
ಬೆಂಗಳೂರು (ಅ.31): ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ‘ಎಕ್ಸ್’ ಖಾತೆಯಲ್ಲಿ ಕೇರಳದ ವಯನಾಡಿಗೆ ಪ್ರವಾಸಿಗರನ್ನು ಸೆಳೆಯುವಂತಹ ಪ್ರಚಾರದ ಚಿತ್ರವನ್ನು ಪೋಸ್ಟ್ ಮಾಡಿರುವುದು ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಣ ವಾಕ್ಸಮರಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಖುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಹೈಕಮಾಂಡ್ ಓಲೈಕೆಗೆ ಪ್ರಿಯಾಂಕಾ ಗಾಂಧಿ ಪ್ರತಿನಿಧಿಸುವ ಕ್ಷೇತ್ರದ ಬಗ್ಗೆ ಪ್ರಚಾರ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡರು ಟೀಕಿಸಿದ್ದರೆ, ಕಾಂಗ್ರೆಸ್ ನಾಯಕರು ಸಮರ್ಥಿಸಿಕೊಂಡಿದ್ದಾರೆ.
‘ಮಂಜಿನ ಹೊದಿಕೆಯೊಳಗೆ ಸುಂದರ ವಯನಾಡು ನಿಮ್ಮನ್ನು ಕಾಯುತ್ತಿದೆ’ ಎಂದು ಬರೆಯಲ್ಪಟ್ಟ ಚಿತ್ರವನ್ನು ನಿಗಮವು ಅ.28ರಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿತ್ತು. ಇದು ಗುರುವಾರ ವಿವಾದಕ್ಕೆ ಕಾರಣವಾಯಿತು. ವಿಪಕ್ಷ ನಾಯಕ ಅರ್.ಅಶೋಕ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಯನಾಡಿನ ಜಿಲ್ಲಾಧಿಕಾರಿ ರೀತಿ, ಫಂಡ್ ರೈಸರ್ ರೀತಿ ವರ್ತಿಸುತ್ತಿದ್ದಾರೆ. ತಮ್ಮ ಖುರ್ಚಿ ಉಳಿಸಿಕೊಳ್ಳಲು ಹೈಕಮಾಂಡ್ ಓಲೈಕೆಗೆ ಹೀಗೆ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ವಯನಾಡಿನಲ್ಲಿದೆ. ಹಿಂದೆ ಆನೆಯಿಂದ ಸತ್ತಿದ್ದ ವ್ಯಕ್ತಿಗೆ ಪರಿಹಾರ ಕೊಟ್ಟಿದ್ದರು.
ಈಗ ವಯನಾಡಿಗೆ ಪ್ರವಾಸ ಹೋಗಿ ಎಂದು ಜಾಹೀರಾತು ನೀಡುತ್ತಿದ್ದಾರೆ. ಅಲ್ಲಿ ಕರ್ನಾಟಕದ ಯಾವುದೇ ಸ್ಥಳ ಇಲ್ಲ. ಜೋಗ, ಹಂಪಿ, ಕೊಡಗು, ಗೋಕರ್ಣದಲ್ಲಿರುವಂತಹ ಸ್ಥಳ ವಯನಾಡಿನಲ್ಲಿಲ್ಲ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರ ಫ್ಲೆಕ್ಸ್ ನೋಡಲು ಜನ ಅಲ್ಲಿಗೆ ಪ್ರವಾಸ ಹೋಗಬೇಕಿದೆ. ಮೈಸೂರು ಅರಮನೆ ಬಗ್ಗೆ ಪ್ರಚಾರ ಮಾಡುವುದು ಬಿಟ್ಟು ವಯನಾಡಿನ ರಾಹುಲ್ ಗಾಂಧಿ ಅರಮನೆ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು. ವಿಧಾನಪರಿಷತ್ ವಿರೋಧಪಕ್ಷದ ಮುಖ್ಯ ಸಚೇತಕ ರವಿಕುಮಾರ್ ಮಾತನಾಡಿ, ರಾಜ್ಯ ಸರ್ಕಾರ ಕೇರಳ ಸರ್ಕಾರಕ್ಕೆ ಲಾಭ ಮಾಡಿಕೊಡಲು ಹೊರಟಿದೆಯೇ?
ನಮ್ಮ ರಾಜ್ಯಕ್ಕೆ ಬರಬೇಕಿದ್ದ ಗೂಗಲ್ ಎಐ ಕೈ ಬಿಟ್ಟು ಹೋಗಿದೆ. ಈಗ ನಮ್ಮ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿ ಮಾಡುವುದು ಬಿಟ್ಟು, ವಯನಾಡಿಗೆ ಬನ್ನಿ ಎನ್ನುವುದು ಎಷ್ಟರ ಮಟ್ಟಿಗೆ ಸರಿ? ಕರ್ನಾಟಕ ಪ್ರವಾಸೋದ್ಯಮ ಕಥೆ ಏನಾಗಬೇಕು? ಕರ್ನಾಟಕದ ಯುವಕರಿಗೆ ಉದ್ಯೋಗ ಸಿಗುವಂತೆ ಮಾಡಬೇಕು. ವಯನಾಡಿಗೆ ಬನ್ನಿ ಎಂಬ ಜಾಹೀರಾತು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಮಾಜಿ ಸಚಿವ ಸಿ.ಟಿ.ರವಿ, ಕರ್ನಾಟಕದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕಾದ ಕೆಎಸ್‌ಟಿಡಿಸಿ ವಯನಾಡಿಗೆ ಕನ್ನಡಿಗರನ್ನು ಕರೆಯುತ್ತಿದೆ. ವಯನಾಡು ಕರ್ನಾಟಕಕ್ಕೆ ಸೇರಿತೇ ಅಥವಾ ಕೆಎಸ್‌ಟಿಡಿಸಿ ಕೇರಳದ್ದಾಯಿತೇ ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.