೂರಪ್ಪ ಕಳೆದ ಒಂದು ವರ್ಷದ ಅವಲೋಕನ ಮಾಡಿದ್ದಾರೆ. ಸಚಿವರ ಹಸ್ತಕ್ಷೇಪದ ಬಗ್ಗೆ ಯಾವ ಶಾಸಕರು ಆರೋಪ ಮಾಡಿಲ್ಲ. ನಾಳೆಯೂ ಸಿಎಂ ಯಡಿಯೂರಪ್ಪ ಶಾಸಕರ ಸಮಸ್ಯೆ ಆಲಿಸುತ್ತಾರೆ ಎಂದರು.
ಇನ್ನು ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗವಾಗಿಯೇ ಮಾತನಾಡಿದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಷ್ಟೇ ಅಲ್ಲದೇ ಈ ಬಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನ ಕೇಳಿದರೆ, ಹೂ ಈಸ್ ಯತ್ನಾಳ್ ಎಂದು ಪ್ರಶ್ನಿಸಿದ್ದರು. ಅಷ್ಟೆ.
ಇದೀಗ ಕಟೀಲ್ ಅವರು ಹೇಳಿದಂತೆ ಕೇಂದ್ರ ಶಿಸ್ತು ಸಮಿತಿಗೆ ದೂರು ಹೋಗಿದ್ದು, ಯಾವ ರೀತಿ ಕ್ರಮಕೈಗೊಳ್ಳಲಾಗುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.