
ಬೆಂಗಳೂರು (ಅ.29): ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಚರ್ಚೆ ಬೆನ್ನಲ್ಲೇ ನ.20 ರಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಬೆಂಗಳೂರಿಗೆ ಆಗಮಿಸಲಿದ್ದು, ರೇಸ್‌ಕೋರ್ಸ್ ರಸ್ತೆಯ ಕಾಂಗ್ರೆಸ್ ಪಕ್ಷದ ಜಾಗದಲ್ಲಿ ಹೈಬ್ರಿಡ್ ಸ್ವರೂಪದ ಬೃಹತ್ ಕಚೇರಿ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದೇ ವೇಳೆ ಗಾಂಧಿ ಭಾರತ-100 ಹೆಸರಿನಲ್ಲಿ ರಾಜ್ಯಾದ್ಯಂತ 100 ಕಾಂಗ್ರೆಸ್ ಕಚೇರಿಗಳ ನಿರ್ಮಾಣಕ್ಕೂ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನವೆಂಬರ್ ಕ್ರಾಂತಿ ಭಾಗವಾಗಿ ಸಚಿವ ಸಂಪುಟ ಪುನರ್‌ರಚನೆ ಬಗ್ಗೆಯೂ ರಾಜ್ಯ ನಾಯಕರೊಂದಿಗೆ ಚರ್ಚಿಸಲಿದ್ದು, ಬಹುತೇಕ ಅಂತಿಮಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಹೈಬ್ರಿಡ್ ಕಟ್ಟಡ: ಕಾಂಗ್ರೆಸ್‌ಗೆ ಸೇರಿದ ಜಾಗದಲ್ಲಿದ್ದ ಹಳೆಯ ಜೆಡಿಎಸ್ ಕಚೇರಿಯನ್ನು ನೆಲಸಮಗೊಳಿಸಿದ್ದು, ರೇಸ್‌ಕೋರ್ಸ್ ರಸ್ತೆಗೆ ಹೊಂದಿಕೊಂಡಿರುವ ಪ್ರಮುಖ ವಾಣಿಜ್ಯ ಸ್ಥಳದಲ್ಲಿ ಹೈಬ್ರಿಡ್ ಮಾದರಿಯಲ್ಲಿ ಪಕ್ಷದ ಕಚೇರಿ ಸ್ಥಾಪಿಸಲು ರಾಜ್ಯ ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಬಿಲ್ಟ್ ಟು ಸೂಟ್ ಮಾದರಿಯಲ್ಲಿ ಬಾಡಿಗೆ ಬರುವಂತೆ ವಾಣಿಜ್ಯ ಕಟ್ಟಡ ಹಾಗೂ ಪಕ್ಷದ ಕಚೇರಿ ಎರಡನ್ನೂ ನಿರ್ಮಿಸಲಾಗುವುದು. ಇದಕ್ಕಾಗಿ ಈಗಾಗಲೇ ಕಟ್ಟಡ ನಿರ್ಮಾಣ ಸಂಸ್ಥೆಗಳ ಜತೆ ಮಾತುಕತೆ ನಡೆಸಿದ್ದು, ಮಾಸಿಕ ಸುಮಾರು 2 ಕೋಟಿ ರು. ಬಾಡಿಗೆ ಬರುವಂತೆ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ.
ಇದೇ ವೇಳೆ ರಾಜ್ಯದ ಇತರ ಭಾಗಗಳಲ್ಲಿ 100 ಕಾಂಗ್ರೆಸ್ ಕಚೇರಿಗಳನ್ನು ಸ್ಥಾಪಿಸಲು ಶಂಕುಸ್ಥಾಪನೆ ನೆರವೇರಿಸಲಾಗುವುದು. ಈ ಬಗ್ಗೆ ಶಾಸಕರು, ಉಸ್ತುವಾರಿ ಸಚಿವರು, ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪತ್ರ ಬರೆದಿದ್ದು, ಎಲ್ಲೆಲ್ಲಿ ನಿವೇಶನ ಲಭ್ಯವಿಲ್ಲವೋ ಅಲ್ಲಿ ಸರ್ಕಾರದ ಅಧೀನ ಸಂಸ್ಥೆಗಳಾದ ಯೋಜನಾ ಪ್ರಾಧಿಕಾರಗಳು, ನಗರಾಭಿವೃದ್ಧಿ ಇಲಾಖೆ, ಕಂದಾಯ ಇಲಾಖೆಗಳಿಂದ ಮಂಜೂರಾತಿ ಪಡೆದು ‘ಕಾಂಗ್ರೆಸ್ ಭವನ ಟ್ರಸ್ಟ್’ ಹೆಸರಿನಲ್ಲಿ ನಿವೇಶನ ಪಡೆಯಲು ಸೂಚಿಸಿದ್ದಾರೆ. ಒಂದು ವೇಳೆ ಸ್ಥಳೀಯ ಪ್ರಾಧಿಕಾರಗಳಿಂದ ನಿವೇಶನ ಪಡೆಯಲು ಕಷ್ಟವಾದರೆ, ಖಾಸಗಿ ನಿವೇಶನಗಳನ್ನು ಖರೀದಿಸಿ ನೋಂದಣಿ ಮಾಡಿಸಿಕೊಳ್ಳಬೇಕು. ನ.20 ಇದಕ್ಕೆ ಅಂತಿಮ ಗಡುವು ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.