ತಮಿಳುನಾಡಿಗೆ ನೀರು ಹರಿಸುವುದಕ್ಕೆ ಕಾಂಗ್ರೆಸ್ ತೋರಿಸುತ್ತಿರುವ ಉತ್ಸಾಹವನ್ನು ನೀರನ್ನು ಉಳಿಸಿಕೊಂಡು ರೈತರು, ಜನರ ಬದುಕನ್ನು ರಕ್ಷಣೆ ಮಾಡುವುದಕ್ಕೆ ತೋರಿಸುತ್ತಿಲ್ಲ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಆರೋಪಿಸಿದರು.
ಮಂಡ್ಯ (ಅ.01): ತಮಿಳುನಾಡಿಗೆ ನೀರು ಹರಿಸುವುದಕ್ಕೆ ಕಾಂಗ್ರೆಸ್ ತೋರಿಸುತ್ತಿರುವ ಉತ್ಸಾಹವನ್ನು ನೀರನ್ನು ಉಳಿಸಿಕೊಂಡು ರೈತರು, ಜನರ ಬದುಕನ್ನು ರಕ್ಷಣೆ ಮಾಡುವುದಕ್ಕೆ ತೋರಿಸುತ್ತಿಲ್ಲ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಆರೋಪಿಸಿದರು. ಶನಿವಾರ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಕಾವೇರಿ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿ, ಸುಪ್ರೀಂಕೋರ್ಟ್, ಪ್ರಾಧಿಕಾರ, ರಾಜ್ಯಸರ್ಕಾರಗಳಿಂದ ನಮಗೆ ಯಾವುದೇ ನ್ಯಾಯ ಸಿಗುತ್ತಿಲ್ಲ. ನ್ಯಾಯ ಸಿಗಬೇಕಾದರೆ ಹೋರಾಟ ಅನಿವಾರ್ಯವಾಗಿದೆ. ಪ್ರಾಧಿಕಾರದ ಆದೇಶಗಳು ಬರಪೀಡಿತ ಕಾವೇರಿ ಕಣಿವೆ ಜನರ ಬದುಕಿನ ಮೇಲೆ ಬರೆ ಎಳೆಯುತ್ತಿವೆ.
ರೈತರನ್ನು ತಾಳ್ಮೆಯನ್ನು ಕೆಣಕುವಂತಿವೆ. ಪ್ರಾಧಿಕಾರ ಆದೇಶ ಮಾಡುವುದೇ ತಡ ಜಲಾಶಯಗಳ ಗೇಟನ್ನು ತೆಗೆಯಲು ಸರ್ಕಾರ ಸಿದ್ಧವಿರುತ್ತದೆ. ಇದರ ಔದಾರ್ಯವೇನು ಎನ್ನುವುದೇ ಅರ್ಥವಾಗುತ್ತಿಲ್ಲ ಎಂದರು. ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕವನ್ನು ಭೂಪಟದಿಂದಲೇ ತೆಗೆದುಹಾಕಲು ಹೊರಟಿದ್ದಾರೆಂಬ ಭಾವನೆ ವ್ಯಕ್ತವಾಗುತ್ತಿದೆ. ಕರ್ನಾಟಕದ ಜನರನ್ನು ದ್ವೇಷ ಮಾಡುತ್ತಿರುವಂತೆ ಕಾಣುತ್ತಿದೆ. ಹಾಲಿ ಶಾಸಕರು ನಮಗೆ ಸ್ಪಂದಿಸುತ್ತಿಲ್ಲ. ರಾಜ್ಯಕ್ಕೆ ಮಾರಕವಾಗುವ ರೀತಿಯಲ್ಲಿ ಆದೇಶ ಬರುತ್ತಿದ್ದರೂ, ನೀರು ಹರಿಸುವ ನಿರ್ಧಾರವನ್ನು ರಾಜ್ಯ ಸರ್ಕಾರವೂ ಮಾಡುತ್ತಿದೆ.
ಆದೇಶ ಬಂದು ಒಂದು ಗಂಟೆಯಾಗದಿದ್ದರೂ ಎರಡು ಅಡಿ ನೀರು ನದಿಯಲ್ಲಿ ಹರಿಯುತ್ತಿದೆ. ಇಂತಹ ಅವಿವೇಕಿತನದ ನಿರ್ಧಾರವನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆಯೂ ಇಂತಹ ಆದೇಶಗಳನ್ನು ಧಿಕ್ಕರಿಸಿ ಎಷ್ಟೋ ಮಂದಿ ನೀರು ಬಿಡದ ತೀರ್ಮಾನ ಮಾಡಿದ್ದಾರೆ. ಈಗಲೂ ಇಂತಹ ನಿರ್ಧಾರವನ್ನು ಮುಖ್ಯಮಂತ್ರಿಗಳು ಮಾಡಬೇಕು. ನಿಮ್ಮ ಜೊತೆಗೆ ರಾಜ್ಯದ ಜನತೆ ಅದರಲ್ಲೂ ವಿಶೇಷವಾಗಿ ಮಂಡ್ಯ ಜಿಲ್ಲೆಯ ಜನರು ಇದ್ದಾರೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು ತಮಿಳುನಾಡಿಗೆ ನೀರು ಹರಿಸಲು ಉತ್ಸಾಹ ತೋರುತ್ತಿರುವ ಕಾಂಗ್ರೆಸ್ ಸರ್ಕಾರ ಅವಿವೇಕತನದ ನಿರ್ಧಾರ ಮಾಡುತ್ತಿದೆ.
ಕಾವೇರಿ ನೀರಿನ ವಿಚಾರದಲ್ಲಿ ಪ್ರಾಧಿಕಾರದಿಂದ ಪದೇಪದೇ ಅನ್ಯಾಯ: ಶಾಸಕ ದರ್ಶನ್ ಪುಟ್ಟಣ್ಣಯ್ಯ
ಈ ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು. ಏನೇ ಕಾನೂನಾತ್ಮಕ ತೊಂದರೆಗಳು ಎದುರಾದರೂ ನಾವು ಮುಖ್ಯಮಂತ್ರಿ ಜೊತೆಗಿರುತ್ತೇವೆ. ನಿಮಗೆ ತೊಂದರೆಯಾದರೆ ಜನರು ಬೆಂಬಲಕ್ಕೆ ನಿಲ್ಲುತ್ತಾರೆ. ಹಾಗಾಗಿ ನೀರು ಬಿಡದಿರಲು ದೃಢ ನಿರ್ಧಾರ ಮಾಡಬೇಕು ಎಂದು ಹೇಳಿದರು. ನಮ್ಮ ಮುಖ್ಯ ಕಾರ್ಯದರ್ಶಿಗಳು ಕಾವೇರಿ ಪ್ರಾಧಿಕಾರದಲ್ಲಿ ಗಟ್ಟಿಯಾಗಿ ವಾದ ಮಂಡಿಸಿದ್ದಾರೆ. ಆದರೆ ನಮ್ಮ ವಾದವನ್ನೇ ಕೇಳುವ ಸೌಜನ್ಯವನ್ನೂ ತೋರುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ದೃಢ ನಿರ್ಧಾರ ತೆಗೆದುಕೊಂಡು ನೀರು ನಿಲ್ಲಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.