
ಬೆಂಗಳೂರು (ಅ.15): ಅಧಿಕಾರ ಹಸ್ತಾಂತರ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಾಟಕ ಮಾಡುತ್ತಿದ್ದಾರೆ. ಈ ನಾಟಕಕ್ಕೆ ರಾಜ್ಯದ ಆರು ಕೋಟಿ ಜನರನ್ನು ಬಲಿ ಕೊಡುತ್ತಿದ್ದಾರೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಕಿಡಿಕಾರಿದ್ದಾರೆ. ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಬದಲಾವಣೆ ಅವರಿಗೆ ಬಿಟ್ಟದ್ದು. ಈ ವಿಚಾರವಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಾಟಕ ಮಾಡುತ್ತಿದ್ದಾರೆ. ಅಭಿವೃದ್ಧಿ ಮಾಡಿ ಎಂದರೆ, ಬೇರೆಲ್ಲಾ ಮಾಡುತ್ತಿದ್ದಾರೆ. ಈಗಲಾದರೂ ಗೌರವದಿಂದ ನಡೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಳಿಕ ಕೇಂದ್ರದ ರೇಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರೂ ಜಾತಿ ಗಣತಿಗೆ ಬಂದಿದ್ದ ಗಣತಿದಾರರ ತರೇಹವಾರಿ ಪ್ರಶ್ನೆಗಳಿಗೆ ಗರಂ ಆಗಿದ್ದಾರೆ. ವಿಜಯನಗರದಲ್ಲಿರುವ ಸೋಮಣ್ಣ ಅವರ ಅವರ ನಿವಾಸಕ್ಕೆ ಜಾತಿ ಗಣತಿ ಸಂಬಂಧ ಸುಮಾರು ಒಂಬತ್ತು ಮಂದಿ ಆಗಮಿಸಿದ್ದರು. ಇದನ್ನು ಕಂಡ ಸೋಮಣ್ಣ ಅವರು ಇಷ್ಟು ಜನ ಏಕೆ ಬಂದಿದ್ದೀರಿ ಎಂದು ತುಸು ಬೇಸರದಿಂದಲೇ ಪ್ರಶ್ನಿಸಿದರು. ಮುಂದೆ ನಮ್ಮ ಕೇಂದ್ರ ಸರ್ಕಾರ ಗಣತಿ ಮಾಡಿಸಲಿದೆ. ಆಗ ಹೇಗೆ ಮಾಡಿಸುತ್ತೆ ನೋಡಿ. ಅದನ್ನು ಕೂಡ ನೀವೇ ಮಾಡಬೇಕಾಗುತ್ತದೆ.
ಸಮೀಕ್ಷೆಗೆ ಇಷ್ಟು ಪ್ರಶ್ನೆಗಳು ಬೇಕೇ? ಇದೆಲ್ಲವನ್ನೂ ನೀವೇ ಸರ್ಕಾರಕ್ಕೆ ತಿಳಿಸಬೇಕು. ಸರ್ಕಾರಿ ನೌಕರರು ಸರ್ಕಾರದ ಏಜೆಂಟ್ ಆಗಿ ಕೆಲಸ ಮಾಡಬಾರದು ಎಂದು ಕ್ಲಾಸ್ ತೆಗೆದುಕೊಂಡರು ಎನ್ನಲಾಗಿದೆ. ಸಮೀಕ್ಷೆ ನಡೆಸುವ ಸಿಬ್ಬಂದಿ ನಿಮ್ಮ ಉಪಜಾತಿ ಯಾವುದು ಎಂದು ಸೋಮಣ್ಣ ಅವರನ್ನು ಪ್ರಶ್ನಿಸಿದಾಗ, ಅದೆಲ್ಲ ಯಾಕೆ ಬೇಕು? ಸಿದ್ದರಾಮಯ್ಯ ಜಾತಿ ಬರೆದುಕೊಳ್ಳಿ. ಇಡೀ ದೇಶದಲ್ಲಿ ಸಿದ್ದರಾಮಯ್ಯ ಜಾತಿ ಎಂದೇ ಮಾಡಿಕೊಳ್ಳಿ ಎಂದು ವ್ಯಂಗ್ಯವಾಗಿ ಹೇಳಿದರು. ನಿಮ್ಮ ವಿವಾಹ ಆದಾಗ ಎಷ್ಟು ವರ್ಷ ಎಂಬ ಪ್ರಶ್ನೆ ಸಿಬ್ಬಂದಿಯಿಂದ ಬಂದಾಗ, ಇದೆಲ್ಲ ಯಾಕೆ ಬೇಕು? ನಮ್ಮ ಅಪ್ಪ ಅಮ್ಮನನ್ನು ಕೇಳಬೇಕು. 26 ಅಂತ ಬರೆದುಕೊಳ್ಳಿ ಎಂದುತ್ತರಿಸಿದರು.
ಹಲವು ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೆಸರನ್ನೇ ಹಾಕಿಕೊಳ್ಳಿ. ಈ ಸಮೀಕ್ಷೆಯನ್ನು ಸಿದ್ದರಾಮಯ್ಯ ಅವರು ವೋಟಿಗಾಗಿ ಮಾಡಿಸುತ್ತಿದ್ದಾರೆ ಎಂದು ವ್ಯಂಗ್ಯವಾಗಿಯೂ ಸಚಿವ ಸೋಮಣ್ಣ ಹೇಳಿದರು. ಇನ್ನು ಕೆಲ ಪ್ರಶ್ನೆಗಳಿಗೆ ಸಿಡಿಮಿಡಿಗೊಂಡ ಸೋಮಣ್ಣ ಅವರು, ಉತ್ತರ ನೀಡಲು ಆಗದ ಪ್ರಶ್ನೆಗಳನ್ನು ಸಮೀಕ್ಷೆಯಲ್ಲಿ ಕೇಳುತ್ತಿದ್ದೀರಿ. ಯಾವನೋ ತಲೆ ಕೆಟ್ಟಿರುವವನೇ ಇದನ್ನು ಮಾಡಿರಬೇಕು. ಆತನನ್ನು ಕರೆಯಿರಿ ಎಂದು ತೀಕ್ಷ್ಣವಾಗಿ ಹೇಳಿದರು ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.