ಯು.ಟಿ. ಖಾದರ್‌ ಅಲ್ಲ, ಲೂಟಿ ಖಾದರ್‌: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಾಗ್ದಾಳಿ

Published : Oct 29, 2025, 07:18 AM IST
UT Khader

ಸಾರಾಂಶ

ಯು.ಟಿ.ಖಾದರ್ ಕಾರ್ಯವೈಖರಿ ವಿರುದ್ಧ ಸಂಸದ ವಿಶ್ವೇಶ್ವರ ಹೆಗಡೆ ಹರಿಹಾಯ್ದಿದ್ದು, ವಿಧಾನಸಭೆ ಆಡಳಿತ ಸುಧಾರಣೆ ಮತ್ತು ಅಭಿವೃದ್ಧಿ ಹೆಸರಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆಪಾದನೆ ಮಾಡಿದ್ದಾರೆ.

ಬೆಂಗಳೂರು (ಅ.29): ವಿಧಾನಸಭೆ ಹಾಲಿ ಸ್ಪೀಕರ್ ಯು.ಟಿ.ಖಾದರ್ ಕಾರ್ಯವೈಖರಿ ವಿರುದ್ಧ ಮಾಜಿ ಸ್ಪೀಕರ್ ಹಾಗೂ ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಹರಿಹಾಯ್ದಿದ್ದು, ‘ವಿಧಾನಸಭೆ ಆಡಳಿತ ಸುಧಾರಣೆ ಮತ್ತು ಅಭಿವೃದ್ಧಿ ಹೆಸರಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ’ ಎಂದು ಗಂಭೀರ ಆಪಾದನೆ ಮಾಡಿದ್ದಾರೆ. ‘ಈ ಬಗ್ಗೆ ಹಾಲಿ ನ್ಯಾಯಾಧೀಶರಿಂದ ತನಿಖೆ ಆಗಬೇಕು. ಜತೆಗೆ ಭ್ರಷ್ಟಾಚಾರ ಬಗ್ಗೆ ರಾಜ್ಯಪಾಲರಿಗೆ ಪತ್ರದ ಮೂಲಕ ಗಮನಕ್ಕೆ ತರುತ್ತೇನೆ. ಸ್ಪೀಕರ್ ಕೂಡ ಆರ್‌ಟಿಐ ವ್ಯಾಪ್ತಿಗೆ ಬರಬೇಕು’ ಎಂದೂ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವಿಧಾನಸಭೆಯ ಹಗರಣ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಖಾದರ್‌ ಅವರನ್ನು ‘ಲೂಟಿ ಖಾದರ್‌’ ಎಂದು ಕರೆಯುವ ಮಟ್ಟಕ್ಕೆ ವ್ಯವಸ್ಥೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ಅವರು ಕೇವಲ ಯು.ಟಿ.ಖಾದರ್‌ ಅಲ್ಲ. ವಿಧಾನಸಭೆಯ ಸಭಾಧ್ಯಕ್ಷರು. ಅವರು ಸಭಾಧ್ಯಕ್ಷರ ಪೀಠದ ಪಾವಿತ್ರ್ಯತೆ ಗೌರವ, ಘನತೆ ಹೆಚ್ಚಿಸಬೇಕು. ಇಂತಹ ಪೀಠದ ಮೇಲೆ ಆರೋಪಗಳು ಕೇಳಿ ಬರುತ್ತಿರುವುದರಿಂದ ಆರೋಪಗಳಿಂದ ಪೀಠ ಮುಕ್ತವಾಗಲಿ ಎಂದು ನಾನು ಈ ವಿಚಾರಗಳನ್ನು ಹೇಳುತ್ತಿದ್ದೇನೆ.

