ನಾನು ಬಾಲ್ ಇದ್ದಂತೆ ತುಳಿದಷ್ಟು ಪುಟಿದೇಳುತ್ತೇನೆ. ನನ್ನನ್ನು ತುಳಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾರ್ಮಿಕವಾಗಿ ತಿಳಿಸಿದ್ದಾರೆ.
ಹುಬ್ಬಳ್ಳಿ (ಡಿ.10): ನಾನು ಬಾಲ್ ಇದ್ದಂತೆ ತುಳಿದಷ್ಟು ಪುಟಿದೇಳುತ್ತೇನೆ. ನನ್ನನ್ನು ತುಳಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾರ್ಮಿಕವಾಗಿ ತಿಳಿಸಿದ್ದಾರೆ. ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿ, ಬೆಂಗಳೂರಿನಲ್ಲಿ ನಡೆಯಲಿರುವ ಈಡಿಗ ಸಂಘದ ಸಮಾವೇಶ ರಾಜಕೀಯ ಪ್ರೇರಿತ ಹಾಗೂ ಕುತಂತ್ರದ ಸಮಾವೇಶ. ಅದರಲ್ಲಿ ನಾನು ಭಾಗಿಯಾಗಲ್ಲ. ಇದರಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಭಾಗಿಯಾಗುತ್ತಿದ್ದಾರೆ. ಅವರಿಗೆ ನಾನು ಶುಭ ಹಾರೈಸುತ್ತೇನೆ ಎಂದರು. ಸಮಾಜಕ್ಕೆ ಒಳ್ಳೆಯದಾಗುವುದಿದ್ದರೆ ನಾನು ಪಾಲ್ಗೊಳ್ಳುತ್ತಿದ್ದೆ.
ರಾಜಕೀಯ ಪ್ರೇರಿತ ಸಮಾವೇಶಗಳಲ್ಲಿ ಭಾಗಿಯಾಗಲು ನಾನು ಇಷ್ಟಪಡುವುದಿಲ್ಲ ಎಂದರು. ಈಡಿಗರಲ್ಲಿ ಈಡಿಗ, ಬಿಲ್ಲವ, ನಾಮಧಾರಿ ಮತ್ತು ದೀವರು ಸೇರಿ 26 ಒಳಪಂಗಡಗಳಿವೆ. 50 ಲಕ್ಷ ಜನಸಂಖ್ಯೆ ಇದೆ. ಆದರೆ ಈಡಿಗ ಸಂಘದಲ್ಲಿ ಕೇವಲ 12 ಸಾವಿರ ಸದಸ್ಯರಿದ್ದಾರೆ. 75ನೇ ವರ್ಷದ ಅಮೃತ ಮಹೋತ್ಸವ ಎಂದು ಹೇಳುತ್ತಿದ್ದಾರೆ. ಬೆಳ್ಳಿ ಹಾಗೂ ಸುವರ್ಣ ಮಹೋತ್ಸವ ಯಾವಾಗ ಆಚರಿಸಿದರು ಎಂದು ವ್ಯಂಗ್ಯವಾಡಿದರು. ಸೇಂದಿ, ಸರಾಯಿ ನಿಷೇಧ ಆದಾಗ ಈ ಸಂಘದಲ್ಲಿ ಇದ್ದವರು ಏನೂ ಮಾಡಲಿಲ್ಲ.
ನಮ್ಮ ಸಮಾಜದಲ್ಲಿ ಆರು ಮಂದಿ ಸ್ವಾಮೀಜಿಗಳಿದ್ದಾರೆ. ಈ ಪೈಕಿ ಇಬ್ಬರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಕಿಡಿಕಾರಿದರು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸಮಾವೇಶದಲ್ಲಿ ಭಾಗವಹಿಸುತ್ತಿದ್ದು, ಸಂಘದವರು ಬೇಡಿಕೆಗಳನ್ನು ಸಲ್ಲಿಸಲಿ, ಸರ್ಕಾರ ಅದನ್ನು ಈಡೇರಿಸಲಿ ಎಂದಷ್ಟೇ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯವೈಖರಿ ಬಗ್ಗೆ ಜನರೇ ತೀರ್ಮಾನಿಸುತ್ತಾರೆ. ಈ ಬಗ್ಗೆ ನಾನೇನೂ ಹೇಳುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.
ಸುವರ್ಣಸೌಧದಿಂದ ಸಾವರ್ಕರ್ ಫೋಟೋ ತೆಗೆಯಬೇಕು: ಸಚಿವ ಪ್ರಿಯಾಂಕ್ ಖರ್ಗೆ
ಜಾತಿ ಗಣತಿ ಜಾರಿಗೊಳಿಸಿ: ಜಾತಿ ಜನಗಣತಿಗೆ ಹಿಂದಿನಿಂದಲೂ ಪ್ರಬಲ ಜಾತಿಗಳು ವಿರೋಧಿಸುತ್ತಲೇ ಬಂದಿವೆ. ಹಾವನೂರು ಕಮಿಷನ್ ರಿಪೋರ್ಟ್ ಬಂದಾಗ ಶಾಸಕರೊಬ್ಬರು ಅದರ ವರದಿ ಸುಟ್ಟಿದ್ದರು. ಆದರೆ ದೇವರಾಜ್ ಅರಸು ವರದಿ ಜಾರಿಗೊಳಿಸಿದ್ದರು. ಹಿಂದುಳಿದ ವರ್ಗದಲ್ಲಿ ಎಷ್ಟೋ ಜಾತಿಗಳಿವೆ. ಆದರೆ ಮೀಸಲಾತಿ ಲಾಭ ಪಡೆಯುತ್ತಿರುವುದು ಮಾತ್ರ ಕೆಲವೇ ಕೆಲ ಜಾತಿಗಳು ಮಾತ್ರ. ಹೀಗಾಗಿ ಅರಸು ಮಾದರಿಯಲ್ಲಿ ಜಾತಿ ಗಣತಿ ಅಂಗೀಕರಿಸಬೇಕು ಎಂದು ಇದೇ ವೇಳೆ ಹರಿಪ್ರಸಾದ್ ಆಗ್ರಹಿಸಿದರು.