
ಬೆಂಗಳೂರು: ಗ್ಯಾರಂಟಿ ಯೋಜನೆಗಳು ಜಾರಿ ಅಸಾಧ್ಯ, ಜನರನ್ನು ಸೋಮಾರಿ ಮಾಡುತ್ತದೆ, ಬೊಕ್ಕಸ ಖಾಲಿಯಾಗುತ್ತದೆ, ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಯಾಗುತ್ತದೆ ಎಂದೆಲ್ಲಾ ಪುಂಖಾನುಪುಂಖವಾಗಿ ಟೀಕೆ, ಟಿಪ್ಪಣಿ ಮಾಡಿದ ಬಿಜೆಪಿ ಸೇರಿದಂತೆ ಅನೇಕ ಪಕ್ಷಗಳು ತಮ್ಮ ರಾಜ್ಯಗಳಲ್ಲಿ ಬೇರೆ ಬೇರೆ ರೂಪದಲ್ಲಿ ಗ್ಯಾರಂಟಿ ಯೋಜನೆ ಘೋಷಿಸಿದವು. ನೆರೆಯ ತೆಲಂಗಾಣ ಸೇರಿದಂತೆ ಮಧ್ಯಪ್ರದೇಶ, ಮಹಾರಾಷ್ಟ್ರ, ದೆಹಲಿ, ಹರಿಯಾಣ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲೂ ಗ್ಯಾರಂಟಿ ಯೋಜನೆಗಳನ್ನು ಬಹುತೇಕ ಎಲ್ಲ ಪಕ್ಷಗಳೂ ನಕಲು ಮಾಡಿಬಿಟ್ಟವು.
ಆದರೆ, ಗ್ಯಾರಂಟಿ ಕಾರ್ಯಕ್ರಮಗಳು ಕರ್ನಾಟಕದಷ್ಟು ಯಶಸ್ವಿಯಾಗಿ ಹಾಗೂ ಪರಿಪೂರ್ಣವಾಗಿ ಬೇರೆ ಯಾವ ರಾಜ್ಯದಲ್ಲೂ ಅನುಷ್ಟಾನಗೊಳಿಸಲು ಸಾಧ್ಯವೇ ಆಗಿಲ್ಲ. ಕೆಲ ರಾಜ್ಯಗಳಲ್ಲಿ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಭರವಸೆ ಈಡೇರಿಸದಿದ್ದರೆ ಜನ ಪ್ರಶ್ನಿಸುತ್ತಾರೆಂಬ ಕಾರಣಕ್ಕೆ ಕೆಲವು ಗ್ಯಾರಂಟಿಗಳನ್ನು ಒಲ್ಲದ ಮನಸ್ಸಿಂದ ಜಾರಿಗೊಳಿಸಿವೆ. ಇನ್ನು ಕೆಲ ರಾಜ್ಯಗಳು ಅರೆಬರೆಯಾಗಿ ಈ ಯೋಜನೆಗಳನ್ನು ಜಾರಿಗೊಳಿಸಿವೆ. ಮತ್ತೆ ಕೆಲ ರಾಜ್ಯಗಳು ಅನುಷ್ಠಾನ ಸಾಧ್ಯವಿಲ್ಲ ಎಂದು ಹೇಳಲಾಗದೆ ಇನ್ನಿಲ್ಲದ ಮಾನದಂಡಗಳನ್ನು ವಿಧಿಸಿ ಸಾಧ್ಯವಾದಷ್ಟೂ ಗ್ಯಾರಂಟಿಗಳಿಗೆ ಆಗುವ ವೆಚ್ಚ ಕಡಿಮೆ ಮಾಡುವ ಪ್ರಯತ್ನ ನಡೆದಿವೆ.
ಈ ಮಧ್ಯೆ, ಗ್ಯಾರಂಟಿ ಯೋಜನೆಗಳು ತಮ್ಮ ರಾಜ್ಯವನ್ನು ಆರ್ಥಿಕವಾಗಿ ಸಂಕಷ್ಟಕ್ಕೆ ತಂದೊಡ್ಡುತ್ತಿವೆ. ಇವುಗಳನ್ನು ಮುಂದುವರೆಸಿಕೊಂಡು ಹೋಗುವುದು ಕಷ್ಟವಾಗುತ್ತಿದೆ ಎಂದು ಆ ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದವರು ಬಹಿರಂಗವಾಗಿ ಹೇಳುತ್ತಿದ್ದಾರೆ. ಉದಾಹರಣೆಗೆ ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ಗ್ಯಾರಂಟಿಗಳನ್ನು ಘೋಷಿಸುವಾಗ ಅವುಗಳ ಅನುಷ್ಠಾನದ ವಸ್ತುಸ್ಥಿತಿ ಗೊತ್ತಿರಲಿಲ್ಲ. ಈಗ ಅದು ತಿಳಿಯುತ್ತಿದೆ. ಗ್ಯಾರಂಟಿಗಳಿಗೆ ಅನುದಾನ ಹೊಂದಿಸುವುದು ಕಷ್ಟವಾಗುತ್ತಿದೆ. ಸರ್ಕಾರದ ಖಜಾನೆ ಬರಿದಾಗಿದೆ. ಬೇರೆ ರೀತಿ ದೇಣಿಗೆ ಸಂಗ್ರಸಲು ಆಗುತ್ತಿಲ್ಲ. ರಾಜ್ಯದ ಆರ್ಥಿಕತೆ ಪರಿಸ್ಥಿತಿ ಚೆನ್ನಾಗಿಲ್ಲ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದರು.
