BJP Protest: ವಾಲ್ಮೀಕಿ ನಿಗಮ ಹಗರಣ: ನಾಗೇಂದ್ರ ತಲೆದಂಡಕ್ಕೆ ಗದ್ದಲ, 3 ದಿನ ಮೊದಲೇ ಕಲಾಪ ಖತಂ! ನಿನ್ನೆ ಏನೇನಾಯ್ತು?

Kannadaprabha News   | Kannada Prabha
Published : Aug 25, 2026, 05:24 AM IST
Valmiki Corporation Scam Opposition Uproar Over Nagendra s Resignation Assembly Session Ends 3 Days Early

ಸಾರಾಂಶ

ವಾಲ್ಮೀಕಿ ನಿಗಮ ಹಗರಣದಲ್ಲಿ ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳ ಅಹೋರಾತ್ರಿ ಧರಣಿ ಘೋಷಣೆ. ಹಿನ್ನೆಲೆ ಮೂರು ದಿನಕ್ಕೆ ಮುಗಿದ ಕಲಾಪ, ಸರ್ಕಾರದ ಪ್ರತಿತಂತ್ರವೇನು? ಪೂರ್ಣ ವಿವರ ತಿಳಿಯಲು ಓದಿ.

ವಿಧಾನಸಭೆ/ವಿಧಾನಪರಿಷತ್ತು (ಆ.೨೫) ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಆರೋಪಿ ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಉಭಯ ಸದನಗಳಲ್ಲಿ ಸತತ 8ನೇ ದಿನವೂ ಪ್ರತಿಪಕ್ಷಗಳ ಮುಂದುವರೆದ ಪ್ರತಿಭಟನೆ, ಇದರ ನಡುವೆ ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ಘೋಷಣೆ, ಉಭಯ ಸದನಗಳಲ್ಲಿ ‘ನೋಟಿಸ್‌ ನೀಡಿ ಚರ್ಚೆಗೆ ಬಾರದ ರಣಹೇಡಿಗಳು’ ಎಂಬ ಆಡಳಿತ ಪಕ್ಷದವರ ಪ್ರತಿದಾಳಿಯಂತಹ ಹೈಡ್ರಾಮಾಗಳ ನಡುವೆಯೇ ಉಭಯ ಸದನಗಳ ಕಲಾಪಗಳು ಅನಿದಿಷ್ಟಾವಧಿಗೆ ಮುಂದೂಡಿಕೆ ಕಂಡಿವೆ.

ಅಧಿವೇಶನ ಆರಂಭವಾದ ದಿನದಿಂದಲೂ ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸಭೆ ಮತ್ತು ವಿಧಾನ ಪರಿಷತ್‌ ಎರಡೂ ಕಡೆ ಪ್ರತಿಭಟನೆ ನಡೆಸಿಕೊಂಡು ಬಂದ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು, ವಿಧಾನಸಭೆಯಲ್ಲಿ ಸೋಮವಾರ ಬೆಳಗ್ಗೆ ಅಹೋರಾತ್ರಿ ಧರಣಿ ಆರಂಭಿಸುವುದಾಗಿ ಘೋಷಿಸಿದರು. ಇದರಿಂದ ರಾಜ್ಯ ಸರ್ಕಾರ ಬಾಕಿ ಇದ್ದ ಕಾರ್ಯಕಲಾಪಗಳನ್ನೆಲ್ಲಾ ಸೋಮವಾರ ಒಂದೇ ದಿನ ಮುಗಿಸಿಕೊಂಡಿತು. ಬಳಿಕ ವಿಧಾನಮಂಡಲದ ಉಭಯ ಸದನಗಳ ಕಲಾಪಕ್ಕೆ ನಿಗದಿಗಿಂತ ಮೂರು ದಿನ ಮೊದಲೇ ತೆರೆ ಎಳೆಯಲಾಯಿತು. ಆ.13ರಿಂದ 27ರವರೆಗೆ (ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ) 11 ದಿನಗಳ ಕಾಲ ನಿಗದಿಯಾಗಿದ್ದ ಅಧಿವೇಶನ 8ನೇ ದಿನವೇ ಅನಿರ್ದಿಷ್ಟಾವಧಿಗೆ ಮೂದೂಡಿಕೆಯಾಯಿತು.

