
ಹುಬ್ಬಳ್ಳಿ (ಮೇ.19) : ನೂತನ ಸಚಿವ ಸಂಪುಟದಲ್ಲಿ ಲಿಂಗಾಯತರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡದೇ ಇದ್ದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ, ನಿವೃತ್ತ ಐಎಎಸ್ ಅಧಿಕಾರಿ ಡಾ. ಎಸ್.ಎಂ. ಜಾಮದಾರ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಲಿಂಗಾಯತರು(Lingayat community) ಬಿಜೆಪಿಯನ್ನು ತಿರಸ್ಕರಿಸಿ ಸಂಪೂರ್ಣವಾಗಿ ಕಾಂಗ್ರೆಸ್ಸಿಗೆ ಬೆಂಬಲಿಸಿದ್ದಾರೆ. ಈ ಕಾರಣದಿಂದ ಇಷ್ಟುದೊಡ್ಡಮಟ್ಟದ ಶಾಸಕರ ಸಂಖ್ಯಾಬಲ ಪಡೆಯಲು ಕಾಂಗ್ರೆಸ್ಸಿಗೆ ಸಾಧ್ಯವಾಗಿದೆ ಎಂದರು.
Karnataka CM: ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ನಗರ ಪೊಲೀಸ್ ಇಲಾಖೆ ಭರ್ಜರಿ ಮ್ಯಾಪಿಂಗ್!
ನಾವು ಜಾತಿಯ ಆಧಾರದಲ್ಲಿ ಸಚಿವ ಸ್ಥಾನ ಕೇಳುತ್ತಿಲ್ಲ. ಚುನಾಯಿತರಾದ ಲಿಂಗಾಯತರ ಸಂಖ್ಯೆಯ ಅನುಗುಣವಾಗಿ ಸಚಿವ ಸ್ಥಾನದ ಬೇಡಿಕೆ ಇಡುತ್ತಿದ್ದೇವೆ. ಈ ಬಾರಿ ಸಚಿವ ಸಂಪುಟ ಸಮಾಜದ ಶಾಸಕರಿಗೆ ಹೆಚ್ಚಿನ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದರೆ, ಇದರ ಪರಿಣಾಮ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಎದುರಿಸಬೇಕಾಗುತ್ತದೆ ಎಂದರು.
ಒಂದೇ ಡಿಸಿಎಂ ಏಕೆ?:
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಲಿಂಗಾಯತರನ್ನು ಕೇವಲ ಕೈಗೊಂಬೆಯನ್ನಾಗಿ ಮಾಡಿಕೊಂಡರು.
ಕಳೆದ ಬಿಜೆಪಿ ಸರ್ಕಾರದಲ್ಲಿ ಸಮಾಜದ 37 ಶಾಸಕರು ಆಯ್ಕೆಯಾಗಿದ್ದರು. ಈ ಬಾರಿ ಕಾಂಗ್ರೆಸ್ಸಿನಿಂದ 39 ಜನ ಶಾಸಕರಾಗಿದ್ದಾರೆ. ಎಸ್ಸಿ- ಎಸ್ಟಿಸೇರಿ 37 ಶಾಸಕರು ಆಯ್ಕೆಯಾಗುವ ಮೂಲಕ 2ನೇ ಸ್ಥಾನದಲ್ಲಿದ್ದಾರೆ. ಹಾಗಾಗಿ ಲಿಂಗಾಯತರು, ಎಸ್ಸಿ, ಎಸ್ಸಿ ಶಾಸಕರಿಗೆ ಡಿಸಿಎಂ ಸ್ಥಾನ ನೀಡಬೇಕು. ಒಬ್ಬರೇ ಡಿಸಿಎಂ ಮಾಡುತ್ತಿರುವುದೇಕೆ? ಎಂದು ಪ್ರಶ್ನಿಸಿದರು.
