
ಹುಬ್ಬಳ್ಳಿ(ಜೂ.14): ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುತ್ತಿದೆ. ಡ್ಯಾಂಗಳ ನೀರು ಅತ್ಯಂತ ಕೆಳಮಟ್ಟದಲ್ಲಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಕಲುಷಿತ ನೀರು ಸೇವಿಸಿ ಜನ ಸಾವಿಗೀಡಾಗುತ್ತಿದ್ದಾರೆ. ಆದರೆ ಸರ್ಕಾರ ಇನ್ನೂ ಅದರತ್ತ ಗಂಭೀರವಾಗಿ ಗಮನ ಹರಿಸುತ್ತಿಲ್ಲ. ಟಾಸ್ಕ್ ಫೋರ್ಸ್ ರಚಿಸಿಲ್ಲ, ಪೂರ್ವ ಸಿದ್ಧತೆ ಮಾಡಿಕೊಂಡಿಲ್ಲ ಎಂದು ಆರೋಪಿಸಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಒಟ್ಟಾರೆ ಹೇಳಬೇಕಾದರೆ ಇದು ಜವಾಬ್ದಾರಿ ಇಲ್ಲದ ಸರ್ಕಾರ, ಸಹಾಯಕವಲ್ಲದ ಸರ್ಕಾರ ಎಂದು ಟೀಕಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ತಿಂಗಳು ಹತ್ತಿರ ಬಂದಿದೆ. ರಾಜ್ಯಕ್ಕೆ ನೈಸರ್ಗಿಕ ಆಪತ್ತು ಬರುತ್ತಿವೆ. ಈ ಬಾರಿ ಮಾನ್ಸೂನ್ ತಡವಾಗಿದ್ದು, ಬಿತ್ತನೆ ಕಾರ್ಯಗಳು ಇನ್ನೂ ನಡೆಯದೇ ತಡವಾಗುತ್ತಿದೆ. ಮಾನ್ಸೂನ್ ಸಕಾಲಕ್ಕೆ ಬಾರದಿದ್ದರೆ ರೈತರಿಗೆ ತೀವ್ರ ಸಂಕಷ್ಟವಾಗಲಿದೆ. ಮತ್ತೊಂದು ಕಡೆ ಭೀಕರ ಚಂಡಮಾರುತದ ಕುರಿತು ಸೂಚನೆ ಸಹ ಹವಾಮಾನ ಇಲಾಖೆ ನೀಡಿದೆ. ಹೀಗಿದ್ದರೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಇವುಗಳನ್ನು ನಿಭಾಯಿಸಲು ಬೇಕಾದ ಅಗತ್ಯ ಸಿದ್ಧತೆ ಮಾಡಿಕೊಂಡಿಲ್ಲ ಎಂದು ಆರೋಪಿಸಿದರು.
ಇಂದು ನಾನು ಏನೇ ಆಗಿದ್ದರು ಅದಕ್ಕೆ ಕಾರಣ ಬಿಎಸ್‌ವೈ ಸಾಹೇಬರು: ಭಾವುಕರಾದ ಬೊಮ್ಮಾಯಿ
ಇಷ್ಟು ಬೇಗ ಬರಗಾಲ ಅಂತಾ ಹೇಳುತ್ತಿಲ್ಲ. ಆದರೆ, ರಾಜ್ಯ ಸರ್ಕಾರ ಮುಂದೆ ಸಂಭವಿಸಬಹುದಾದ ಸಮಸ್ಯೆಗಳ ಕುರಿತು ಸಮರ್ಪಕವಾಗಿ ರೂಪರೇಷೆ ಹಾಕಿಕೊಳ್ಳಬೇಕು. ಕೂಡಲೇ ತಾಲೂಕು ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಬೇಕು. ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಆ ಟಾಸ್ಕ್ ಫೋರ್ಸ್‌ನಲ್ಲಿರಬೇಕು, ಅವರಿಂದ ಸಹಕಾರ ಪಡೆಯಬೇಕು. ಎನ್‌ಡಿಆರ್‌ಎಫ್ ತಂಡಗಳನ್ನು ಚುರುಕುಗೊಳಿಸುವ ಕಾರ್ಯವಾಗಬೇಕಿದೆ ಎಂದರು.