ಸಭಾಪತಿ ಅವರಿಂದ ನಮಗೆ ನ್ಯಾಯ ಸಿಗಲಿಲ್ಲ. ರಾಜ್ಯಪಾಲರ ಬಳಿಗೆ ದೂರು

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಪಕ್ಷಗಳು ಸಭಾಧ್ಯಕ್ಷರು, ಸಭಾಪತಿ ಅವರಿಂದ ನಮಗೆ ನ್ಯಾಯ ಸಿಗಲಿಲ್ಲ. ರಾಜ್ಯಪಾಲರ ಬಳಿಗೆ ದೂರು ಕೊಂಡೊಯ್ಯುತ್ತೇವೆ. ಜನತಾ ನ್ಯಾಯಾಲಯದ ಮುಂದೆ ಹೋರಾಟ ಮುಂದುವರೆಸುತ್ತೇವೆ ಎಂದು ಘೋಷಿಸಿದರು.

ಸದನದ ಬಾವಿಗಿಳಿದು ಬಿಜೆಪಿ ಧರಣಿ:

ಬೆಳಗ್ಗೆ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಎರಡೂ ಸದನಗಳಲ್ಲಿ ಬಾವಿಗಿಳಿದು ಪ್ರತಿಭಟನೆ ಮುಂದುವರೆಸಿದ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಘೋಷಣೆ ಕೂಗಿದರು. ಈ ವೇಳೆ, ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ವಾಗ್ವಾದವೂ ನಡೆಯಿತು. ಈ ವೇಳೆ, ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಏಟಿಗೆ ಏದಿರೇಟು ನೀಡಿದ ಸಚಿವ ಕೃಷ್ಣ ಬೈರೇಗೌಡ, ಪ್ರತಿಪಕ್ಷದವರು ಚರ್ಚೆಗೆ ನೋಟಿಸ್‌ ನೀಡಲು ಯೋಗ್ಯತೆ ಇಲ್ಲದ ರಣಹೇಡಿಗಳು. ಧೈರ್ಯವಿದ್ದರೆ ನೋಟಿಸ್‌ ನೀಡಿ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು. ಆಗ ಆರ್‌.ಅಶೋಕ್‌, 187 ಕೋಟಿ ರು. ಲೂಟಿ ಹೊಡೆದು ಕಾಂಗ್ರೆಸ್‌ನವರೆಲ್ಲೂ ಹಂಚಿಕೊಂಡಿದ್ದಾರೆ. ಒಂದು ವಾರದಿಂದ ಪ್ರತಿಭಟನೆ ನಡೆಸಿದರೂ ಈ ಭಂಡ, ಭ್ರಷ್ಟ ಸರ್ಕಾರ ಸಚಿವ ನಾಗೇಂದ್ರ ರಾಜೀನಾಮೆ ಪಡೆಯುತ್ತಿಲ್ಲ. ನಾವು ಅಹೋರಾತ್ರಿ ಧರಣಿ ಮಾಡುತ್ತೇವೆ ಎಂದು ಘೋಷಿಸಿದರು.

ಪ್ರತಿಪಕ್ಷದವರ ಘೋಷಣೆಯ ಬೆನ್ನಲ್ಲೇ ಚುರುಕುಗೊಂಡ ಸರ್ಕಾರ,

ಪ್ರತಿಪಕ್ಷದವರ ಈ ಘೋಷಣೆಯ ಬೆನ್ನಲ್ಲೇ ಚುರುಕುಗೊಂಡ ಸರ್ಕಾರ, ಬೆಳಗಿನ ಅವಧಿಯಲ್ಲೇ ಉಭಯ ಸದನಗಳಲ್ಲಿ ಪ್ರಶ್ನೋತ್ತರ, ಶೂನ್ಯವೇಳೆ, ವಿವಿಧ ವಿಧೇಯಕಗಳ ಮಂಡನೆ ಪರ್ಯಾಲೋಚನೆ ಮತ್ತು ಅನುಮೋದನೆ ಪಡೆದುಕೊಂಡಿತು. ಭೋಜನ ವಿರಾಮದ ಬಳಿಕ ಉಭಯ ಸದನಗಳಲ್ಲೂ 2026-27ನೇ ಸಾಲಿನ 7042 ಕೋಟಿ ರು.ಗಳ ಪೂರಕ ಅಂದಾಜು ವಿಧೇಯಕ ಮಂಡಿಸಿ ಅನುಮೋದನೆ ಪಡೆಯಿತು. ಬರದ ಮೇಲಿನ ಚಚೆಗೂ ಸರ್ಕಾರ ಉತ್ತರ ನೀಡಿ ಮುಗಿಸಿತು.

