ಕರ್ನಾಟಕಕ್ಕೆ ನಾವು ಬೇಕಾದಷ್ಟು ಅಕ್ಕಿ ನೀಡಲು ಸಿದ್ಧರಿದ್ದೇವೆ. ಆದರೆ ರಾಜ್ಯ ಸರ್ಕಾರ ಮಾತ್ರ ಅಕ್ಕಿ ತೆಗೆದುಕೊಳ್ಳುವುದಿಲ್ಲ. ಯಾಕೆಂದರೆ ಸರ್ಕಾರದ ಬಳಿ ಅಕ್ಕಿ ಖರೀದಿಗೂ ಹಣವಿಲ್ಲದಂಥ ಸ್ಥಿತಿಯಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿ (ಜು.08): ಕರ್ನಾಟಕಕ್ಕೆ ನಾವು ಬೇಕಾದಷ್ಟು ಅಕ್ಕಿ ನೀಡಲು ಸಿದ್ಧರಿದ್ದೇವೆ. ಆದರೆ ರಾಜ್ಯ ಸರ್ಕಾರ ಮಾತ್ರ ಅಕ್ಕಿ ತೆಗೆದುಕೊಳ್ಳುವುದಿಲ್ಲ. ಯಾಕೆಂದರೆ ಸರ್ಕಾರದ ಬಳಿ ಅಕ್ಕಿ ಖರೀದಿಗೂ ಹಣವಿಲ್ಲದಂಥ ಸ್ಥಿತಿಯಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿ, ಕಳೆದ ವರ್ಷ ಕೇಳಿದಾಗ ಅಕ್ಕಿ ನೀಡಿಲ್ಲ ಎಂದು ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಿದ್ದರು.
ರಾಜ್ಯ ಸರ್ಕಾರದವರು ಜನರಿಗೆ 5 ಕೆ.ಜಿ. ಅಕ್ಕಿ ಬದಲು 10 ಕೆ.ಜಿ. ನೀಡುವುದಾಗಿ ಹೇಳಿದ್ದಾರೆಯೇ ಹೊರತು ಕೇಂದ್ರ ಸರ್ಕಾರ ಕೊಟ್ಟರೆ ಕೊಡುತ್ತೇವೆಂದು ಎಲ್ಲೂ ಹೇಳಿರಲಿಲ್ಲ. ಕಳೆದ ಬಾರಿ ಅಕ್ಕಿ ಸಂಗ್ರಹ ಕಡಿಮೆ ಇದ್ದ ಕಾರಣ ಎಲ್ಲ ರಾಜ್ಯಗಳಿಗೂ ಅಕ್ಕಿ ವಿತರಣೆ ಸ್ಥಗಿತಗೊಳಿಸಿದ್ದೆವು. ಇದೀಗ ಮತ್ತೆ ಆರಂಭಿಸಿದ್ದೇವೆ. ಆದರೆ ಕರ್ನಾಟಕ ಸರ್ಕಾರ ಅಕ್ಕಿ ಕೊಳ್ಳುವುದಿಲ್ಲ ಎಂದರು. ಸಿದ್ದರಾಮಯ್ಯ ಅವರು ಅಕ್ಕಿ ವಿಚಾರದಲ್ಲಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ. ಇಂಥ ರಾಜಕಾರಣವನ್ನು ಅವರು ಮೊದಲು ನಿಲ್ಲಿಸಲಿ ಎಂದು ಕಿಡಿಕಾರಿದರು.
ನಾಚಿಕೆಯಾಗಬೇಕು: ಕಾಂಗ್ರೆಸ್‌ನವರು ಎಷ್ಟು ಜನರಿಗೆ ಐದು ಕೆ.ಜಿ. ಅಕ್ಕಿ ಬದಲಾಗಿ ಕೊಡುವುದಾಗಿ ಹೇಳಿರುವ ₹170 ನೀಡಿದ್ದಾರೆ? ಕಳೆದ 2 ತಿಂಗಳಿಂದ ಗೃಹಲಕ್ಷ್ಮೀ ಯೋಜನೆ ಹಣವನ್ನು ಏಕೆ ಸ್ಥಗಿತಗೊಳಿಸಿದ್ದಾರೆ? ವೃದ್ಧಾಪ್ಯ ವೇತನ ಹಣ ಜಮೆ ಏಕೆ ಆಗಿಲ್ಲ? ಪೆಟ್ರೋಲ್, ಡೀಸೆಲ್, ಹಾಲಿನ ದರ ಏಕೆ ಏರಿಕೆ ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು. ಅಂದು ನಾವು ಪೆಟ್ರೋಲ್ ದರ ಒಂದು ರುಪಾಯಿ ಏರಿಕೆ ಮಾಡಿದಾಗ ಬೊಬ್ಬೆ ಹೊಡೆದವರು ಇಂದು ತಾವೇ ಮೂರೂವರೆ ರುಪಾಯಿ ದರ ಏರಿಕೆ ಮಾಡಿದ್ದಾರೆ. ಅವರಿಗೆ ನಾಚಿಕೆಯಾಗಬೇಕು ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಮ್ಮ ಕಾಲದಲ್ಲಿ ಯಾವುದೇ ಹಗರಣಗಳಾಗಿಲ್ಲ, ನಡೆದಿರುವುದು ಬಿಜೆಪಿ ಕಾಲದಲ್ಲೇ: ಡಿ.ಕೆ.ಶಿವಕುಮಾರ್
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಅನೇಕ ಕಾಂಗ್ರೆಸ್ ಶಾಸಕರು ನನ್ನ ಬಳಿ ಬಂದು ಕೇಂದ್ರ ಸರ್ಕಾರದಿಂದ ಕ್ಷೇತ್ರದ ಅಭಿವೃದ್ಧಿಗೆ ಸ್ವಲ್ಪ ಹಣ ನೀಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ಸ್ಥಿತಿಯನ್ನು ಕಾಂಗ್ರೆಸ್‌ನವರೇ ತಂದುಕೊಂಡು ವಿನಾಕಾರಣ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಹಾಲು ಒಕ್ಕೂಟಗಳಲ್ಲಿ ರೈತರಿಗೆ ನೀಡುತ್ತಿರುವ ಸಬ್ಸಿಡಿ ಬಂದ್ ಮಾಡಿ ಜನರಿಗೆ ದ್ರೋಹ ಮಾಡುತ್ತಿರುವ ಯಾವುದಾದರೂ ಒಂದು ಸರ್ಕಾರವಿದ್ದರೆ ಅದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. ಸುಳ್ಳು ಹೇಳುವ ಸರ್ಕಾರ ಇವರದ್ದು. ಮದ್ಯದ ದರದಿಂದ ಹಿಡಿದು ಎಲ್ಲ ದರ ಏರಿಕೆ ಮಾಡಿ ಜನರಿಗೆ ಬರೆ ಹಾಕಿದ್ದಾರೆ ಎಂದು ಜೋಶಿ ಹೇಳಿದರು.