
ಬೆಳಗಾವಿ (ಆ.16): ಗೋಕಾಕ, ಚಿಕ್ಕೋಡಿ ಜಿಲ್ಲೆ ರಚನೆ ವಿಚಾರ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಬೆಳಗಾವಿ ಜಿಲ್ಲಾ ಶಾಸಕರ ಸಭೆಯಲ್ಲಿ ಚರ್ಚೆಯಾಗಿದ್ದು, ಪ್ರತ್ಯೇಕ ಜಿಲ್ಲೆ ರಚನೆ ಆಗಲೇಬೇಕೆಂದು ಒತ್ತಾಯಿಸಿದ್ದೇವೆ. ಆ ಬಗ್ಗೆ ಅಂತಿಮವಾಗಿ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗಾವಿ ಜಿಲ್ಲಾ ವಿಭಜನೆಗೆ ನಮ್ಮ ಒತ್ತಡ ಇದ್ದೇ ಇದೆ. ಅದಕ್ಕಿಂತ ಮೊದಲು ಬೆಳಗಾವಿಯಲ್ಲಿ 8ಲಕ್ಷ ಮತದಾರರನ್ನು ಹೊಂದಿರುವ ಮತ್ತೊಂದು ತಾಲೂಕು ರಚನೆಯಾಗಬೇಕಿದೆ.
ಇದು ಶೀಘ್ರ ಆಗಬೇಕು ಎಂಬುದು ನಮ್ಮ ಬೇಡಿಕೆ. ಬೆಳಗಾವಿ ಉತ್ತರ, ದಕ್ಷಿಣ ಮತ್ತು ಗ್ರಾಮೀಣ ಯಾವುದಾದರೂ ಒಂದು ತಾಲೂಕು ಆಗಬಹುದು. ಯಾವ ರೀತಿ ತಾಲೂಕು ರಚಿಸಬೇಕೆಂದು ಅಧಿಕಾರಿಗಳು ನಿರ್ಧರಿಸುತ್ತಾರೆ ಎಂದರು. ಇದೇ ವೇಳೆ ಸರ್ಕಾರದ ಎಲ್ಲ ಅನುದಾನ ಗ್ಯಾರಂಟಿ ಯೋಜನೆಗಳಿಗೆ ಹೋಗುತ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದು ಕೇವಲ ತಪ್ಪು ಕಲ್ಪನೆ. ಯಾವ ಇಲಾಖೆಗೆ ಎಷ್ಟುಅನುದಾನ ಕೊಡಬೇಕು ಎಂಬ ಬಗ್ಗೆ ಬೊಮ್ಮಾಯಿ ಅವರ ಬಜೆಟ್‌ನಲ್ಲೇ ನಿಗದಿಯಾಗಿದೆ ಎಂದರು.
ಸಚಿವ ಖೂಬಾ ನನ್ನನ್ನು ಲಂಬಾಣಿ ಚೋರ್ ಅಂತ ಕರೀತಾರೆ: ಪ್ರಭು ಚವ್ಹಾಣ್
ಸ್ವಾತಂತ್ರ್ಯಕ್ಕಾಗಿ ಮಡಿದವರನ್ನು ಸ್ಮರಿಸುವುದು ನಮ್ಮ ಕರ್ತವ್ಯ: ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ಅಹಿಂಸಾತ್ಮಕ ಹೋರಾಟದ ಮೂಲಕ ಭಾರತೀಯರು ಗಳಿಸಿದ ಸ್ವಾತಂತ್ರ್ಯವು ಜಗತ್ತಿನ ರಾಜಕೀಯ ಚರಿತ್ರೆಯಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿದ್ದು, ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಜಿಲ್ಲಾಡಳಿಯ ಏರ್ಪಡಿಸಿದ್ದ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಮಹಾತ್ಮಾ ಗಾಂಧೀಜಿ, ಡಾ.ಬಾಬಾಸಾಹೇಬ ಅಂಬೇಡ್ಕರ, ಸುಭಾಶ್ಚಂದ್ರ ಬೋಸ್, ಜವಾಹರಲಾಲ್ ನೆಹರೂ, ಲಾಲ್ಬಹದ್ದೂರ ಶಾಸ್ತ್ರಿ, ಬಾಲಗಂಗಾಧರ ತಿಲಕ ಸೇರಿದಂತೆ ಇನ್ನೂ ಅನೇಕ ಮಹನೀಯರನ್ನು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. ಕಿತ್ತೂರು ರಾಣಿ ಚೆನ್ನಮ್ಮ ಮೊಳಗಿಸಿದ ಸ್ವಾತಂತ್ರ್ಯದ ಕಹಳೆಯು ಕಾಡ್ಗಿಚ್ಚಿನಂತೆ ಎಲ್ಲೆಡೆ ಹಬ್ಬಿತು. ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿದ್ದ ಚೆನ್ನಮ್ಮ, ಆಂಗ್ಲರ ಈಸ್ಟ್ ಇಂಡಿಯಾ ಕಂಪೆನಿಗೆ ದುಸ್ವಪ್ನವಾಗಿ ಕಾಡಿದಳು.
ಮೇಕೆದಾಟು ಯೋಜನೆಗೆ ಅಡ್ಡಿ ಬೇಡ: ತಮಿಳುನಾಡಿಗೆ ಡಿಕೆಶಿ ಮನವಿ
ಅದೇ ಕಿತ್ತೂರು ಸಂಸ್ಥಾನದಲ್ಲಿ ಸೇನಾಧಿಪತಿಯಾಗಿದ್ದ ಸಂಗೊಳ್ಳಿ ರಾಯಣ್ಣ ಆಂಗ್ಲರ ಬಂದೂಕುಗಳಿಗೆ ಬೆದರದೇ ತಾಯ್ನಾಡಿನ ಸ್ವಾತಂತ್ರ್ಯಕ್ಕಾಗಿ ನೇಣುಗಂಬಕ್ಕೇರಿದ ಅಪ್ರತಿಮ ದೇಶಭಕ್ತ. ಅಂತಹ ರಾಯಣ್ಣ ಹುಟ್ಟಿದ್ದು ಆಗಸ್ಟ್ 15ರಂದು, ವೀರಮರಣವನ್ನಪ್ಪಿದ್ದು ಜನವರಿ 26. ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮತ್ತೊಬ್ಬ ಮಹನೀಯರು ಗಂಗಾಧರ ದೇಶಪಾಂಡೆ. ಕರ್ನಾಟಕದ ಸಿಂಹ ಹಾಗೂ ಕರ್ನಾಟಕದ ಖಾದಿ ಭಗೀರಥ’ಎಂದು ಗುರುತಿಸಿಕೊಂಡಿದ್ದ ದೇಶಪಾಂಡೆಯವರ ಕೊಡುಗೆ ಅಪಾರ. ಇವರ ಜತೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಅನೇಕರನ್ನು ಇಂದು ನಾವು ನೆನಪಿಸಿಕೊಳ್ಳಬೇಕು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.