‘ಒಕ್ಕಲಿಗ ಸಮುದಾಯದವರು ಮುಖ್ಯಮಂತ್ರಿಯಾಗುವ ಅವಕಾಶ ಮತ್ತೊಮ್ಮೆ ಬಂದಿದೆ. ಆದ್ದರಿಂದ ನೀವು ಬೆಂಬಲ ನೀಡಬೇಕು’ ಎಂದು ಇತ್ತೀಚೆಗೆ ಸಮುದಾಯದ ಸಭೆಯಲ್ಲಿ ಅಭಿಲಾಷೆ ವ್ಯಕ್ತಪಡಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಭಾನುವಾರ ಮತ್ತೊಮ್ಮೆ ತಮ್ಮ ಮನದ ‘ಮುಖ್ಯಮಂತ್ರಿ’ ಇಂಗಿತವನ್ನು ಪರೋಕ್ಷವಾಗಿ ಹೊರಹಾಕಿದ್ದಾರೆ.
ಬೆಂಗಳೂರು (ನ.28): ‘ಒಕ್ಕಲಿಗ ಸಮುದಾಯದವರು ಮುಖ್ಯಮಂತ್ರಿಯಾಗುವ ಅವಕಾಶ ಮತ್ತೊಮ್ಮೆ ಬಂದಿದೆ. ಆದ್ದರಿಂದ ನೀವು ಬೆಂಬಲ ನೀಡಬೇಕು’ ಎಂದು ಇತ್ತೀಚೆಗೆ ಸಮುದಾಯದ ಸಭೆಯಲ್ಲಿ ಅಭಿಲಾಷೆ ವ್ಯಕ್ತಪಡಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಭಾನುವಾರ ಮತ್ತೊಮ್ಮೆ ತಮ್ಮ ಮನದ ‘ಮುಖ್ಯಮಂತ್ರಿ’ ಇಂಗಿತವನ್ನು ಪರೋಕ್ಷವಾಗಿ ಹೊರಹಾಕಿದ್ದಾರೆ. ಒಕ್ಕಲಿಗ ಸಮುದಾಯದ ಮೀಸಲಾತಿ ಪ್ರಮಾಣವನ್ನು ಶೇ.4 ರಿಂದ 12ಕ್ಕೆ ಹೆಚ್ಚಳ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಲು ನಡೆದ ರಾಜ್ಯ ಒಕ್ಕಲಿಗರ ಸಂಘದ ಸಭೆಯಲ್ಲಿ, ‘ಅಧಿಕಾರ ಕೊಡಿ. ನಿಮ್ಮ ಬೇಡಿಕೆ ಈಡೇರಿಸುತ್ತೇನೆ’ ಎನ್ನುವ ಧಾಟಿಯಲ್ಲಿ ಸಮುದಾಯಕ್ಕೆ ಕರೆ ನೀಡಿದರು.
‘ನೀವು ನನ್ನನ್ನು ಬಾಲಂಗೋಚಿಯಾಗಿಯಾದರೂ ಬಳಸಿಕೊಳ್ಳಿ, ತಲೆಯಂತಾದರೂ ಬಳಸಿಕೊಳ್ಳಿ. ನಿಮ್ಮ ಸ್ಫೂರ್ತಿ, ಆತ್ಮ ವಿಶ್ವಾಸ ನೋಡುತ್ತಿದ್ದರೆ ನಮ್ಮನ್ನು ವಿಧಾನಸೌಧದಲ್ಲಿ ಕೂರಿಸುವ ರೀತಿ ಇದೆ. ನೀವು ಏನು ಮಾಡುತ್ತೀರೋ ಗೊತ್ತಿಲ್ಲ. ನಿಮ್ಮ ಮನೆ ಬಾಗಿಲಿಗೆ ಅವಕಾಶ ಬಂದಿದ್ದು ಅದನ್ನು ಕಳೆದುಕೊಳ್ಳಬೇಡಿ. ಪೆನ್ಸಿಲ್‌ನಲ್ಲಿ ಬರೆದಿದ್ದನ್ನು ಅಳಿಸಬಹುದು. ಆದರೆ ಪೆನ್‌ನಲ್ಲಿ ಬರೆದಿದ್ದನ್ನು ಅಳಿಸಲು ಆಗುವುದಿಲ್ಲ. ನನ್ನ ಕೈಗೆ ಪೆನ್ನು, ಪೇಪರ್(ಅಧಿಕಾರ) ಕೊಡಿ. ಸಮಾಜಕ್ಕೆ ಯಾವ ರೀತಿ ಅನುಕೂಲ ಮಾಡಿಕೊಡಬೇಕು ಎಂದು ನನಗೆ ಗೊತ್ತಿದೆ. ಇದನ್ನು ನಾನು ಈ ಹಿಂದೆಯೇ ಹೇಳಿದ್ದೇನೆ. ನಿಮ್ಮ ಆಶೀರ್ವಾದ ನನ್ನ ಮೇಲೆ ಇರಲಿ’ ಎಂದು ಮಾರ್ಮಿಕವಾಗಿ ನುಡಿದರು.
