Latest Videos

ಕಾಂಗ್ರೆಸ್ ಸರ್ಕಾರ ರಾಷ್ಟ್ರದ್ರೋಹಿಗಳನ್ನು ಪ್ರೋತ್ಸಾಹಿಸುತ್ತಿದೆ: ವಿಶ್ವೇಶ್ವರ ಹೆಗಡೆ ಕಾಗೇರಿ

By Kannadaprabha NewsFirst Published May 24, 2024, 10:22 PM IST
Highlights

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ಅವರ ನೇತೃತ್ವವೇ ಜನರಿಂದ ತಿರಸ್ಕಾರಕ್ಕೊಳಪಡುತ್ತಿದೆ. ಲೋಕಸಭಾ ಚುನಾವಣೆಯ ಫಲಿತಾಂಶದಲ್ಲೂ ಅದು ಕಾಣುತ್ತದೆ ಎಂದು ಮಾಜಿ ಸ್ಪೀಕರ್ ಹಾಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಶಿರಸಿ (ಮೇ.24): ರಾಜ್ಯ ಸರ್ಕಾರದ ಒಂದು ವರ್ಷದ ಸಾಧನೆ ಶೂನ್ಯ. ಇದೊಂದು ಶೂನ್ಯ ಸಾಧಕ ಸರ್ಕಾರ. ಗ್ರೇಸ್ ಮಾರ್ಕ್ಸ್ ಕೊಟ್ಟರೂ ಉತ್ತೀರ್ಣವಾಗದ ಸರ್ಕಾರವಿದು. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ಅವರ ನೇತೃತ್ವವೇ ಜನರಿಂದ ತಿರಸ್ಕಾರಕ್ಕೊಳಪಡುತ್ತಿದೆ. ಲೋಕಸಭಾ ಚುನಾವಣೆಯ ಫಲಿತಾಂಶದಲ್ಲೂ ಅದು ಕಾಣುತ್ತದೆ ಎಂದು ಮಾಜಿ ಸ್ಪೀಕರ್ ಹಾಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನಬದ್ಧವಾಗಿ ಆಯ್ಕೆಯಾದ ಸರ್ಕಾರವೊಂದರ ಮೊದಲ ಜವಾಬ್ದಾರಿ ಜನರ ಜೀವ ರಕ್ಷಣೆ ಮತ್ತು ಆಸ್ತಿ ರಕ್ಷಣೆಯಾಗಿದೆ. 

ರಾಜ್ಯ ಕಾಂಗ್ರೆಸ್ ಸರ್ಕಾರ ಇದರಲ್ಲೇ ವಿಫಲವಾಗಿದೆ. ಕಾನೂನು, ಶಾಂತಿ, ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯದಲ್ಲಿ ಗೃಹಮಂತ್ರಿ, ಮುಖ್ಯಮಂತ್ರಿಗಳಿದ್ದಾರಾ ಎಂದು ಕೇಳುವ ಪರಿಸ್ಥಿತಿ ಬಂದಿದೆ. ಅಪರಾಧಿಗಳಿಗೆ ಕಾಂಗ್ರೆಸ್ ರಕ್ಷಣೆ ಕೊಡುವ ಕಾರಣಕ್ಕೆ ಈ ಪರಿಸ್ಥಿತಿ ಬಂದಿದೆ. ರಾಷ್ಟ್ರದ್ರೋಹಿಗಳನ್ನು ಪ್ರೋತ್ಸಾಹಿಸುತ್ತಿದೆ ಎಂದರು. ಸರ್ಕಾರ ಬಹುಸಂಖ್ಯಾತ ವಿರೋಧಿ ನೀತಿ ಅನುಸರಿಸುತ್ತಿದೆ. ಸರ್ಕಾರದ ಈ ರೀತಿಯ ಧೋರಣೆಯಿಂದಲೇ ಹಾಡಹಗಲೇ ಚಾಕು ಹಿಡಿದು ನೇಹಾ ಹತ್ಯೆ, ಅಂಜಲಿ ಹತ್ಯೆ ಮುಂತಾದವುಗಳನ್ನು ಮಾಡಲು ಸಾಧ್ಯವಾಗಿದೆ. ಗೃಹ ಸಚಿವ ಪರಮೇಶ್ವರ ಅಸಹಾಯಕರಾಗಿದ್ದಾರೆ. ಅವರಿಗೆ ಕೆಟ್ಟ ಹೆಸರು ತರಬೇಕೆಂದೇ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ನಡೆಸುತ್ತಿರುವ ಪ್ರಯತ್ನವಿದು ಎಂದು ನೇರವಾಗಿ ಆರೋಪಿಸುತ್ತಿದ್ದೇನೆ ಎಂದರು.