ಪ್ರತ್ಯೇಕ ಲಿಂಗಾಯತ:
ಪ್ರತ್ಯೇಕ ಲಿಂಗಾಯತದ ನಮ್ಮ ಕೂಗು ಇನ್ನು ನಿಂತಿಲ್ಲ. ನಮ್ಮ ಹೋರಾಟವು ಗಟ್ಟಿಯಾಗಿದೆ. 1871ರಲ್ಲೇ ಲಿಂಗಾಯತ ಸ್ವತಂತ್ರ ಧರ್ಮದ ಆದೇಶವಾಗಿತ್ತು. ನಂತರ 1901ನೇ ಗಣತಿಯಲ್ಲಿ ಇದರ ವಿರುದ್ಧ ಕೆಲಸಗಳಾದವು. ನೂತನ ಸಿಎಂ ಸಿದ್ದರಾಮಯ್ಯ ಅವರಿಂದ ಈ ಬಾರಿಯೂ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಈ ಹಿಂದೆ ಇದೇ ಸರ್ಕಾರವಿದ್ದ ವೇಳೆ ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆಯ ಪ್ರಸ್ತಾಪ ಕಳುಹಿಸಿದಾಗ, ವಾಪಸ್ ಕಳುಹಿಸಿದ್ದಕ್ಕೆ ಮೂರು ಕಾರಣಗಳನ್ನು ಕೊಟ್ಟಿದೆ. ಆಗ ಧರ್ಮ ಒಡೆದರು ಎಂದು ವೀರಶೈವರು ಬೊಬ್ಬೆ ಹಾಕಿದರು. ಇದೇ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ ಬಿದ್ದು ಹೋಯಿತು. ಈ ಘಟನೆಗಳ ನಂತರ ಡಿ.ಕೆ. ಶಿವಕುಮಾರ ಕ್ಷಮೆ ಕೋರಿದ್ದರು. ನಂತರ ಬಂದ ಎಚ್.ಡಿ. ಕುಮಾರಸ್ವಾಮಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಇದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ ಎಂದು ಜಾಮದಾರ ವಿಷಾಧಿಸಿದರು.
ಆದರೆ, ಆಗಿನ ಚಳವಳಿಯ ಪರಿಣಾಮ ಈಗ ಆಗುತ್ತಿದೆ. ಸಮಾಜ ಬಾಂಧವರೆಲ್ಲ ಜಾಗೃತರಾಗಿದ್ದು, ಪ್ರತ್ಯೇಕ ಲಿಂಗಾಯತ ಸಮುದಾಯ ಬೇಕೆ ಬೇಕು ಎಂಬ ಕೂಗು ಹೆಚ್ಚಾಗುತ್ತಿದೆ. ಹಾಗಾಗಿ ತಟಸ್ಥವಾಗಿರುವ ಲಿಂಗಾಯತ ಧರ್ಮದ ಪ್ರಸ್ತಾಪದ ಪುನರ್ ಪರಿಶೀಲನೆಗಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು. ಅಗತ್ಯಬಿದ್ದಲ್ಲಿ ನಿಯೋಗ ತಗೆದುಕೊಂಡು ಹೋಗಿ ಮುಖ್ಯಮಂತ್ರಿಗಳಿಗೆ ಒತ್ತಡ ಹಾಕಲಾಗುವುದು ಎಂದರು.
ಈ ವೇಳೆ ಬಸವರಾಜ ರೊಟ್ಟಿ, ಎಂ.ವಿ. ಗೊಂಗಡಶೆಟ್ಟಿ, ಪ್ರವೀಣಕುಮಾರ ಜಕ್ಕಲಿ, ಎಸ್.ವಿ. ಕೊಟಗಿ, ಬಿ.ಎಲ್. ಲಿಂಗಶೆಟ್ಟಿಸೇರಿದಂತೆ ಹಲವರಿದ್ದರು.
ಸಿದ್ದು ಕ್ಯಾಬಿನೆಟ್ ಸಚಿವರ ಸಂಭಾವ್ಯ ಪಟ್ಟಿ, ಸವದಿ, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿ ಹಲವರಿಗೆ ಸ್ಥಾನ!
ಡಿಕೆಶಿಗೆ ನೈತಿಕ ಹಕ್ಕಿಲ್ಲ:
ನಿಯೋಜಿತ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ(DK Shivakumar) ಈಚೆಗೆ ಲಿಂಗಾಯತ ಸಂಘಟನೆಗಳ ಎಲ್ಲ ಸಮುದಾಯದ ಸ್ವಾಮೀಜಿ ಬೆಂಬಲ ನನಗಿದೆ ಎಂದು ಹೇಳಿಕೆ ನೀಡಿದ್ದಾರೆ. ಯಾವ ಸ್ವಾಮೀಜಿ, ಸಮುದಾಯ ಅವರ ಬೆಂಬಲಕ್ಕಿದೆ ಎಂಬುದನ್ನು ಸ್ಪಷ್ಟಪಡಿಸಲಿ. ನಾಲ್ಕು ವೀರಶೈವ ಶ್ರೀಗಳು ನಿಮ್ಮ ಪರವಾಗಿದ್ದಾರೆ ಎಂದರೆ ಇಡೀ ಲಿಂಗಾಯತ ಸಮುದಾಯ ನಿಮ್ಮ ಪರವಾಗಿದೆ ಎಂದಲ್ಲ. ವೀರಶೈವರ ಬಗ್ಗೆ ನೀವು ಏನಾದರೂ ಮಾತನಾಡಿಕೊಳ್ಳಿ, ಬೆಂಬಲಿಸಿಕೊಳ್ಳಿ ಅದಕ್ಕೂ ನಮಗೂ ಸಂಬಂಧವಿಲ್ಲ. ಆದರೆ, ಲಿಂಗಾಯತರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡುವುದಾಗಿ ಜಾಮದಾರ ಎಚ್ಚರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.