ಈ ಸಂಬಂಧ ರಾಜ್ಯಪಾಲರಿಗೆ ಪತ್ರ ಕೊಡುತ್ತೇನೆ. ಇದನ್ನು ಖಾದರ್‌ ಸವಾಲಾಗಿ ಸ್ವೀಕರಿಸಿ ಸ್ವಯಂ ಪ್ರೇರಿತವಾಗಿ ತನಿಖೆಗೆ ಸೂಚಿಸಿ ಆರೋಪ ಮುಕ್ತರಾಗುವತ್ತ ಹೆಜ್ಜೆ ಇಡಬೇಕು’ ಎಂದು ಹೇಳಿದರು. ‘ಖಾದರ್ ಅವರ ಅವಧಿಯಲ್ಲಿ ವಿವಾದ, ಗೊಂದಲ, ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿರುವುದರಿಂದ ಹಾಲಿ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಿಖೆ ನಡೆಸಬೇಕು. ಸ್ಪೀಕರ್ ಸ್ಥಾನದ ವಿರುದ್ಧ ಬಂದಿರುವ ಆರೋಪಿಗಳಿಂದ ಆ ಸ್ಥಾನವು ಮುಕ್ತವಾಗಬೇಕು. ಸ್ಪೀಕರ್‌ ಕಚೇರಿ ಟೆಂಡರ್‌ ಮಂಗಳೂರು ಮೂಲದವರಿಗೇ ಏಕೆ ಸಿಗುತ್ತಿದೆ? ಅದೂ ಕೆಲವರಿಗೇ ಏಕೆ ಸಿಗುತ್ತಿದೆ? ವಿಧಾನಸಭಾಧ್ಯಕ್ಷರ ಸಚಿವಾಲಯದ ಅಧಿಕಾರಿಗಳ ಅಭಿಪ್ರಾಯ ಏನಿತ್ತು’ ಎಂದು ಪ್ರಶ್ನಿಸಿದರು.

‘ನನಗೆ ಗೊತ್ತಿರುವ ಪ್ರಕಾರ ಹಣಕಾಸು ಇಲಾಖೆ ಖರೀದಿಗಳನ್ನು ತಿರಸ್ಕರಿಸಿದೆ. ಬಳಿಕ ಹಣಕಾಸು ಇಲಾಖೆ ಹೊಣೆ ಹೊತ್ತ ಮುಖ್ಯಮಂತ್ರಿಗಳೇ ಒಪ್ಪಿಗೆ ಕೊಡಿಸಿದ ಆರೋಪವಿದೆ. ಖಾದರ್‌ ಅವರಿಗೆ ಸ್ವತಃ ಸಿಎಂ ಅವರೇ ಬೆಂಬಲ ಕೊಟ್ಟ ಆಕ್ಷೇಪವಿದೆ. ತುರ್ತಾಗಿ ಖರೀದಿ ಮಾಡಬೇಕಾದ ಕೆಲಸ ಏನಿತ್ತು?’ ಎಂದು ಕಾಗೇರಿ ಕೇಳಿದರು.

ಮಸಾಜ್‌ ಪಾರ್ಲರ್‌ ಮಾದರಿಗೆ ವಿರೋಧ: ‘ವಿಧಾನಸಭೆ ಪ್ರಧಾನ ಬಾಗಿಲಿಗೆ ರೋಸ್‌ವುಡ್‌ನ ಮರದ ಕೆತ್ತನೆಯ ಚೌಕಟ್ಟು ಮಾಡಿಸಿದಾಗಿನಿಂದ ಭ್ರಷ್ಟಾಚಾರದ ಆರೋಪಗಳು ಆರಂಭವಾಗಿತ್ತು. ಸಭಾಂಗಣಕ್ಕೆ ಹೊಸ ಟಿ.ವಿ.ಸೆಟ್ ಅಳವಡಿಸಿದ್ದರು. ಎಐ ಮಾನಿಟರ್ ಸಿಸ್ಟಂ ಅನ್ನು ಹಾಕಲು ಸಾಕಷ್ಟು ಖರ್ಚು-ವೆಚ್ಚಗಳಾಗಿವೆ. ಎಲ್ಲ ಶಾಸಕರಿಗೆ ಗಂಡಭೇರುಂಡ ಹೋಲಿಕೆಯ ಗಡಿಯಾರಗಳನ್ನು ಕೊಟ್ಟರು. ಮೊಗಸಾಲೆಯಲ್ಲಿ ಯಂತ್ರ ಅಳವಡಿಸಿ ಮಸಾಜ್ ಪಾರ್ಲರ್ ಮಾದರಿಯಲ್ಲಿ ಬದಲಾಯಿಸಿದ್ದಕ್ಕೆ ದೊಡ್ಡ ಪ್ರಮಾಣದ ವಿರೋಧ ವ್ಯಕ್ತವಾಗಿತ್ತು’ ಎಂದು ಹೇಳಿದರು.