ಸಚಿವೆ ಹೆಬ್ಬಾಳಕರ ಕೀಳುಮಟ್ಟದ ಹೇಳಿಕೆ ಸರಿಯಲ್ಲ: ಜಗದೀಶ್ ಶೆಟ್ಟರ್

ರಾಜ್ಯದಲ್ಲಿ ಜೀವಕ್ಕೇ ಗ್ಯಾರಂಟಿ ಇಲ್ಲದಮೇಲೆ ಇನ್ಯಾವ ಗ್ಯಾರಂಟಿ ಕೊಟ್ಟೂ ಪ್ರಯೋಜನವಿಲ್ಲ. ನಮ್ಮ ಜಿಲ್ಲೆಯಲ್ಲೂ ಅಂತಹ ಪರಿಸ್ಥಿತಿ ಕಂಡುಬರುತ್ತಿದೆ. ಇತ್ತೀಚೆಗೆ ಉದ್ಯಮಿ ಪ್ರೀತಂ ಪಾಲನಕರ್ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಏಕೆ ಬಂತು? ಸಿದ್ದಾಪುರದಲ್ಲಿ ವ್ಯಕ್ತಿಯೊಬ್ಬನನ್ನು ಬೈಕ್ ಜತೆಯೇ ಸುಟ್ಟುಹಾಕಿದ ಪ್ರಕರಣ ನಡೆಯಿತು. ಕಾನಗೋಡಿನಲ್ಲಿ ಸೈನಿಕನೊಬ್ಬನ ಮನೆಗೆ ಹೋಗಿ ಹಲ್ಲೆ ಮಾಡಲಾಯಿತು. ಈ ಎಲ್ಲ ಪ್ರಕರಣಗಳಲ್ಲಿ ಇವತ್ತಿಗೂ ಕ್ರಮಗಳಾಗಲಿಲ್ಲ. ಇದರಿಂದಾಗಿ ಹಳ್ಳಿ ಹಳ್ಳಿಯಲ್ಲಿಯೂ ಅಪರಾಧಿಗಳು ವಿಜೃಂಭಿಸುತ್ತಿದ್ದಾರೆ. ನ್ಯಾಯಕ್ಕೆ, ಜೀವಕ್ಕೆ ಬೆಲೆ ಇಲ್ಲದಂತಾಗಿರುವುದು ರಾಜ್ಯ ಸರ್ಕಾರದ ವೈಫಲ್ಯವಾಗಿದೆ ಎಂದರು.

