
ಚಿಕ್ಕಬಳ್ಳಾಪುರ (ಜ.01): ಒಂದು ತಿಂಗಳಲ್ಲಿ ಬಿಜೆಪಿಯ ಎಲ್ಲಾ ಆಂತರಿಕ ಸಮಸ್ಯೆಗಳು ಪರಿಹಾರ ಆಗಲಿವೆ. ವಿ.ಸೋಮಣ್ಣ ಅವರ ಜೊತೆ ನಾನು ಮಾತನಾಡಿದ್ದೇನೆ. ಅವರು ಸೋಲಿನ ನೋವುಗಳ ಬಗ್ಗೆ ಹೇಳಿದ್ದಾರೆ. ಪಕ್ಷದಲ್ಲಿಯೇ ಉಳಿಯುವ ತೀರ್ಮಾನ ಮಾಡಿದ್ದಾರೆ. ಜ.4ರಂದು ಅವರ ಮನೆಗೆ ಭೇಟಿ ನೀಡಿ ಮತ್ತೊಮ್ಮೆ ಮಾತುಕತೆ ನಡೆಸುವೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದರು. ಯತ್ನಾಳ್ ಆರೋಪ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೊರೋನಾ ಸಮಯದಲ್ಲಿ 5 ಸಾವಿರ ಕೋಟಿ ರು.ಅನುದಾನ ಮಾತ್ರ ಬಿಡುಗಡೆಯಾಗಿತ್ತು. ಇನ್ನು 45 ಸಾವಿರ ಕೋಟಿ ಅವ್ಯವಹಾರವಾಗಲು ಹೇಗೆ ಸಾಧ್ಯ? ಎಂದು ಮರು ಪ್ರಶ್ನಿಸಿದರಲ್ಲದೆ, ಯತ್ನಾಳ್ ಅವರ ಬಗ್ಗೆ ಪಕ್ಷದ ಕೇಂದ್ರ ವರಿಷ್ಠರು ಗಮನಹರಿಸಿದ್ದಾರೆ ಎಂದರು.
ಕಾಂಗ್ರೆಸ್ ರಕ್ತದ ಕಣದಲ್ಲೂ ಹಿಂದೂ ವಿರೋಧಿ ಭಾವನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನವರ ರಕ್ತದ ಕಣದಲ್ಲೂ ಹಿಂದೂ ವಿರೋಧಿ ಭಾವನೆಯೇ ಇದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹರಿಹಾಯ್ದಿದ್ದಾರೆ. ‘ಸಿದ್ದರಾಮಯ್ಯ ಮುಸ್ಲಿಮರಿಗೆ ಶಾದಿ ಭಾಗ್ಯ ತಂದರು. ಟಿಪ್ಪು ಜಯಂತಿ ಮಾಡಿದರು, ಇದೀಗ 11 ಸಾವಿರ ಕೋಟಿ ಖರ್ಚು ಮಾಡುತ್ತಿದ್ದಾರೆ, ಅವರೊಬ್ಬ ಹಿಂದೂ ವಿರೋಧಿ ಅದಕ್ಕಾಗಿಯೇ ಇದೆಲ್ಲಾ ಮಾಡಿದ್ದಾರೆ ಎಂದವರು ಪ್ರತಿಪಾದಿಸಿದ್ದಾರೆ.
ರಾಮರಾಜ್ಯದ ಗುರಿ: ಕಾಂಗ್ರೆಸ್‌ನವರು ಟಿಪ್ಪು ಸಂಸ್ಕೃತಿಯವರು. ಶ್ರೀರಾಮ ಈ ದೇಶದ ಆದರ್ಶ ಪುರುಷ. ರಾಮಜಪ ಮಾಡಿದ ಕಾರಣಕ್ಕೆ ನಾವು ರಾಮಮಂದಿರ ನಿರ್ಮಿಸಿದ್ದೇವೆ. ಕಳೆದ 30 ವರ್ಷಗಳಿಂದಲೂ ಬಿಜೆಪಿ ಪ್ರಣಾಳಿಕೆಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಪ್ರಸ್ತಾಪಿಸುತ್ತಿದ್ದೆವು. ಆ ಪ್ರಕಾರ ಮಂದಿರ ನಿರ್ಮಾನವಾಗಿದೆ. ಬರೀ ಮಂದಿರ ಕಟ್ಟುವುದಷ್ಟೇ ಅಲ್ಲ, ರಾಮರಾಜ್ಯ ನಿರ್ಮಾಣವಾಗಬೇಕು ಎನ್ನುವುದೂ ಬಿಜೆಪಿ ನಿಲುವು ಮತ್ತು ಅದು ನಮ್ಮ ಗುರಿ ಎಂದಿದ್ದಾರೆ.
ಕೋವಿಡ್ ಭಯ ಬೇಡ ಮುನ್ನೆಚ್ಚರಿಕೆ ಇರಲಿ: ಸಚಿವ ಡಾ.ಎಂ.ಸಿ.ಸುಧಾಕರ್
ಎತ್ತಿನಹೊಳೆಗೆ ಸರ್ಕಾರ ಹಣ ನೀಡಿಲ್ಲ: ಬಯಲು ಸೀಮೆಯ ಜಿಲ್ಲೆಗಳಿಗೆ ನೀರಿನ ದಾಹ ತೀರಿಸಲು ಎತ್ತಿನಹೊಳೆ ಯೋಜನೆಯನ್ನು ಬಿಜೆಪಿಯ ಸರ್ಕಾರದಲ್ಲಿ ಅಂದಿನ ಮುಖ್ಯಮಂತ್ರಿ ಸದಾನಂದಗೌಡ ಆರಂಭಿಸಿದರು. ಅದು ನಮ್ಮ ಸರ್ಕಾರ ಇದ್ದಾಗ ಹೆಚ್ಚು ಅನುದಾನ ನೀಡಿದೆವು. ಆದರೆ ಈ ಸರ್ಕಾರ ಒಂದು ರೂಪಾಯಿ ಹಣ ಬಿಡುಗಡೆ ಮಾಡಿಲ್ಲ. ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಚ್.ಎನ್.ವ್ಯಾಲಿ ನೀರನ್ನು ಮೂರು ಹಂತದಲ್ಲಿ ಶುದ್ದೀಕರೀಸಬೇಕು ಎಂದು ಬಜೆಟ್ ನಲ್ಲಿ ಹಣ ಮೀಸಲಿಟ್ಟಿತ್ತು. ಆದರೆ ಈ ಸಿದ್ದರಾಮಯ್ಯ ಸರ್ಕಾರ ಮೂರನೇ ಹಂತದಲ್ಲಿ ಶುದ್ದೀಕರಿಸುವುದಕ್ಕೆ ಎಳ್ಳು ನೀರು ಬಿಟ್ಟಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.