
ಬೆಂಗಳೂರು(ಡಿ.24): ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪಕ್ಷ ಸಂಘಟನೆಗಾಗಿ ಪದಾಧಿಕಾರಿಗಳ ಹೊಸ ತಂಡವನ್ನು ರಚಿಸಿಕೊಂಡಿದ್ದು, ಮುಂಬರುವ ಲೋಕಸಭಾ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ.
ಶನಿವಾರ ರಾಜ್ಯ ಘಟಕದ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆಗೊಂಡಿದ್ದು, ಬಹುತೇಕ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಒಟ್ಟು 32 ಮಂದಿಯನ್ನು ಒಳಗೊಂಡ ರಾಜ್ಯ ಸಮಿತಿ ರಚನೆಯಾಗಿದ್ದು, ಹತ್ತು ಮಂದಿ ಉಪಾಧ್ಯಕ್ಷರು, ನಾಲ್ವರು ಪ್ರಧಾನ ಕಾರ್ಯದರ್ಶಿಗಳು, ಹತ್ತು ಮಂದಿ ಕಾರ್ಯದರ್ಶಿಗಳು, ಒಬ್ಬ ಖಜಾಂಚಿ ಹಾಗೂ ಏಳು ವಿವಿಧ ಮೋರ್ಚಾಗಳಿಗೆ ಅಧ್ಯಕ್ಷರನ್ನು ನೇಮಿಸಲಾಗಿದೆ. ಈ ಪೈಕಿ ಉಪಾಧ್ಯಕ್ಷ ಮತ್ತು ಕಾರ್ಯದರ್ಶಿ ಸ್ಥಾನಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
ವಿಶ್ವಾಸಕ್ಕೆ ತೆಗೆದುಕೊಳ್ಳೋದಾಗಿ ವಿಜಯೇಂದ್ರ ಹೇಳಿದ್ದಾರೆ: ಈಶ್ವರಪ್ಪ
ಸುನೀಲ್ ಪ್ರಧಾನ ಕಾರ್ಯದರ್ಶಿ:
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಮತ್ತು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸ್ಥಾನ ಎರಡಕ್ಕೂ ಪ್ರಬಲವಾಗಿ ಕೇಳಿಬಂದಿದ್ದ ಹೆಸರು ಮಾಜಿ ಸಚಿವ ಹಾಗೂ ಶಾಸಕ ವಿ.ಸುನೀಲ್ ಕುಮಾರ್ ಅವರದ್ದು. ಇದೀಗ ಸುನೀಲ್ ಕುಮಾರ್ ರಾಜ್ಯ ಸಮಿತಿಯ ನಾಲ್ವರು ಪ್ರಧಾನ ಕಾರ್ಯದರ್ಶಿಗಳ ಪೈಕಿ ಒಬ್ಬರಾಗಿ ನೇಮಕಗೊಂಡಿದ್ದಾರೆ.
ನಿರಾಣಿ ಉಪಾಧ್ಯಕ್ಷ:
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬಿ.ಎಸ್.ಯಡಿಯೂರಪ್ಪ ನಂತರ ಮುಖ್ಯಮಂತ್ರಿ ರೇಸ್ ನಲ್ಲಿ ಪ್ರಬಲವಾಗಿ ಕೇಳಿಬಂದಿದ್ದ ಅಂದಿನ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಈ ಹೊಸ ಸಮಿತಿಯಲ್ಲಿ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ.
ದೆಹಲಿ ತೆರಳಿ ಪಕ್ಷದ ವರಿಷ್ಠರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ ವಿಜಯೇಂದ್ರ ಅವರು ಅಂತಿಮವಾಗಿ ತಮ್ಮ ಬೆಂಬಲಿಗರ ಸಿಂಹಪಾಲು ಒಳಗೊಂಡ ತಂಡವನ್ನು ರಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಾತಿ ಮತ್ತು ಪ್ರಾದೇಶಿಕ ಸಮೀಕರಣ ಆಧರಿಸಿ ಪದಾಧಿಕಾರಿಗಳ ನೇಮಿಸುವ ಪ್ರಯತ್ನ ಮಾಡಲಾಗಿದೆ.
ವಿಧಾನಸಭೆಯ ಐವರು ಸದಸ್ಯರು ಹಾಗೂ ವಿಧಾನಪರಿಷತ್ತಿನ ಒಬ್ಬ ಸದಸ್ಯರು ಸೇರಿದಂತೆ ಆರು ಮಂದಿ ಶಾಸಕರಿಗೆ ಪಕ್ಷ ಸಂಘಟನೆಯ ಜವಾಬ್ದಾರಿ ನೀಡಲಾಗಿದೆ. ಹಿಂದಿನ ರಾಜ್ಯ ಸಮಿತಿಯಲ್ಲಿ ಸ್ಥಾನ ಹೊಂದಿದ್ದ ಕೇವಲ ಮೂರು ಮಂದಿ ಮಾತ್ರ ನೂತನ ಘಟಕದಲ್ಲೂ ಮುಂದುವರೆದಿದ್ದಾರೆ.
ಕಳೆದ ರಾಜ್ಯ ಸಮಿತಿಯಲ್ಲಿ ಉಪಾಧ್ಯಕ್ಷರಾಗಿದ್ದ ಎಂ.ರಾಜೇಂದ್ರ, ಕಾರ್ಯದರ್ಶಿಯಾಗಿದ್ದ ವಿನಯ್ ಬಿದರೆ ಮತ್ತು ಖಜಾಂಚಿಯಾಗಿದ್ದ ಸುಬ್ಬ ನರಸಿಂಹ ಅವರಿಗೆ ಹೊಸ ಸಮಿತಿಯಲ್ಲಿ ಅದೇ ಸ್ಥಾನಗಳನ್ನು ನೀಡಲಾಗಿದೆ.