ಈ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಇಲಾಖೆಯನ್ನು ಹದಗೆಡಿಸಲಾಗಿದೆ. ಈಗ ನೀಡುತ್ತಿರುವ ಶಿಕ್ಷಣ ನೋಡಿದರೆ, ಮುಂದಿನ ಯುವ ಪೀಳಿಗೆ ಎಷ್ಟು ನಿರಾಶಾದಾಯಕವಾಗಿರುತ್ತದೆ ಎಂದು ಬೇಸರವಾಗುತ್ತದೆ. ಒಂದೇ ವರ್ಷದಲ್ಲಿ ೨೦ ಗ್ರೇಸ್ ಮಾರ್ಕ್ಸ್ ಕೊಡುವ ಪರಿಸ್ಥಿತಿ ಬಂದಿದೆಯೆಂದರೆ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಏನು ಮಾಡುತ್ತಿದ್ದಾರೆ? ಮಧು ಬಂಗಾರಪ್ಪ ಬಗ್ಗೆ ಹೇಳುವುದೇ ತಪ್ಪು. ಅವರನ್ನು ಶಿಕ್ಷಣ ಮಂತ್ರಿ ಮಾಡಿದ್ದೇ ತಪ್ಪು. ಅಸಮರ್ಪಕ ನಿರ್ವಹಣೆಯ ಕಾರಣದಿಂದ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ ಅವರನ್ನು ಮುಖ್ಯಮಂತ್ರಿಗಳು ಉಚ್ಚಾಟಿಸಬೇಕು ಎಂದು ಆಗ್ರಹಿಸಿದರು. ಪ್ರತಿಪಕ್ಷವಾಗಿ ನಮ್ಮ ಜವಾಬ್ದಾರಿ ಇದೆ. ರಾಜ್ಯ ಸರ್ಕಾರದ ವೈಫಲ್ಯದ ವಿರುದ್ಧ ಮುಂದಿನ ದಿನಗಳಲ್ಲಿ ಸಂಘಟಿತ ಹೋರಾಟ ಮಾಡುತ್ತೇವೆ ಎಂದರು.

ವಿಪ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ನಿಶ್ಚಿತ: ಆಯನೂರು ಮಂಜುನಾಥ್ ವಿಶ್ವಾಸ

ಅನಂತಕುಮಾರ ಹೆಗಡೆ ಬರಬೇಕಿತ್ತು: ಅನಂತಕುಮಾರ ಹೆಗಡೆ ಆರು ಬಾರಿ ಸಂಸದರಾದವರು, ಮಂತ್ರಿಯಾದವರು. ಮೋದಿಯವರು ಬಂದಾಗ ಬರಬೇಕಿತ್ತು ಎಂಬ ಅಭಿಪ್ರಾಯ ನಮ್ಮದೂ ಆಗಿತ್ತು. ಇನ್ನು ಶಿವರಾಮ ಹೆಬ್ಬಾರರಿಗೆ ಬಿಜೆಪಿ ಸರಿಹೊಂದುತ್ತಿಲ್ಲ ಎಂದು ಆಗಿದೆ. ಇಂಥ ಸಂದರ್ಭದಲ್ಲಿ ಅವರು ರಾಜೀನಾಮೆ ಕೊಡಬೇಕು. ಮುಂದೆ ಚುನಾವಣೆ ಎದುರಿಸಬೇಕು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಒತ್ತಾಯಿಸಿದರು. ತಾಂತ್ರಿಕವಾಗಿ ಒಂದು ಪಕ್ಷದಲ್ಲಿದ್ದು ಆ ಪಕ್ಷದ ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಳ್ಳದಿರುವುದು ಪ್ರಜಾಪ್ರಭುತ್ವದಲ್ಲಿ ಒಬ್ಬ ಜನಪ್ರತಿನಿಧಿಯಾಗಿ ಶೋಭೆ ತರುವ ಸಂಗತಿ ಅಲ್ಲ. ಹೆಬ್ಬಾರರು ಗೊಂದಲದಲ್ಲಿದ್ದು, ಕ್ಷೇತ್ರದ ಜನರನ್ನೂ ಗೊಂದಲದಲ್ಲಿ ಇಡುವುದು ವ್ಯವಸ್ಥೆಯನ್ನು ಅಪಹಾಸ್ಯ ಮಾಡುವ ನಿಲುವಾಗಿದ್ದು, ಅದು ತಪ್ಪು. ಅವರು ತಕ್ಷಣ ತಮ್ಮ ನಿಲುವನ್ನು ತೆಗೆದುಕೊಂಡು ಜನರೆದುರು ಹೋಗಬೇಕು ಎಂದು ಆಗ್ರಹಿಸಿದರು.

click me!