ಚುನಾವಣೆ ಸಮೀಪಿಸುತ್ತಿರೋ ಬೆನ್ನಲ್ಲೇ ದ.ಕ ಜಿಲ್ಲಾ ಕಾಂಗ್ರೆಸ್ ನಾಯಕರು ವಾಸ್ತು ದೋಷ ಪರಿಹಾರಕ್ಕೆ ಮುಂದಾಗಿರೋ ಸುದ್ದಿ ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯ ಮೆಟ್ಟಿಲುಗಳ ನವೀಕರಣ ಕಾಮಗಾರಿ ಈ ಚರ್ಚೆಗೆ ವೇದಿಕೆ ಕಲ್ಪಿಸಿದೆ.
ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು (ಡಿ.14): ಚುನಾವಣೆ ಸಮೀಪಿಸುತ್ತಿರೋ ಬೆನ್ನಲ್ಲೇ ದ.ಕ ಜಿಲ್ಲಾ ಕಾಂಗ್ರೆಸ್ ನಾಯಕರು ವಾಸ್ತು ದೋಷ ಪರಿಹಾರಕ್ಕೆ ಮುಂದಾಗಿರೋ ಸುದ್ದಿ ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯ ಮೆಟ್ಟಿಲುಗಳ ನವೀಕರಣ ಕಾಮಗಾರಿ ಈ ಚರ್ಚೆಗೆ ವೇದಿಕೆ ಕಲ್ಪಿಸಿದೆ. ಚುನಾವಣೆ ಹೊತ್ತಲ್ಲಿ ವಾಸ್ತು ಮೊರೆ ಹೋದರಾ ದ.ಕ ಜಿಲ್ಲಾ ಕಾಂಗ್ರೆಸ್ ನಾಯಕರು ಎಂಬ ಪ್ರಶ್ನೆ ಎದ್ದಿದೆ. ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ವಾಸ್ತು ಸರಿಪಡಿಸಲು ನವೀಕರಣ ಕಾಮಗಾರಿ ನಡೆಯುತ್ತಿದೆ ಎನ್ನಲಾಗಿದೆ. ಕಾಂಗ್ರೆಸ್ ಕಚೇರಿಯ ಮುಂಭಾಗದ ಮೆಟ್ಟಿಲಿನ ನವೀಕರಣ ಕಾಮಗಾರಿಯನ್ನು ವಾಸ್ತು ತಜ್ಞರ ಸಲಹೆಯಂತೆ ನಡೆಸಲಾಗ್ತಿದೆ ಎನ್ನುವುದು ಕಾಂಗ್ರೆಸ್ ಪಕ್ಷದ ಒಳಗಿನ ಗುಸುಗುಸು ಚರ್ಚೆ.
ಕಾಂಗ್ರೆಸ್ ಕಚೇರಿ ಪ್ರವೇಶ ದ್ವಾರದಲ್ಲಿ ಎಂಟು ಮೆಟ್ಟಿಲುಗಳಿದ್ದವು. ಆದರೆ ವಾಸ್ತು ಪ್ರಕಾರ ಎಂಟು ಮೆಟ್ಟಿಲುಗಳು ಇರುವುದು ದೋಷ. ವಾಸ್ತು ಪದ್ದತಿ ಪ್ರಕಾರ ಬೆಸ ಸಂಖ್ಯೆಯಲ್ಲಿ ಮೆಟ್ಟಿಲುಗಳಿರಬೇಕು. 2016ರಲ್ಲಿ ನೂತನ ಜಿಲ್ಲಾ ಕಾಂಗ್ರೆಸ್ ಕಚೇರಿ ಉದ್ಘಾಟನೆಯಾಗಿತ್ತು. 2019ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ದ.ಕ ಜಿಲ್ಲೆಯಲ್ಲಿ ಕಾಂಗ್ರೆಸ್ ಸೋತಿತ್ತು. ಎಂಟು ಕ್ಷೇತ್ರದಲ್ಲಿ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿತ್ತು. ಹೀಗಾಗಿ ವಾಸ್ತು ತಜ್ಞರ ಸಲಹೆಯಂತೆ ಮೆಟ್ಟಿಲು ನವೀಕರಣ ನಡೆಸಲಾಗ್ತಿದ್ದು, ಎಂಟರ ಬದಲು ಒಂಭತ್ತು ಮೆಟ್ಟಿಲುಗಳ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಸದ್ಯ ವಾಸ್ತು ಬದಲಾವಣೆ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಗುಸುಗುಸು ಚರ್ಚೆ ಆರಂಭವಾಗಿದೆ.