ಊಟ, ಉಪಹಾರ ಅಗತ್ಯವಿತ್ತೇ?: ‘ಖಾದರ್‌ ಸರ್ಕಾರದ ವತಿಯಿಂದ ಊಟ, ಉಪಹಾರ ಕೊಡಲು ಆರಂಭಿಸಿದರು. ಇದು ಅಗತ್ಯವಿತ್ತೇ? ಇಲ್ಲ ಎಂದು ಮೇಲ್ನೋಟಕ್ಕೆ ಕಾಣುತ್ತದೆ. ಹಾಸು ಹೊದಿಕೆ ಬದಲಿಸಿ, ಕಾರ್ಪೆಟ್ ಬದಲಿಸಿದ್ದಲ್ಲದೆ ಸುಣ್ಣ ಬಣ್ಣ ಹೊಡೆಸಿದರು. ಅವರು ಒಂದೊಂದು ಮುಟ್ಟಿದರೂ ಅದರೊಳಗೆ ಇನ್ನೇನೋ ಇದೆ ಎಂಬ ಅನುಮಾನಗಳು ಹುಟ್ಟುತ್ತವೆ. ಶಾಸಕರ ಭವನದಲ್ಲಿ ಶಾಸಕರ ಕೊಠಡಿಗಳನ್ನು ಭದ್ರಪಡಿಸಲು ಸ್ಮಾರ್ಟ್ ಡೋರ್ ಲಾಕರ್ ಹಾಕಿಸಿದರು. ಇದಕ್ಕೆ ಗಾಡ್ರೆಜ್‍ನಂತಹ ಕಂಪೆನಿಯವರ ಬೆಲೆ 14- 16 ಸಾವಿರ ರು ಇದೆ ಎಂದು ಆನ್‍ಲೈನ್ ಪರಿಶೀಲನೆಯಿಂದ ಗೊತ್ತಾಗುತ್ತದೆ. ಅದಕ್ಕೆ ಇವರು 49 ಸಾವಿರ ರು.ಕ್ಕಿಂತ ಹೆಚ್ಚು ಖರ್ಚು ತೋರಿಸಿದ್ದಾರೆ. ಇದರ ಜೊತೆಗೆ ಸ್ಮಾರ್ಟ್ ಸೇಫ್ ಲಾಕರ್ ಹಾಕಿಸಿದರು. ಅದಕ್ಕೆ ಆನ್‌ಲೈನ್‌ ಮಾರ್ಕೆಟ್‍ನಲ್ಲಿ 8-9 ಸಾವಿರ ರು. ಬೆಲೆ ಇದೆ. ಇವರು 35 ಸಾವಿರ ರು. ನೀಡಿದ್ದಾರೆ’ ಎಂದು ಆರೋಪಿಸಿದರು.

ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರಕ್ಕೆ ಖರೀದಿ: ‘ಮಾರುಕಟ್ಟೆಯಲ್ಲಿ 30 ಸಾವಿರ ರು.ಗೆ ಲಭ್ಯವಿರುವ ಸ್ಮಾರ್ಟ್‌ ಎನರ್ಜಿ ಸೆಲ್ಯೂಷನ್‌ 90,500 ರು.ಗೆ ಖರೀದಿಸಿದ್ದಾರೆ. ಸ್ಟೇನ್‍ಲೆಸ್ ಸ್ಟೀಲ್ ವಾಟರ್ ಪ್ಯೂರಿಫೈಯರ್ ಆನ್‍ಲೈನ್‍ನಲ್ಲಿ 16 ಸಾವಿರ ರು.ನಿಂದ 53 ಸಾವಿರ ರು.ಗೆ ಲಭ್ಯವಿದೆ. ಆದರೆ, ಇವರು 65 ಸಾವಿರ ರು.ಗೆ ಖರೀದಿಸಿದ್ದಾರೆ. 235 ಸ್ಟೈನ್‌ಲೆಸ್ ಸ್ಟೀಲ್ ವಾಟರ್ ಪ್ಯೂರಿಫೈಯರ್‌, 123 ಸ್ಮಾರ್ಟ್ ಎನರ್ಜಿ ಸೊಲ್ಯೂಷನ್ ಖರೀದಿ ಮಾಡಿದ್ದಾರೆ. 224 ಸೇಫ್ ಲಾಕರ್, ಅಷ್ಟೇ ಸಂಖ್ಯೆಯ ಡೋರ್ ಲಾಕರ್ ಖರೀದಿ ಮಾಡಿದ್ದಾರೆ’ ಎಂದು ಮಾಹಿತಿ ನೀಡಿದರು.

