ತೆಲಂಗಾಣದ ಜನರಿಗೆ ಚುನಾವಣೆ ಪೂರ್ವದಲ್ಲಿ ನೀಡಿದ್ದ ಆರು ಗ್ಯಾರಂಟಿಗಳ ಪೈಕಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಮೊದಲ ಗ್ಯಾರಂಟಿಯನ್ನು ಶನಿವಾರ ಈಡೇರಿಸಲಾಗಿದೆ.
ಬೆಂಗಳೂರು (ಡಿ.10): ತೆಲಂಗಾಣದ ಜನರಿಗೆ ಚುನಾವಣೆ ಪೂರ್ವದಲ್ಲಿ ನೀಡಿದ್ದ ಆರು ಗ್ಯಾರಂಟಿಗಳ ಪೈಕಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಮೊದಲ ಗ್ಯಾರಂಟಿಯನ್ನು ಶನಿವಾರ ಈಡೇರಿಸಲಾಗಿದೆ. ಈ ಮೂಲಕ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷವಾಗಿದೆ ಎಂಬುದನ್ನು ಸಾಬೀತುಪಡಿಸಿದ್ದೇವೆ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕರ್ನಾಟಕದಲ್ಲಿ ಜನತೆಗೆ ಐದು ಗ್ಯಾರಂಟಿ ಯೋಜನೆಗಳ ಭರವಸೆ ನೀಡಲಾಗಿತ್ತು. ಪಕ್ಷದ ಮೇಲೆ ವಿಶ್ವಾಸವಿಟ್ಟು ಜನ ಅಧಿಕಾರಕ್ಕೆ ತಂದಿದ್ದಾರೆ. ಹೀಗಾಗಿ, ಪಕ್ಷದ ಹೈಕಮಾಂಡ್ ನಮ್ಮ ರಾಜ್ಯದ ನಾಯಕರಿಗೆ ತೆಲಂಗಾಣ ಚುನಾವಣೆ ಉಸ್ತುವಾರಿ ನೀಡಿತ್ತು. ಪ್ರಚಾರದ ವೇಳೆ ಕೆಲವು ಗ್ಯಾರಂಟಿ ಯೋಜನೆಗಳ ಭರವಸೆ ನೀಡಲಾಗಿತ್ತು. ಅದರಲ್ಲಿ ಮಹಿಳೆಯರಿಗೆ ರಾಜ್ಯ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡುವುದಾಗಿ ಭರವಸೆಯೂ ಒಂದಾಗಿದೆ. ಮಹಿಳೆಯರು ಬಹು ದೊಡ್ಡ ಬೆಂಬಲ ನೀಡಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದು ತಿಳಿಸಿದ್ದಾರೆ.
ಸುವರ್ಣಸೌಧದಿಂದ ಸಾವರ್ಕರ್ ಫೋಟೋ ತೆಗೆಯಬೇಕು: ಸಚಿವ ಪ್ರಿಯಾಂಕ್ ಖರ್ಗೆ
ಕೊಟ್ಟ ಮಾತಿನಂತೆ ತೆಲಂಗಾಣ ರಾಜ್ಯದೆಲ್ಲೆಡೆ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯವನ್ನು ಜಾರಿಗೊಳಿಸಲಾಗಿದೆ. ಅದಕ್ಕಾಗಿ ಮುಖ್ಯಮಂತ್ರಿ ರೇವಂತ ರೆಡ್ಡಿಯವರಿಗೆ ಧನ್ಯವಾದಗಳು ತೆಲಂಗಾಣದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಲಿದೆ. ಚುನಾವಣೆ ಪೂರ್ವದಲ್ಲಿ ಭರವಸೆ ನೀಡಿದಂತೆ ಕರ್ನಾಟಕದಲ್ಲಿ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದೆವು. ನಮ್ಮ ಶಕ್ತಿ ಯೋಜನೆಯನ್ನು ನಾಡಿನ ಕರ್ನಾಟಕದ ಮಹಿಳೆಯರು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಶಿವಕುಮಾರ್ ಪ್ರಕಟಣೆ ಮೂಲಕ ಹೇಳಿದ್ದಾರೆ.
ಉಚಿತ ಬಸ್ ಪ್ರಯಾಣ ಹೇಗೆ?: ಮಹಾಲಕ್ಷ್ಮೀ ಯೋಜನೆಯಡಿ ತೆಲಂಗಾಣಕ್ಕೆ ಸೇರಿದ ಎಲ್ಲಾ ಮಹಿಳೆಯರು ಹಾಗೂ ತೃತೀಯ ಲಿಂಗಿಗಳು ‘ಪಲ್ಲೆ ವೆಲುಗು’ (ಹಳ್ಳಿ ಬೆಳಕು) ಮತ್ತು ಎಕ್ಸ್‌ಪ್ರೆಸ್ ಬಸ್‌ಗಳಲ್ಲಿ ರಾಜ್ಯದೊಳಗೆ ಉಚಿತವಾಗಿ ಪ್ರಯಾಣಿಸಬಹುದು. ಹಾಗೆಯೇ ಅಂತಾರಾಜ್ಯ ಬಸ್‌ಗಳಲ್ಲೂ ಸಹ ರಾಜ್ಯದ ಗಡಿಯವರೆಗೆ ಉಚಿತ ಪ್ರಯಾಣ ಸೌಕರ್ಯ ಒದಗಿಸಲಾಗಿದೆ. ಮಹಿಳೆಯರು ಯಾವ ಗುರುತು ಪತ್ರ ತೋರಿಸಬೇಕು ಎಂಬುದನ್ನು ಸಾರಿಗೆ ನಿಗಮ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಿದೆ ಎಂದು ಸರ್ಕಾರ ಹೇಳಿದೆ.
ದೇಶದಲ್ಲಿ ಕಾಂಗ್ರೆಸ್ ಜನತೆಯ ವಿಶ್ವಾಸ ಕಳೆದುಕೊಂಡಿದೆ: ವಿಶ್ವೇಶ್ವರ ಹೆಗಡೆ ಕಾಗೇರಿ
ಇದೇ ವೇಳೆ, ರಾಜೀವ್ ಆರೋಗ್ಯಶ್ರೀ ಫಲಾನುಭವಿಗಳಿಗೆ 10 ಲಕ್ಷ ರು.ವರೆಗೆ ಆರೋಗ್ಯ ವಿಮೆ ಸಹಾಯವನ್ನು ನೀಡುವ ಆರೋಗ್ಯ ಸಿರಿ ಯೋಜನೆಯೂ ಸಹ ಶನಿವಾರದಿಂದಲೇ ಜಾರಿ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ರಾಜ್ಯದಲ್ಲಿ ಮುಂಗಾರು ಸಮಯದಲ್ಲಿ ಉಂಟಾದ ಬೆಳೆನಷ್ಟವನ್ನು ಅಧ್ಯಯನ ಮಾಡಲು ಸೂಚಿಸಲಾಗಿದ್ದು, ಸೂಕ್ತ ಪರಿಹಾರವನ್ನು ಒದಗಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.