Mangaluru: ಹರೇಕಳ-ಅಡ್ಯಾರ್ ಕಿಂಡಿ ಅಣೆಕಟ್ಟು ಕಾಮಗಾರಿಗೆ ಹೈಕೋರ್ಟ್ ತಡೆ
ವಾಸ್ತು ಬದಲಿಸಲು ಮುಂದಾದ ಕೈ ನಾಯಕಿ?: ಮಾಹಿತಿ ಪ್ರಕಾರ ಮಂಗಳೂರು ಕಾಂಗ್ರೆಸ್ ನ ನಾಯಕಿಯೊಬ್ಬರು ಈ ವಾಸ್ತು ಬದಲಾವಣೆಯ ಜವಾಬ್ದಾರಿ ಹೊತ್ತಿದ್ದಾರೆ ಎನ್ನಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ಈ ನಾಯಕಿ ದ.ಕ ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕೂಡ ಆಗಿದ್ದಾರೆ. ವಾಸ್ತುಶಾಸ್ತ್ರದ ಮೇಲೆ ನಂಬಿಕೆ ಇರೋ ಈ ಕೈ ಮುಖಂಡೆ ಹಲವು ದಿನಗಳ ಹಿಂದೆಯೇ ಈ ಮೆಟ್ಟಿಲುಗಳ ಬದಲಾವಣೆಗೆ ಚಿಂತನೆ ನಡೆಸಿದ್ದು, ಅದರಂತೆ ಜಿಲ್ಲಾಧ್ಯಕ್ಷರ ಅನುಮತಿ ಪಡೆದು ತನ್ನ ಸ್ವಂತ ಖರ್ಚಿನಲ್ಲಿ ಕಾಮಗಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ವಾಸ್ತು ದೋಷದಿಂದಲೇ ಜಿಲ್ಲೆಯಲ್ಲಿ ಕಾಂಗ್ರೆಸ್ ಏಳು ಕ್ಷೇತ್ರದಲ್ಲಿ ಸೋಲು ಕಂಡಿದೆ ಎಂಬ ನಂಬಿಕೆಯೂ ಕೆಲ ಕಾಂಗ್ರೆಸ್ ನಾಯಕರಲ್ಲಿ ಇದೆ. ಹೀಗಾಗಿಯೇ ಸದ್ಯ ಕಾಮಗಾರಿ ನಡೆಸಲಾಗ್ತಿದೆ ಎನ್ನಲಾಗಿದೆ.
Mangaluru: ಹಿಂದೂ ಮುಸ್ಲಿಂ ವಿದ್ಯಾರ್ಥಿಗಳ ಲವ್ ಸ್ಟೋರಿ: ಕಾಲೇಜಿನಿಂದ 18 ಮಂದಿ ಡಿಬಾರ್
ವಾಸ್ತುವಿಗಾಗಿ ಮೆಟ್ಟಿಲು ನವೀಕರಣ ಸುಳ್ಳು, ಕಾಂಗ್ರೆಸ್ ಸ್ಪಷ್ಟನೆ: ವಾಸ್ತುವಿಗಾಗಿ ಕಾಂಗ್ರೆಸ್ ಕಚೇರಿಯ ಮೆಟ್ಟಿಲುಗಳ ನವೀಕರಣ ವಿಚಾರ ಸಂಬಂಧಿಸಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಕಾಂಗ್ರೆಸ್ ನಾಯಕರಿಂದ ನವೀಕರಣ ಕಾಮಗಾರಿ ಬಗ್ಗೆ ಸ್ಪಷ್ಟನೆ ಸಿಕ್ಕಿದೆ. ವಾಸ್ತುವಿನ ಕಾರಣಕ್ಕಾಗಿ ಮೆಟ್ಟಿಲುಗಳ ಸಂಖ್ಯೆಯನ್ನು ಹೆಚ್ಚಿಸಿಲ್ಲ. ಹಿರಿಯ ನಾಗರಿಕರಿಗೆ ಮೆಟ್ಟಿಲು ಹತ್ತಲು ಸಹಾಯವಾಗಲು ನವೀಕರಣ ಮಾಡಲಾಗಿದೆ. ಅಂಡರ್ ಗ್ರೌಂಡ್ ವಾಟರ್ ಟ್ಯಾಂಕ್ ದುರಸ್ತಿಗಾಗಿ ಮೆಟ್ಟಿಲು ದುರಸ್ತಿ ಮಾಡಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಕಾಂಗ್ರೆಸ್ ಪಕ್ಷ ಕಳೆದ ಬಾರಿ ಸೋತಿರುವ ಬಗೆಗೂ ಇದಕ್ಕೂ ಚರ್ಚೆ ಬೇಡ. ಈ ಬಾರಿ ನಾವು ಗೆಲುವಿನ ಮೆಟ್ಟಿಲು ಹತ್ತುತ್ತೇವೆ. ವಾಸ್ತುದೋಷಕ್ಕೂ ಚುನಾವಣೆಗೂ ಯಾವುದೇ ಸಂಬಂಧವಿಲ್ಲ ಎಂದು ಮಂಗಳೂರು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ನವೀನ್ ಡಿಸೋಜ ಸ್ಪಷ್ಟನೆ ನೀಡಿದ್ದಾರೆ.