ಪುಸ್ತಕ ಮೇಳಕ್ಕೆ 4.5 ಕೋಟಿ ರು. ಖರ್ಚು: ಖಾದರ್‌ 4-5 ದಿನಗಳ ಪುಸ್ತಕ ಮೇಳಕ್ಕೆ 4.5 ಕೋಟಿ ರು. ಖರ್ಚು ಮಾಡಿದ್ದಾರೆ. ಪುಸ್ತಕ ಕೊಂಡು ಹಂಚಿದರೂ ಇಷ್ಟಾಗುತ್ತಿತ್ತೇ ಗೊತ್ತಿಲ್ಲ. ಸ್ಟಾಲ್ ಹಾಕುವುದು ಬಿಟ್ಟು ಬೇರೇನೂ ಇಲ್ಲ. ಲೈಟಿಂಗ್ ಮಾಡಿದ್ದಾರೆ. ಶಾಸಕರ ಭವನಕ್ಕೆ ಮಂಚ, ಟೇಬಲ್ ಹಾಕಿಸಿದ್ದಾರೆ. ನೇಮಕಾತಿಗೆ ಕೋರ್ಟಿನಲ್ಲಿ ತಡೆಯಾಜ್ಞೆ ವಿಧಿಸಲಾಗಿದೆ. ಇದರ ವಿಷಯದಲ್ಲಿ ಮೊಗಸಾಲೆಯ ಸುದ್ದಿಗಳೇನು? ಇದೆಲ್ಲ ಆ ಸ್ಥಾನಕ್ಕೆ ಕುಂದು ಬರುವಂತಿದೆ. ಖಾದರ್ ಈಗಲೂ ವಿದೇಶದಲ್ಲೇ ಇದ್ದಾರೆ. ಅವರು ಎಷ್ಟು ದೇಶಗಳಿಗೆ ಹೋಗಿದ್ದಾರೆ. ಅವರೆಷ್ಟು ಖರ್ಚು ಹಾಕಿದ್ದಾರೆ? ಸರ್ಕಾರ ಎಷ್ಟು ಹಣ ಕೊಟ್ಟಿದೆ?’ ಎಂದು ಕಾಗೇರಿ ಪ್ರಶ್ನಿಸಿದರು.

ವಿದೇಶ ಪ್ರವಾಸದ ವಿವರ ಬಹಿರಂಗಕ್ಕೆ ಆಗ್ರಹ

‘ನಾನೂ ಸ್ಪೀಕರ್ ಆಗಿ ವಿದೇಶಗಳಿಗೆ ಹೋಗಿದ್ದೇನೆ. ನಮಗಿರೋ ಅವಕಾಶ ಮೀರಿ, ಎಷ್ಟು ಪ್ರವಾಸ ಮಾಡಿದ್ದಾರೆ. ಯಾರ್ಯಾರ ಜೊತೆ ಪ್ರವಾಸ ಮಾಡಿದ್ದಾರೆ? ಇವೆಲ್ಲವೂ ಬಹಿರಂಗಗೊಳ್ಳಬೇಕಿದೆ. ವಿದೇಶಗಳ ಅಧ್ಯಯನದ ಹೆಸರಿನಲ್ಲಿ ನಡೆದ ಪ್ರವಾಸದ ವಿವರ ಬಹಿರಂಗಗೊಳಿಸಿ’ ಎಂದು ಆಗ್ರಹಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದ್ವೇಷ ಭಾಷಣ ಮಾಡಲೆಂದೇ ವಿರೋಧ ಪಕ್ಷದವರು ಮಸೂದೆಗೆ ವಿರೋಧ?: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಪ್ರಶ್ನೆ
ನರೇಗಾ ಸಮರ: ಹೆಚ್‌ಡಿಕೆ ಸವಾಲು ಸ್ವೀಕರಿಸಿದ ಡಿಕೆಶಿ; 'ಇಂದೇ ಡಿಬೇಟ್‌ಗೆ ಬರ್ತೀನಿ' ಎಂದು ಪಂಥಾಹ್ವಾನ!