ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಾಧನೆಗಳ ಪ್ರಚಾರ ನಡೆಸಲು ಮತ್ತು ಮುಂಬರುವ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಪಕ್ಷ ರಾಜ್ಯಾದ್ಯಂತ ವಿಜಯಸಂಕಲ್ಪ ಯಾತ್ರೆಯನ್ನು ಹಮ್ಮಿಕೊಂಡಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಮಾ.15): ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಾಧನೆಗಳ ಪ್ರಚಾರ ನಡೆಸಲು ಮತ್ತು ಮುಂಬರುವ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಪಕ್ಷ ರಾಜ್ಯಾದ್ಯಂತ ವಿಜಯಸಂಕಲ್ಪ ಯಾತ್ರೆಯನ್ನು ಹಮ್ಮಿಕೊಂಡಿದೆ. ಅದರ ಅಂಗವಾಗಿ ನಾಳೆ ಮಾರ್ಚ್ 16ರಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ಬಿ.ಜೆ.ಪಿ. ಪಕ್ಷದ ವಿಜಯಸಂಕಲ್ಪ ಯಾತ್ರೆ ನಿಗದಿಯಾಗಿದೆ.
ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿಧಾನಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ, ಜಿಲ್ಲೆಯ ಎಲ್ಲಾ ಬಿ.ಜೆ.ಪಿ. ಶಾಸಕರುಗಳು ವಿಜಯಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿಲಿದ್ದಾರೆ. ನಾಳೆ ಮಧ್ಯಾಹ್ನ 2 ಗಂಟೆಗೆ ಮೂಡಿಗೆರೆ ಪಟ್ಟಣದ ಹೊರವಲಯದ ಕೊಲ್ಲಿಬೈಲ್ ಮೂಲಕ ಯಾತ್ರೆ ಪ್ರವೇಶಿಸಲಿದ್ದು, ಬಸ್‍ನಿಲ್ದಾಣ ವೃತ್ತ, ಎಂ.ಜಿ.ರಸ್ತೆ ಸೇರಿದಂತೆ ಪ್ರಮುಖ ರಸ್ತೆಯಲ್ಲಿ ರೋಡ್‍ಶೋ, ಕಲಾ ತಂಡಗಳ ಮೂಲಕ ಮೆರವಣಿಗೆ ನಡೆಯಲಿದೆ.
ದಾವಣಗೆರೆ ಜಿಲ್ಲೆಯಲ್ಲಿ ನರೇಗಾ ಕಾಮಗಾರಿಯನ್ನು ಹೆಚ್ಚಿಸಿ: ಸಂಸದ ಜಿ.ಎಂ.ಸಿದ್ದೇಶ್ವರ
ಯಾತ್ರೆಯ ಮೇಲೆ ಬಂಡಾಯದ ಕಾರ್ಮೋಡ: ಮೂಡಿಗೆರೆಯಲ್ಲಿ ಹಮ್ಮಿಕೊಂಡಿರುವ ವಿಜಯಸಂಕಲ್ಪ ಯಾತ್ರೆಯ ಮೇಲೆ ಬಂಡಾಯದ ಕಾರ್ಮೋಡ ಕವಿದಿದೆ. ಕ್ಷೇತ್ರದಲ್ಲಿ ಶಾಸಕ ಕುಮಾರಸ್ವಾಮಿಯವರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಬಾರದು ಎಂದು ಕ್ಷೇತ್ರದ ದೊಡ್ಡ ಸಂಖ್ಯೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಬಂಡಾಯದ ಬಾವುಟ ಹಾರಿಸಿದ್ದಾರೆ.ಎಂ.ಪಿ.ಕೆ. ಹಠಾವೋ, ಬಿ.ಜೆ.ಪಿ. ಬಚಾವೋ ಎಂಬ ಘೋಷಣೆಯೊಂದಿಗೆ ಮೂಡಿಗೆರೆ ಕ್ಷೇತ್ರದ ದೊಡ್ಡ ಸಂಖ್ಯೆಯಲ್ಲಿ ಬಿಜೆಪಿಗರು, ವಿವಿಧ ಹೋಬಳಿಗಳ ಅಧ್ಯಕ್ಷರು, ಮಂಡಲ ಸಮಿತಿಯ ಪದಾಧಿಕಾರಿಗಳು, ಬೂತ್ ಮಟ್ಟದ ಪ್ರಮುಖ ಕಾರ್ಯಕರ್ತರು ಶಾಸಕ ಎಂ.ಪಿ. ಕುಮಾರಸ್ವಾಮಿಯವರ ವಿರುದ್ಧ ದೊಡ್ಡ ಮಟ್ಟದಲ್ಲಿ ತಿರುಗಿ ಬಿದ್ದಿದ್ದಾರೆ.
