
ಬೆಂಗಳೂರು : ತಮ್ಮ ಅಧ್ಯಕ್ಷ ಸ್ಥಾನ ಮುಂದುವರಿಕೆ ಬಗ್ಗೆ ಅನುಮಾನ, ಗೊಂದಲ ಮುಂದುವರಿದಿರುವ ಮಧ್ಯೆಯೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಅದನ್ನು ಬದಿಗಿಟ್ಟು ರಾಜ್ಯದಲ್ಲಿ ಪಕ್ಷ ಸಂಘಟನೆಗಾಗಿ ಸಮರೋಪಾದಿಯ ಹೆಜ್ಜೆ ಇಟ್ಟಿದ್ದಾರೆ.
ತಕ್ಷಣದಲ್ಲಿ ಯಾವುದೇ ಚುನಾವಣೆಗಳು ಇಲ್ಲದಿದ್ದರೂ ಭವಿಷ್ಯದ ಹಿತದೃಷ್ಟಿಯಿಂದ ಪಕ್ಷದ ಎಲ್ಲ ಸಂಘಟನಾತ್ಮಕ ಜಿಲ್ಲೆಗಳ ಜಿಲ್ಲಾ ಮಟ್ಟದ ಮುಖಂಡರ ಸರಣಿ ಸಭೆ ನಡೆಸುವ ಮೂಲಕ ಸ್ಥಳೀಯ ಮಟ್ಟದ ಮುಖಂಡರ ನಡುವಿನ ಭಿನ್ನಾಭಿಪ್ರಾಯ, ಹೊಂದಾಣಿಕೆ ಕೊರತೆ, ಸಂಘಟನೆಯಲ್ಲಿನ ಲೋಪದೋಷಗಳನ್ನು ಸರಿಪಡಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ.
ಸೋಮವಾರದಿಂದ ಆರಂಭವಾಗಿರುವ ಈ ಜಿಲ್ಲಾ ಮಟ್ಟದ ಮುಖಂಡರ ಸಭೆ ಈ ತಿಂಗಳ 13ರವರೆಗೆ ಮುಂದುವರೆಯಲಿದೆ. ಸ್ವತಃ ವಿಜಯೇಂದ್ರ ಅವರೇ ಈ ಸಭೆಯ ನೇತೃತ್ವ ವಹಿಸಿದ್ದು, ರಾಜ್ಯ ಕೋರ್ ಕಮಿಟಿಯ ಇತರ ಹಿರಿಯ ನಾಯಕರೂ ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ.
ಪ್ರತಿನಿತ್ಯ 3 ಅಥವಾ 4 ಜಿಲ್ಲೆಗಳ ಮುಖಂಡರ ಪ್ರತ್ಯೇಕ ಸಭೆ ನಡೆಸುವ ಮೂಲಕ ಬೆಳಗ್ಗೆಯಿಂದ ಸಂಜೆವರೆಗೆ ಪಟ್ಟಾಗಿ ಕುಳಿತು ಆಯಾ ಜಿಲ್ಲೆಗಳ ಸಂಘಟನೆ ಬಲಪಡಿಸುವತ್ತ ವಿಜಯೇಂದ್ರ ಮತ್ತಿತರ ನಾಯಕರು ಗಮನಹರಿಸಿದ್ದಾರೆ. ಸಭೆಯಲ್ಲಿ ಪ್ರಸ್ತಾಪವಾಗುವ ಭಿನ್ನಾಭಿಪ್ರಾಯಗಳಿಗೆ ಅಲ್ಲೇ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನೂ ಮಾಡತೊಡಗಿದ್ದಾರೆ. ಈ ಸಭೆಯಲ್ಲೂ ಪರಿಹಾರ ಕಾಣದಿದ್ದರೆ ಎಲ್ಲ ಜಿಲ್ಲೆಗಳ ಸಭೆ ಮುಗಿದ ಬಳಿಕ ಸಮಸ್ಯೆ ತೀವ್ರವಾಗಿರುವ ಜಿಲ್ಲೆಗಳ ಮುಖಂಡರ ಪ್ರತ್ಯೇಕ ಸಭೆ ಕರೆದು ಬಗೆಹರಿಸುವ ಉದ್ದೇಶ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದೊಂದು ರೀತಿಯಲ್ಲಿ ಸರಣಿ ಸಭೆ ನಡೆಸುತ್ತಿರುವುದು ಮುಂದೆ ಎದುರಾಗಬಹುದಾದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷದ ಸಂಘಟನೆಯನ್ನು ಬಲಪಡಿಸಲೂ ನೆರವಾಗಲಿದೆ. ಪ್ರತಿಯೊಂದು ಜಿಲ್ಲೆಯಲ್ಲಿನ ಪಕ್ಷದ ಸಂಘಟನೆ ಕುರಿತ ವಾಸ್ತವಾಂಶವೂ ತಿಳಿದುಕೊಳ್ಳಲು ಅನುಕೂಲವಾಗಲಿದೆ. ಹೀಗಾಗಿ, ವಿಜಯೇಂದ್ರ ಅವರು ರಾಜ್ಯ ಘಟಕದ ಇತರ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರಣಿ ಸಭೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಇನ್ನು ಕೆಲವೇ ತಿಂಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ಸಿನ ಇಬ್ಬರು ಹಾಲಿ ಶಾಸಕರ ನಿಧನದಿಂದ ತೆರವಾಗಿರುವ 2 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಎದುರಾಗಲಿದೆ. ಜತೆಗೆ ಬರುವ ಜೂನ್ ತಿಂಗಳಲ್ಲಿ ವಿಧಾನಪರಿಷತ್ತಿನ 2 ಪದವೀಧರ ಮತ್ತು 2 ಶಿಕ್ಷಕ ಕ್ಷೇತ್ರಗಳಿಗೆ ಚುನಾವಣೆಯೂ ನಡೆಯಲಿದೆ. ಇದು ಸಹಜವಾಗಿಯೇ ಬಿಜೆಪಿಗೆ ಮತ್ತು ವೈಯಕ್ತಿಕವಾಗಿ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಅವರಿಗೆ ಪ್ರತಿಷ್ಠೆಯ ಚುನಾವಣೆ ಆಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.