ಇನ್ನು, ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ ಚುನಾವಣೆಗೆ ಮೊದಲೇ ಹಲವು ಗ್ಯಾರಂಟಿಗಳನ್ನ ನೀಡಿ ಅಧಿಕಾರ ಹಿಡಿಯಿತು. ಆದರೆ ಈಗ ಆ ರಾಜ್ಯದ ಸಾರಿಗೆ ಸಚಿವ ಪ್ರತಾಪ್ ಸರನಾಯಕ್ ಅವರೇ ಮಹಾರಾಷ್ಟ್ರದಲ್ಲಿ ಗ್ಯಾರಂಟಿ ಮೂಲಕ ಮಹಿಳೆಯರು ಮತ್ತು ವಯೋವೃದ್ಧರಿಗೆ ನಮ್ಮ ಸಾರಿಗೆ ಬಸ್ಸುಗಳಲ್ಲಿ ಶೇ 50 ರಷ್ಟು ಪ್ರಯಾಣ ದರ ರಿಯಾಯಿತಿ ನೀಡುತ್ತಿರುವುದು ಸಾರಿಗೆ ನಿಗಮಕ್ಕೆ ಭಾರವಾಗುತ್ತಿದ್ದು, ದಿನಕ್ಕೆ ಮೂರು ಕೋಟಿ ರು. ನಷ್ಟವಾಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ ಹಣಕಾಸು ಕೊರತೆಯಿಂದ ತನ್ನ ಬಜೆಟ್‌ನಲ್ಲೂ ಮಹತ್ವಾಕಾಂಕ್ಷೆಯ ಚುನಾವಣೆ ಘೋಷಣೆಗಳಿಗೆ ನಿರೀಕ್ಷಿತ ಹಣ ನೀಡಲು ಆ ರಾಜ್ಯಕ್ಕೆ ಸಾಧ್ಯವಾಗಿಲ್ಲ. ಮುಖ್ಯಮಂತ್ರಿ ಲಡ್ಕಿ ಬಹಿನ್ ಯೋಜನೆಯಡಿ ಪ್ರತಿ ತಿಂಗಳು ಮಹಿಳೆಯರಿಗೆ ನೀಡುವ ಸ್ಟೈಪೆಂಡ್ ಅನ್ನು 1500 ರಿಂದ 2100 ರು.ಗೆ ಏರಿಸುವ ಹಾಗೂ ರೈತರ ಸಾಲಮನ್ನಾ ಯೋಜನೆಯನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ.
ಬೇರೆ ರಾಜ್ಯಗಳ ಸ್ಥಿತಿ ಏನೇ ಇರಬಹುದು ಆದರೆ ಕರ್ನಾಟಕದಲ್ಲಿ ಮಾತ್ರ ಎರಡೂವರೇ ವರ್ಷಗಳ ನಂತರವೂ ಯಶಸ್ವಿಯಾಗಿ ಯೋಜನೆಗಳು ಮುಂದುವರೆದಿವೆ. ಗ್ಯಾರಂಟಿ ಯೋಜನೆಗಳಿಗೆ ಹಣದ ಕೊರತೆ ಇಲ್ಲ, ಅಭಿವೃದ್ಧಿ ಯೋಜನೆಗಳನ್ನು ತೊಂದರೆ ಇಲ್ಲದೇ ಮುಂದುವರೆಸುತ್ತೇವೆ ಎಂದು ಮುಖ್ಯಮಂಟಿ ಸಿದ್ದರಾಮಯ್ಯ ಅವರು ಅನೇಕ ಭಾರಿ ಹೇಳಿದ್ದಾರೆ . ಇದುವರೆಗೆ ಗ್ಯಾರಂಟಿ ಯೋಜನೆಗಳಿಗಾಗಿ ಕರ್ನಾಟಕ ಸರ್ಕಾರ 1.06 ಲಕ್ಷ ಕೋಟಿ ಹಣ ಖರ್ಚು ಮಾಡಿದೆ. ಹೀಗಾಗಿ ಗ್ಯಾರಂಟಿಗಳ ಯಶಸ್ವಿ ಅನುಷ್ಠಾನದಲ್ಲಿ ಕರ್ನಾಟಕ ಒಂದೇ ಶೇ 100 ಸಫಲ ಎನ್ನಬಹುದು.
