ಪರಿಷತ್‌ ಚುನಾವಣೆ: 1224 ಕೋಟಿ ರು. ಆಸ್ತಿ ಒಡೆಯ MTB ನಾಗರಾಜ್‌!

By Kannadaprabha NewsFirst Published Jun 19, 2020, 10:33 AM IST
Highlights

ವಿಧಾನಪರಿಷತ್‌ ಅಭ್ಯರ್ಥಿಗಳಲ್ಲೇ ಅತಿ ಶ್ರೀಮಂತ ಎಂ.ಟಿ.ಬಿ.ನಾಗರಾಜ್‌| ಉಪಚುನಾವಣೆಯಲ್ಲಿ 1200 ಕೋಟಿ ಆಸ್ತಿ ಘೋಷಿಸಿದ್ದ ಮಾಜಿ ಸಚಿವ ಎಂ.ಟಿ.ಬಿ| ಇದೀದ ಆಸ್ತಿಯಲ್ಲಿ 24 ಕೋಟಿ ರೂ. ಏರಿಕೆ|
 

ಬೆಂಗಳೂರು(ಜೂ.19):  ವಿಧಾನಪರಿಷತ್‌ ಚುನಾವಣೆಗೆ ನಾಮಪತ್ರ ಸಲ್ಲಿಸಿರುವವರ ಪೈಕಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಎಂ.ಟಿ.ಬಿ.ನಾಗರಾಜ್‌ ಅತಿ ಶ್ರೀಮಂತರಾಗಿದ್ದು, 1224 ಕೋಟಿ ರು. ಗಿಂತ ಹೆಚ್ಚು ಆಸ್ತಿಯ ಒಡೆಯರಾಗಿದ್ದಾರೆ. 2019ರ ವಿಧಾನಸಭೆ ಉಪ ಚುನಾವಣೆಯಲ್ಲಿ ಇವರು ಸುಮಾರು 1200 ಕೋಟಿ ರು. ಆಸ್ತಿ ಘೋಷಿಸಿಕೊಂಡಿದ್ದರು. ಈಗ ಆ ಆಸ್ತಿಯಲ್ಲಿ ಕೊಂಚ ಏರಿಕೆಯಾಗಿದೆ.

ಲಕ್ಷಾಂತರ ರು. ಮೌಲ್ಯದ ಡೈಮೆಂಡ್‌, ಪ್ಲಾಟಿನಂ ಸೇರಿದಂತೆ ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ಹೊಂದಿರುವುದು ಚುನಾವಣಾಧಿಕಾರಿಗೆ ಸಲ್ಲಿಸಿರುವ ಆಸ್ತಿ ವಿವರದಲ್ಲಿ ಮಾಹಿತಿ ನೀಡಿದ್ದಾರೆ. ನಾಗರಾಜ್‌ ಅವರ ಹೆಸರಲ್ಲಿ 884 ಕೋಟಿ ರು. ಗಿಂತ ಹೆಚ್ಚು ಆಸ್ತಿ ಇದ್ದು, ಪತ್ನಿ ಶಾಂತಕುಮಾರಿ ಹೆಸರಲ್ಲಿ 331 ಕೋಟಿ ರು.ಗಿಂತ ಹೆಚ್ಚು ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ನಾಗರಾಜ್‌ ಹೆಸರಲ್ಲಿ 461 ಕೋಟಿ ರು. ಮೌಲ್ಯದ ಚರಾಸ್ತಿ ಮತ್ತು 416 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಇದೆ. ಪತ್ನಿಯ ಹೆಸರಲ್ಲಿ 160 ಕೋಟಿ ರು. ಮೌಲ್ಯದ ಚರಾಸ್ತಿ ಮತ್ತು 179 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ನಾಗರಾಜ್‌ ಅವರು 52.75 ಕೋಟಿ ರು. ಸಾಲ ಹೊಂದ್ದಿದರೆ, ಪತ್ನಿ ಹೆಸರಲ್ಲಿ 1.97 ಕೋಟಿ ರು. ಸಾಲ ಇದೆ ಎಂದು ಆಸ್ತಿ ವಿವರದಲ್ಲಿ ಉಲ್ಲೇಖಿಸಲಾಗಿದೆ.

ಪರಿಷತ್‌ ಚುನಾವಣೆ: ಬಿಜೆಪಿ ಸರ್ಕಾರದ ಅಸ್ತಿತ್ವಕ್ಕೆ ಕಾರಣರಾದವರಿಗೆ ಟಿಕೆಟ್‌, ಸಚಿವ ಪಾಟೀಲ್‌

ನಾಗರಾಜ್‌ ಅವರು 2.23 ಕೋಟಿ ರು. ಮೌಲ್ಯದ ಡೈಮೆಂಡ್‌, ಪ್ಲಾಟಿನಂ ಸೇರಿದಂತೆ ಚಿನ್ನಾಭರಣಗಳನ್ನು ಹೊಂದಿದ್ದು, ಪತ್ನಿಯ ಬಳಿ 1.48 ಕೋಟಿ ರು. ಮೌಲ್ಯದ ಡೈಮೆಂಡ್‌, ಪ್ಲಾಟಿನಂ ಸೇರಿದಂತೆ ಚಿನ್ನಾಭರಣ ಇದೆ. ನಾಗರಾಜ್‌ ಬಳಿ 32.60 ಲಕ್ಷ ರು. ನಗದು ಇದ್ದರೆ, ಪತ್ನಿ ಬಳಿಕ 45.60 ಲಕ್ಷ ರು. ನಗದು ಇದೆ. 2.48 ಕೋಟಿ ರು. ಮೌಲ್ಯದ ಐದು ಕಾರ್‌ಗಳನ್ನು ಹೊಂದಿದ್ದಾರೆ. ಈ ಪೈಕಿ 51.50 ಲಕ್ಷ ರು. ಮೌಲ್ಯದ ಲ್ಯಾಂಡ್‌ ರೋವರ್‌, 96.12 ಲಕ್ಷ ರು. ಮೌಲ್ಯದ ಮರ್ಸಿಡೀಸ್‌ ಬೆನ್ಜ್‌ ಕಾರ್‌, 29 ಲಕ್ಷ ರು. ಮೌಲ್ಯದ ಫಾರ್ಚೂನರ್‌ ದುಬಾರಿ ಮೌಲ್ಯದ ಕಾರುಗಳನ್ನು ಹೊಂದಿರುವ ಮಾಹಿತಿ ನೀಡಿದ್ದಾರೆ.
 

click me!