ಶಕ್ತಿ ಯೋಜನೆ ಆರಂಭ ಶೂರತ್ವ:
ಕಳೆದ ಜೂ. 11ರಿಂದ ರಾಜ್ಯಾದ್ಯಂತ ಶಕ್ತಿ ಯೋಜನೆಯ ಮೂಲಕ ಮಹಿಳೆಯರಿಗೆ ರಾಜ್ಯದ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವುದು ಆರಂಭ ಶೂರತ್ವದಂತೆ ಕಂಡುಬರುತ್ತಿದೆ. ಗ್ಯಾರಂಟಿ ರೂಪದಲ್ಲಿ ತಾಯಿಯಂದಿರಿಗೆ ಉಚಿತ ನೀಡುವ ಸಲುವಾಗಿ ಅವರಿಗೆ ಸಮರ್ಪಕ ಪ್ರಯಾಣ ಇಲ್ಲದಂತೆ ಮಾಡುತ್ತಿದೆ. ರಾಜ್ಯದಲ್ಲಿ ಬಸ್‌ಗಳ ಸಮಸ್ಯೆ ಆಗುತ್ತಿದೆ. ಈಗಾಗಲೇ ನಾವು ಡೀಸೆಲ್ ಅನುದಾನ ಬಿಡುಗಡೆ ಮಾಡಿದ್ದೇವೆ, ಅದನ್ನು ಮುಂದುವರಿಸಬೇಕು ಎಂದು ತಿಳಿಸಿದರು.
ಬಿಜೆಪಿ ಸೋಲಿನ ಹೊಣೆಯನ್ನು ನಾನೇ ಹೊರುವೆ: ಬೊಮ್ಮಾಯಿ
ಬಹಿರಂಗಗೊಳಿಸಿ:
ಗ್ಯಾರಂಟಿಗಳಿಗೆ ಹಣಕಾಸಿನ ಹೊಂದಾಣಿಕೆ ಬಗ್ಗೆ ಸರ್ಕಾರ ಸ್ಪಷ್ಟವಾಗಿ ಹೇಳುತ್ತಿಲ್ಲ. ಹಣಕಾಸಿನ ವಿಚಾರದಲ್ಲಿ ಜನರನ್ನು ಕತ್ತಲಲ್ಲಿ ಇಡಲು ಸರ್ಕಾರ ಮುಂದಾಗಿದೆ. ಗ್ಯಾರಂಟಿ ವಿಚಾರದಲ್ಲಿ ಹಣಕಾಸಿನ ಬಗ್ಗೆ ಮಾಹಿತಿ ಪಡೆಯುವುದು ಪ್ರತಿಯೊಂದು ಕನ್ನಡಿಗನ ಹಕ್ಕಾಗಿದ್ದು, ಈ ಕುರಿತು ರಾಜ್ಯ ಸರ್ಕಾರ ಬಹಿರಂಗಗೊಳಿಸಬೇಕು. 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಹೇಳಿದ್ದು, ಈ ಗ್ಯಾರಂಟಿಗಳ ಕುರಿತು ಕಾದುನೋಡುವ ತಂತ್ರ ನಮ್ಮದು ಎಂದು ಸ್ಪಷ್ಟಪಡಿಸಿದರು.
ವಿದ್ಯುತ್ ದರ ನಾವು ಏರಿಸಿಲ್ಲ
ನಾವು ವಿದ್ಯುತ್ ಬಿಲ್ ಏರಿಕೆ ಅನುಷ್ಠಾನಕ್ಕೆ ತಂದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ ಸ್ಪಷ್ಟಪಡಿಸಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ದರ ಏರಿಕೆ ಪ್ರಸ್ತಾವನೆ ವರದಿಯನ್ನು ಒಪ್ಪಿರಲಿಲ್ಲ. ನೂತನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ವಿದ್ಯುತ್ ಬಿಲ್ ದರ ಏರಿಕೆಯ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ. ಇದರಿಂದಾಗಿ ಬಿಲ್ ಜಾಸ್ತಿ ಆಗಿದೆ. ಇದು ಒಂದು ಕೈಯಲ್ಲಿ ತೆಗೆದುಕೊಂಡು ಮತ್ತೊಂದು ಕೈಯಲ್ಲಿ ಕೊಡುವಂತಾಗಿದೆ ಎಂದು ಸರ್ಕಾರದ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.