ಡಬಲ್ ಇಂಜಿನ್ ಸರ್ಕಾರ ನುಡಿದಂತೆ ನಡೆದಿಲ್ಲ: ಡಿ.ಕೆ.ಶಿವಕುಮಾರ್
‘ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಹೆಚ್ಚಿಸುವಂತೆ ನಾವು ಕೇಳಿದ್ದೇವೆ. ಯಾರ ಹಕ್ಕನ್ನೂ ಕೇಳುತ್ತಿಲ್ಲ. ಸಮಾಜದ ಹಕ್ಕಿಗಾಗಿ ನಾವೆಲ್ಲಾ ಹೋರಾಟ ನಡೆಸಬೇಕಿದೆ. ಉಳಿ ಪೆಟ್ಟು ಬೀಳದೇ ಯಾವ ಕಲ್ಲೂ ಶಿಲೆಯಾಗುವುದಿಲ್ಲ. ದೇವರು ನಮಗೆ ವರ ಅಥವಾ ಶಾಪ ನೀಡುವುದಿಲ್ಲ. ಅವಕಾಶ ನೀಡುತ್ತಾನೆ. ಅದನ್ನು ವರವಾಗಿ ಉಪಯೋಗಿಸಿಕೊಳ್ಳಬೇಕು. ಒಗ್ಗಟ್ಟಿನಿಂದ, ನಮ್ಮ ವೈಯಕ್ತಿಕ ಸ್ವಾಭಿಮಾನ ಬದಿಗಿಟ್ಟು ಹೋರಾಟ ನಡೆಸೋಣ’ ಎಂದು ಕರೆ ನೀಡಿದರು.
ಬಂಗಾರದ ಬೆಳಕು ಸ್ವಾಗತಿಸಿ: ‘ಅರ್ಜುನನ ಗುರಿ, ವಿದುರನ ನೀತಿ, ಕೃಷ್ಣನ ತಂತ್ರಗಾರಿಕೆ ಅನುಸರಿಸಿದರೆ ಯಶಸ್ವಿಯಾಗಬಹುದು’ ಎಂದು ಮಾರ್ಮಿಕವಾಗಿ ನುಡಿದ ಶಿವಕುಮಾರ್, ‘ಇಂದು ನಮ್ಮ ಮನೆಯ ಬಾಗಿಲಿಗೆ ಬೆಳಕು ಹರಿದುಬಂದಿದೆ. ಅದನ್ನು ನೀವು ರಾಜಕೀಯವಾಗಿ ಬಳಸಿಕೊಳ್ಳಬೇಕು. ನೀವು ನಿಮ್ಮ ಮನೆಯ ಕಿಟಕಿ, ಬಾಗಿಲು ತೆರದು ಆ ಬಂಗಾರದ ಬೆಳಕನ್ನು ಲಕ್ಷ್ಮಿಯನ್ನು ಕರೆದುಕೊಳ್ಳುವಂತೆ ಮನೆಯೊಳಗೆ ಕರೆದುಕೊಳ್ಳಬೇಕು. ನಿಮ್ಮ ಕೈಯಲ್ಲಿ ಅಧಿಕಾರ ಇಲ್ಲದಿದ್ದರೆ ನಿಮ್ಮಿಂದ ಏನನ್ನೂ ಮಾಡಲು ಸಾಧ್ಯವಿಲ್ಲ. ಅಧಿಕಾರವನ್ನು ಕೊಡುವುದು ಬಿಡುವುದು ಈ ಜನಾಂಗದ ಕೈಯಲ್ಲಿ ಮಾತ್ರ ಇದೆ’ ಎಂದು ಒಗಟಾಗಿ ಹೇಳಿದರು.