ರಾಜ್ಯ ಉಪಾಧ್ಯಕ್ಷರಾಗಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಬೈರತಿ ಬಸವರಾಜ್, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಮಾಜಿ ಸಚಿವ ಮತ್ತು ಹಾಲಿ ಶಾಸಕ ವಿ.ಸುನೀಲ್ ಕುಮಾರ್, ಕಾರ್ಯದರ್ಶಿಯಾಗಿ ಶಾಸಕರಾದ ಶೈಲೇಂದ್ರ ಬೆಲ್ದಾಳೆ, ಬಸವರಾಜ ಮತ್ತಿಮೋಡ್ ಮತ್ತು ಡಿ.ಎಸ್.ಅರುಣ್ ನೇಮಕಗೊಂಡಿದ್ದಾರೆ.
ಮೊದಲ ಬಾರಿಗೆ ಶಾಸಕರಾಗಿರುವ ಧೀರಜ್ ಮುನಿರಾಜು ಅವರಿಗೆ ಯುವಮೋರ್ಚಾ ಅಧ್ಯಕ್ಷ ಸ್ಥಾನ ಮತ್ತು ಎಸ್.ಮಂಜುನಾಥ್ (ಸಿಮೆಂಟ್ ಮಂಜು) ಅವರಿಗೆ ಎಸ್ ಸಿ ಮೋರ್ಚಾ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಹೊರಿಸಲಾಗಿದೆ. ಮಾಜಿ ಶಾಸಕರಾದ ರಾಜೂಗೌಡ ನಾಯಕ್, ಎನ್.ಮಹೇಶ್, ರೂಪಾಲಿ ನಾಯಕ್, ಅನಿಲ್ ಬೆನಕೆ, ಹರತಾಳು ಹಾಲಪ್ಪ ಅವರಿಗೆ ಉಪಾಧ್ಯಕ್ಷ ಸ್ಥಾನ ಮತ್ತು ಪಿ.ರಾಜೀವ್, ನಂದೀಶ್ ರೆಡ್ಡಿ, ಪ್ರೀತಂ ಗೌಡ ಅವರಿಗೆ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಲಾಗಿದೆ.
ಬಿಜೆಪಿಯ ನೂತನ ಪದಾಧಿಕಾರಿಗಳ ಪಟ್ಟಿ
ರಾಜ್ಯ ಉಪಾಧ್ಯಕ್ಷರು:
ಮುರುಗೇಶ್ ನಿರಾಣಿ, ಬೈರತಿ ಬಸವರಾಜ್, ರಾಜುಗೌಡ ನಾಯಕ್, ಎನ್.ಮಹೇಶ್, ಅನಿಲ್ ಬೆನಕೆ, ಹರತಾಳು ಹಾಲಪ್ಪ, ರೂಪಾಲಿ ನಾಯಕ್, ಡಾ.ಬಸವರಾಜ ಕೇಲಗಾರ, ಮಾಳವಿಕಾ ಅವಿನಾಶ್, ಎಂ.ರಾಜೇಂದ್ರ.
ರಾಜ್ಯ ಪ್ರಧಾನ ಕಾರ್ಯದರ್ಶಿಗಳು:
ವಿ.ಸುನೀಲ್ ಕುಮಾರ್, ಪಿ.ರಾಜೀವ್, ಎನ್.ಎಸ್.ನಂದೀಶ್ ರೆಡ್ಡಿ, ಜೆ.ಪ್ರೀತಮ್‌ಗೌಡ,
ರಾಜ್ಯ ಕಾರ್ಯದರ್ಶಿಗಳು:
ಶೈಲೇಂದ್ರ ಬೆಲ್ದಾಳೆ, ಡಿ.ಎಸ್.ಅರುಣ್, ಬಸವರಾಜ ಮತ್ತೀಮೋಡ್, ಸಿ.ಮುನಿರಾಜು, ವಿನಯ್ ಬಿದರೆ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಶರಣು ತಳ್ಳಿಕೇರಿ, ಲಲಿತಾ ಅನಾಪುರ, ಡಾ.ಲಕ್ಷ್ಮೀ ಅಶ್ವಿನ್‌ಗೌಡ, ಅಂಬಿಕಾ ಹುಲಿನಾಯ್ಕರ್
ರಾಜ್ಯ ಖಜಾಂಚಿ: ಸುಬ್ಬನರಸಿಂಹ, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ : ಸಿ.ಮಂಜುಳಾ, ಯುವ ಮೋರ್ಚಾ ರಾಜ್ಯಾಧ್ಯಕ್ಷ : ಧೀರಜ್ ಮುನಿರಾಜು,
ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ : ಬಂಗಾರು ಹನುಮಂತು, ಎಸ್‌ಸಿ ಮೋರ್ಚಾ ರಾಜ್ಯಾಧ್ಯಕ್ಷ : ಎಸ್. ಮಂಜುನಾಥ್ (ಸಿಮೆಂಟ್ ಮಂಜು) , ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ : ರಘು ಕೌಟಿಲ್ಯ, ರೈತ ಮೋರ್ಚಾ ಅಧ್ಯಕ್ಷ : ಎ.ಎಸ್.ಪಾಟೀಲ್ ನಡಹಳ್ಳಿ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ : ಅನಿಲ್ ಥಾಮಸ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.