ಭೋಜನ ವಿರಾಮದ ಬಳಿಕ ಮತ್ತೆ 3 ಗಂಟೆಗೆ ಆರಂಭವಾಗಬೇಕಿದ್ದ ವಿಧಾನಸಭೆ ಅಧಿವೇಶನ ಸಮಾವೇಶಗೊಂಡಿದ್ದು ಸಂಜೆ 4.30ಕ್ಕೆ ಈ ವೇಳೆ, ಸ್ವತಃ ಮುಖ್ಯಮಂತ್ರಿ ಅವರೇ ವಿಧಾನಸಭೆಗೆ ಹಾಜರಾಗಿ ಪ್ರತಿಭಟನೆ ನಡುವೆಯೇ 2026-27ನೇ ಸಾಲಿನ 7042 ಕೋಟಿ ರು.ಗಳ ಪೂರಕ ಅಂದಾಜು ವಿಧೇಯಕವನ್ನು ಮಂಡಿಸಿದರು. ಬಳಿಕ ಪರ್ಯಾಲೋಚನೆ ಮೂಲಕ ಅನುಮೋದನೆ ಕೋರಿದರು. ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಸಭಾಧ್ಯಕ್ಷರು ಧ್ವನಿಮತದ ಮೂಲಕ ಅದಕ್ಕೆ ಸದನದ ಒಪ್ಪಿಗೆ ಪಡೆದರು. ಬಳಿಕ ಕರ್ನಾಟಕ ಸಕಾಲ ಸೇವೆಗಳ ತಿದ್ದುಪಡಿ ವಿಧೇಯಕ 2026ಕ್ಕೂ ಒಪ್ಪಿಗೆ ಪಡೆಯಲಾಯಿತು.

ಆ ನಂತರ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಬರದ ಮೇಲಿನ ಚರ್ಚೆಗೆ ಗದ್ದಲದ ನಡುವೆಯೇ ಸುದೀರ್ಘ ಉತ್ತರ ನೀಡಿದರು. 15 ನಿಮಿಷ ಕಲಾಪ ಮುಂದೂಡಿದ ಸಭಾಧ್ಯಕ್ಷ ಜಿ.ಎಸ್‌.ಪಾಟೀಲ ಅವರು ನಂತರ ಸದನ ಸಮಾವೇಶಗೊಳ್ಳುತ್ತಿದ್ದಂತೆ ಮುಂಗಾರು ಅಧಿವೇಶನ ನಡೆದ ಎಂಟು ದಿನಗಳಲ್ಲಿ ನಡೆದ ಕಾರ್ಯಕಲಾಪಗಳ ವಿವರ, ವಿಧೇಯಕಗಳ ಅನುಮೋದನೆ ಕುರಿತು ವಿವರಣೆ ನೀಡಿ ಸದನದವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ಬಳಿಕ ವಿಧಾನ ಪರಿಷತ್‌ಗೆ ತೆರಳಿದ ಮುಖ್ಯಮಂತ್ರಿ ಅವರು ಅಲ್ಲಿಯೂ ಪೂರಕ ಅಂದಾಜು ವಿಧೇಯಕ ಮಂಡಿಸಿ ಅನುಮೋದನೆ ಪಡೆದರು. ಉಪಮುಖ್ಯಮಂತ್ರಿ ಅವರು ಬರದ ಮೇಲಿನ ಚರ್ಚೆಗೆ ಉತ್ತರ ನೀಡಿದರು. ಬಳಿಕ ಸಭಾಪತಿ ಸಲೀಂ ಅಹ್ಮದ್‌ ಅವರು ಮುಂಗಾರು ಅಧಿವೇಶನದಲ್ಲಿ ಇದುವರೆಗೆ ನಡೆದ ಕಾರ್ಯಕಲಾಪಗಳ ವಿವರ ನೀಡಿ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಚಿವ ನಾಗೇಂದ್ರಗಾಗಿ ತೀವ್ರ ಕದನ: ಬಿಜೆಪಿಯಿಂದ ವಿಧಾನಸೌಧಕ್ಕೆ ಮುತ್ತಿಗೆಯ ರಣತಂತ್ರ?
ವಂದೇ ಮಾತರಂ ವಿವಾದ: ಕೊಪ್ಪಳದಲ್ಲಿ ಬಿಜೆಪಿ ಆರ್‌ಎಸ್‌ಎಸ್ ವಿರುದ್ಧ ಸಚಿವ ತಂಗಡಗಿ ವಾಗ್ದಾಳಿ!