‘ನಾನು ಜೈಲಿಗೆ ಹೋದಾಗಲೂ ಸಮಾಜ ನೈತಿಕ ಬೆಂಬಲ ವ್ಯಕ್ತಪಡಿಸುವುದರ ಜೊತೆಗೆ ಬೀದಿಗಿಳಿದು ಹೋರಾಟವನ್ನೂ ನಡೆಸಿದೆ. ಸಮಾಜದ ಋುಣ ತೀರಿಸಬೇಕಿದೆ. ಬಹಳ ದೊಡ್ಡ ಹೋರಾಟಕ್ಕೆ ನಾವು ಸಜ್ಜಾಗಬೇಕು. 13 ಜಿಲ್ಲೆಯಲ್ಲಿ ಪ್ರಬಲವಾಗಿದ್ದೇವೆ ಎಂದು ಸುಮ್ಮನೇ ಕೂರಬಾರದು. ಹಳ್ಳಿ-ಹಳ್ಳಿ ತಿರುಗಿ ಸಂಘಟನೆ ಮಾಡಬೇಕು. ನಗೆಪಾಟಲಿಗೆ ಈಡಾಗಬಾರದು’ ಎಂದು ಕಿವಿಮಾತು ಹೇಳಿದರು.
‘ಪ್ರಸ್ತುತ ಸನ್ನಿವೇಶದಲ್ಲಿ ವಿಶ್ವಮಾನವ ತತ್ವ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ಸಮಾಜ ಮತ್ತು ನಮ್ಮ ಪಕ್ಷ ಗುರುತಿಸಿರುವುದು ಒಕ್ಕಲಿಗ ಎಂಬ ಕಾರಣಕ್ಕಾಗಿ. ಎಸ್.ಎಂ.ಕೃಷ್ಣ ಅವರ ಬಳಿಕ ನನ್ನನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿದ್ದಾರೆ. ಆರ್.ಅಶೋಕ್ ಸೇರಿದಂತೆ ಇಲ್ಲಿರುವ ಮೂವರನ್ನು ಬಿಜೆಪಿ ಸಂಘಟಿಸಿದ್ದಾರೆ ಎನ್ನುವ ಕಾರಣಕ್ಕಾಗಿ ಸಚಿವರನ್ನಾಗಿ ಮಾಡಿಲ್ಲ. ಸಮಾಜದ ಪ್ರತಿನಿಧಿಗಳಾಗಿ ಸ್ಥಾನ ನೀಡಿದ್ದಾರೆ’ ಎಂದು ವ್ಯಾಖ್ಯಾನಿಸಿದರು.
ನಾನು, ರವಿಚಂದ್ರನ್ ಒಂದೇ ಶಾಲೆಯಲ್ಲಿ ಕಲಿತವರು: ಡಿ.ಕೆ.ಶಿವಕುಮಾರ್
ನಿಮ್ಮ ಮನೆ ಬಾಗಿಲಿಗೆ ಅವಕಾಶ ಬಂದಿದೆ. ಅದನ್ನು ಕಳೆದುಕೊಳ್ಳಬೇಡಿ. ಅಧಿಕಾರವನ್ನು ಕೊಡುವುದು ಬಿಡುವುದು ಈ ಜನಾಂಗದ ಕೈಯಲ್ಲಿ ಮಾತ್ರ ಇದೆ. ನನ್ನ ಕೈಗೆ ಪೆನ್ನು, ಪೇಪರ್ (ಅಧಿಕಾರ) ಕೊಡಿ. ಸಮಾಜಕ್ಕೆ ಯಾವ ರೀತಿ ಅನುಕೂಲ ಮಾಡಿಕೊಡಬೇಕು ಎಂದು ನನಗೆ ಗೊತ್ತಿದೆ.
- ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