ಯಾವ ರಾಜ್ಯದಲ್ಲಿ ಗ್ಯಾರಂಟಿ ನಕಲು
ಗ್ಯಾರಂಟಿ ಯೋಜನೆಗಳನ್ನು ತೆಗಳಿದವರು ನಂತರ ಅವುಗಳಿಂದ ಸಾಮಾಜಿಕವಾಗಿ ಆಗುತ್ತಿರುವ ಬದಲಾವಣೆ, ಜನರಿಂದ ದೊರೆತ ಮನ್ನಣೆಯನ್ನು ನೋಡಿದ ಮೇಲೆ ಮೆಚ್ಚುಗೆ ವ್ಯಕ್ತಪಡಿಸಿದ ದೇಶಾದ್ಯಂತ ಕಂಡು ಬರುತ್ತಾರೆ. ಬಿಜೆಪಿಯ ಕೆಲ ಘಟನಾನುಘಟಿ ನಾಯಕರೂ ಗ್ಯಾರಂಟಿಗಳನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದುಂಟು.
ಕಳೆದ ಎರಡು ವರ್ಷಗಳಲ್ಲಿ ನಡೆದ ಚುನಾವಣೆಗಳಲ್ಲಿ ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ಅಧಿಕಾರಕ್ಕೇರಿದ ಬಳಿಕ ಛತ್ತೀಸ್‌ಗಢ ಚುನಾವಣೆಯಲ್ಲಿಯೂ ಗ್ಯಾರಂಟಿಗಳ ಭರಾಟೆ ಜೋರಾಗಿತ್ತು. ಮಹಿಳೆಯರಿಗೆ ವಾರ್ಷಿಕ 15 ಸಾವಿರ ರು. ಆರ್ಥಿಕ ನೆರವು ನೀಡುವುದಾಗಿ ಕಾಂಗ್ರೆಸ್ ಘೋಷಣೆ ಮಾಡಿದರೆ ಉಳಿದ ಪಕ್ಷಗಳು ಸಹ ನಾವೇನು ಕಮ್ಮಿ ಎನ್ನುವಂತೆ ತಾವೂ ಭಾರಪೂರ ಉಚಿತ ಕೊಡುಗೆಗಳನ್ನು ಘೋಷಿಸಿದವು.ದ್ದನ್ನು ಕಾಣಬಹುದು.
ಮಧ್ಯ ಪ್ರದೇಶ ಹಾಗೂ ರಾಜಸ್ಥಾನ ವಿಧಾನಸಭಾ ಚುನಾವಣೆಗಳಲ್ಲಿ ಕುಡ ಕರ್ನಾಟಕ ಗ್ಯಾರಟಿಗಳ ನಕಲು ತಾರತಕ್ಕೇರಿತ್ತು. 7 ಗ್ಯಾರಂಟಿ ಘೋಷಿಸಿದ್ದ ಕಾಂಗ್ರೆಸ್ ಮನೆಯೊಡತಿಗೆ ವರ್ಷಕ್ಕೆ 10 ಸಾವಿರ ರು. ಸಹಾಯ ಧನ, ಸೇರಿದಂತೆ ಪ್ರತಿ ಕುಟುಂಬಕ್ಕೆ 15 ಲಕ್ಷ ರು. ವಿಮೆ, ರೈತರ ಕೃಷಿ ಸಾಲ ಮನ್ನಾದಂತಹ ಹಲವು ಭರವಸೆಗಳನ್ನು ನೀಡಿತ್ತು. ಇದಕ್ಕೆ ಪ್ರತಿಯಾಗಿ ಬಿಜೆಪಿ ಕೂಡ 2 ಲಕ್ಷ ರು. ವರೆಗಿನ ಕೃಷಿ ಸಾಲ ಮನ್ನಾ, 25 ಲಕ್ಷವರೆಗೆ ಆರೋಗ್ಯ ವಿಮೆ, ಮಹಿಳೆಯರಿಗೆ ಪ್ರತಿ ತಿಂಗಳು 1,500 ರು. ಸಹಾಯ ಧನ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಸೇರಿದಂತೆ ಹಲವು ಭರವಸೆಗಳನ್ನು ನೀಡಿತ್ತು. ನಂತರ ನಡೆದ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿಯೂ ಗ್ಯಾರಂಟಿಯ ಅಸ್ತ್ರವನ್ನು ಎಲ್ಲ ಪಕ್ಷಗಳು ಪ್ರಾಯೋಗಿಸಿದವು. ಹೀಗೆ ಪ್ರತಿ ಚುನಾವಣೆಯಲ್ಲೂ ಕನಿಷ್ಠ 5 ರಿಂದ 7 ಗ್ಯಾರಂಟಿ ಯೋಜನೆಗಳನ್ನು ಬೇರೆ ಬೇರೆ ಪಕ್ಷಗಳು ಘೋಷಣೆ ಮಾಡಿದ್ದು ಕಾಣಸಿಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.