ಕಳೆದ ಒಂದು ವಾರದಿಂದ ರಾಜ್ಯ ಬಿಜೆಪಿ ರಾಜಕೀಯ ಚಟುವಟಿಕೆ ಜೋರಾಗಿದೆ. ಇದರ ಬೆನ್ನಲ್ಲೇ ಇದೀಗ ನೂತನ ವಿಧಾನಪರಿಷತ್ ಸದಸ್ಯರ ಹೇಳಿಕೆ ಮತ್ತಷ್ಟು ಸಂಚಲನ ಮೂಡಿಸಿದೆ.
ಬೆಂಗಳೂರು, (ಆ.24): ಕರ್ನಾಟಕ ಬಿಜೆಪಿಯಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ರಾಷ್ಟ್ರೀಯ ಬಿಜೆಪಿಯ ಸಂಘಟನಾ ಪ್ರಧಾನಿ ಕಾರ್ಯದರ್ಶಿ ಬಿಲ್ ಸಂತೋಷ್ ಅವರು ಒಬ್ಬ ನಾಯಕನ್ನ ಭೇಟಿ ಮಾಡಿ ಮಹತ್ವದ ಚರ್ಚೆಗಳು ನಡೆಸಿದ್ದಾರೆ.
ಇತ್ತ ಇಬ್ಬರು ನೂತನ ವಿಧಾನಪರಿಷತ್ ಸದಸ್ಯರು ಅಧಿವೇಶನಕ್ಕೆ ಸಚಿವರಾಗಿ ಹೋಗುತ್ತೇವೆ ಎಂದು ಹೇಳುವ ಮೂಲಕ ರಾಜ್ಯ ಬಿಜೆಪಿಯಲ್ಲಿ ಸಂಚಲ ಮೂಡಿಸಿದ್ದಾರೆ.
ಪ್ರಸಕ್ತ ಸಾಲಿನ 15ನೇ ವಿಧಾನಸಭೆಯ 7ನೇ ಅಧಿವೇಶನದ ಸೆಪ್ಟಂಬರ್ 21 ರಿಂದ ಆರಂಭಗೊಳಲಿದೆ. ಗುರುವಾರ ನಡೆದಿದ್ದ ಸಚಿವ ಸಂಪುಟದಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಒಟ್ಟು 10 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಇದರೊಳಗೆ ಸಚಿವ ಸಂಪುಟ ವಿಸ್ತರಣೆ ಮಾಡಲು ಸಿಎಂ ಪ್ಲಾನ್ ಮಾಡಿದ್ದಾರೆ.
ಅಖಾಡಕ್ಕಿಳಿದ ಬಿಎಲ್ ಸಂತೋಷ್, ರಾಜ್ಯ ಬಿಜೆಪಿಯಲ್ಲಿ ಏನಾಗ್ತಿದೆ..?
ಹೌದು...ಎಂಎಲ್‌ಸಿಗಳಾದ ಎಂಟಿಬಿ ನಾಗರಾಜ್ ಮತ್ತು ಆರ್. ಶಂಕರ್ ಅವರು ಇಂದು (ಸೋಮವಾರ) ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಂಟಿಬಿ ನಾಗರಾಜ್, ಸಿಎಂ ಆರೋಗ್ಯ ವಿಚಾರಿಸಲು ನಾವಿಬ್ಬರು ಬಂದಿದ್ದು, ಸಂಪುಟ ವಿಸ್ತರಣೆ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಅಧಿವೇಶನಕ್ಕೂ ಮುಂಚೆಯೇ ನಮ್ಮನ್ನ ಸಚಿವರಾಗಿ ಮಾಡ್ತೀವಿ ಅಂತ ಸಿಎಂ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಇನ್ನು ಇದೇ ವೇಳೆ ಆರ್. ಶಂಕರ್ ಮತನಾಡಿ, ಆದಷ್ಟು ಬೇಗ ಸಚಿವ ಸ್ಥಾನ ಕೊಡೋದಾಗಿ ಸಿಎಂ ಭರವಸೆ ಕೊಟ್ಟಿದ್ದಾರೆ. ಅಧಿವೇಶನಕ್ಕೆ ಸಚಿವರಾಗಿ ಬರ್ತೀವಿ ಎಂದು ಹೇಳಿದರು.