ಕುಮಾರಸ್ವಾಮಿ ಪರವೂ ಮತ್ತೊಂದು ಗುಂಪು ಬ್ಯಾಟಿಂಗ್: ಇಷ್ಟು ದಿನ ಬೂದಿಮುಚ್ಚಿದ ಕೆಂಡದಂತಿದ್ದ ಮತ್ತು ತೆರೆಮರೆಯಲ್ಲೇ ನಡೆಯುತ್ತಿದ್ದ ಭಿನ್ನಾಭಿಪ್ರಾಯ ಇದೀಗ ಸ್ಪೋಟಗೊಳ್ಳುವ ಹಂತ ತಲುಪಿದೆ. ಕಳೆದ ಒಂದು ವಾರದಿಂದ ಕುಮಾರಸ್ವಾಮಿ ವಿರೋಧಿ ಬಣದ ಕಾರ್ಯಕರ್ತರು ಸತತ ಸಭೆಗಳನ್ನು ನಡೆಸುತ್ತಿದ್ದಾರೆ. ಕುಮಾರಸ್ವಾಮಿಯವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು, ಹಾಗೊಂದು ವೇಳೆ ಅವರಿಗೆ ಟಿಕೆಟ್ ನೀಡಿದರೆ ನಮ್ಮ ದಾರಿ ನಮಗೆ ಎನ್ನುವ ರೀತಿಯ ತೀರ್ಮಾನಗಳಿಗೆ ಬರುತ್ತಿದ್ದಾರೆ.ಇದರ ಜೊತೆಗೆ ಕುಮಾರಸ್ವಾಮಿ ಪರವೂ ಮತ್ತೋಂದು ಗುಂಪು ಟಿಕೆಟ್ ನೀಡುವಂತೆ ಒತ್ತಾಯವನ್ನು ಕೂಡ ಮಾಡುತ್ತಿದೆ.
ಎಚ್‌ಡಿಡಿ, ಎಚ್ಡಿಕೆಗೆ ಮೋಸ ಮಾಡಿದ ಬಾಲಕೃಷ್ಣ: ಶಾಸಕ ಮಂಜುನಾಥ್
ಇದರ ನಡುವೆ ನಾಳೆ ನಡೆಯುವ ವಿಜಯಸಂಕಲ್ಪ ಯಾತ್ರೆಯ ಸಂದರ್ಭದಲ್ಲಿ ಕುಮಾರಸ್ವಾಮಿ ಪರ, ವಿರುದ್ಧ ಬಣದ ಶಕ್ತಿ ಪ್ರದರ್ಶನಕ್ಕೆ ಮುಂದಾಗುವ ಸಾಧ್ಯತೆಗಳಿವೆ.ಮೂಡಿಗೆರೆ ಪಟ್ಟಣದ ಪ್ರೀತಂ ಕಲ್ಯಾಣ ಮಂಟಪದಲ್ಲಿ ಬಂಡಾಯದ ಸಭೆಯನ್ನು ನಡೆಸಿ ಯಡಿಯೂರಪ್ಪ ಸೇರಿದಂತೆ ಪಕ್ಷದ ವರಿಷ್ಟರಿಗೆ ತಮ್ಮ ಸ್ಪಷ್ಟ ಸಂದೇಶ ನೀಡಲು ತಯಾರಿ ನಡೆಸಿದ್ದಾರೆ. ನಾಳೆ ಮೂಡಿಗೆರೆಯಲ್ಲಿ ಬಿಜೆಪಿ ಬಣರಾಜಕೀಯ ಬಹಿರಂಗವಾಗಿ ಪ್ರಕಟವಾಗಲಿದ್ದು, ಇದು ಪಕ್ಷದ ವರಿಷ್ಟರನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆಯಿದೆ. ನಾಳಿನ ವಿಜಯಸಂಕಲ್ಪ ಯಾತ್ರೆ ಕಾರ್ಯಕ್ರಮ ಕುಮಾರಸ್ವಾಮಿ ಪರ ಮತ್ತು ವಿರುದ್ಧ ಬಣಗಳ ನಡುವಿನ ಶಕ್ತಿಪ್ರದರ್ಶನದ ವೇದಿಕೆಯಾಗುವ ಎಲ್ಲಾ ಸಾಧ್ಯತೆಗಳು ಇವೆ. ಹಾಗಾಗಿ ನಾಳಿನ ಸಭೆ ಬಿಜೆಪಿ ಮಾತ್ರವಲ್ಲ ಇತರ ಪಕ್ಷಗಳ ಮತ್ತು ಕ್ಷೇತ್ರದ ಸಾರ್ವಜನಿಕರ ಗಮನ ಸೆಳೆದಿದೆ.